ರಾಶಿಗನುಗುಣವಾಗಿ ನವದುರ್ಗೆಯ ಯಾವ ಅವತಾರವನ್ನು ಪೂಜಿಸಬೇಕು?

ಅಶ್ವಯುಜ  ಮಾಸದಲ್ಲಿ  ಶುದ್ಧಪ್ರತಿಪದೆಯಿಂದ ವಿಜಯದಶಮಿಯವರೆಗೆ ಶಕ್ತಿ ಆರಾಧನೆ ನಡೆಯುತ್ತದೆ. ಸಾತ್ವಿಕ, ರಾಜಸ, ತಾಮಸ ಮೂರು ರೂಪಗಳಿಂದ ಶಕ್ತಿ ಉಪಾಸನೆ ನಡೆಯುತ್ತದೆ. ದ್ವಾದಶ ರಾಶಿಯ ಅನುಗುಣವಾಗಿ ನವದುರ್ಗೆಯ ಯಾವ ಅವತಾರವನ್ನು ಪೂಜಿಸಬೇಕು? ಇಲ್ಲಿದೆ ಮಾಹಿತಿ.

ಮೇಷ: ಈ ರಾಶಿಯವರು ದುರ್ಗೆಗೆ ಕೆಂಪು ಹೂಗಳನ್ನು ಹಾಗೂ ಸಿಹಿಯನ್ನು ಅರ್ಪಿಸಿದರೆ ಒಳ್ಳೆಯದು. ನಿಮ್ಮ ಇಷ್ಟಾರ್ಥಗಳು ನೆರವೇರುವಂತೆ ಮಾಡಲು ನೀವು ಸ್ಕಂದಮಾತೆಯನ್ನು ಪೂಜಿಸಬೇಕು. ದುರ್ಗಾ ಸಪ್ತಶತಿ ಅಥವಾ ದುರ್ಗಾ ಚಾಲೀಸವನ್ನು ಪಠಿಸಬೇಕು.

ವೃಷಭ: ಈ ರಾಶಿಯವರು ದುರ್ಗಾ ಮಾತೆಯ ಅವತಾರವಾದ ಮಹಾಗೌರಿಯನ್ನು ಪೂಜಿಸಬೇಕು. ಐದು ಬಗೆಯ ಒಣಹಣ್ಣು, ವೀಳ್ಯದೆಲೆ- ಅಡಿಕೆ, ಶ್ರೀಗಂಧ ಹಾಗೂ ಹೂಗಳನ್ನು ಅರ್ಪಿಸಬೇಕು. ಲಲಿತಾ ಸಹಸ್ರನಾಮ ಹಾಗೂ ಸಿದ್ಧಿಕುಂಜಿಕಾ ಸ್ತ್ರೋತ್ರವನ್ನು ಪಠಿಸಬೇಕು. ಜೊತೆಗೆ ಬಿಳಿ ಬರ್ಫಿ ಅಥವಾ ಸಕ್ಕರೆ ಮಿಠಾಯಿಯನ್ನು ದೇವಿಗೆ ಅರ್ಪಿಸಬಹುದು.

ಮಿಥುನ: ಈ ರಾಶಿಯವರು ಬ್ರಹ್ಮಚಾರಿಣಿಯನ್ನು ಪೂಜಿಸಬೇಕು. ಹೂವು, ಬಾಳೆಹಣ್ಣು, ಗಂಧದ ಕಡ್ಡಿ, ಕರ್ಪೂರದಿಂದ ದೇವಿಯನ್ನು ಸ್ತುತಿಸಬೇಕು ಹಾಗೂ ”ಶಿವ ಶಕ್ತಿಯೇ ನಮಃ” ಮಂತ್ರವನ್ನು 108 ಬಾರಿ ಹಾಗೂ ತಾರಾ ಕವಚವನ್ನು ಪ್ರತಿದಿನ ಪಠಿಸುವುದು ಒಳ್ಳೆಯದು.

ಕಟಕ: ಈ ರಾಶಿಯವರು ದುರ್ಗಾ ಮಾತೆಯ ಶೈಲಪುತ್ರಿ ಅವತಾರವನ್ನು ಪೂಜಿಸಬೇಕು. ಅಕ್ಕಿ ಹಾಗೂ ಮೊಸರನ್ನು ನೈವೇದ್ಯವಾಗಿ ಅರ್ಪಿಸಬೇಕು. ಹಾಗೂ ಲಕ್ಷ್ಮೀ ಸಹಸ್ರನಾಮವನ್ನು ನವರಾತ್ರಿಯ ನವದಿನಗಳೂ ಪಠಿಸಬೇಕು. ಹಾಗೂ ಹಾಲಿನಿಂದ ಮಾಡಿದ ಸಹಿಯನ್ನು ಮಾಡಿ ದೇವಿಗೆ ಅರ್ಪಿಸಿ ನೀವೂ ಸೇವಿಸಿ. ಇದನ್ನು ದೇವಿಗೆ ಅರ್ಪಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಸಿಂಹ: ಈ ರಾಶಿಯವರು ಕೂಷ್ಮಾಂಡದೇವಿಯ ರೂಪವನ್ನು ಪೂಜಿಸಿದರೆ ಒಳ್ಳೆಯದು. ದೇವಿಗೆ ಕುಂಕುಮ, ಗಂಧವನ್ನು ಅರ್ಪಿಸಿ ಕರ್ಪೂರಾತಿಯನ್ನು ತಾಮ್ರದ ತಟ್ಟೆಯಲ್ಲಿ ಮಾಡಬೇಕು. ಜೀವನದಲ್ಲಿ ಯಶಸ್ಸು ಕಾಣಬೇಕಿದ್ದರೆ ನವರಾತ್ರಿಯ ಪ್ರತಿದಿನ ದುರ್ಗಾಸಪ್ತಶತಿಯನ್ನು ಪಠಿಸಿ. ಹಾಗೂ ತಾಯಿಯ ಮಂತ್ರವನ್ನು ಪಠಿಸುತ್ತಾ ಐದು ಹೂಮಾಲೆಯನ್ನು ಹಾಕಿ.

ಕನ್ಯಾ: ಕನ್ಯಾರಾಶಿಯವರು ಬ್ರಹ್ಮಚಾರಿಣಿಯನ್ನು ಪೂಜಿಸಬೇಕು. ಹಣ್ಣು, ವೀಳ್ಯದೆಲೆ, ಗಂಗಾಜಲವನ್ನು ಅರ್ಪಿಸಬೇಕು. ಲಕ್ಷ್ಮೀಮಂತ್ರ ಹಾಗೂ ದುರ್ಗಾಚಾಲೀಸವನ್ನು ನವರಾತ್ರಿಯಂದು ಪ್ರತಿದಿನ ಪಠಿಸಿ. ಹಾಲಿನಿಂದ ಮಾಡಿದ ಖೀರು ದೇವಿಗೆ ನೈವೇದ್ಯವಾಗಿ ನೀಡಿ.

ತುಲಾ: ದುರ್ಗಾ ಮಾತೆಯ ಮಹಾಗೌರಿ ಅವತಾರವನ್ನು ಪೂಜಿಸಬೇಕು. ದೇವಿಗೆ ಹಾಲು, ಅಕ್ಕಿ ಹಾಗೂ ಕೆಂಪು ವಸ್ತ್ರವನ್ನು ನೀಡಬೇಕು. ಇದಾದ ನಂತರ ದೇಸಿ ತುಪ್ಪದ ದೀಪ ಹಚ್ಚಿ ಕರ್ಪೂರಾರತಿಯನ್ನು ಮಾಡಬೇಕು. ದುರ್ಗಾಸಪ್ತಶತಿಯ ಮೊದಲ ಅಧ್ಯಾಯವನ್ನು ನವರಾತ್ರಿಯ ಪ್ರತಿದಿನ ಪಠಿಸಬೇಕು. ಸಕ್ಕರೆ ಮಿಠಾಯಿಯನ್ನು ದೇವಿಗೆ ಅರ್ಪಿಸಿ.

ವೃಶ್ಚಿಕ: ಈ ರಾಶಿಯವರು ಜಗಜ್ಜನನಿಯಾದ ಸ್ಕಂದಮಾತೆಯ ಅವತಾರವನ್ನು ಪೂಜಿಸಬೇಕು. ಕೆಂಪು ಹೂವು, ಅಕ್ಕಿ, ಬೆಲ್ಲ ಹಾಗೂ ಗಂಧವನ್ನು ದೇವಿಗೆ ಅರ್ಪಿಸಬೇಕು. ದುರ್ಗಾಸಪ್ತಶತಿಯನ್ನು ಪಠಿಸಿ, ಕರ್ಪೂರಾರತಿಯನ್ನು ಪ್ರತಿದಿನವೂ ಮಾಡಬೇಕು. ಕೆಂಪು ಬಣ್ಣದ ಸಿಹಿಯನ್ನು ಮಾತೆಗೆ ನೈವೇದ್ಯವಾಗಿ ಅರ್ಪಿಸಬಹುದು.

ಧನುಸ್ಸು: ಈ ರಾಶಿಯವರು ಮಾತೆ ಚಂದ್ರಘಂಟೆಯ ಅವತಾರವನ್ನು ಪೂಜಿಸಬೇಕು. ಅರಿಶಿಣ, ಕುಂಕುಮ, ಹಳದಿ ಬಣ್ಣದ ಹೂ ಹಾಗೂ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಚಂದ್ರಘಂಟೆಯನ್ನು ಆರಾಧಿಸಬೇಕು. ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಶ್ರೀ ರಾಮ ರಕ್ಷಾ ಸ್ತ್ರೋತ್ರವನ್ನು ಪಠಿಸಬೇಕು. ತಾಯಿಗೆ ಹಳದಿ ಬಣ್ಣದ ಸಿಹಿ ಹಾಗೂ ಬಾಳೆಹಣ್ಣನ್ನು ನೀಡಬೇಕು.

ಮಕರ: ಈ ರಾಶಿಯವರು ದುರ್ಗಾಮಾತೆಯ ಕಾಳರಾತ್ರಿಯ ಅವತಾರವನ್ನು ಪೂಜಿಸದರೆ ಒಳ್ಳೆಯದು. ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ, ಹೂ, ಕುಂಕುಮವನ್ನು ದೇವಿಗೆ ಅರ್ಪಿಸಬೇಕು. ಜೀವನದಲ್ಲಿ ಖುಷಿಯನ್ನು ಕಾಣಲು ಸಿಹಿ ಅಥವಾ ಉದ್ದಿನ ಬೇಳೆಯಿಂದ ಮಾಡಿದ ತಿನಿಸನ್ನು ದೇವಿಗೆ ನೇವೇದ್ಯವಾಗಿ ಅರ್ಪಿಸಿ. ಕಾಳರಾತ್ರಿಯನ್ನು ಪೂಜಿಸುವುದರಿಂದ ನಿಮ್ಮ ಆರೋಗ್ಯ ವೃದ್ಧಿ ಹಾಗೂ ಜೀವನದಲ್ಲಿ ಯಶಸ್ಸನ್ನು ಕಾಣಿವಿರಿ.

ಕುಂಭ: ಈ ರಾಶಿಯವರು ಭವತಾರಿಣಿಯ ಅವತಾರವಾದ ಕಾಳರಾತ್ರಿಯನ್ನು ಪೂಜಿಸಬೇಕು. ದೀಪವನ್ನು ಹಚ್ಚಿ ಹೂ, ಕುಂಕುಮ ಹಾಗೂ ಹಣ್ಣುಗಳನ್ನು ಅರ್ಪಿಸಿ. ನವರಾತ್ರಿಯ ಪ್ರತಿದಿನ ದೇವೀ ಕವಚವನ್ನು ಪಠಿಸಿ ಹಾಗೂ ಯಾವುದಾದರೂ ನೈವೇದ್ಯವನ್ನು ಮಾಡಿ ದೇವಿಗೆ ನೀಡಿ.

ಮೀನ: ಈ ರಾಶಿಯವರು ಚಂದ್ರಘಂಟಾ ದೇವಿಯನ್ನು ಪೂಜಿಸಬೇಕು. ಅರಿಶಿಣ, ಅಕ್ಕಿ, ಹಳದಿ ಬಣ್ಣದ ಹೂವು ಹಾಗೂ ಬಾಳೆಹಣ್ಣನ್ನು ಅರ್ಪಿಸಿ ಹಾಗೂ ಬಗಲಮುಖಿ ಮಂತ್ರವನ್ನು ಪಠಿಸುತ್ತಾ ಹೂವಿನಿಂದ ದೇವಿಗೆ ಅರ್ಚಿಸಿ. ಹಾಗೂ ನವರಾತ್ರಿಯ ಒಂಭತ್ತು ದಿನಗಳೂ ದುರ್ಗಾಸಪ್ತಶತಿಯನ್ನು ಪಠಿಸಿ. ಹಳದಿ ಬಣ್ಣದ ಸಿಹಿ ಹಾಗೂ ಬಾಳೆಹಣ್ಣನ್ನು ದೇವಿಗೆ ಅರ್ಪಿಸಿ.

ಆಧಾರ: ಧರ್ಮಗ್ರಂಥ
ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು ಬೆಂಗಳೂರು
.

Related Articles

ಪ್ರತಿಕ್ರಿಯೆ ನೀಡಿ

Latest Articles