* ಶ್ರೀನಿವಾಸ ಮೂರ್ತಿ ಎನ್ ಎಸ್
ಕರ್ನಾಟಕ ವಾಸ್ತು ಶಿಲ್ಪ ಲೋಕಕ್ಕೆ ಹೊಸ ಕೊಡುಗೆ ನೀಡಿದವರು ಕಲ್ಯಾಣ ಚಾಲುಕ್ಯರು. ಕಲಿದೇವರೆಂದೇ ಕರೆಯುವ ಹಲವು ದೇವಾಲಯಗಳು ಇವರ ಕಾಲದಲ್ಲಿ ನಿರ್ಮಾಣವಾಗಿದ್ದು, ಹಲವು ಕಡೆ ಕಲ್ಲೇಶ್ವರ ದೇವಾಲಯಗಳನ್ನು ನೋಡಬಹುದು. ಇವುಗಳಲ್ಲಿ ಪ್ರಮುಖವಾಗಿ ಬಳ್ಳಾರಿ ಹಾಗು ವಿಜಯನಗರ ಜಿಲ್ಲೆಯಲ್ಲಿ ಸಾಕಷ್ಟು ಕಾಣ ಸಿಗುತ್ತದೆ. ಅಂತಹ ದೇವಾಲಯಗಳಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಬಳಿಯ ಕಲ್ಲೇಶ್ವರ ದೇವಾಲಯವೂ ಒಂದು.
ಇತಿಹಾಸ ಪುಟದಲ್ಲಿ ಪ್ರಮುಖ ಪಟ್ಟಣವಾಗಿ ಗುರುತಿಸಿಕೊಂಡಿದ್ದ ಈ ಗ್ರಾಮ ಅಮ್ಮಳೆ ಎಂದು
ಶಾಸನಗಳಲ್ಲಿ ಕರೆಯಲಾಗಿದೆ. ಇಲ್ಲಿ ನೊಳಂಬವಾಡಿ 32000 ಆಳುತ್ತಿದ್ದ ಕಲ್ಯಾಣ ಅರಸ
ತ್ರಿಭುವನಮಲ್ಲನ ಕಾಲದಲ್ಲಿ ದೇವಾಲಯಗಳು ನಿರ್ಮಾಣವಾಗಿದ್ದು ಹಲವು ದತ್ತಿ ನೀಡಿದ ಉಲ್ಲೇಖ
ನೋಡಬಹುದು. ಇನ್ನು ಕದಂಬ ವಂಶದ ಜಗದಳ ಪಾಂಡ್ಯನು ಕಲಿದೇವರ ಸೇವೆಗೆ 400 ಕಂಭ
ಭೂಮಿ ದಾನ ಮಾಡಿದ ಉಲ್ಲೇಖ ನೋಡಬಹುದು. 1143 ರಲ್ಲಿ ಕದಂಬ ವಂಶದ ಘಟ್ಟೀದೇವನ
ಮಗ ಚಿಬಿದೇವರಸನು ನರಸಿಂಹ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ.
ಮೂಲತಹ ಈ ದೇವಾಲಯವನ್ನು ಕಲ್ಯಾಣ ಚಾಲುಕ್ಯ ಅರಸ ತ್ರಿಭುವನಮಲ್ಲ ಪಾಂಡ್ಯನ ಕಾಲದಲ್ಲಿ
ಸುಮಾರು 1083 ರಲ್ಲಿ ಅಮ್ಮಳೆ ಎಂದು ಕರೆಯಲಾಗುತ್ತಿದ್ದ ಇಲ್ಲಿ ಪಶುಪತಿ ಭಟ್ಟನ ವಂಶಸ್ಥನಾದ
ಭೋಗದೇವನ ಮಗ ಶಿವರಾಜ ಕಲ್ಲೇಶ್ವರ ದೇವಾಲಯವನ್ನು ನಿರ್ಮಾಣ ಮಾಡುತ್ತಾನೆ ಹಾಗು ಹಲವು
ಭೂ ದಾನ ನೀಡಿದ ಉಲ್ಲೇಖ ನೋಡಬಹುದು.
ದೇವಾಲಯವು ಗರ್ಭಗುಡಿ, ಅಂತರಾಳ ಹಾಗು ಸಭಾಮಂಟಪ ಹೊಂದಿದ್ದು ಗರ್ಭಗುಡಿಯಲ್ಲಿ
ಕಲ್ಲೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಗರ್ಭಗುಡಿಯ ದ್ವಾರವು ಪಂಚ ಶಾಖೆಯಿಂದ
ಅಲಂಕೃತಗೊಂಡಿದ್ದು ಇಲ್ಲಿ ಹೂ ಬಳ್ಳಿಗಳು, ನರ್ತನಗಾರರ ಶಿಲ್ಪಗಳ ಕೆತ್ತನೆ ಸುಂದರವಾಗಿದೆ.
ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತನೆ ಇದ್ದು ಶೈವ ದ್ವಾರ ಪಾಲಕರಿದ್ದಾರೆ. ಅಂತರಾಳದ ಪ್ರವೇಶ
ದ್ವಾರ ಸಹ ಇದೇ ರೀತಿಯ ಕೆತ್ತನೆ ಹೊಂದಿದೆ. ಇಲ್ಲಿ ಸುಂದರವಾದ ಜಾಲಂದ್ರಗಳಿವೆ.
ಇನ್ನು ತೆರೆದ ಸಭಾ ಮಂಟಪದಲ್ಲಿ ನಾಲ್ಕು ಕಂಭಗಳಿದ್ದು ಇಲ್ಲಿನ ಕೋಷ್ಟಕಗಳಲ್ಲಿ ಬ್ರಹ್ಮ, ವಿಷ್ಣು,
ಗಣಪತಿ, ಸರಸ್ವತಿ ಹಾಗು ಕೇಶವನ ಉಬ್ಬು ಶಿಲ್ಪ ನೋಡಬಹುದು. ಮಂಟಪದಲ್ಲಿ ಕಕ್ಷಾಸನವಿದ್ದು
ಎರಡು ಬದಿಯಿಂದ ಪ್ರವೇಶ್ವ ದ್ವಾರವಿದೆ.
ಅಧಿಷ್ಟಾನದ ಮೇಲೆ ಇರುವ ದೇವಾಲಯದ ಹೊರಭಿತ್ತಿಯಲ್ಲಿ ಕೀರ್ತಿ ಮುಖಗಳು ಹಾಗು ಹೂ
ಬಳ್ಳಿಗಳ ಕೆತ್ತನೆಗಳು ಗಮನ ಸೆಳೆಯುತ್ತದೆ. ನವೀಕರಣಗೊಂಡ ಈ ದೇವಾಲಯಕ್ಕೆ ಗಾರೆಯ ಶಿಖರ
ನಿರ್ಮಿಸಲಾಗಿದ್ದು ದೇವಾಲಯ ಮೂಲ ಸ್ವರೂಪಕ್ಕೆ ಧಕ್ಕೆ ಎನಿಸಿದರೂ ಬಹುತೇಕ ದೇವಾಲಯವನ್ನು
ಸುಂದರವಾಗಿ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡ ಕಾರಣ ದೇವಾಲಯ ಚಾಲುಕ್ಯರ
ಸೌಂದರ್ಯವನ್ನು ಹಾಗೆಯೇ ಕಟ್ಟಿಕೊಟ್ಟಿದೆ.