ಯಾವುದೇ ಪೂಜಾ, ಯಜ್ಞ, ಹೋಮ, ಹವನಗಳಲ್ಲಿ ಆಚರಣೆಯಲ್ಲಿರುವ ಒಂದು ಸಂಪ್ರದಾಯ ಅಂದರೆ ದರ್ಬೆಯ ಉಂಗುರವನ್ನು ಧರಿಸುವುದು. ಸಾಮಾನ್ಯವಾಗಿ ಮಂಗಳಕರವಾಗಿರಲಿ ಅಥವಾ ಅಶುಭ ಕಾರ್ಯಕ್ರಮಗಳನ್ನು ನಿರ್ವಹಿಸುವ ವ್ಯಕ್ತಿ ದರ್ಬೆ ಹುಲ್ಲನ್ನು ನಿರ್ದಿಷ್ಟವಾದ ರೀತಿಯಲ್ಲಿ ಉಂಗುರ ಮಾಡಿ ಬಲ ಕೈಯ ಉಂಗುರ ಬೆರಳಿಗೆ ಹಾಕುತ್ತಾರೆ.
ನಾವು ಯಾವ ವ್ರತವಾಗಲಿ ಯಜ್ಞ ಯಾಗಾದಿಗಳಾಗಲಿ ಪೂಜಾದಿಗಳಾಗಲಿ ಇದನ್ನು ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಬೆಯ ದರ್ಶನ ಮಾತ್ರದಿಂದ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ದರ್ಬೆಯನ್ನು ಬಳಸುತ್ತೇವೆ. ಈ ದರ್ಬೆಯು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೆ ಭೂ ಲೋಕಕ್ಕೆ ಭಗವಂತನು ಕಳಿಸಿರುತ್ತಾನೆ.
ಬ್ರಹ್ಮ ದೇವನು ಸೃಷ್ಟಿಯನ್ನು ಮಾಡುವವನು, ವಿಷ್ಣುವು ಸ್ಥಿತಿಕರ್ತನು, ಶಿವನು ಲಯಕರ್ತನು. ಒಮ್ಮೆ ಶಿವನಿಗೆ ತಾನೇ ಎಲ್ಲರಿಗೂ ಮೇಲೆಂದು ಅಹಂಕಾರ ಬಂದಿತು. ಆ ಕಡೆ ಸೃಷ್ಟಿಕರ್ತ ಬ್ರಹ್ಮನಿಗೂ ತಾನೇ ಮೇಲೆಂದು ಅಹಂಕಾರ ಬಂದಾಗ ಇಬ್ಬರ ವಾದ-ವಿವಾದದಲ್ಲಿ ಶಿವನು ಬ್ರಹ್ಮನ ನಾಲ್ಕನೇ ತಲೆಯನ್ನು ತನ್ನ ಕೈಯಿಂದ ಕಿತ್ತು ತೆಗೆದಾಗ ಬ್ರಹ್ಮಹತ್ಯಾ ದೋಷ ಬಂದಿತು ಹಾಗೂ ಜಗತ್ತೂ ದೋಷಯುಕ್ತವಾಯಿತು. ಯಜ್ಞ-ಯಾಗಾದಿಗಳನ್ನು ಮಾಡುವುದು ಕಠಿಣವಾಯಿತು. ಆಗ ಎಲ್ಲಾ ದೇವತೆಗಳು ಮತ್ತು ಋಷಿಮುನಿಗಳು ಸೇರಿ ಈ ಎಲ್ಲಾ ದೋಷ ನಿವಾರಣೆಗೆ ದರ್ಬೆಯನ್ನು ಭೂಲೋಕಕ್ಕೆ ತರಬೇಕಾಯಿತು ಮತ್ತು ಶಿವನು ತನ್ನ ಹೆಬ್ಬೆರಳು ಮತ್ತು ಉಂಗುರ ಬೆರಳಿನಿಂದ ಬ್ರಹ್ಮನ ಶಿರವನ್ನು ತೆಗೆದುದರಿಂದ ಶುದ್ಧಿಗಾಗಿ ಪೂಜಾ ಅಧಿಕಾರ ಪ್ರಾಪ್ತಿಗಾಗಿ ದರ್ಬೆಯ ಪವಿತ್ರ ಉಂಗುರ ಧರಿಸಬೇಕೆಂದು ನಿಯಮಿಸಲಾಯಿತು. ಇದು ದರ್ಬೆಯ ಮಹತ್ವ.
ಸಾಮಾನ್ಯ ಎಲ್ಲಾ ಕಾರ್ಯಗಳಲ್ಲಿ 2 ಅಥವಾ 4 ದರ್ಬೆಯಿಂದ ಮಾಡಿದ ಪವಿತ್ರವನ್ನು ಯಾಗಾದಿಗಳಲ್ಲಿ 5 ದರ್ಬೆಯಿಂದ ಮಾಡಿದ ಪವಿತ್ರವನ್ನು ಪಿತೃಕಾರ್ಯಗಳಲ್ಲಿ 3 ದರ್ಬೆಯಿಂದ ಮಾಡಿದ ಪವಿತ್ರವನ್ನು ಧರಿಸಬೇಕು. ದರ್ಬೆ ಹುಲ್ಲು ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು. ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು ಇಡುತ್ತಾರೆ.