ಮಾವು ಮಾಗುವ ಕಾಲವೀಗ. ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಮಾವಿನ ಹಣ್ಣನ್ನು ಇಡಿಯಾಗಿ ಹಾಗೆಯೇ ಸವಿಯುವುದು ಎಲ್ಲರಿಗೂ ಇಷ್ಟ. ಮಾವಿನ ಹಣ್ಣಿನ ಸಿಹಿಯನ್ನು ಹಾಗೆಯೇ ಸವಿಯುವುದು ಮಾತ್ರವಲ್ಲ, ಅದರಿಂದ ತರಹೇವಾರಿ ಅಡುಗೆಗಳನ್ನು ತಯಾರಿಸಬಹುದು. ಹಬ್ಬದ ಸಂದರ್ಭಗಳಲ್ಲೂ ಅವುಗಳಿಂದ ವಿಶೇಷ ತಿನಿಸು ತಯಾರಿಸಿ ದೇವರಿಗೂ ನೈವೇದ್ಯವಾಗಿ ಅರ್ಪಿಸಬಹುದು.
ಮಾವಿನ ಹಣ್ಣಿನ ಸಂದೇಶ
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣಿನ ರಸ ಒಂದು ಕಪ್, ಸಕ್ಕರೆ ಪುಡಿ ಅರ್ಧ ಕಪ್, ಹಾಲು ಒಂದೂವರೆ ಲೀ., ಹಾಲಿನ ಪುಡಿ ಕಾಲುಕಪ್, ನಿಂಬೆಹಣ್ಣಿನ ರಸ 2 ಚಮಚ, ಕೇಸರಿಬಣ್ಣ ಚಿಟಿಕೆಯಷ್ಟು. ಪಿಸ್ತಾ, ಬಾದಾಮಿ ಚೂರು.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಹಾಲು ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ, ಹಾಲು ಒಡೆದಾಗ ಅದನ್ನು ಒಂದು ಬಿಳಿ ಶುಭ್ರಬಟ್ಟೆಯಲ್ಲಿ ಹಾಕಿ ಸೋಸಬೇಕು. ನಂತರ ಹಿಂಡಿ ನೀರನ್ನೆಲ್ಲಾ ತೆಗೆಯಬೇಕು. ಅದನ್ನು ಮಿಕ್ಸಿಗೆ ಹಾಕಿ ಗ್ರೆÊಂಡ್ ಮಾಡಬೇಕು. ನೀರನ್ನು ಸೇರಿಸಬಾರದು. ಅದಕ್ಕೆ ಮಾವಿನ ಹಣ್ಣಿನ ರಸ, ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಮಿಶ್ರಣ ಹದಕ್ಕೆ ಬಂದಾಗ ಆಫ್ ಮಾಡಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಅದರ ಮಧ್ಯಭಾಗದಲ್ಲಿ ಸ್ವಲ್ಪ ಒಳಕ್ಕೆ ಒತ್ತಿ ಕತ್ತರಿಸಿದ ಬಾದಾಮಿ, ಪಿಸ್ತಾದಿಂದ ಅಲಂಕರಿಸಿ.
ಮಾವು ಶಾವಿಗೆ ಖೀರ್
ಬೇಕಾಗುವ ಸಾಮಗ್ರಿ: ಶಾವಿಗೆ1 ಕಪ್, ಸಕ್ಕರೆ ಅರ್ಧ ಕಪ್, ಕಾಯಿಸಿದ ಹಾಲು ಮೂರು ಕಪ್, ಮಾವಿನ ಹಣ್ಣು 1, ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ ಸ್ವಲ್ಪ,ಏಲಕ್ಕಿ ಪುಡಿ ಸ್ವಲ್ಪ, ತುಪ್ಪ 4 ಚಮಚ.
ಮಾಡುವ ವಿಧಾನ: ತುಪ್ಪ ಹಾಕಿ, ಶಾವಿಗೆಯನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಮೂರು ಕಪ್ ಹಾಲು ಸೇರಿಸಿ ಶಾವಿಗೆಯನ್ನು ಬೇಯಿಸಿ. ಆ ನಂತರ ಅದಕ್ಕೆ ಸಕ್ಕರೆ ಸೇರಿಸಿ. ಅದು ಕರಗಿ ಖೀರಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳಲು ಬಿಡಬೇಕು. ಉಳಿದ ಹಾಲನ್ನು ಹಾಕಿ, ತುಪ್ಪದಲ್ಲಿ ಹುರಿದ ಡ್ರೆÊ ಫ್ರೂಟ್ಸ್ ಮತ್ತು ಏಲಕ್ಕಿಪುಡಿ ಸೇರಿಸಿ ತಣ್ಣಗಾಗಲು ಬಿಡಬೇಕು. ಸಿಪ್ಪೆ ತೆಗೆದ ಮಾವಿನಹಣ್ಣಿನ ತಿರುಳನ್ನು ಮಿಕ್ಸರ್‌ಗೆ ಹಾಕಿ ರುಬ್ಬಿ, ತಣಿದ ಖೀರಿಗೆ ಸೇರಿಸಿ ಸವಿಯಬೇಕು.
ಮಾವಿನ ಹಣ್ಣಿನ ಹಲ್ವ
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣಿನ ಪಲ್ಪ್- 2 ಕಪ್, ಕಡಲೆಹಿಟ್ಟು- 1ಕಪ್, ಸಕ್ಕರೆ ಒಂದುಮುಕ್ಕಾಲು ಕಪ್, ಏಲಕ್ಕಿ ಪುಡಿ ಅರ್ಧ ಚಮಚ, ಗೋಡಂಬಿ-10, ತುಪ್ಪ ಮೂರು ಚಮಚ.
ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಯಾದಾಗ ಅದಕ್ಕೆ ಕಡಲೆಹಿಟ್ಟು ಸೇರಿಸಿ ಚಿಕ್ಕ ಉರಿಯಲ್ಲಿ ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು. ನಂತರ ಮತ್ತೊಂದು ಬಾಣಲೆಯಲ್ಲಿ ಮಾವಿನ ಹಣ್ಣು ಮತ್ತು ಸಕ್ಕರೆ ಹಾಕಿ ಬಿಸಿ ಮಾಡಬೇಕು. ಸ್ವಲ್ಪ ಹೊತ್ತಿನಲ್ಲಿ ಮಾವು, ಸಕ್ಕರೆಯ ಮಿಶ್ರಣ ಗಟ್ಟಿಯಾಗುತ್ತಾ ಬರುತ್ತದೆ. ಅದಕ್ಕೆ ಹುರಿದ ಕಡಲೆಹಿಟ್ಟು ಸೇರಿಸಿ ಕಲಸಿ. ಉಳಿದ ತುಪ್ಪ, ಬಾದಾಮಿ ಸೇರಿಸಿ ತಳಬಿಡುವವರೆಗೂ ಕದಡುತ್ತಿರಬೇಕು. ನಂತರ ಜಿಡ್ಡು ಸವರಿದ ಪಾತ್ರೆಗೆ ಹಾಕಿ ಸಪಾಟಾಗಿಸಿ.
ಮಾವಿನ ಹಣ್ಣಿನ ಪಾನಕ
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು1, ಸಕ್ಕರೆ-ಅರ್ಧಕಪ್, ನಿಂಬೆ ಹಣ್ಣಿನ ರಸ, ಏಲಕ್ಕಿ ಪುಡಿ.
ಮಾಡುವ ವಿಧಾನ: ಮಾವಿನ ಹಣ್ಣಿನ ತಿರುಳು, ಸಕ್ಕರೆ, ನಿಂಬೆ ಹಣ್ಣಿನ ರಸವನ್ನು ಸೇರಿಸಿ ಮಾಡುವ ಮಾವಿನ ಹಣ್ಣಿನ ಪಾನಕ ಬಹಳ ರುಚಿಯಾಗಿರುತ್ತದೆ. ನೀರಿಗೆ ಸಕ್ಕರೆ, ನಿಂಬೆ ಹಣ್ಣಿನ ರಸ, ಮಿಕ್ಸಿಮಾಡಿಕೊಂಡ ಮಾವಿನ ಹಣ್ಣಿನ ರಸವನ್ನು ಸೇರಿಸಿ. ಅದಕ್ಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಪಾನಕ ತಯಾರಾದಂತೆ.