ನಂದಿನಿ ತಟದಲ್ಲಿ ನೆಲೆನಿಂತ ಶಕ್ತಿದೇವತೆ ಕಟೀಲು ಮಾತೆ

* ಶ್ರೀನಿವಾಸ ಮೂರ್ತಿ ಎನ್ ಎಸ್

* ಶ್ರೀನಿವಾಸ ಮೂರ್ತಿ ಎನ್ ಎಸ್

ತುಳುನಾಡಿನಲ್ಲಿ ದುರ್ಗೆಯ ಆರಾಧನೆ ಹಲವು ಕಡೆ ಕಂಡು ಬಂದರೂ ಇಲ್ಲಿನ ಅತ್ಯಂತ ಪ್ರಸಿದ್ದ ಮುಖ್ಯ ಶಕ್ತಿ ಕೇಂದ್ರ ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ.
ಮಂಗಳೂರಿನಿಂದ ಸುಮಾರು 25 ಕಿ ಮೀ ದೂರದಲ್ಲಿದ್ದು ತುಳುನಾಡಿನ ವಿಸ್ತಾರವಾದ ದೇವಾಲಯಗಳಲ್ಲಿ ಒಂದು. ಇನ್ನು ತುಳುವಿನಲ್ಲಿ ಕಟಿ ಎಂದರೆ ಮಧ್ಯ ಹಾಗು ಇಲಾ ಎಂದರೆ ಪ್ರದೇಶ ಎಂಬ ಅರ್ಥ ಇದೆ. ದೇವಿಯು ನೆಲೆಸಿರುವ ಈ ಜಾಗ ನಂದಿನಿಯ ನದಿಯ ಮಧ್ಯ ಭಾಗದಲ್ಲಿರುವುದರಿಂದ
ಕಟೀಲು ಎಂಬ ಹೆಸರು ಬಂದಿದೆ.

ಸ್ಥಳ ಪುರಾಣ


ಇನ್ನು ಇಲ್ಲಿನ ಸ್ಥಳ ಪುರಾಣದಂತೆ ಹಿಂದೆ ಶುಂಭ , ನಿಶುಂಭರೆಂಬ ರಾಕ್ಷಸರು ದುರ್ಗೆಯ ಸಂಹರಿಸದ
ಕಾಲದಲ್ಲಿ ಅವರ ಮಂತ್ರಿಗಳಲ್ಲಿ ಒಬ್ಬನಾಗಿದ್ದ ಅರುಣಾಸರನು ಯುದ್ದ ಭೂಮಿಯಂದ ಓಡಿ ಹೋಗಿ
ಕಾಲ ಕ್ರಮೇಣ ಅಲ್ಲಿನ ರಾಕ್ಷಸರ ನಾಯಕನಾಗಿ ಬೆಳೆದು ಅಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಉಪಟಳ ನೀಡಲು ಆರಂಭಿಸಿದ. ಹೀಗಾಗಿ ಯಾಗಗಳು ನಿಂತು ಹೋಗಲು ದೇವತೆಗಳ ಅವಕೃಪೆಯಿಂದ ಮಳೆ ನಿಂತು ಹೋಗಿ ಭೀಕರ ಕ್ಷಾಮ ಕಾಣಿಸಿತು. ಇದರಿಂದ ವಿಚಲಿತರಾದ ಜನರು ಇಲ್ಲಿ ಜಾಬಾಲಿ ಮುನಿಯನ್ನ ಕೋರಿದರು. ಜಾಬಾಲಿ ಮುನಿಯು ಜನರ ಒಳಿತಿಗಾಗಿ ಯಾಗ ಮಾಡಲು ನಿರ್ದರಿಸಿ ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮುನಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು.

ಇದರಿಂದ ಮನನೊಂದ ಮುನಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ದೇವಿಯಲ್ಲಿ ಪ್ರಾರ್ಥನೆ ಮಾಡಿದಾಗ ಪ್ರತ್ಯಕ್ಷಳಾದ ಆದಿಶಕ್ತಿಯು ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಆದರೆ ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು.
ಇತ್ತ ಅರುಣಾಸುರನ ತನ್ನ ರಾಕ್ಷಸೀ ಸ್ವರೂಪವನ್ನು ಮುಂದುವರೆಸಿ ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ
ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ,
ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು.
ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು.
ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ
ವಶಪಡಿಸಿಕೊಂಡನು. ಎಲ್ಲರೂ ದೇವಿಯ ಮೊರೆ ಹೋದಾಗ ದೇವಿ ಮೋಹಿನಿ ರೂಪದಲ್ಲಿ ಇಲ್ಲಿ
ಉದ್ಯಾನವನದಲ್ಲಿ ಅವತರಿಸಿದಳು. ಅರುಣಾಸರ ತನ್ನ ಮಂತ್ರಿಗಳಿಂದ ಇವರ ಬಗ್ಗೆ ತಿಳಿದು ಅಲ್ಲಿಗೆ
ಬರುತ್ತಾನೆ. ತನ್ನ ಒಡೆಯನಾದ ಶಂಬು ಹಾಗು ನಿಶಂಬುರನ್ನ ಇವಳೇ ವದಿಸಿದ್ದು ಕೋಪದಿಂದ ದೇವಿಯನ್ನು ಸಂಹರಿಸಿಲು ಮುಂದಾಗುತ್ತಾನೆ. ಆಗ ದೇವಿ ದುಂಬಿಯ ರೂಪದಲ್ಲಿ ಬಂಡಯಲ್ಲಿ ಅಂತರ್ಧಾನಳಾದಳು.
ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು
ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ
ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು ಮತ್ತು ಸೌಮ್ಯ
ರೂಪದಲ್ಲಿ ನಂದಿನಿ ನದಿಯ ತಟದಲ್ಲಿ ನೆಲೆಸಿದಳು ಎಂಬ ನಂಬಿಕೆ ಇದೆ.
ಇಲ್ಲಿ ನಂದಿನಿ ನದಿಯ ಎರಡು ಕವಲಾಗಿ ಒಡೆದು ಮಧ್ಯದಲ್ಲಿ ದೇವಾಲಯ ಇದ್ದು ಗರ್ಭಗುಡಿಯಲ್ಲಿ
ಸುಂದರ ಶ್ರೀ ದುರ್ಗಾ ಪರಮೇಶ್ವರಿಯ ಮೂರ್ತಿ ಇದೆ. ಇಲ್ಲಿ ದೇವಾಲಯದ ಆರಂಭದಲ್ಲಿ ದೇವಿಯ
ಭ್ರಾಮರಿ ರೂಪ ತಾಳುವ ಮೊದಲು ಸಂಹಾರ ಮಾಡಲು ಇದ್ದ ಸ್ವರೂಪದ ರಕ್ತೇಶ್ವರಿಯ ಕಲ್ಲು
ಸಿಗುತ್ತದೆ.

ತಲುಪುವ ಬಗೆ: ದೇವಾಲಯ ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ.

Related Articles

3 COMMENTS

ಪ್ರತಿಕ್ರಿಯೆ ನೀಡಿ

Latest Articles