ಪ್ರತಿಯೊಬ್ಬರೂ ಧರ್ಮಾಚರಣೆಯಲ್ಲಿ ತೊಡಗಿಸಿಕೊಂಡರೆ ಯಾವ ಭಯವು ಇರದು: ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ, ಬಾಳೆಹೊನ್ನೂರು: ಕೊರೋನಾ ಸೋಂಕಿನಿ0ದ ಜನರ ಜೀವನ ತತ್ತರಿಸಿ ಹೋಗುತ್ತಿದೆ. ಮನುಷ್ಯರಲ್ಲಿ ಆತಂಕ ಹೆಚ್ಚಾಗಿದ್ದು ಸಾಮಾನ್ಯರ ಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಆದಷ್ಟು ಬೇಗ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದು ಜನರು ಭಯ ಭೀತಿಯಿಲ್ಲದ ಜೀವನ ಸಾಗಿಸುವಂತಾಗಲೆ0ದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹಾರೈಸಿದ್ದಾರೆ.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆ ದಿನದಂದು ಲೋಕಕಲ್ಯಾಣಾರ್ಥ ಇಷ್ಟಲಿಂಗ ಪೂಜಾರ್ಚನೆ ನೆರವೇರಿಸಿ ಆಶೀರ್ವಚನ ನೀಡಿದರು.

ನವ ನಾಗರೀಕತೆಯ ಇಂದಿನ ದಿನಗಳಲ್ಲಿ ಮನುಷ್ಯ ಬಹಳಷ್ಟು ಬದಲಾವಣೆಯಾಗಿರುತ್ತಾನೆ. ತಾತ್ಕಾಲಿಕ ಸುಖದ ಬೆನ್ನು ಹತ್ತಿ ಶಾಶ್ವತ ಸುಖದ ದಾರಿ ಗುರಿ ಮರೆಯುತ್ತಿದ್ದಾನೆ. ಮನುಷ್ಯನಿಗೆ ಹಣವೊಂದೇ ಮುಖ್ಯವಲ್ಲ. ಅದರ ಜೊತೆಗೆ ಸುಖ ಶಾಂತಿಯೂ ಬೇಕಾಗಿದೆ. ಇದರಲ್ಲಿ ಅಭ್ಯುದಯ ಪಥದಲ್ಲಿ ಶ್ರೇಯಸ್ಸು ಯಾವುದರಿಂದ ಪ್ರಾಪ್ತವಾಗುವುದೋ ಅದನ್ನು ಆಚರಿಸಿಕೊಂಡು ಬರುವ ಗುರಿಯಿರಬೇಕು. ವರ್ಗ ವರ್ಣ ಭೇದಗಳಿಲ್ಲದೆ ಗಂಡು ಹೆಣ್ಣು ಎಂಬ ಪಕ್ಷಪಾತವಿಲ್ಲದೆ ಸಕಲರ ಉನ್ನತಿಯೇ ಧರ್ಮದ ಮೂಲ ಗುರಿಯಾಗಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಪೂರ್ವಜರು ಸಾರಿದ ನೀತಿ ಸಂಹಿತೆ, ಸೈದ್ಧಾಂತಿಕ ನಿಯಮಗಳು ಸಂಸ್ಕೃತಿ ಸಜ್ಜನಿಕೆಯ ಆದರ್ಶಗಳು ಜೀವನ ಶ್ರೇಯಸ್ಸಿಗೆ ಅಡಿಪಾಯಗಳಾಗಿವೆ. ಸತ್ಯ ಶುದ್ಧವಾದ ಧರ್ಮಾಚರಣೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡರೆ ಯಾವ ಭಯವು ಇರದು. ಪುಣ್ಯ ಕ್ಷೀಣಿಸಿ ಪಾಪ ಹೆಚ್ಚಾಗುತ್ತಿರುವುದರಿಂದ ಪ್ರಕೃತಿಯಲ್ಲಿ ಏರಿಳಿತಗಳನ್ನು ಕಾಣುತ್ತಿದ್ದೇವೆ. ಆತ್ಮ ಸಾಕ್ಷಿಗಾಗಿ ಒಳ್ಳೆ ದಾರಿಯಲ್ಲಿ ನಡೆಯುವ ಮನೋಪ್ರವೃತ್ತಿ ಬೆಳೆದು ಬರಬೇಕಾಗಿದೆ ಎಂದರು.
ವೇ.ದಾರುಕಾರಾಧ್ಯ ಶಾಸ್ತಿçಗಳು, ಗಂಗಾಧರಸ್ವಾಮಿ, ಚಿಗರಿಮಠ ಚನ್ನವೀರಯ್ಯ ಶಾಸ್ತಿç, ಕುಮಾರಸ್ವಾಮಿ ಹಿರೇಮಠ, ವಿಶ್ವನಾಥ ದೇವರು, ವರಪ್ರಸಾದ ದೇವರು, ವ್ಯವಸ್ಥಾಪಕ ಚಂದ್ರಶೇಖರ ಮೊದಲಾದವರು ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.

ವರದಿ:
ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles