ಬಹುತೇಕರು ಮೃತ್ಯುಂಜಯ ಮಹಾ ಮಂತ್ರವನ್ನು ಪ್ರತಿದಿನ ಪಠಣೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಅದು ಬೆಳಗಿನ ಜಾವ ಅಥವ ರಾತ್ರಿ ಮಲಗುವ ಮೊದಲು ಕನಿಷ್ಠ ಹನ್ನೊಂದು ಬಾರಿ ಪಠಣೆ ಮಾಡುವುದು ಸಾಮಾನ್ಯ ಕ್ರಮ. ಈ ಮಂತ್ರವನ್ನು ಪಠಣೆ ಮಾಡುವುದು ಒಂದು ಭಾಗವಾದರೆ, ಅದರ ಅರ್ಥ ತಿಳಿದು ಪಠಣೆ ಮಾಡುವುದು ಮತ್ತೊಂದು ಭಾಗ, ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಮತ್ತು ಫಲವೂ ಅಧಿಕ.
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|ಊರ್ವಾರು ಕಮಿವ ಬಂಧನಾತ್ ಮೃತ್ಯೋಮೃಕ್ಷೀಯ ಮಾಮೃತಾತ್||
||ಮೃತ್ಯುಂಜಯ ಮಂತ್ರದಲ್ಲಿ ಬರುವ ‘ಉರ್ವಾರು’ (ಸೌತೆಕಾಯಿಯ) ಸಂಬಂಧ ಹೇಗೆ ಎಂಬುದನ್ನು ತಿಳಿಯೋಣ.||ಓಂ = ಪ್ರಣವ ತ್ರಯಂಬಕಂ = ಮೂರು ಕಣ್ಣಿನ ಪರಮೇಶ್ವರನೇ, ಯಜಾಮಹೇ = ಪೂಜನೀಯನೇ, ಸುಗಂಧಿಂ = ಸುಗಂಧದಿಂದ ಕೂಡಿದ, ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ ಊರ್ವಾರು+ಕಮಿವ+ ಬಂಧನಾತ್ = (ಊರ್ವಾರುಕಮಿವ ಬಂಧನಾತ್) = ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ಆ ರೀತಿಯಲ್ಲಿ ಮೃತ್ಯೋಮೃಕ್ಷೀ = ಅಂತಹ ಮೃತ್ಯುವಿನಿಂದ, ಮುಕ್ತಿ ದೊರೆಯಲಿ. ಮಾಮೃತಾತ್ = ಅಮೃತತ್ವವನ್ನು ಪಡಯುವಂತಾಗಲಿ.
ಇಲ್ಲಿ “ಉರ್ವಾರು ಕಮಿಕ” ಬಂಧನದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಣೆಯ ಅಗತ್ಯವಿದೆ. ಆ ಅದ್ಭುತ ವಿವರಣೆಯನ್ನು ನೋಡೋಣ.
ಪರಶಿವನೇ ಈ ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್ಟು ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ, ಅದೇ ರೀತಿಯಲ್ಲಿ ಈ ಲೌಕಿಕ ಜಗತ್ತಿನೊಂದಿಗಿನ ನಮ್ಮ ಬಂಧನವು ಸಾಕು ಎಂಬ ಅರ್ಥ ಅದ್ಬುತ.
ಅದು ಹೇಗೆಂಬುದನ್ನು ನೋಡೋಣ, ನಾವು ಇಲ್ಲಿ ಗಮನಿಸಬೇಕಾದದ್ದು, ಗಿಡದ ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳಿಗೂ ಮತ್ತು ಅದೇರೀತಿ ಬಳ್ಳಿಯಿಂದ ಬೆಳೆಯುವ ಸೌತೆಕಾಯಿಗೂ ಕಾಣುವ ವ್ಯತ್ಯಾಸ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದಾಗ, ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸುವಾಗ, ಕಾಯಿಯ ಜೊತೆ ಬಳ್ಳಿಯ ತೊಟ್ಟು ಅಂಟಿಕೊಂಡು ಬರುವುದಿಲ್ಲ, ಅದು ಗಿಡದ ಬಳ್ಳಿಯೊಂದಿಗೆ ಗಿಡದಲ್ಲೇ ಉಳಿಯುತ್ತದೆ. ಆದರೆ, ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳು ಬಳ್ಳಿಯ ತೊಟ್ಟು ಕಾಯಿಯೊಂದಿಗೆ ಗಟ್ಟಿಯಾಗಿ ಅಂಟಿಕೊಂಡಿವುದನ್ನು ನಾವು ಗಮನಿದ್ದೇವೆ. ಗಿಡದ ಬಳ್ಳಿಯಿಂದ ಉತ್ಪತ್ತಿಯಾದ ತರಕಾರಿಗಳನ್ನು ಮಾರುಕಟ್ಟೆಯಿಂದ ತರುವಾಗ ಕುಂಬಳಕಾಯಿ, ಹೀರೇಕಾಯಿ, ಸೋರೇಕಾಯಿ ಮುಂತಾದವುಗಳು ತೊಟ್ಟಿನ ಸಮೇತ ಕೊಳ್ಳುತ್ತೇವೆ. ಆದರೆ ತೊಟ್ಟಿನೊಂದಿಗೆ ಇರುವ ಸೌತೆಕಾಯಿ ಮಾರುಕಟ್ಟೆಯಲ್ಲಿ ದೊರೆಯುವುದು ಅತಿ ವಿರಳ!
ಸೌತೆಕಾಯಿ ಮತ್ತು ಅದರ ಗಿಡದ ಬಳ್ಳಿಯ ಸಂಬಂಧ ಬಹಳ ಸೂಕ್ಷ್ಮ. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸುವ ಸಮಯದಲ್ಲಿ, ಕಾಯಿಯೊಂದಿಗೆ ಅಂಟಿಕೊಂಡಿದ್ದ ಅದರ ತೊಟ್ಟು ಬಳ್ಳಿಯಲ್ಲೇ ಉಳಿಯುತ್ತದೆ ಎನ್ನುವ ವಿವರಣೆ. ಅದೇ ರೀತಿಯಲ್ಲಿ ಲೌಕಿಕ ಜಗತ್ತಿನ ನಮ್ಮ ಬಂಧನಗಳು ಇರಬೇಕು ಎಂಬ ಸಂದೇಶ.
ಮೃತ್ಯುಂಜಯ ಮಂತ್ರವನ್ನು ಪ್ರತಿದಿನವೂ ಹೇಳುವುದು ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಅರ್ಥ. ಇದನ್ನೇ ಗುರು ದ್ರೋಣಾಚಾರ್ಯರೂ ಸಹ “ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ, ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಲಂ ” ಎಂದು ತಿಳಿಸಿದ್ದು.
ಮಾನವರಾಗಿ ಜನಿಸಿದ ನಾವು ಈ ಲೌಕಿಕ ಜಗತ್ತಿನೊಂದಿಗೆ ಅತಿ ಸೂಕ್ಷ್ಮವಾದ, ಕನಿಷ್ಠ ಮೋಹದ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು. ಅತಿಯಾದ ಗಟ್ಟಿ ಬಂಧನಗಳಿಗೆ ಅಂಟಿಕೊಂಡಾಗ, ಅನಭವಿಸುವ ನೋವೇ ಹೆಚ್ಚು, ಎನ್ನುವುದನ್ನು ಸರಳವಾಗಿ ವಿವರಿಸಲಾಗಿದೆ.
ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಚನ್ನರಾಯ ಸ್ವಾಮಿ ದೇಗುಲ ಹುಸ್ಕೂರು, ಬೆಂಗಳೂರು