ಬದುಕಿನ ಕೊನೆಯಲ್ಲಿ ಆಸ್ತಿ ಅಂತಸ್ತು ಯಾವುದನ್ನೂ ಕೊಂಡುಹೋಗುವುದಿಲ್ಲ. ಮುಂದಿನ ಹುಟ್ಟು ಯಾವ ರೀತಿಯದ್ದೋ ಯಾರಿಗೂ ಗೊತ್ತಿಲ್ಲ. ಬದುಕಿದ ರೀತಿ ಮಾತ್ರ ಉಳಿಸಿಹೋಗುತ್ತೇವೆ. ಹಾಗಿರುವಾಗ ಬದುಕನ್ನು ಬೇಕಾಬಿಟ್ಟಿಯಾಗಿ ಕಳೆಯುವುದರಲ್ಲಿ ಅರ್ಥ ಇಲ್ಲ.
*ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಬದುಕು ಎಂಬುದು ಒಂದು ಸುಂದರ ಪದ. ಆದರೆ ಅಷ್ಟೇ ಗಂಭೀರವಾದ ಪದ. ಒಂದು ಜೀವಿ ತಾಯಿಯ ಗರ್ಭದಿಂದ ಹೊರಬಂದ ಮೇಲೆ ಅಳಿಯುವವರೆಗೆ ಸಾಗುವ ಪ್ರಕ್ರಿಯೆಯದು.
ಈ ಜೀವ ಅನಾದಿ ನಿತ್ಯ ಎನ್ನುವವರು ಅಧ್ಯಾತ್ಮವಾದಿಗಳು. ಶರೀರಕ್ಕಿಂತ ಹೊರತಾದ ಜೀವ ಎಂಬುದೊ0ದಿಲ್ಲ. ಪಂಚಭೂತಗಳಿ0ದ ಮಣ್ಣು, ನೀರು ಬೆಂಕಿ ಗಾಳಿ ಆಕಾಶ, ಇವುಗಳ ನಿರ್ದಿಷ್ಟ ಅನುಪಾತದ ಸಂಯೋಜನೆಯೇ ಶರೀರ. ನಿರ್ದಿಷ್ಟವಾದ ಅನುಪಾತದಲ್ಲಿ ಸಂಯೋಜನೆಯೇ ಶರೀರ. ನಿರ್ದಿಷ್ಟ ಪ್ರಮಾಣದ ಸಂಯೋಜನೆಯಿ0ದಾಗಿ ಒಂದು ಶಕ್ತಿ ಉತ್ಪನ್ನವಾಗುತ್ತದೆ. ಇದೇ ಚೈತನ್ಯ. ಶರೀರಕ್ಕಿಂತ ಹೊರತಾದ ಆತ್ಮ, ಪರಮಾತ್ಮ ಇತ್ಯಾದಿಗಳು ಇಲ್ಲ ಎಂಬುದು ನಾಸ್ತಿಕರ ಪಂಥ. ಇದನ್ನುಒಪ್ಪದವರು ಆಸ್ತಿಕರು.
ವಿಭಿನ್ನವಾದ ಜೀವರಾಶಿಗಳು ವಿಭಿನ್ನವಾದ ಸ್ವಭಾವ, ವಿಚಿತ್ರವಾದ ವರ್ತನೆಗಳು, ಅರ್ಥವಾಗದ ರಹಸ್ಯಗಳು, ಜೀವದ ಸ್ವಭಾವದಲ್ಲಿ ವೈವಿಧ್ಯ ಇವನ್ನೆಲ್ಲ ಕೂಡಿಸಬೇಕಾದರೆ ಜನ್ಮಾಂತರದ ಸಂಸ್ಕಾರ ಒಪ್ಪಲೇಬೇಕು. ಅಂತಹ ಸಂಸ್ಕಾರವನ್ನು ಹೊತ್ತಿರುವ ವ್ಯಕ್ತಿ ಬರೇ ಜಡವಾದ ಶರೀರದಲ್ಲಿಲ್ಲ. ಅದಕ್ಕಿಂತ ಹೊರತಾದ ಆತ್ಮವೊಂದು ಇದ್ದೇ ಇದೆ ಎಂಬ ವಾದ ಆಸ್ತಿಕರದ್ದು.
ಮಗುವೊಂದು ಹುಟ್ಟಿದಾಕ್ಷಣ ತಾಯಿಯ ಹಾಲಿಗಾಗಿ ತಡಕಾಡುತ್ತದೆ. ಯಾರೂ ಹೇಳಿಕೊಡದಿದ್ದರೂ ಅದಕ್ಕೆ ಪ್ರವೃತ್ತಿ ಹೇಗೆ? ತನಗೆ ಯಾವುದು ಇಷ್ಟವೆಂದು ತಿಳಿದಿದೆಯೋ ಅದರಲ್ಲೆ ಪ್ರವೃತ್ತಿ. ಮಗುವಿಗೆ ತಾಯಿಯ ಹಾಲು ಇಷ್ಟವೆಂದು ಮೊಟ್ಟ ಮೊದಲಬಾರಿಗೆ ಹಾಲು ಕುಡಿಯುವ ಮೊದಲು ಹೇಗೆ ತಿಳಿಯಿತು. ಇದಕ್ಕೆ ಜನ್ಮಾಂತರದ ಸಂಸ್ಕಾರ ಕಾರಣ. ಈ ಪ್ರಜ್ಞೆ ಎಲ್ಲಿಂದ ಬಂತು. ಇದಕ್ಕೆ ಹಿಂದಿನ ಜನ್ಮಗಳ ಸಂಸ್ಕಾರವೂ ಕಾರಣ. ಈ ಕಾರಣದಿಂದ ಹುಟ್ಟು ಎಂಬುದು ಜಡ ಜೀವಗಳ ಸಂಯೋಗವೆ0ದು ಹಿರಿಯರ ಅಭಿಪ್ರಾಯ.
ಕೃಷ್ಣನ ಭಗವದ್ಗೀತೆಯ ವಾಕ್ಯ: ‘ಅವ್ಯಕ್ತಾದೀನಿ ಭೂತಾನಿ ವ್ಯಕ್ತ ಮಧ್ಯಾನಿ ಭಾರತ. ಅವ್ಯಕ್ತನಿಧನಾನ್ಯೇವ’. ಜೀವಾತ್ಮನ ದೀರ್ಘ ಕಾಲದ ಪಯಣದ ಪರಿಣಾಮವಾಗಿ ಯಾವುದೇ ಋಣ ಸಂಬ0ಧಕ್ಕೆ ಬದ್ಧನಾಗಿ ಪುರುಷನ ಮೂಲಕ ಜೀವ ಸ್ತ್ರೀ ದೇಹವನ್ನು ಪ್ರವೇಶಿಸುತ್ತದೆ. ಕಾಲಬದ್ಧವಾಗಿ ಒಂದಷ್ಟು ತಿಂಗಳು ಕಳೆದು ಮತ್ತೆ ಭೂಮಿಗೆ ಇಳಿಯಬೇಕು. ಅಲ್ಲಿಯವರೆಗೆ ಆ ಜೀವ ಕಾಣಿಸುತ್ತಿರಲಿಲ್ಲ. ಮತ್ತೆ ಕಾಣುವ ಜಡಪದಾರ್ಥಗಳ ಅಂಗಿಯನ್ನು ಹಾಕಿಕೊಂಡು ಭೂಮಿಗೆ ಬಂದ ಜೀವ ಕಾಣಿಸಿಕೊಳ್ಳುತ್ತದೆ. ಆ ಜೀವ ಈ ಶರೀರದೊಂದಿಗೆ ಒಂದಷ್ಟು ಕಾಲ ಈ ಭೂಮಿಯಲ್ಲಿ ಉಳಿಯಿತು. ಇದೇ ಬದುಕು. ಭೂಮಿಯ ಋಣ ಪರಿಹಾರದ ಅನಂತರ ಈ ಕಾಣುವ ಶರೀರವನ್ನು ಬಿಟ್ಟು ಹೋಯಿತು. ಜೀವ ಕಾಣದ ಸ್ಥಿತಿಯನ್ನು ಪಡೆಯುತ್ತದೆ. ಅದೇ ಅಂತ್ಯ. ಹುಟ್ಟು ಸಾವುಗಳ ಮಧ್ಯೆ ಒಂದಷ್ಟು ಕಾಲದ ಇರವು ಅರಿವು ಕ್ರಿಯಾಶೀಲತೆ ಇವುಗಳೇ ಬದುಕು. ಈ ಬದುಕಿಗೆ ಅರ್ಥ ಕೊಡಬೇಕೆಂಬ ಆಸೆ ಇರಬೇಕು. ಈ ಬಯಕೆಯನ್ನು ಮನುಷ್ಯ ಜೀವಿಗೆ ಮಾತ್ರ ಈಡೇರಿಸಿಕೊಳ್ಳಲು ಸಾಧ್ಯ. ಪ್ರಾಣಿಗಳ ಬದುಕು ಅತಿ ಸೀಮಿತ. ಆಹಾರ, ನಿದ್ದೆ, ದೇಹ ಸುಖಕಷ್ಟೇ ಸೀಮಿತ.
ಸಮಗ್ರ ಪ್ರಾಣಿ ಪ್ರಪಂಚವನ್ನು ಸೃಷ್ಟಿ ಮಾಡಿದ ಭಗವಂತನಿಗೆ ಮಾನವ ಜೀವಿಯನ್ನು ಸೃಷ್ಟಿ ಮಾಡಿದ ಮೇಲೆ ತುಂಬ ಸಂತೃಪ್ತಿಯಾಯಿತ0ತೆ. ಅಪಾರ ಬುದ್ಧಿಶಕ್ತಿಯುಳ್ಳದ್ದನ್ನು ಸೃಷ್ಟಿ ಮಾಡಿದ ಭಗವಂತನನ್ನೂ ತಿಳಿಯಬಲ್ಲ, ವಿವೇಚನಾ ಶಕ್ತಿಯನ್ನು ಬಳಸಿದರೆ ಎಷ್ಟು ಎತ್ತರಕ್ಕೂ ಏರಬಲ್ಲ ಜೀವಿಯನ್ನು ಸೃಷ್ಟಿ ಮಾಡಿದ್ದಕ್ಕಾಗಿ. ಕ್ರಿಯಾಶೀಲವಾದ ಕೈಬೆರಳುಗಳು, ಬುದ್ಧಿ, ನಮ್ಮಂತೆ ಯಾವ ಪ್ರಾಣಿಗಳಿಗೂ ಇಲ್ಲ. ಆದ್ದರಿಂದ ಇದೊಂದು ಪೂರ್ಣ ಸಾಮಾಗ್ರಿಯನ್ನು ಪಡೆದ ಶರೀರ, ಸಾಧನ ಶರೀರ. ಇದರಿಂದ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆ ನಮಗಿರಬೇಕು. ಉತ್ಕೃಷ್ಟವಾದ ಅವಯವಗಳನ್ನು, ಬದುಕನ್ನು ಕೊಟ್ಟ ಭಗವಂತನನ್ನು ನೆನಪಿಸಿಕೊಳ್ಳುವ ಮೂಲಕ ಆಧ್ಯಾತ್ಮಿಕವಾಗಿರಬೇಕು. ಹುಟ್ಟಿದಂದಿನಿ0ದ ಸಾಯುವ ತನಕ ನಾವು ಸಮಾಜ ಜೀವಿಗಳು. ನಮ್ಮ ತಂದೆ ತಾಯಿ ಒಡಹುಟ್ಟಿದವರು ಹಿರಿಯರು ಕಿರಿಯರು ಸಹಪಾಠಿಗಳು ಶತ್ರುಗಳೂ ಕೂಡಾ ನಮಗೆ ಪಾಠ ಕಲಿಸಿರುತ್ತಾರೆ. ಎಲ್ಲರ ಪ್ರಭಾವದಿಂದ ನಾವು ತಿಳಿದೋ ತಿಳಿಯದೆಯೋ ನಮ್ಮನ್ನು ರೂಪಿಸಿಕೊಂಡಿರುತ್ತೇವೆ. ಹಾಗಾಗಿ ಸಮಾಜದ ಋಣವೂ ನಮ್ಮ ಮೇಲಿದೆ.
ಭಗವಂತನ ಸ್ಮರಣೆ
ನಮ್ಮ ಬದುಕಿಗೆ ಎರಡು ಮುಖವಿದೆ. ನಾವು ಸಮಾಜಮುಖಿಗಳಾಗಿ ಮತ್ತು ಭಗವನ್ಮುಖಿಗಳಾಗಿ ಬದುಕಬೇಕು. ದಿನದ ಸ್ವಲ್ಪ ಕಾಲವಾದರೂ ಕೆಲವು ಕ್ಷಣವಾದರೂ ಭಗವಂತನ ಸ್ಮರಣೆಯಲ್ಲಿ ಕಳೆಯಬೇಕು. ಕ್ಷೇಮಕ್ಕಾಗಿ ಪ್ರಾರ್ಥಿಸಬೇಕು.
ಮನುಷ್ಯ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ ಎಂದಿದ್ದಾರೆ ಪುರಂದರದಾಸರು. ಅಂತೆಯೇ ಮನುಷ್ಯ ಜನ್ಮವನ್ನು ಪಡೆದ ನಾವು ಧನ್ಯರು. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದರ ಜತೆಗೆ ಶಿಸ್ತುಬದ್ಧ ಜೀವನವನ್ನು ನಡೆಸಬೇಕು. ಇತರರಿಗೆ ಮಾದರಿಯಾಗುವಂತಿರಬೇಕು. ಮತ್ತೊಮ್ಮೆ ಇಂತಹ ಅಪೂರ್ವ ಬದುಕನ್ನು ಪಡೆಯುವಂತೆ ಬದುಕಬೇಕು.
ನಮ್ಮ ಜೀವನಕ್ರಮ ಮತ್ತೊಬ್ಬರನ್ನು ಉದ್ವೇಗ ಅಶಾಂತಿ, ಅಭದ್ರತೆ, ನಶ್ವರತೆಗೆ ಕಾರಣವಾಗಬಾರದು. ಮತ್ತೊಬ್ಬರಿಗೆ ಭದ್ರತೆ, ಶಾಂತಿ, ಸಂತೋಷ ಕೊಡುವಂತಿರಬೇಕು. ಇದು ಅಸಾಧ್ಯವಾದರೆ ನಮ್ಮಷ್ಟಕ್ಕಾದರೂ ಪರಿಶುದ್ಧ ಜೀವನವನ್ನು ನಡೆಸಬೇಕು.
ಬದುಕಿನ ಕೊನೆಯಲ್ಲಿ ಆಸ್ತಿ ಅಂತಸ್ತು ಯಾವುದನ್ನೂ ಕೊಂಡುಹೋಗುವುದಿಲ್ಲ. ಮುಂದಿನ ಹುಟ್ಟು ಯಾವ ರೀತಿಯದ್ದೋ ಯಾರಿಗೂ ಗೊತ್ತಿಲ್ಲ. ಬದುಕಿದ ರೀತಿ ಮಾತ್ರ ಉಳಿಸಿಹೋಗುತ್ತೇವೆ. ಹಾಗಿರುವಾಗ ಬದುಕನ್ನು ಬೇಕಾಬಿಟ್ಟಿಯಾಗಿ ಕಳೆಯುವುದರಲ್ಲಿ ಅರ್ಥ ಇಲ್ಲ.
ಬದುಕುವ ರೀತಿ ಕೂಡಾ ನಮ್ಮ ಜೀವನಕ್ಕೆ ತೋರುವ ಭಕ್ತಿ. ಭಕ್ತಿ ಅದು ದೇವರಿಗೆ ಸಲ್ಲಿಸುವ ಪರಮಭಕ್ತಿಯೇ ಆಗಿರಬೇಕೆಂದೇನೂ ಇಲ್ಲ. ಮಾಡುವ ಕೆಲಸದಲ್ಲಿ ತೋರುವ ನಿಷ್ಠೆ ಕೂಡಾ ಆಗಿರಬಹುದು. ಶ್ರದ್ಧೆ ಇಲ್ಲದ ಕಾರ್ಯವೊಂದು ಯಶಸ್ಸು ಪಡೆಯುವುದಕ್ಕೆ ಸಾಧ್ಯ ಇಲ್ಲ ಅಲ್ಲವೇ? ಬದುಕಿನಲ್ಲಿ ಶ್ರದ್ಧೆ, ಬದುಕಿನ ಬಗ್ಗೆ ಭಕ್ತಿ ಇದ್ದಲ್ಲಿ ಜೀವನ ಯಶಸ್ಸಿನ ಉತ್ತುಂಗ ಸ್ಥಿತಿಯಲ್ಲಿರುತ್ತದೆ. ಉತ್ತುಂಗ ಅಥವ ಉತ್ಕೃಷ್ಟ ಸ್ಥಿತಿ ಎಂಬುದು ಉನ್ನತ ಹುದ್ದೆ ಎಂದು ಭಾವಿಸಬೇಕಾಗಿಲ್ಲ. ಉತ್ತುಂಗ ಸ್ಥಿತಿ ಎಂಬುದು ಪರಿಪೂರ್ಣ ನೆಮ್ಮದಿಯ ಜೀವನ. ಅಂತಹ ಜೀವನ ನಡೆಸಿದಾಗಲೇ ಬದುಕಿಗೊಂದು ಅರ್ಥ.