ಇದೊಂದು ಸುಲಭವಾಗಿ ತಯಾರಿಸಬಹುದಾದ ಆರೋಗ್ಯಕರ ರೆಸಿಪಿಯಾಗಿದೆ.ಈ ಸಾರಿಗೆ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಯಾವುದನ್ನು ಸೇರಿಸದೆ ಪೂರ್ತಿ ಬ್ರಾಹ್ಮಣ ಶೈಲಿಯ ಸಾರು ಇದಾಗಿದೆ.ರುಚಿಯಲ್ಲಿ ಎಲ್ಲಾ ಸಾರಿಗಿಂತ ಒಂದು ಪಟ್ಟು ಜಾಸ್ತಿ. ಇದನ್ನು ಅನ್ನದೊಂದಿಗೆ ತಿಂದ ನಂತರ ಬಹಳ ಸಮಯವರೆಗೂ ಊಟ ಮಾಡಿದ ಕೈಯಿ ಸಾರಿನ ಪರಿಮಳ ಬರುತ್ತಿರುತ್ತದೆ.ಸೂಪ್ ರೀತಿಯಲ್ಲಿ ಸಹ ಸವಿಯಲು ರುಚಿಯಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು: ತೊಗರಿಬೇಳೆ 2-3ಟೇಬಲ್ ಚಮಚ ಎಣ್ಣೆ 1ಟೀ ಚಮಚ(ಕೊಬ್ಬರಿ ಎಣ್ಣೆ ರುಚಿ ಜಾಸ್ತಿ) ಸಾಸಿವೆ 1/4ಟೀ ಚಮಚ. ಕಾಳು ಮೆಣಸು 10 ಜೀರಿಗೆ 1ಟೀ ಚಮಚ ಮೆಂತ್ಯ 1/2ಟೀ ಚಮಚ ಅರಶಿನ 1/2ಟೀ ಚಮಚ ಬ್ಯಾಡಗಿ ಮೆಣಸಿನ ಕಾಯಿ 5-6 ಧನಿಯಾ 1ಟೀ ಚಮಚ ಇಂಗು ಸ್ವಲ್ಪ ಕರಿಬೇವು 10 ಎಲೆ ಹುಣಸೆ ಹಣ್ಣು ನಿಂಬೆ ಗಾತ್ರದ್ದು. ಉಪ್ಪು ರುಚಿಗೆ ತಕ್ಕಷ್ಟು ಬೆಲ್ಲ ಸ್ವಲ್ಪ. ನೀರು ಒಂದೂವರೆ ಲೀಟರ್ ತೆಂಗಿನ ಕಾಯಿ ತುರಿ ಕಾಲು ಕಪ್ ಅದನ್ನು ನುಣ್ಣಗೆ ರುಬ್ಬಿ ಹಾಲು ತೆಗೆದು ಒಂದು ಕಪ್ ತಯಾರಿಸಿ ಕೊಳ್ಳಿ.
ಒಗ್ಗರಣೆಗೆ: ತುಪ್ಪ 1ಟೀ ಚಮಚ ಸಾಸಿವೆ 1/2ಟೀ ಚಮಚ ಜೀರಿಗೆ 1/2ಟೀ ಚಮಚ ಇಂಗು 1/4ಟೀ ಚಮಚ ಕರಿಬೇವು, ಕೊತ್ತುಂಬರಿ ಸ್ವಲ್ಪ.
ತಯಾರಿಸುವ ವಿಧಾನ: ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆಯನ್ನು ಹಾಕಿ ತೊಗರಿ ಬೇಳೆ, ಒಣಮೆಣಸಿನಕಾಯಿ,ಕರಿಬೇವು, ಕಾಳು ಮೆಣಸು, ಮೆಂತ್ಯ, ಇಂಗು,ಜೀರಿಗೆ, ಸಾಸಿವೆ, ಧನಿಯಾ ಎಲ್ಲವನ್ನೂ ಹಾಕಿ ಕೆಂಬಣ್ಣ ಬರುವರೆಗೂ ಹುರಿದು ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಕೊಳ್ಳಿ. ಹುಣಸೆ ಹಣ್ಣಿಗೆ ಒಂದು ಕಪ್ ನೀರನ್ನು ಹಾಕಿ ರಸವನ್ನು ತೆಗೆದು ಕೊಳ್ಳಿ. ಆಗಲೇ ತುರಿದ ತೆಂಗಿನಕಾಯಿಯನ್ನು ಒಂದು ಕಪ್ ನೀರಿನಲ್ಲಿ ನುಣ್ಣಗೆ ರುಬ್ಬಿ ಕೊಂಡು ಜರಡಿಯಲ್ಲಿ ಸೋಸಿ ಹಾಲನ್ನು ತೆಗೆದು ಕೊಳ್ಳಿ. ಒಂದು ಪಾತ್ರೆಗೆ ಹುಣಸೆ ರಸ, ಬೆಲ್ಲ ಸ್ವಲ್ಪ, ಕರಿಬೇವು ಸ್ವಲ್ಪ, ಉಪ್ಪು ಹಾಕಿ ಕುದಿಸಿ. ಕುದಿ ಬಂದಾಗ ಮಸಾಲೆ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.ಅರಶಿನದ ಪುಡಿಯನ್ನು ಸೇರಿಸಿ. ನಂತರ ಉಳಿದ ನೀರು ತೆಂಗಿನ ಹಾಲು ಹಾಕಿ ಕುದಿಸಿ. ಈಗ ಒಗ್ಗರಣೆಯನ್ನು ಹಾಕಿ.ಒಲೆಯಿಂದ ಇಳಿಸುವಾಗ ಕೊತ್ತಂಬರಿ ಸೊಪ್ಪನ್ನು ಸೇರಿಸಿ.ರುಚಿಕರವಾದ ಗೊಡ್ಡು ಸಾರು ತಯಾರಿಸಿ ಸವಿಯಿರಿ. ಇಲ್ಲಿ ಬೆಲ್ಲವನ್ನು ಸಿಹಿ ಜಾಸ್ತಿ ಬೇಕಿದ್ದವರು ಜಾಸ್ತಿ ಹಾಕಿ ಸವಿಯಲು ಬಹುದು. ರುಚಿ ಜಾಸ್ತಿ ಇರುತ್ತದೆ.
ಲೇಖನ: ಶಿವಭಟ್ ಸೂರ್ಯಂಬೈಲು, ಉಪ್ಪಿನಂಗಡಿ