ಬದುಕೆಂದರೆ ಹಾಗೇನೇ….

ಜೀವನ ಅಂದರೆ ಹಾಗೆನೇ… ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಅದರಿಂದ ಬದುಕು ಹೈರಾಣಾಗಿಬಿಟ್ಟಿರುತ್ತದೆ. ಕಳೆದು ಹೋದುದರಿಂದ ಚೇತರಿಸಿಕೊಂಡು, ವರ್ತಮಾನದವುಗಳನ್ನು ಅಪ್ಪಿಕೊಳ್ಳುತ್ತಾ, ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವುದು ಹೇಗೆ?

ಜಗತ್ತಿನಲ್ಲಿ ಮನುಷ್ಯ ಜೀವನವದು ಬಹಳ ಸುಂದರವಾದ ಪ್ರಯಾಣ. ಬದುಕಿನೊಂದಿಗೆ ಎಷ್ಟೊಂದು ನೆನಪುಗಳನ್ನು ಹೊತ್ತುಕೊಂಡು ಹೆಜ್ಜೆ ಹಾಕುತ್ತಿರುತ್ತೇವೆ, ಉಸಿರು ಇರುವವರೆಗೂ ಬದುಕಿನಲ್ಲಿ ಏನೆಲ್ಲಾ ಸಾಧಿಸಬೇಕು, ಎಲ್ಲವನ್ನು ಅನುಭವಿಸಬೇಕು ಎನ್ನುವ ಕನಸು ಕಾಣುತ್ತಿರುತ್ತೇವೆ. ಆದರೆ ಅವೆಲ್ಲವೂ ಸಾಧ್ಯವಾಗುತ್ತದೆಯೇ? ಇಲ್ಲ. ಹಲವು ಕನಸುಗಳ ಜತೆಜತೆಯಾಗಿ ಹೆಜ್ಜೆ ಹಾಕುವುದು ಹಲವು ಕಷ್ಟಗಳು. ಒಮ್ಮೆ ಕಷ್ಟ, ಮತ್ತೊಮ್ಮೆ ಸುಖ, ಮತ್ತೊಮ್ಮೆ ನೋವು ಮಗದೊಮ್ಮೆ ನಲಿವು. ಮನುಷ್ಯ ಭಾವನಾ ಜೀವಿ ಆಗಿರುವುದರಿಂದ ಇವೆಲ್ಲವುಗಳನ್ನು ಹಂಚಿಕೊ0ಡು, ಅನುಭವಿಸಿಕೊಂಡು ಬದುಕು ಸಾಗಿಸಲೇಬೇಕು. ಎಲ್ಲ ಜೀವಿಗಳಿಗಿಂತ ವಿಭಿನ್ನ ಅವಕಾಶ ಮನುಷ್ಯನಿಗೆ. ಅದುವೇ ತನ್ನ ಬದುಕನ್ನು ತಾನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ಸಾವಿರಾರು ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಅದನ್ನು ವಿವೇಚನೆಯಿಂದ ಬಳಸಿಕೊಳ್ಳುವುದು ಅವನಿಗೇ ಬಿಟ್ಟಿದ್ದು.

ಒಂದು ಸ್ಥಳದಿಂದ ಹೊರಟ ವಾಹನವೊಂದು ತನ್ನ ಡೆಸ್ಟಿನೇಶನ್ ತಲುಪುವುದರೊಳಗೆ ವಿಭಿನ್ನ ಜನರನ್ನು ಹತ್ತಿಸಿಕೊಂಡು, ಅವರವರ ಹಾದಿಯಲ್ಲಿ ಇಳಿ ಬಿಟ್ಟು ಮುಂದೆ ಹೋಗುತ್ತಲೇ ಇರುತ್ತದೆ. ಅಂತೆಯೇ ಬದುಕು ಕೂಡಾ. ಹಲವಾರು ಸಮಸ್ಯೆಗಳು, ಖುಷಿ, ಸಂತೋಷ, ನೋವು ನಲಿವು ಎಲ್ಲವನ್ನು ಅನುಭವಿಸಿಕೊಂಡು ಸಾರ್ಥಕ ಬದುಕಿಗಾಗಿ ಜೀವನ ಪ್ರಯಾಣದಲ್ಲಿ ಮುಂದೆ ಹೆಜ್ಜೆ ಹಾಕಲೇಬೇಕು,
ಬದುಕು ಕೆಲವೊಮ್ಮೆ ಜಾಲಿರೈಡ್ ಇದ್ದ ಹಾಗೆ, ಮತ್ತೆ ಕೆಲವೊಮ್ಮೆ ದೊಡ್ಡ ಸಾಹಸ ಎಂದೆಣಿಸಬಹುದು. ಮತ್ತೊಮ್ಮೆ ದುಃಸ್ವಪ್ನದಲ್ಲಿ ಜೀವಿಸಿದಂತೆ ಭಾಸವಾಗಬಹುದು. ಅಂದರೆ ಬದುಕೇ ಒಂಥರಾ ವಿಚಿತ್ರ, ವಿಭಿನ್ನ ಅನುಭವಗಳ ಸರಮಾಲೆ. ಪ್ರತಿಯೊಬ್ಬರ ಬಾಳಿನಲ್ಲೂ ಇಂತಹ ಘಟನೆಗಳು ಪದೇಪದೆ ಅನುಭವಕ್ಕೆ ಬರುತ್ತಿರುತ್ತವೆ. ಅವುಗಳು ಬದುಕಿಗೆ ಪಾಠವಿದ್ದಂತೆ. ಆದಾಗ್ಯೂ ವರ್ತಮಾನದ ಸ್ಥಿತಿಗತಿಗಳನ್ನು ಅಪ್ಪಿಕೊಂಡು, ಒಪ್ಪಿಕೊಳ್ಳುತ್ತಾ, ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವುದು ನಮ್ಮದೇ ನಿರ್ಧಾರ, ಆಲೋಚನಾ ಕ್ರಮಗಳಲ್ಲಿದೆ.
ಪ್ರತಿಕ್ಷಣ ಯಾವುದು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತದೆ, ಯಾವ ವಿಷಯದಿಂದ ನಮ್ಮ ಮನಸ್ಸು ಪ್ರಚೋದನೆಗೊಳಪಡುತ್ತದೆ, ಯಾವ ವ್ಯಕ್ತಿ ಅಥವಾ ವಿಷಯ ನಮ್ಮ ಬದುಕನ್ನು ಬದಲಾಯಿಸುವ ಪ್ರಯತ್ನ ಮಾಡುತ್ತದೆ, ಬದುಕಿನ ಪ್ರಚಲಿತ ಹಾಗೂ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದರ ಚಿಂತನೆ ನಮ್ಮ ಮನಸ್ಸನ್ನೇ ಅವಲಂಬಿಸಿದೆ.

ಹೊಸತನದ ಹಾದಿ
 ಕೆಲವೊಮ್ಮೆ ಹಳೆಯ ನೆನಪಲ್ಲಿ ಕಳೆದುಹೋಗಿ ಬಿಡುತ್ತೇವೆ. ಏನೇ ಕೆಲಸ ಮಾಡಹೊರಟರೂ ಹಳೆಯದು ನೆನಪಾಗಿ ಅದರಲ್ಲೇ ಸಿಕ್ಕಿ ಹಾಕಿಕೊಂಡಿರುತ್ತೇವೆ. ಆದರೆ ಅದನ್ನೇ ಹೊರೆಯಾಗಿಸಿಕೊಂಡು ಹಳೆಯ ನೆನಪಿನಲ್ಲೇ ಕಳೆದುಹೋಗಬಾರದು. ಅದು ಮತ್ತೆ ಮರುಕಳಿಸಬೇಕೆಂದೇನೂ ಇಲ್ಲ. ಹಾಗಾಗಿ ಕಳೆದು ಹೋದುದಕ್ಕೆ ಚಿಂತಿಸಿ ಫಲವಿಲ್ಲ. ಅದರಿಂದ ಜೀವನಪಾಠ ಕಲಿತುಕೊಂಡಿರುತ್ತೇವೆಯಷ್ಟೇ. ಹೊಸತನದ ಕನಸಿನಲ್ಲಿ ಹಳೆಯದನ್ನು ಅನುಭವವಾಗಿಸಿಕೊಂಡು ಮುನ್ನಡೆಯಬೇಕು.

ವೈಯಕ್ತಿಕ ಪರಿಗಣನೆ
ಯಾವುದೇ ವಿಷಯವನ್ನು ತೀರಾ ವೈಯಕ್ತಿಕವಾಗಿ ಪರಿಗಣಿಸಬಾರದು. ಪ್ರತಿದಿನ ಜೀವನದಲ್ಲಿ ನಡೆದ ಸಣ್ಣ ಘಟನೆಗಳನ್ನೂ ವೈಯಕ್ತಿಕವಾಗಿ ಪರಿಗಣಿಸಿ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಬಿಡುತ್ತೇವೆ. ಅದರದೇ ಕೊರಗಿನಲ್ಲಿ ಆಲೋಚನಾ ಕ್ರಮವನ್ನೂ ಬದಲಾಯಿಸಿಕೊಳ್ಳದೆ, ಮುಂದೆ ಹೆಜ್ಜೆ ಹಾಕಲು ಹಿಂದು ಮುಂದು ನೋಡುತ್ತೇವೆ. ಆದರೆ ಅದರ ಪರಿಣಾಮ ಅಥವಾ ತೀವ್ರತೆಯನ್ನು ಗಮನಿಸಿಕೊಂಡು ಅದನ್ನು ವೈಯಕ್ತಿಕವಾಗಿ ಸ್ವೀಕರಿಸಬಾರದು. ಜಗತ್ತಿನಲ್ಲಿ ನಡೆಯುವ ಎಲ್ಲ ಆಗು ಹೋಗುಗಳೂ ಪ್ರತಿಯೊಬ್ಬರ ಬದುಕಿನಲ್ಲೂ ಘಟಿಸುವಂತಹದ್ದು. ಅದನ್ನುಹೇಗೆ ಸ್ವೀಕರಿಸಬೇಕು ಎಂಬ ನಿರ್ಧಾರವನ್ನೂ ನಾವೇ ತೆಗೆದುಕೊಳ್ಳುವಷ್ಟು ಸಮರ್ಥರಿರಬೇಕು.

ಮರಳಿ ಯತ್ನವ ಮಾಡು
ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಿಲ್ಲ ಅಥವಾ ಅದು ವೈಫಲ್ಯವೇ ಆಗಿರಬೇಕೆಂದೇನೂ ಇಲ್ಲ. ಜೀವನದಲ್ಲಿ ಕೆಲವೊಮ್ಮೆ ತಪ್ಪುಗಳಾಗುತ್ತವೆ, ಅದರಿಂದ ಸೋಲನ್ನನುಭವಿಸುತ್ತೇವೆ. ಆದರೆ ಆ ಸೋಲನ್ನು ಜೀವನದ ಸೋಲು ಎಂದು ಪರಿಗಣಿಸಬಾರದು. ಅದು ಬದುಕಿನ ಪಾಠಕ್ಕೆ ಸೇರಿಕೊಂಡ ಅನುಭವದ ವಿಷಯ ಎಂದೇ ಪರಿಗಣಿಸಬೇಕು. ಮತ್ತೊಮ್ಮೆ ಪ್ರಯತ್ನಿಸಬೇಕು. ಸೋಲು ಅನುಭವಿಸದೇ ಗೆಲುವಿನ ಉತ್ತುಂಗಕ್ಕೇರಿದವರ ಉದಾಹರಣೆಗಳಿಲ್ಲ. ಪ್ರಯತ್ನವನ್ನು ಮುಂದುವರಿಸಿ, ನಂಬಿಕೆಯಿರಿಸಿದ ಕೆಲಸದಲ್ಲಿ ಮುನ್ನಡೆಯುವುದರಿಂದ ಮುಂದೊoದು ದಿನ ಯಶಸ್ಸನ್ನು ಗಳಿಸುವುದರಲ್ಲಿ ಸಂದೇಹವಿಲ್ಲ.

ಇರುವುದನ್ನೆ ನೆಚ್ಚಿಕೊಳ್ಳಿ
ಇಲ್ಲದಿರುವುದರ ಬಗ್ಗೆ ಚಿಂತೆ ಮಾಡಿದಾಗಲೇ ಹತಾಶೆ ಕಾಡುವುದು. ನಮಗಿರುವ ಅವಕಾಶಗಳು, ನಮ್ಮೊಂದಿಗಿರುವ ವಸ್ತುಗಳು, ವ್ಯಕ್ತಿಗಳು ಯಾವುದೇ ಆಗಿರಲಿ ಅದರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು. ನಮಗೆ ದಕ್ಕಿರುವುದನ್ನು ನೆನೆದು ಅದಕ್ಕೆ ಕೃತಜ್ಞರಾಗಿರಬೇಕು.

ಭವಿಷ್ಯತ್ ಚಿಂತೆ ಸಲ್ಲ
ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾ ಕುಳಿತರೆ, ವರ್ತಮಾನದ ಸುಖವನ್ನು ಕಳೆದುಕೊಳ್ಳುತ್ತೇವೆ. ಅದಕ್ಕೆ ವರ್ತಮಾನದ ಪ್ರತಿಕ್ಷಣವನ್ನು ಆನಂದದಿ0ದ ಕಳೆಯಬೇಕು. ಮುಂದಿನದರ ಚಿಂತೆಯಲ್ಲಿ ಈ ಕ್ಷಣದ ಸುಖವನ್ನು ಹಾಳು ಮಾಡಿಕೊಳ್ಳಬಾರದು. ಭವಿಷ್ಯದ ಕನಸು ಕಾಣುವಾಗ ಕೆಲವೊಂದು ಭಯ ಹುಟ್ಟಿಸಬಹುದು. ಬರುವುದೆಲ್ಲ ಬರಲಿ ಎಂಬುದಾಗಿ ಎಲ್ಲದಕ್ಕೂ ಸಿದ್ಧರಾಗಿರಬೇಕು.

ಸ್ವಗೌರವವಿರಲಿ
 ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು. ಪ್ರಸ್ತುತ ಹೇಗಿದ್ದೀವೋ ಆ ಸ್ಥಿತಿಯನ್ನು ಒಳ್ಳೆಯ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಸ್ವಗೌರವವನ್ನು ಹೆಚ್ಚಿಸಿಕೊಳ್ಳುವುದು ಅಂದರೆ ಅದು ಅಹಂ ಅಲ್ಲ. ಇತರರು ನಮ್ಮ ಬದುಕನ್ನು ನಿರ್ಧರಿಸಬೇಕು, ಇಲ್ಲವೇ ಖುಷಿಪಡಿಸಬೇಕು ಎಂದು ಕಾಯಬಾರದು. ನಮ್ಮ ಬಂಧವನ್ನು ಮೊದಲು ನಮ್ಮೊಂದಿಗೇ ಗಟ್ಟಿಗೊಳಿಸಿಕೊಳ್ಳಬೇಕು. ಅರ್ಥಾತ್ ಸ್ವಪ್ರೀತಿ ಇರಬೇಕು. ಹಾಗಾದಾಗ ಮಾತ್ರ ನಮ್ಮ ಬದುಕನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಸಾಧ್ಯ. ಸುಂದರ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯ.

Related Articles

ಪ್ರತಿಕ್ರಿಯೆ ನೀಡಿ

Latest Articles