ನಂಬಿಕೆಗೆ ಇಂಬು ನೀಡುವ ದೈವಾರಾಧನೆ

ದೈವಗಳಲ್ಲಿ ಯಾವ ವಿಚಾರಕ್ಕೆ ನಾವು ಬೇಡಬೇಕು ಎಂಬ ಎಚ್ಚರ ನಮಗೆ ಇದ್ದರೆ ಹಾಗೂ ಅದರಂತೆ ನಡೆದರೆ ನಮ್ಮ ಮಾತನ್ನು ದೈವ ತನ್ನ ಮಾತೆಂದು ನಡೆಸಿಕೊಡುತ್ತದೆ.

* ದೇವಿಪ್ರಸಾದ್ ಗೌಡ ಸಜಂಕು

ನಮ್ಮ ಹಿರಿಯರು ದೈವಗಳನ್ನು ನಮ್ಮನ್ನು ಕಾಯುವ/ ಕಾಪಾಡುವ ಸತ್ಯಗಳು ಎಂದು ಬಹಳ ಶ್ರದ್ಧಾ ಭಕ್ತಿಯಿಂದ ಆರಾಧನೆ ಮಾಡುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ದೈವಗಳನ್ನು ಕಾವಲುಗಾರನ ಸ್ಥಾನಕ್ಕೆ ಕೊಂಡುಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ತಾನು ಸತ್ಯದ, ಧರ್ಮದ ಹಾದಿಯಲ್ಲಿ ಇದ್ದೇನೆಯೋ ಇಲ್ಲವೋ ಅದು ಬೇಕಿಲ್ಲ ಆದರೆ ತಾನು ಹೇಳಿದ ಕೆಲಸ ದೈವ ಮಾಡಬೇಕು. ತನ್ನ ಕೆಲಸವನ್ನು ಮಾಡಿದರೆ ಮಾತ್ರ ಆ ದೈವಕ್ಕೆ ಶಕ್ತಿ ಇರುವುದು, ಹಾಗಾದರೆ ಮಾತ್ರ ತಾನು ಹರಕೆ, ಆರಾಧನೆ ಸಲ್ಲಿಸುವುದು ಎಂಬ ಮನೋಭಾವ ತುಂಬುತ್ತಿದೆ.

ದೈವನರ್ತಕರು ಹಾಗೂ ಮಧ್ಯಸ್ಥರು ಇದನ್ನು ದೈವಾರಾಧಕರಿಗೆ ಇದನ್ನು ಬಿಡಿಸಿ ಹೇಳುವುದು ಇಂದಿನ ಅನಿವಾರ್ಯತೆ ಹಾಗೂ ಕರ್ತವ್ಯ ಎಂಬ ನೆಲೆಗಟ್ಟಿನಲ್ಲಿ ನನ್ನ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಯಾವುದೇ ಆರಾಧನೆಯ ಉದ್ದೇಶ ಚತುರ್ವಿಧ ಪುರುಷಾರ್ಥಗಳನ್ನು ಪಡೆಯಲು. ಈ ನಾಲ್ಕು ಪುರುಷಾರ್ಥಗಳಲ್ಲಿ ಮೋಕ್ಷ ಎಂಬುದು ಪರಮೋಚ್ಚ ಗುರಿ. ಶ್ರೀಮನ್ನಾರಾಯಣ ಮೋಕ್ಷದ ಅಧಿಕಾರಿ. ನಾರಾಯಣ ಕೃಪೆ ಪಡೆಯಲು ಭಕ್ತಿ ಯೋಗದಲ್ಲಿ ಸಾಗಬೇಕು.

ಭಕ್ತಿ ಯೋಗ ಲಭಿಸಲು ಲಕ್ಷ್ಮಿಯ ಅನುಗ್ರಹ ಬೇಕು. ಲಕ್ಷ್ಮಿಯ ಅನುಗ್ರಹ ಪಡೆಯಲು ನಮ್ಮ ಮನದ ತಮೋಗುಣ ನೀಗಬೇಕು. ತಮೋಗುಣ ನೀಗಲು ತಮೋಗುಣ ಅಭಿಮಾನಿ ದೇವರಾದ ಮಹಾಶಿವನ/ ಮಹಾದೇವನ ಅನುಗ್ರಹ ಬೇಕು. ಮಹಾದೇವನ ಅನುಗ್ರಹ ಪಡೆಯಲು ಸಾಧನೆ ಬೇಕು. ಇದಕ್ಕೆ ಶಕ್ತಿ ಬೇಕು. ಶಕ್ತಿಯನ್ನು ಪಡೆಯಲು ತಾಯಿ ಪಾರ್ವತಿ ಹಾಗೂ ಆಕೆಯ ವಿವಿಧ ಶಕ್ತಿ ಸ್ವರೂಪಗಳ ಅನುಗ್ರಹ ಬೇಕು. ಶಕ್ತಿ ದೇವಿಯ ಅನುಗ್ರಹ ಪಡೆಯಬೇಕಾದರೆ ಆಕೆಯ ಭೃತ್ಯರ, ಮಹಾದೇವನ ಭೃತ್ಯರ ಅನುಗ್ರಹ ಬೇಕು. ಅವರ ಅನುಗ್ರಹ ಬೇಕಾದರೆ ಗುರುಹಿರಿಯರ ಅನುಗ್ರಹ ಬೇಕು. ಗುರುಹಿರಿಯರ ಅನುಗ್ರಹ ಬೇಕಾದರೆ ಮಾತಾ ಪಿತರ ಆಶೀರ್ವಾದ ಪಡೆಯಬೇಕು.

ಹೀಗೆ ನಾವು ಹಂತ ಹಂತವಾಗಿ ಮೇಲೇರಬೇಕು. ಹೆಚ್ಚಿನ ಎಲ್ಲಾ ದೈವಗಳು ತಾಯಿ ಪಾರ್ವತಿ ಹಾಗೂ ಮಹಾದೇವನ ಭೃತ್ಯರೇ ಆಗಿದ್ದಾರೆ ( ಪ್ರಾಣಿ/ ಪ್ರಕೃತಿ ಮೂಲ ಸಂಭದದ ದೈವಗಳು ಹಾಗೂ ಅವತಾರ ರೂಪಿ ದೈವಗಳು). ಇನ್ನು ಮನುಷ್ಯ ಜನ್ಮ ಪಡೆದು ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿ ಕಾಯ ಬಿಟ್ಟು ಮಾಯ ಸೇರಿದ ದೈವಗಳು ಕೂಡಾ ಮಹಾದೇವ ಹಾಗೂ ನಾರಾಯಣನ ಭೃತ್ಯರಾದರು. ಮಹಾದೇವರಿಗೆ ಭೋಲೇನಾಥ ಎಂಬ ಹೆಸರೂ ಇದೆ. ಅಲ್ಪ ಭಕ್ತಿಗೆ ಬೇಗನೆ ಒಳಿಯುವ ದೇವರು ಮಹಾದೇವರು. ಹೀಗಾಗಿ ಅವರಿಗೆ ಆ ಹೆಸರು. ಮಹಾದೇವರಂತೆ ಅವರ ಭೃತ್ಯರೂ ಅತೀ ಶೀಘ್ರದಲ್ಲಿ ಒಲಿಯುತ್ತಾರೆ.

ಮಹಾದೇವರಲ್ಲಿ ನಮ್ಮ ತಮೋಗುಣ ನೀಗಲು ಬೇಡಿದರೆ ಈ ತಮೋಗುಣ ನೀಗಲು ಶಕ್ತಿಗಾಗಿ ಹಾಗೂ ಆ ಮಾರ್ಗದಲ್ಲಿ ನಡೆಯುವಾಗ ರಕ್ಷಣೆಗಾಗಿ ಶಕ್ತಿ ದೇವತೆಗಳಾದ ದೈವಗಳನ್ನು ನಾವು ಬೇಡಬೇಕು. ಈ ಕಾರಣಕ್ಕೆ ದೈವಾರಾಧನೆ ಮಾಡಬೇಕು. ಘಟ್ಟದ ಮೇಲೆ ಅಣ್ಣಮ್ಮ,ಕಾಳಮ್ಮ, ವೀರಭದ್ರ ಇತ್ಯಾದಿ ಶಕ್ತಿ ಸ್ವರೂಪಗಳನ್ನು ಆರಾಧನೆ ಮಾಡಿದರೆ ತುಳುನಾಡಿನಲ್ಲಿ ದೈವಗಳ ರೂಪದಲ್ಲಿ ಆರಾಧನೆ ಮಾಡುತ್ತೇವೆ.

ಹಾಗಾಗಿ ದೈವಗಳಲ್ಲಿ ನಮ್ಮ ತಮೋಗುಣವನ್ನು ಕಳೆಯಲು, ಸತ್ಯ -ಧರ್ಮದಲ್ಲಿ ನಡೆಯಲು ಶಕ್ತಿ-ಭಕ್ತಿಯನ್ನು ನೀಡಲು ಹಾಗೂ ಆ ಹಾದಿಯಲ್ಲಿ ನಡೆಯುವಾಗ ಎದುರಾಗುವ ತಾಪತ್ರಯಗಳಿಂದ ( ಚೋರ ಭಯ, ಶತ್ರು ಭಯ, ಅಪಘಾತ ಭಯ, ರಾಜ ಭಯ ಇತ್ಯಾದಿ ಆದಿಭೌತಿಕ ತಾಪ, ಮನೋರೋಗ, ಮತ್ಸರ, ಅಹಂಕಾರ ಇತ್ಯಾದಿ ಆಧ್ಯಾತ್ಮಿಕ ತಾಪ ಹಾಗೂ ಬುಡಿಂಚಿ ಭೂತ, ಮಾಲ್ತಿಂಚಿ ಮಾಟ, ಸ್ತಂಭನ ಮೋಹನಾದಿ ಕೃತ್ರಿಮಗಳೆಂಬ ಆದಿದೈವಿಕ ತಾಪ) ರಕ್ಷಣೆ ನೀಡುವಂತೆ ಬೇಡಬೇಕು. ಇಷ್ಟು ಬೇಡಿದ ಮೇಲೆ ಪ್ರತ್ಯೇಕ ಹರಕೆಯ ಅವಶ್ಯಕತೆ ಇಲ್ಲ.

ನಾವು ಸತ್ಯ- ಧರ್ಮದಲ್ಲಿ ನಡೆದು ಭಕ್ತಿ ಶ್ರದ್ಧೆಯಿಂದ ದೈವಗಳನ್ನು ಮೇಲಿನಂತೆ ಬೇಡಿದರೆ ಆ ದೈವಗಳು ಖಂಡಿತಾ ನಮ್ಮ ಬೆನ್ನೆಲುಬಾಗಿ ನಿಲ್ಲುತ್ತವೆ, ನಮ್ಮ ನೆರಳಿನಂತೆ ಹಿಂಬಾಲಿಸಿ ರಕ್ಷಣೆ ಮಾಡುತ್ತವೆ. ಆದರೆ ನಾವು ಸ್ವತಃ ಆತತಾಯಿಗಳಾಗಿ (ಆತತಾಯಿ ಎಂದರೆ ಐದು ಬಗೆಯ ಪಾತಕ ಮಾಡಿದವರು. ಈ ಐದೇ 1. ಇನ್ನೊಬ್ಬರ ಮನೆಗೆ ಬೆಂಕಿ ಹಾಕುವವ, 2.ಇನ್ನೊಬ್ಬರ ಆಹಾರಕ್ಕೆ ವಿಷ ಹಾಕುವವ, 3. ಇನ್ನೊಬ್ಬರ ಆಸ್ತಿ, ಸಂಪತ್ತು ಲಪಟಾಯಿಸುವವ, 4. ಇನ್ನೊಬ್ಬರ ಮಾನ ಹಾನಿ ಮಾಡಿ ಪರಿಹಾಸ್ಯ ಮಾಡುವವ, 5. ಪರಸ್ತ್ರೀಯ ಮೇಲೆ ಕೈ ಹಾಕುವವ) ಇನ್ನೊಬ್ಬ ತನಗೆ ತೊಂದರೆ ಮಾಡಿದ,ಅಪಮಾನ ಮಾಡಿದ ಎಂದು ಆತನನ್ನು ಶಿಕ್ಷಿಸಲು ದೈವಕ್ಕೆ ಬೇಡಿಕೊಂಡರೆ, ಹರಕೆ ಹೇಳಿದರೆ ಅದು ತಿರುಗು ಬಾಣವಾಗಿ ನಮಗೇ ತಾಗುತ್ತದೆ. ಹಾಗೂ ಇದರ ಪರಿಣಾಮ ನಾವು ಊಹಿಸಲೂ ಸಾಧ್ಯ ಇಲ್ಲ.

ಹಾಗಾಗಿ ಇಂತಹ ವಿಚಾರಗಳಿಗೆ ಹರಕೆ ಹೊರುವಾಗ ತಮ್ಮನ್ನು ತಾನೇ ವಿಮರ್ಶೆ ಮಾಡಬೇಕು. ಇಲ್ಲದೇ ಹೋದರೆ ತನಗೆ ಅಲ್ಲದಿದ್ದರೂ ತನ್ನ ಮಡದಿ ಮಕ್ಕಳಿಗೆ ಆದರೂ ಇದರ ಬಿಸಿ ತಾಗಿಯೇ ತಾಗುತ್ತದೆ. ಹಾಗಾಗಿ ದೈವಗಳಲ್ಲಿ ಯಾವ ವಿಚಾರಕ್ಕೆ ನಾವು ಬೇಡಬೇಕು ಎಂಬ ಎಚ್ಚರ ನಮಗೆ ಇದ್ದರೆ ಹಾಗೂ ಅದರಂತೆ ನಡೆದರೆ ನಮ್ಮ ಮಾತನ್ನು ದೈವ ತನ್ನ ಮಾತೆಂದು ನಡೆಸಿಕೊಡುತ್ತದೆ. ಒಂದು ಮಾತಿದೆ ” ಆನೆ ಬಗ್ಗೊಡು ಅಂಕುಶೊಗ್, ಕುದುರೆ ತಿರ್ಗೊಡು ಲಾಯೊಡು, ದೈವ ಒಳಿಯೊಡು ಮದಿಪುಗು” ನಮ್ಮ ಮದಿಪು ಹೇಗಿರಬೇಕು ಎಂದರೆ ದೈವಕ್ಕೂ ಮೆಚ್ಚಿಗೆ ಆಗಬೇಕು ಹಾಗೂ ನಮ್ಮ ಜೀವನ ಸತ್ಯ- ಧರ್ಮದ ಹಾದಿಯಲ್ಲಿ ಇರಬೇಕು. ಹಾಗಾಗಿ ದೈವಗಳನ್ನು ನಮ್ಮ ಹಿರಿಯರು ನಂಬಿದಂತೆ ನಮ್ಮನ್ನು ಅನುದಿನ ಕಾಯುವ ಸತ್ಯೊಳು ಎಂದೇ ನಂಬೋಣ.

Related Articles

5 COMMENTS

  1. ದೈವಾರಾಧನೆ ಬಗ್ಗೆ ಅಪಾರ ಮಾಹಿತಿ ಇದರಲ್ಲಿ ಒದಗಿಸಲಾಗಿದೆ. ವಾಸ್ತವದಲ್ಲಿ ನನಗೂ ತುಂಬಾ ಮಾಹಿತಿ ದೊರೆಯಿತು.ಧನ್ಯವಾದಗಳು ಶ್ರೀದೇವಿ ಅಕ್ಕಾ

ಪ್ರತಿಕ್ರಿಯೆ ನೀಡಿ

Latest Articles