ದುರ್ಗಾ ದೇವಿಗೆ ಪ್ರಿಯವಾಗುವ ಹೂವು. ದೇವಿಯ ಪೂಜೆಗೆ ಇರಲೇಬೇಕಾದ ಹೂಗಳಲ್ಲಿ ಇದೂ ಒಂದು. ತುಳುನಾಡಿನಲ್ಲಿನ ಹೆಚ್ಚಾಗಿ ಕೇಪಳ ಹೂವನ್ನು ದೈವಾರಾಧನೆಗೆ ಬಳಕೆ ಮಾಡುತ್ತಾರೆ. ಇನ್ನು ಕೆಲವು ಕಡೆ ದೇವಸ್ಥಾನಗಳಲ್ಲಿ ಪೂಜೆಗೆ ಬಳಸುತ್ತಾರೆ. ಹಳದಿ, ಕೆಪು, ನಸುಗೆಂಪು, ಗಾಢ ಕೆಂಪು ಬಣ್ಣ, ಕಿತ್ತಳೆ, ಕ್ರೀಂ ಬಣ್ಣದ ಹೂಗಳಿವೆ. ಗುರುವಾಯೂರು ದೇವಸ್ಥಾನದಲ್ಲಿ ತೇಚಿ ಉಂಡಮಾಲಾ( ಕೇಪಳ ಹೂವಿನ) ಮಾಲೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ.
ವಿವಿಧ ಹೆಸರುಗಳು
ಕನ್ನಡದಲ್ಲಿ ಕೇಪಳ ಎಂದು ಕರೆಸಿಕೊಳ್ಳುವ ಈ ಹೂವಿಗೆ ಜಂಗಲ್ ಜೆರೇನಿಯಮ್, ಫ್ಲೇಮ್ ಆಫ್ ದ ವುಡ್ಸ್, ಜಂಗಲ್ ಫ್ಲೇಮ್, ವೆಸ್ಟ್ ಇಂಡಿಯನ್ ಜಾಸ್ಮಿನ್ ಎಂದೂ ಕರೆಯುತ್ತಾರೆ. ರುಬಿಯೇಸೀ ಕುಟುಂಬಕ್ಕೆ ಸೇರಿದ ಈ ಗಿಡಕ್ಕೆ ಬೇರೆ ಬೇರೆ ಹೆಸರುಗಳಿದ್ದರೂ ಇದನ್ನು ಹೆಚ್ಚಾಗಿ ಇಕ್ಸೋರಾ ಎಂದೇ ಕರೆಯುತ್ತಾರೆ.
ಆವಾಸ ಸ್ಥಾನ
ಪೊದೆಗಳಾಗಿ ಬೆಳೆಯುವ ಈ ಸಸ್ಯ ದಕ್ಷಿಣ ಭಾರತ ಹಾಗೂ ಶ್ರೀಲಂಕಾದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಅಲ್ಲದೇ ಇಂಡೋನೇಷಿಯಾ, ಮಲೇಶಿಯಾ, ಪಿಲಿಫೈನ್ಸ್, ವಿಯೆಟ್ನಾಂ, ಕಾಂಬೋಡಿಯಾ, ಥಾಯ್ಲೆಂಡ್ನಲ್ಲಿ ಬೆಳೆಯುತ್ತಾರೆ. ದಕ್ಷಿಣ ಫ್ಲೋರಿಡಾದ ಉದ್ಯಾನದಲ್ಲಿ ಈ ಹೂವಿನ ಗಿಡವನ್ನು ಅಲಂಕಾರಿಕ ಗಿಡವಾಗಿ ಬೆಳೆಯುತ್ತಾರೆ. ಮಧ್ಯಮ ವಾರ್ಷಿಕ ಮಳೆ ಬೀಳುವ ಜಾಗದಲ್ಲಿ ಹುಲುಸಾಗಿ ಬೆಳೆಯುತ್ತದೆ. ವಿಶ್ವದೆಲ್ಲೆಡೆ 28 ಜಾತಿಯ ಗಿಡಗಳನ್ನು ಬೆಳೆಸಲಾಗುತ್ತದೆ. ಈ ಗಿಡ ಸಾಮಾನ್ಯವಾಗಿ 4-6 ಅಡಿ ಎತ್ತರ ಬೆಳೆಯುತ್ತದೆ. ನಾಲ್ಕು ದಳಗಳನ್ನು ಹೊಂದಿರುವ ಈ ಹೂವು `ಸ್ವಸ್ತಿಕಾ’ ಚಿಹ್ನೆಯಂತೆ ಕಾಣುತ್ತದೆ.