ಕರ್ನಾಟಕಕ್ಕೆ ಸಸ್ಯಕಾಶಿ ದೀಕ್ಷೆ ನೀಡಿದವರು ಭೈರವೈಕ್ಯ ಡಾ. ಬಾಲಗಂಗಾಧರನಾಥ ಜಗದ್ಗುರು: ಡಾ.ಶಿವಾನಂದ ಶಿವಾಚಾರ್ಯರು

ತುಮಕೂರು : “ಪರಮಪೂಜ್ಯ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಹಿಂದೂ ಸಂಸ್ಕೃತಿಯ ಮೂರ್ತರೂಪವಾಗಿದ್ದರು. ಅವರು ಸನಾತನ ಹಿಂದೂ ಸಂಸ್ಕೃತಿಯ ಪ್ರಬಲ ವಕ್ತಾರರೂ ಅಹುದು, ಪ್ರಧಾನ ವಕ್ತಾರರೂ ಅಹುದು ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ತುಮಕೂರಿನ ಕುಂಚಿಟಿಗ ಯುವ ವೇದಿಕೆ ಜನವರಿ 13ರಂದು ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ವೃತ್ತದ ಬಳಿ ಕುಂಚಿಟಿಗರ ಯುವವೇದಿಕೆ ಏರ್ಪಡಿಸಿದ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 8ನೇ ಪುಣ್ಯಸ್ಮರಣೋತ್ಸವ ಮತ್ತು ಅನ್ನಸಂತರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪರಮಪೂಜ್ಯರ ಭಾವಚಿತ್ರದ ಎದುರಿನಲ್ಲಿ ದೀಪ ಬೆಳಗಿಸಿ, ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆಗೆ ಚಾಲನೆಯನ್ನು ನೀಡಲಾಯಿತು.

ನಂತರ ಮಾತನಾಡಿದ ಶ್ರೀಗಳು, “ಪರಮಪೂಜ್ಯರು ಸಂಸ್ಕೃತ ಮತ್ತು ಸಂಸ್ಕೃತಿ – ಇವೆರಡನ್ನೂ ಅನ್ಯೋನ್ಯವಾಗಿಸಿಕೊಂಡು ಬದುಕಿದ್ದರು. ಆದಿಚುಂಚನಗಿರಿ ಮಠದಲ್ಲಿ ನಿರಂತವಾಗಿ ಹೋಮ-ಹವನಗಳು, ಯಜ್ಞಯಾಗಗಳು, ಪೂಜಾಪಾಠಗಳು ನಡೆದುಕೊಂಡಿರುತ್ತಿದ್ದವು. ಮಠದ ವಾತಾವರಣವು ಯಾವಾಗಲೂ ಮಂತ್ರಘೋಷಗಳಿಂದ ತುಂಬಿಕೊಂಡಿರುತ್ತಿತ್ತು. ಪೂಜ್ಯರು ಸಾಧು, ಸಂತರನ್ನು ಮತ್ತು ಸನ್ಯಾಸಿಗಳನ್ನು ತುಂಬ ಪ್ರೀತಿಸುತ್ತಿದ್ದರು. ಸಾಧು, ಸಂತರು ಮಠಕ್ಕೆ ಬಂದರೆ ಅವರಿಗೆ ಬಟ್ಟೆ ಬರೆ, ಅನ್ನ ವಸ್ತ್ರಗಳನ್ನಿತ್ತು ಆದರದಿಂದ ಮಾತೃವಾತ್ಸಲ್ಯದಿಂದ ಕಾಣುತ್ತಿದ್ದರು ಎಂದು ಸ್ಮರಿಸಿದರು.

ಚುಂಚನಗಿರಿಯನ್ನು ಕಾಂಚನಗಂಗೆಯನ್ನಾಗಿಸಿದರು

ಆದಿಚುಂಚನಗರಿ ಮಠಕ್ಕೆ ಉತ್ತರ ಭಾರತದಿಂದ ಬಹುದೊಡ್ಡ ಪ್ರಮಾಣದಲ್ಲಿ ಸಾಧು, ಸನ್ಯಾಸಿಗಳು ಆಗಮಿಸುತ್ತಿದ್ದರು. ಪೂಜ್ಯರು ಭಾರತೀಯ ಸಾಧುಪರಂಪರೆಗೆ “ಶಿರೋಧಾರ್ಯ” ಗೌರವವನ್ನು ಕೊಟ್ಟುಕೊಂಡಿದ್ದರು. ಪರಮಪೂಜ್ಯರು ಚುಂಚನಗಿರಿ ಮಠವನ್ನು ನಭದೆತ್ತರಕ್ಕೆ ಬೆಳೆಸಿದರು. ಪೂಜ್ಯರು ಚುಂಚನಗಿರಿಯನ್ನು ಕಾಂಚನಗಂಗೆಯನ್ನಾಗಿಸಿದರು. ಅವರ ಕಾಲಘಟ್ಟದಲ್ಲಿ ಆದಿಚುಂಚನಗಿರಿ ಮಠವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಶಕ್ತಿಕೇಂದ್ರವಾಗಿ ರೂಪುಗೊಂಡಿತು.

ಪರಮಪೂಜ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳು ಎಲ್ಲ ಧರ್ಮಗಳನ್ನು ಮತ್ತು ಎಲ್ಲ ಪರಂಪರೆಗಳನ್ನು ಗೌರವಿಸುತ್ತಿದ್ದರು. ಒಳಿತು ಎಲ್ಲಿಂದಲೇ ಬಂದರೂ ಅದನ್ನು ಅವರು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದರು ಮತ್ತು ಅಪ್ಪಿಕೊಳ್ಳುತ್ತಿದ್ದರು. “ಆ ನೋ ಭದ್ರಾಣಿ ಕ್ರತವಃ ಯಂತು ವಿಶ್ವತಃ” ಎಂಬ ಋಷಿವಾಣಿಯನ್ನು ಅವರು ತಮ್ಮ ಬದುಕಿನೊಂದಿಗೆ ಆತ್ಮಸಾತ್‌ಗೊಳಿಸಿಕೊಂಡಿದ್ದರು. ಪೂಜ್ಯರು ಆದಿಚುಂಚನಗಿರಿ ಕ್ಷೇತ್ರವನ್ನು ವಿದ್ಯಾಕಾಶಿಯನ್ನಾಗಿ ಪರಿವರ್ತಿಸಿದರು. ಆದಿಚುಂಚನಗಿರಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ನಾಂದಿಹಾಡಿದ ಪೂಜ್ಯರು ಹುಟ್ಟಿನಿಂದಲೇ ಬಹುದೊಡ್ಡ ಕನಸುಗಾರರು. ಅಷ್ಟು ಮಾತ್ರವಲ್ಲ, ತಾವು ಕಂಡ ಕನಸುಗಳಿಗೆ ಅಷ್ಟೇ ಸಮರ್ಥವಾಗಿ ನನಸಿನ ದೀಕ್ಷೆಯನ್ನು ಕೊಡುವ ಧೈರ್ಯ ಮತ್ತು ಇಚ್ಛಾಶಕ್ತಿ ಅವರಲ್ಲಿತ್ತು.

ಪರಸ್ಪರ ದೇವೋ ಭವ ಎಂದಿದ್ದರು

ಆದಿಚುಂಚನಗರಿ ಶ್ರೀಮಠಕ್ಕೆ ಮತ್ತು ಶ್ರೀಕ್ಷೇತ್ರಕ್ಕೆ ವಿಶ್ವಭೂಪುಟದಲ್ಲಿ ಮುಂಚೂಣಿಯ ಸ್ಥಾನವನ್ನು ಕಲ್ಪಿಸಿಕೊಟ್ಟ ಬಾಲಗಂಗಾಧರನಾಥ ಜಗದ್ಗುರುಗಳು ಕರ್ನಾಟಕವನ್ನು ಸಸ್ಯಕಾಶಿಯನ್ನಾಗಿಸಬೇಕು ಎಂದು ಸಂಕಲ್ಪಮಾಡಿದ್ದರು. ಅವರ ಸಂಕಲ್ಪವದು ಅಭಿಯಾನವಾಗಿ, ಆಂದೋಲವನವಾಗಿ ರೂಪುಗೊಂಡಿತು. ಪೂಜ್ಯರು “ಪರಸ್ಪರ ದೇವೋ ಭವ” ಎಂದು ಹೇಳುವುದರ ಜೊತೆ ಜೊತೆಯಲ್ಲಿ “ಪರಿಸರ ದೇವೋ ಭವ” ಎಂಬ ಮಾತಿಗೂ ಆಧಾರವಾಗಿ ಮತ್ತು ಆಧಾರಸ್ತಂಭವಾಗಿ ನಿಂತುಕೊಂಡರು. ಪೂಜ್ಯರ “ಜನಪರ” ಸಂಕಲ್ಪಗಳಿಗೆ ಸರಕಾರಗಳು ಕೂಡ ಕೈಜೋಡಿಸುತ್ತಿದ್ದವು. ಸನ್ಯಾಸಕ್ಕೆ ಮತ್ತು ಕಾಷಾಯಾಂಬರಕ್ಕೆ ಹೊಸಭಾಷ್ಯವನ್ನು ಬರೆದ ಪರಮಪೂಜ್ಯರು ಜನಮನದಲ್ಲಿ ಹೊಸ ಭರವಸೆಯನ್ನು ಬಿತ್ತುವುದರೊಂದಿಗೆ ಜನಮಾನಸದಲ್ಲಿ ಹೊಸ ಸಂಚಲನವನ್ನುಉಂಟುಮಾಡಿದರು. ಅವರು ಜನಮನವನ್ನು ಉತ್ಸಾಹದ ವೇದಿಕೆಯನ್ನಾಗಿಸಿದರು.

ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳೂ ಅಭಿನಂದನಾರ್ಹರು

ಪೂಜ್ಯರ ಉತ್ತರಾಧಿಕಾರಿಗಳಾಗಿ ಪೀಠವನ್ನು ಅಲಂಕರಿಸಿದ ವರ್ತಮಾನ ಜಗದ್ಗುರು ಪರಪಮಪೂಜ್ಯ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಕೂಡ ತಮ್ಮ ಗುರುಗಳ ಇಚ್ಛಾಶಕ್ತಿಯನ್ನು ಮತ್ತು ಗುರುಪರಂಪರೆಯ ಮಹಾಮಣಿಹವನ್ನು ಅಷ್ಟೇ ಯಶಸ್ವಿಯಾಗಿ ಮತ್ತು ಸದೃಢವಾಗಿ ಕೊಂಡೊಯ್ಯುತ್ತಿರುವುದು ನಿಜಕ್ಕೂ ಅಭಿನಂದನೀಯ.

ಅವರ ಚೈತನ್ಯಶಕ್ತಿ ನಮ್ಮೆಲ್ಲರ ಜೊತೆಗಿದೆ

ಪರಮಪೂಜ್ಯರು ಇದೀಗ ಭಗವಂತನ ಸನ್ನಿಧಾನದಲ್ಲಿದ್ದಾರೆ. ಅವರ ಚೈತನ್ಯಶಕ್ತಿ ನಮ್ಮೆಲ್ಲರ ಜೊತೆಗಿದೆ. ಪೂಜ್ಯರು ಭಗವಂತನ ಸನ್ನಿಧಾನದಿಂದಲೇ, ನಮ್ಮೀ ನಾಡು, ಈ ದೇಶ ಸುಖ, ಸಮೃದ್ಧಿಯಿಂದ ಕೂಡಿಕೊಂಡು ಸುಭೀಕ್ಷವಾಗಿರಲಿ ಎಂದು ಆಶೀರ್ವಾದ ಮಾಡಲಿ. ಅವರ ಆಶೀರ್ವಾದದಲ್ಲಿ ಶಕ್ತಿ ಇದೆ, ಸಂಚಲನವಿದೆ, ಸಂಜೀವಿನಿಯ ಸ್ಪರ್ಶವಿದೆ. ಪರಮಪೂಜ್ಯರ 8ನೆಯ ಪುಣ್ಯಸ್ಮರಣೋತ್ಸವದ ಸಂದರ್ಭದಲ್ಲಿ, ನಾಡಿನ ಸಮಸ್ತ ಜನಗಳ ಪರವಾಗಿ ನಾವು ಅವರಿಗೆ ಗೌರವನಮನಗಳನ್ನು ಅರ್ಪಿಸುತ್ತೇವೆ” – ಎಂದ

ಕಾರ್ಯಕ್ರಮದಲ್ಲಿ ಯುವವೇದಿಕೆಯ ಜಿಲ್ಲಾಧ್ಯಕ್ಷ ಕೆ. ರಾಮಮೂರ್ತಿ ಗೌಡ, ಮಹಾನಗರಪಾಲಿಕೆ ಸದಸ್ಯ ಮಹೇಶ್, ಪ್ರಿಂಟರ್ ಶ್ರೀಪತಿ, ಲಿಖಿತ ಗೌಡ, ಶಶಿಧರ್ ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles