ನಾಳೆ ಏನಾಗುವುದೋ ಬಲ್ಲವರಾರು…?

* ಗಿರೀಶ್ ಪಿ. ಎಂ

“ಮಗ ಸ್ವಲ್ಪ ಬ್ಯಾಂಕ್‌ಗೆ ಹೋಗಿ ಬರ್ತೀಯಾ ಹಣ ಕಟ್ಟಬೇಕಿತ್ತು. ಬರ್ತ ಹಾಗೆ ದಿನಸಿ ಸಾಮಾನು ತೆಗೆದುಕೊಂಡು ಬಾ, ಆಯ್ತಾ ಪುಟ್ಟ?”. ಛೇ, ಬೆಳ್ಳಂಬೆಳಗ್ಗೆ ಶುರುವಾಯ್ತು ಅಮ್ಮನ ಈ ಕಿರಿಕಿರಿ ಏನಾದರೂ ಉಪಾಯ ಹುಡುಕಿ ತಪ್ಪಿಸಿಕೊಳ್ಳಬೇಕೆಂದು ನಿರ್ಧಾರ ಕೈಗೊಂಡೆ.

“ಅಮ್ಮ ಇಂದು ಆನ್ ಲೈನ್ ನಲ್ಲಿ ಪರೀಕ್ಷೆ ಇದೆ ನಾಳೆ ಹೋಗುತ್ತೇನೆ” ಎಂದು ಹೇಳಿ ತಪ್ಪಿಸಿಕೊಂಡೆ. ಹಾಗಂತ ನಾನು ನಾಳೆ ಹೋಗುತ್ತೇನೆ ಎಂದು ಎಷ್ಟೋ ಸಲ ಹೇಳಿದ್ದುಂಟು. ಆ ದಿನ ಯಾವ ಪರೀಕ್ಷೆಯೂ ಇರಲಿಲ್ಲ.

ಮುಗ್ದ ಅಮ್ಮ ಮಗ ಸತ್ಯ ಹೇಳುತ್ತಿದ್ದಾನೆ, ಸುಮ್ಮನೆ ಯಾಕೆ ತೊಂದರೆ ಕೊಡುವುದು ಅವನಿಗೆ ಎಂದು ಸುಮ್ಮನಾದಳು. ಮಾರನೇ ದಿನವೂ ಇದೇ ಸಂದರ್ಭ.“ನಾಳೆ ಖಂಡಿತಾ ಹೋಗುತ್ತೇನೆ ಅಮ್ಮ”, ಎಂಬ ನನ್ನ ಅದೇ ಹಳೇ ಸುಳ್ಳು.

ಹೀಗೇ ದಿನಗಳು ಕಳೆದವು. ಮತ್ತದೇ ಪ್ರಸಂಗ. ಆದರೆ ಈ ಬಾರಿ ಅಮ್ಮನಿಗೆ ನನ್ನ ಮಾತನ್ನು ಕೇಳುವ ತಾಳ್ಮೆಯಿರಲಿಲ್ಲ. ಅವಳಿಗೆ ಬ್ಯಾಂಕ್‌ನ ದಾರಿ ತಿಳಿದಿದ್ದರೂ, ವ್ಯವಹಾರವೂ ತಿಳಿದಿದ್ದರೂ ಬೇಕೆಂದೇ ಹೋಗಿರಲಿಲ್ಲ. ಮಗನಿಗೂ ವ್ಯವಹಾರದ ಜ್ಞಾನ ಬರಬೇಕು, ಹೊರ ಪ್ರಪಂಚ ನೋಡಬೇಕು ಎಂದು ಬಯಸಿದ್ದಳು ಆಕೆ.

ಕಂದಾ, ನಾಳೆ ಎಷ್ಟಾದರೂ ನಾಳೆಯೇ ಎಂಬುದು ತಿಳಿದಿರಲಿ. ನಾಳೆಗಾಗಿ ಎಂದೂ ಕಾಯಬೇಡ, ಕಾಯಕ ಮಾಡಲು ನಾಳೆ ಎಂದವನ ಮನೆ ಹಾಳು ಎಂಬ ಗಾದೆ ಮಾತು ನೀನು ಕೇಳಿಲ್ಲವೇ, ಎಂದು ಅಮ್ಮ ಹೇಳಿದಾಗ ಜ್ಞಾನೋದಯವಾದಂತಾಯಿತು. ಇಂದಿನ ಈ ಸಮಯ, ಸಂದರ್ಭ ನಾಳೆ ಬರದಿದ್ದರೆ? ನಾಳೆ ಎಂಬ ದಿನ ನಮ್ಮ ಜೀವನದಲ್ಲಿ ಬರಬೇಕೆಂದಿಲ್ಲ ಎಂಬ ಮಾತನ್ನು ಕೇಳಿದ ನಾನು, ಹೌದು, ನಾಳೆ ಎಂದು ಕಾದರೆ ಸಮಯ ವ್ಯರ್ಥ. ಯಾವುದೇ ಕಾರಣಕ್ಕೂ ನಡೆಯಬೇಕಾದ ಕಾರ್ಯವನ್ನು ಮುಂದೆ ಹಾಕಬಾರದೆಂದು ಎಂದು ನಿರ್ಧರಿಸಿದ್ದೆ.

ಎಷ್ಟೋ ಮಿತ್ರರು, ಪರೀಕ್ಷೆ ಸನಿಹ ಬಂದರೂ ಓದುವುದೇ ಇಲ್ಲ. ನಾಳೆ ಓದಿದರೆ ಸಾಕು, ನಾಡಿದ್ದು ತಾನೇ ಪರೀಕ್ಷೆ ಈಗ ಹಾಯಾಗಿರುತ್ತೇನೆ ಎಂದುಕೊಳ್ಳುತ್ತಾರೆ. ಆದರೆ ಸಿಗುವ ಸಮಯದ ಸದುಪಯೋಗ ಮಾಡದೇ ಹೋದರೆ ಪಶ್ಚಾತ್ತಾಪ ನಿಶ್ಚಿತ. ನಾಳೆಯೆಂಬ ಎಂಬ ಅಂಧಕಾರದಿಂದ ಹೊರ ಬನ್ನಿ. ಇಂದೇ ಕೆಲಸವ ಮಾಡುವೆ, ಓದುವೆ ಎಂದು ನಿಶ್ಚಯಿಸಿ. ನಾಳೆಯನ್ನು ಕಾಯುವುದರಿಂದ ಜೀವನದಲ್ಲಿ ಉತ್ಸಾಹ, ಉಲ್ಲಾಸವೇ ಕಡಿಮೆಯಾಗುತ್ತದೆ.

ಸಮಯಪ್ರಜ್ಞೆ ಜೀವನದುದ್ದಕ್ಕೂ ರೂಢಿಸಿಕೊಳ್ಳಬೇಕಾದ ಗುಣವೆಂಬುದು ನೆನಪಿರಲಿ. ತಿಳಿಯಿರಿ ಗೆಳೆಯರೇ, ಸಮಯವನ್ನು ನಾವು ಅಮೂಲ್ಯವೆಂದು ಪರಿಗಣಿಸಿದರೆ ಅದು ನಮ್ಮ ಜೀವನವನ್ನು ಅಮೂಲ್ಯವಾಗಿಸುತ್ತದೆ. ಇಂದಿನ ಕಾರ್ಯವನ್ನು ಇಂದೇ ಮಾಡಿ ಮುಗಿಸಿ, ನಾಳೆಗೆಂದೂ ಕಾಯಬೇಡಿ… ಯಾಕೆಂದರೆ…. ‘ನಾಳೆ ಏನಾಗುವುದೋ ಬಲ್ಲವರಾರು?’.

*ಗಿರೀಶ್ ಪಿ. ಎಂ
ದ್ವಿತೀಯ ಬಿಎ, ಪತ್ರಿಕೋದ್ಯಮ 
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles