ಸಂಕ್ರಾಂತಿ ಹಬ್ಬದ ದಿನ ಪವಿತ್ರ ಸ್ನಾನಕ್ಕೆ ಯಾಕಿಷ್ಟು ಮಹತ್ವ?

ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಕಾಲಿಡುವ ಮಕರ ರಾಶಿಯನ್ನು ಪ್ರವೇಶಿಸುವ ಈ ದಿನ ಸೂರ್ಯ ರಶ್ಮಿಗಳ ಪ್ರಖರತೆ ಶಾರೀರಿಕ ಪೀಡೆ ತೊಲಗಿಸುತ್ತವೆ ಎಂಬುದು ಕೂಡಾ ನಂಬಿಕೆ. ಹೀಗಾಗಿ ನದಿಯಲ್ಲಿನ ಪವಿತ್ರ ಸ್ನಾನಕ್ಕಾಗಿ ಎಲ್ಲೆಡೆ ಸಡಗರ ಸಂಭ್ರಮ.

*ವೈ.ಬಿ.ಕಡಕೋಳ

ಸಂಕ್ರಮಣ ಎಂದರೆ ಉಜ್ವಲವಾದ ಬೆಳಕು, ಜೀವನದ ಹೊಸ ತಿರುವು ಎಂದರ್ಥ. ಜನವರಿ 14 ರಂದು ಸೂರ್ಯನು ಮಕರ ವೃತ್ತದಿಂದ ಕರ್ಕಾಟಕ ವೃತ್ತಕ್ಕೆ ಸ್ಥಾನಪಲ್ಲಟ ಮಾಡುವುದರಿಂದ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆದಿರುವರು.
ಈ ದಿನ ಎಳ್ಳು ಅರಿಸಿನ ಹಚ್ಚಿಕೊಂಡು ನದಿಯಲ್ಲಿ ಸ್ನಾನ ಮಾಡುವರು. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಕಾಲಿಡುವ ಮಕರ ರಾಶಿಯನ್ನು ಪ್ರವೇಶಿಸುವ ಈ ದಿನ ಸೂರ್ಯ ರಶ್ಮಿಗಳ ಪ್ರಕರತೆ ಶಾರೀರಿಕ ಪೀಡೆ ತೊಲಗಿಸುತ್ತವೆ ಎಂಬುದು ಕೂಡ ನಂಬಿಕೆ. ಹೀಗಾಗಿ ನದಿಯಲ್ಲಿನ ಪವಿತ್ರ ಸ್ನಾನಕ್ಕಾಗಿ ಎಲ್ಲೆಡೆ ಸಡಗರ ಸಂಭ್ರಮ. ಎಲ್ಲರೂ ಹೊಸಬಟ್ಟೆ ಧರಿಸುವರು. ಅಂದು ಸಂಜೆ ನದಿಗಳಲ್ಲಿ ತೆಪ್ಪೋತ್ಸವ ನಡೆಯುವುದು. ನಂತರ ಮಠಗಳಲ್ಲಿ ಉಪನ್ಯಾಸ ಏರ್ಪಡಿಸುವ ಮೂಲಕ ಪುಣ್ಯಕಾಲದ ಆಚರಣೆಯನ್ನು ಸಾರ್ಥಕಪಡಿಸಿಕೊಳ್ಳುವರು.

ಪಿಟಿಐ ಚಿತ್ರ

ಎಳ್ಳು ಅರಿಸಿನ ಸ್ನಾನ
ಸಣ್ಣ ಮಕ್ಕಳಿಗೆ ತಲೆಯ ಮೇಲೆ ಚುರುಮುರಿ ಹಾಕಿ, ಬೋರೆ ಹಣ್ಣು, ಕಬ್ಬಿನ ಚೂರು, ಕಾಸು ಎಲ್ಲವನ್ನು ಬೆರೆಸಿ ಎಳ್ಳೆಣ್ಣೆ ಸ್ನಾನ ಮಾಡಿಸಿ ಹೊಸಬಟ್ಟೆ ತೊಡಿಸಿ ಆರತಿ ಮಾಡುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿದೆ. ಈ ಹಬ್ಬದಲ್ಲಿ ಜನರು ಮೊದಲ ದಿನ ಎಳ್ಳು ಅರಿಸಿನ ಹಚ್ಚಿಕೊಂಡು ಸ್ನಾನ ಮಾಡಿ ದೇವರ ಪೂಜೆ ಮಾಡಿದರೆ, ಮರುದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಮೂಲಕ ದೇವಾಲಯಗಳಿಗೆ ತೆರಳಿ ದರ್ಶನ ಪಡೆಯುವರು.

ಎಳ್ಳು ಬೆಲ್ಲಹಂಚುವ ಸಂಭ್ರಮ

ಎಳ್ಳಿನ ಜೊತೆಗೆ ಸಕ್ಕರೆಯ ಅಚ್ಚುಗಳು ಹಣ್ಣು ಕಬ್ಬಿನ ತುಂಡುಗಳನ್ನು ಸಹ ಸಂಕ್ರಾಂತಿಯಲ್ಲಿ ತಿನ್ನುವರು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತಗೆದ ಕಡೆಲೇಕಾಯಿ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳುಬೆಲ್ಲ” ತಯಾರಿಸುವರು. ಆ ದಿನ ಎಳ್ಳು-ಬೆಲ್ಲ ವಿನಿಮಯ ಮಾಡಿಕೊಳ್ಳುವರು. “ಎಳ್ಳು-ಬೆಲ್ಲ ಕೊಟ್ಟು ನಾವು-ನೀವೂ ಒಳ್ಳೆಯವರಾಗಿರೋಣ,ಒಳ್ಳೊಳ್ಳೆ ಮಾತನಾಡೋಣ ಎಳ್ಳು ಬೆಲ್ಲದ ಹಾಗೆ ಇರೋಣ‘ ಎಂದು ಹೇಳುತ್ತ ಎಲ್ಲರಲ್ಲಿ ಪರಸ್ಪರ ಶುಭ ಕೋರುವ ಮೂಲಕ ಆಚರಿಸುವುದು ಇಂದಿಗೂ ಸಂಕ್ರಾಂತಿ ಆಚರಣೆ ಉಳಿದುಕೊಂಡು ಬಂದಿದೆ.

ವಿವಿಧೆಡೆ ವಿಭಿನ್ನ ಆಚರಣೆ
ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಇಲ್ಲಿ ಭೋಗಿ(ಹೊಸ ಬಟ್ಟೆಗಳ ಧರಿಸುವುದು) ನಂತರ ಹಾಲು ಬೆಲ್ಲಗಳನ್ನು ಪಾತ್ರೆಯಲ್ಲಿ ಹಾಕಿ ಉಕ್ಕಿಸುವ ಪೊಂಗಲ್ ಹಬ್ಬ. ಗೋಪೂಜೆ ಮಾಡುವ ಮಾಟ್ಟು ಪೊಂಗಲ್ ಎಂದು ಆಚರಿಸಿದರೆ ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆಯುವ ಸಂಪ್ರದಾಯ ಇಂದಿಗೂ ಜರುಗುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟçಗಳಲ್ಲಿ ಗಾಳಿಪಟ ಹಾರಿಸುವ ಮೂಲಕ ಈ ಹಬ್ಬದ ಆಚರಣೆ ಜರುಗುತ್ತಿದೆ.ಮಹಾರಾಷ್ಟçದಲ್ಲಿ ಎಳ್ಳಿನ ಉಂಡೆಗಳನ್ನು ಹಂಚುವ ಸಂಪ್ರದಾಯವಿದೆ. ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಈ ಹಬ್ಬವನ್ನು “ಲೋಹರಿ” ಎಂದು ಕರೆಯುವರು.
ಗ್ರೆಗೋರಿಯನ್ ಪಂಚಾಂಗದ ಪ್ರಕಾರ ಸೂರ್ಯನ ಉತ್ತರ ದಿಕ್ಕಿನ ಪಯಣವನ್ನು ಸೂಚಿಸುವ ಕಾಲ.vಉತ್ತರಾರ್ಧಗೋಳದಲ್ಲಿ ಚಳಿ ಬೆಚ್ಚನೆಯ ವಾತಾವರಣ ಆರಂಭವಾಗಿ ಬೆಳೆ ಕಟಾವಿನ ಕಾಲv.ಉತ್ತರಾಯಣ ಕಾಲ ಡಿಸೆಂಬರ್ 22ಕ್ಕೆ ಆರಂಭವಾದರೂ ಜನೇವರಿ 14 ರಿಂದ ನಡೆಯುವ ಮಕರ ಉತ್ತರಾಯಣ ಆಚರಣೆ ನಡೆಯುತ್ತದೆ. ಮಹಾಭಾರತದಲ್ಲಿ ಇಚ್ಛಾ ಮರಣವನ್ನು ಹೊಂದಿದ್ದ ಭೀಷ್ಮರು ಉತ್ತರಾಯಣ ಪರ್ವಕಾಲವನ್ನು ಕಾದಿದ್ದ ಬಗ್ಗೆ ಉಲ್ಲೇಖವಿದೆ.

ಸಂಕ್ರಾಂತಿಗೆ ಎಳ್ಳಿನ ಮಹತ್ವ
ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡುವ ಸಂಪ್ರದಾಯವಿದೆ. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದು ಸೇರಿದಂತೆ ಎಳ್ಳಿನ ಮಹತ್ವ ಸಾರುವ ಸಂಕ್ರಾಂತಿ ಎಳ್ಳು ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಂಪ್ರದಾಯ ಮಕರ ಸಂಕ್ರಾಂತಿಯ ವಿಶೇಷ.ಎಳ್ಳು ಬೀಸಿ ಬೆಲ್ಲ ಹಾಕಿ ಮಾಡಿದ ಎಳ್ಳು ನೀರು ಶೀತ ವಾತಜನ್ಯವಾದ ಜಡ್ಡು ಆಲಸ್ಯಗಳನ್ನು ದೂರ ಮಾಡುವುದು ಎಂದು ನಂಬಿಕೆ.

ಜನಪದರು “ಬೆಳಗಾಗಿ ನಾನೆದ್ದು ಯರ‍್ಯಾರ ನೆನೆಯಲಿ,ಎಳ್ಳು ಜೀರಿಗೆ ಬೆಳೆಯೋ ಭೂತಾಯಿ, ಎಳ್ಳು ಜೀರಿಗೆ ಬೆಳೆಯೋಳು ಮಹಾತಾಯಿ, ಎದ್ದೊಂದು ಗಳಿಗೆ ನೆನೆದೇನ” ಎಂದು ಭೂತಾಯಿಯನ್ನು ನೆನೆಯುವ ಜೊತೆಗೆ ಎಳ್ಳು ಮಹತ್ವದ್ದು ಎಂದು ಸಾರಿದ್ದಾರೆ.

ರೈತರು ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗಿ ಎಂದು ಆಚರಿಸುವರು. ಭೋಗಿ ಕೃಷಿ ಸಂಬಂಧಿತ ಹಬ್ಬ. ರೈತರು ತಾವು ಬೆಳೆದ ಬೆಳೆಯನ್ನು ಪೂಜಿಸಿ ಜನತೆಗೆ ಉಣಬಡಿಸುವ ದಿನವನ್ನು ಭೋಗಿ ಎಂದು ಕರೆಯಲಾಗಿದೆ. ಎಳ್ಳು ಜೀರಿಗೆಯಂತಹ ಬೆಳೆಯನ್ನು ಬೆಳೆಯುವ ಭೂ ತಾಯಿಯನ್ನು ನೆನೆಯುವುದೇ ಸೂಕ್ತವೆಂದು ಜನಪದರು ಅಂದಿನ ದಿನವನ್ನು ತಮ್ಮ ತ್ರಿಪದಿಗಳಲ್ಲಿ ಹಾಡುವ ಮೂಲಕ ಭೂತಾಯಿಯನ್ನು ನೆನೆದಿರುವರು.

ಸುಗ್ಗಿ ಹಬ್ಬ ಸಂಕ್ರಾಂತಿಗೆ ನಮ್ಮ ಸಂಸ್ಕೃತಿ ನೆನಪು ಮಾಡುವ ಆಚರಣೆಗಳನ್ನು ಮೈಗೂಡಿಸಿಕೊಂಡು ಬದುಕನ್ನು ಸಂತ್ಸಂಪ್ರದಾಯದತ್ತ ಕೊಂಡೊಯ್ಯುವ ಹಬ್ಬ. ವೈಜ್ಞಾನಿಕವಾಗಿ ಮತ್ತು ಆರೋಗ್ಯಕ್ಕೆ ಸಂಜೀವಿನಿಯಾದ ಸಂಕ್ರಾಂತಿಯ ಎಳ್ಳು ಬೆಲ್ಲ ಕೊಬ್ಬರಿ ಕಡಲೆ ಇತ್ಯಾದಿಗಳ ಸೇವನೆ ಕೂಡ ಮಹತ್ವವನ್ನು ಪಡೆದಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles