ಗಜಲಕ್ಷ್ಮಿ ದೇವಿಯ ಚಿತ್ರವಿರುವ ದೀಪವನ್ನು ಗಜಲಕ್ಷ್ಮಿ ದೀಪ ಅಥವಾ ಕಾಮಾಕ್ಷಿ ದೀಪ ಎಂದು ಕರೆಯುತ್ತಾರೆ. ಈ ದೀಪದ ಬೆಳಕಿನಲ್ಲಿ ಕಾಮಾಕ್ಷಿ ದೇವಿಯೂ ನೆಲೆಸಿರುವಳು. ಕಾಮಾಕ್ಷಿ ದೇವಿಯು ಸರ್ವ ದೇವತೆಗಳಿಗೆ ಶಕ್ತಿ ಕೊಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಕಾಮಾಕ್ಷಿ ದೇವಸ್ಥಾನವನ್ನು ಬೇರೆ ದೇವಸ್ಥಾನಗಳಿಗಿಂತ ಬೆಳಗಿನ ಜಾವ ಬೇಗನೆ ತೆರೆಯುತ್ತಾರೆ. ಹಾಗೆಯೇ ರಾತ್ರಿಯ ಸಮಯದಲ್ಲಿ ಎಲ್ಲ ದೇವಸ್ಥಾನಗಳ ಬಾಗಿಲು ಮುಚ್ಚಿದ ನಂತರವೇ ಈ ಕಾಮಾಕ್ಷಿ ದೇವಿಯ ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ದೇವಿಯ ಅವತಾರವಾದ ಈ ಕಾಮಾಕ್ಷಿ ದೀಪ ಬೆಳಗುವ ಮನೆ ಅಖಂಡ ಐಶ್ವರ್ಯದಿಂದ ಕೂಡಿರುತ್ತದೆ ಎಂಬುದು ಒಂದು ನಂಬಿಕೆ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಚಿನ್ನದ ಆಭರಣಗಳನ್ನು ವಂಶ ಪರಂಪರೆಯಾಗಿ ಹೇಗೆ ಮುಂದಿನ ಪೀಳಿಗೆ ನೀಡುತ್ತಾರೋ, ಹಾಗೆಯೇ ಇದನ್ನೂ ಸಹ ಜಾಗ್ರತೆಯಿಂದ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬಳುವಳಿಯಾಗಿ ಕೊಡುತ್ತಾರೆ. ಮನೆಯಲ್ಲಿ ವ್ರತಗಳು, ಗೃಹಪ್ರವೇಶ ಪೂಜೆಯನ್ನು ಮಾಡುವಾಗ ಅಖಂಡ ದೀಪವನ್ನು ಹಚ್ಚಬೇಕು ಎನ್ನುವವರು ಕಾಮಾಕ್ಷಿ ದೀಪವನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗೆ ಪುರಾಣಗಳಲ್ಲಿ ವ್ರತಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಕಾಮಾಕ್ಷಿ ದೀಪಗಳನ್ನು ದೀಪಾರಾಧನೆಗೆ ಬಳಸಿದರೆ ಒಳ್ಳೆಯದು.
ದೀಪಾರಾಧನೆಯ ಕ್ರಮ: ದೀಪಾರಾಧನೆ ಮಾಡುವಾಗ ದೀಪಕ್ಕೆ ಕುಂಕುಮ ಇಟ್ಟು, ಹೂವನ್ನು ಅರ್ಪಿಸಿ, ದೀಪವನ್ನು ಬೆಳಗಿಸಿ ಮೊದಲು ದೀಪಕ್ಕೆ ಪೂಜೆ ಮಾಡಬೇಕು. ನಂತರ ದೇವರ ಪೂಜೆ ಮಾಡಬೇಕು.
ಕಾಮಾಕ್ಷಿ ದೀಪವನ್ನು ಬಳಸುವಾಗ ಆ ದೀಪಕ್ಕೆ ಕುಂಕುಮ ಇಟ್ಟ ನಂತರ ಅದೇ ಕೈಯಿಂದ ದೇವರ ರೂಪಕ್ಕೂ ಕುಂಕುಮ ಇಟ್ಟು, ಸುತ್ತಲೂ ಹೂವಿನಿಂದ ಅಲಂಕಾರ ಮಾಡಿ ಆ ದೀಪವನ್ನು ನೆಲಕ್ಕೆ ತಾಕದಂತೆ ಒಂದು ತಾಮ್ರದ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಇರಿಸಬೇಕು. ಈ ದೀಪವನ್ನು ಎಳ್ಳೆಣ್ಣೆ ಅಥವಾ ಹಸುವಿನ ತಾಜಾ ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು.
ಕಾಮಾಕ್ಷಿ ದೀಪದ ಬತ್ತಿ ಹೇಗೆ ನಿಧಾನವಾಗಿ ಸುಡುತ್ತದೆಯೋ ಹಾಗೆಯೇ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸಹ ನಿಧಾನವಾಗಿ ತೊಲಗಿ ಆಚೆ ಹೋಗುತ್ತದೆ. ಯಾವಾಗಲೂ ದೀಪಾರಾಧನೆ ಮಾಡುವಾಗ ಎರಡು ಬತ್ತಿಗಳು ಸಾಮಾನ್ಯವಾಗಿ ಇರುವಂತೆ ನೋಡಿಕೊಳ್ಳಬೇಕು. ಕಾಮಾಕ್ಷಿ ದೀಪವನ್ನು ಯಾವಾಗಲೂ ಉತ್ತರ ಮತ್ತು ಪೂರ್ವ ದಿಕ್ಕನ್ನು ನೋಡುವಂತೆ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ಖಚಿತವಾಗಿ ದೀಪಾರಾಧನೆ ಮಾಡಬಾರದು. ಈ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ತೊಳೆಯಬಾರದು. ಪ್ರತಿದಿನ ಬೆಳಗಿನ ಜಾವ ಮತ್ತು ಸಾಯಂಕಾಲದ ಸಮಯದಲ್ಲಿ ಕಾಮಾಕ್ಷಿಯ ದೀಪದಿಂದ ದೀಪಾರಾಧನೆಯನ್ನು ಮನೆಯಲ್ಲಿ ಮಾಡಿದರೆ ಸಕಲ ರೀತಿಯಲ್ಲಿಯೂ ಒಳ್ಳೆಯದಾಗುವುದು.
ಸಂಗ್ರಹ: ಹೆಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು