ಎಲ್ಲಾ ಯುಗಕ್ಕೂ ಅನ್ವಯವಾಗುವಂತೆ ನಾರದರು, ಲಕ್ಷ್ಮೀ ಮತ್ತು ಶನಿ ದೇವರಿಗೆ ಕೊಟ್ಟ ತೀರ್ಪು ಏನು ಗೊತ್ತಾ?

ದೇವಲೋಕದಲ್ಲಿ ಒಮ್ಮೆ ಲಕ್ಷ್ಮಿಗೂ ಶನಿ ಮಹಾರಾಜನಿಗೂ ಚರ್ಚೆಯಾಯಿತಂತೆ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂದು. ಅದು ಅಷ್ಟು ಸುಲಭದಲ್ಲಿ ಬಗೆಹರಿಯಲಿಲ್ಲ. ಶನಿ ನಾನೇ ಶ್ರೇಷ್ಠ ಎಂದು ವಾದಿಸಿದ. ಲಕ್ಷ್ಮಿ ನಾನೇ ಶ್ರೇಷ್ಠಳು ಎಂದು ವಾದಿಸಿದಳು.

ಆದರೂ ಅವರಿಗೆ ಸರಿಯಾಗಿ ಯಾರು ಶ್ರೇಷ್ಠರು ಎಂದು ತಿಳಿಯಲಿಲ್ಲ. ಆ ಸಮಯಕ್ಕೆ ಆ ದಾರಿಯಾಗಿ ತ್ರಿಲೋಕ ಸಂಚಾರಿ ನಾರದರು ಹೋಗುತ್ತಿದ್ದರು. ಆಗ ಶನಿ ಮತ್ತು ಲಕ್ಷ್ಮಿ ಇಬ್ಬರೂ ನಾರದರಿಗೆ ವಂದಿಸಿ ಅವರಿಬ್ಬರಿಲ್ಲಿ ಉಂಟಾದ “ಯಾರು ಶ್ರೇಷ್ಠರು?’ ಎಂಬ ಪ್ರಶ್ನೆಗೆ ಉತ್ತರಿಸಬೇಕೆಂದು ಕೇಳಿಕೊಂಡರು.

ನಾರದರಿಗೆ ಯಾರ ಪರವಾಗಿ ತೀರ್ಪು ಕೊಡುವುದೆಂದು ಹೊಳೆಯಲಿಲ್ಲ. ಲಕ್ಷ್ಮಿಯ ಪರವಾಗಿ ಹೇಳಿದರೆ ಶನಿ ಕೋಪದಿಂದ ಹೆಗಲೇರಬಹುದು, ಶನಿಯ ಪರವಾಗಿ ತೀರ್ಪು ಕೊಟ್ಟರೆ ಲಕ್ಷ್ಮಿ ಶಾಪ ಕೊಡಬಹುದೆಂದು ಚಿಂತೆಯಾಯಿತು. ಆದರೂ ಅವರಿಗೆ ಉತ್ತರ ಕೊಡದೆ ಹೋಗಲು ಸಾಧ್ಯವಿರಲಿಲ್ಲ. ಸ್ವಲ್ಪ ಹೊತ್ತು ಆಲೋಚಿಸಿದ ದೇವರ್ಷಿ ನಾರದರು ಅದ್ಬುತವಾದ ತೀರ್ಪನ್ನೆ ನೀಡಿದರು.

ನಾರದರು, ಅವರಿಬ್ಬರಲ್ಲಿ ಹಾಗೆ ಸ್ವಲ್ಪದೂರ ನಡೆದುಕೊಂಡು ಹೋಗಿ ಹಾಗೇ ಹಿಂದಕ್ಕೆ ಬನ್ನಿ ಎಂದರು. ಲಕ್ಷ್ಮೀದೇವಿ, ಶನಿಮಹರಾಜರು ಹಾಗೇ ನಡೆದುಕೊಂಡು ಹೋಗಿ ಹಿಂದಕ್ಕೆ ಬಂದರು. ಆಗ ನಾರದರು ಕೊಟ್ಟ ಉತ್ತರ ಎಲ್ಲಾ ಯುಗಕ್ಕೂ ಅನ್ವಯವಾಗುತ್ತದೆ. ಅವರ ತೀರ್ಪು ಹೀಗಿತ್ತು “ಶನಿ ಹೋಗುವಾಗ ಶ್ರೇಷ್ಠ. ಹಾಗೇ ಲಕ್ಷ್ಮಿ ಬರುವಾಗ ಶ್ರೇಷ್ಠ’ ಎಂದರು. ನೀವಿಬ್ಬರೂ ಸಮಾನರು ಎಂದು ಕೊಟ್ಟ ಉತ್ತರದಿಂದ ಸಂತೋಷಗೊಂಡ ಅವರು ನಾರದರಿಗೆ ಆಶಿರ್ವದಿಸಿದರು.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು

Related Articles

ಪ್ರತಿಕ್ರಿಯೆ ನೀಡಿ

Latest Articles