ಧ್ರುವಾಂಶ ಸಂಭೂತ ಶ್ರೀ ಶ್ರೀಪಾದರಾಯರು

ಜೂನ್ 24 ರಂದು ಶ್ರೀಪಾದರಾಜರ ಉತ್ತರಾರಾಧನೆ. ಈ ಪ್ರಯುಕ್ತ ವಿಶೇಷ ಲೇಖನ.

*ಚಂದ್ರಿಕಾ ಗಿರೀಶ್
|| ನಮಃ  ಶ್ರೀಪಾದರಾಜಾಯ ನಮಸ್ತೇ ಶ್ರೀ ವ್ಯಾಸ ಯೋಗಿನೇ | ನಮಃ ಶ್ರೀ ಪುರಂದರಾರ್ಯಾಯ ಶ್ರೀ ವಿಜಯಾರ್ಯಾಯ ತೇ ನಮಃ ||

ಕರ್ನಾಟಕದಲ್ಲಿ 13ನೇ ಶತಮಾನದಲ್ಲಿ ಶ್ರೀಮದಾಚಾರ್ಯರು ಬಿತ್ತಿದ ವೈಷ್ಣವ ಭಕ್ತಿಯ ಬೀಜ ಚಿಗುರಿ ಹೆಮ್ಮರವಾಗಿದ್ದು  ಶ್ರೀಪಾದರಾಜರ ಕಾಲದಿಂದಲೇ. ಇಂದು ಕನ್ನಡ ಹರಿದಾಸ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳಲ್ಲಿ ಶ್ರೀಪಾದರಾಜರ ಕೊಡುಗೆ ಅತ್ಯಮೂಲ್ಯವಾದದ್ದು .

ಕ್ರಿ.ಶ. 1404 ರಲ್ಲಿ ಕರ್ನಾಟಕದ ಚನ್ನಪಟ್ಟಣ ತಾಲೂಕಿನ ಅಬ್ಬೂರಿನಲ್ಲಿ ಶೇಷಗಿರಿಯಪ್ಪ ಮತ್ತು ಗಿರಿಯಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಅವರ ಪೂರ್ವಾಶ್ರಮದ ಹೆಸರು ಲಕ್ಷ್ಮೀನಾರಾಯಣ ಎಂದು. ಒಮ್ಮೆ ಸ್ವರ್ಣವರ್ಣತೀರ್ಥ ಸ್ವಾಮಿಗಳು ಸಂಚಾರಮಾರ್ಗವಾಗಿ ಅಬ್ಬೂರಿನ ಸಮೀಪ ಬಂದಾಗ ದನಕರುಗಳನ್ನು ಮೇಯಿಸುತ್ತಿದ್ದ ಬಾಲಕರನ್ನು ಕಂಡು "ಊರಿಗೆ ಇನ್ನು ಎಷ್ಟು ದೂರವಿದೆ ?" ಎಂದು ಕೇಳಲು ಅವರಲ್ಲಿ ಒಬ್ಬ ಬಾಲಕನು ಮುಂದೆ ಬಂದು " ಇಗೋ ನಮ್ಮನ್ನು ನೋಡಿ , ದನಗಳನ್ನು ನೋಡಿ , ಸೂರ್ಯನನ್ನು ನೋಡಿ, ಎಷ್ಟು ದೂರವೋ ಗೊತ್ತಾಗುತ್ತದೆ" ಎಂದು ಚಮತ್ಕಾರವಾಗಿ ಉತ್ತರಿಸಿದ ಬಾಲಕನಲ್ಲಿ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಅವರ ಆಶ್ರಯದಲ್ಲಿ ಲಕ್ಷ್ಮಿ ನಾರಾಯಣರ ಬ್ರಹ್ಮೋಪನಯನ , ವಿದ್ಯಾಭ್ಯಾಸ ನಂತರದಲ್ಲಿ ಸನ್ಯಾಸ ದೀಕ್ಷೆಯನ್ನು ನೀಡಿ ಉನ್ನತ ವ್ಯಾಸಂಗಕ್ಕಾಗಿ ರಾಘವೇಂದ್ರ ಮಠದ ವಿಬುಧೇಂದ್ರ ತೀರ್ಥರಲ್ಲಿ ಕಳುಹಿಸಿಕೊಟ್ಟರು .

ವಿಬುಧೇಂದ್ರ ತೀರ್ಥರು ಮತ್ತು ಲಕ್ಷ್ಮಿ ನಾರಾಯಣರು ಇಬ್ಬರು ಸಂಚಾರ ಮಾಡುತ್ತ ದೇವದುರ್ಗ ತಾಲೂಕಿನ ಕೊಪ್ಪರ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಕ್ಷೇತ್ರಕ್ಕೆ ಬಂದಾಗ ಅದೇ ಸಮಯದಲ್ಲಿ ಶ್ರೀ ಉತ್ತರಾದಿ ಮಠದ ರಘುನಾಥ ತೀರ್ಥರು ಅಲ್ಲಿಗೆ ಬಂದಿದ್ದರು. ಶ್ರೀ ವಿಬುಧೇಂದ್ರರು ಶಿಷ್ಯನನ್ನು ಅವನ ವಿದ್ಯೆಯನ್ನು ಅವಲೋಕಿಸಿ ಆಶೀರ್ವಾದ ಮಾಡಬೇಕೆಂದಾಗ ಶ್ರೀ ಟೀಕಾಚಾರ್ಯರ ನ್ಯಾಯಸುಧೆ ಗ್ರಂಥದ ವಾಕ್ಯವನ್ನು ವಿಮರ್ಶೆ ಮಾಡಲು ಹೇಳಿದಾಗ, ಅದನ್ನು ಆಧರಿಸಿ ಇಡೀ ಗ್ರಂಥವನ್ನೇ ವಿಶ್ಲೇಷಿಸಿದ ಇವರ ವಿದ್ವತ್ತಿಗೆ ಬೆರಗಾಗಿ ಶ್ರೀ ರಘುನಾಥರು ಮೆಚ್ಚುಗೆಯಿಂದ "ನಾವು ಬರೀ ಶ್ರೀಪಾದಂಗಳವರು ತಾವು  ಶ್ರೀಪಾದರಾಜರು" ಎಂದು ಆಶೀರ್ವದಿಸಿದರು. ಅಂದಿನಿಂದ ಶ್ರೀ ಲಕ್ಷ್ಮಿ ನಾರಾಯಣತೀರ್ಥರು "ಶ್ರೀಪಾದರಾಜ"ರಾದರು.

ನಂತರದಲ್ಲಿ ಸ್ವರ್ಣವರ್ಣ ತೀರ್ಥರು ವೃಂದಾವನಸ್ಥರಾದರು. ನಂತರ ಶ್ರೀರಂಗದಲ್ಲಿ ಹಲವು ವರ್ಷಗಳು ನೆಲೆಸಿ ನಂತರದಲ್ಲಿ ಮುಳಬಾಗಿಲಿಗೆ ಬಂದು ಅಲ್ಲಿ ಮಠವನ್ನು ಸ್ಥಿರವಾಗಿ ಸ್ಥಾಪಿಸಿದರು. ಶ್ರೀಪಾದರಾಜರು ತಮ್ಮ ಅಪಾರ ಮಹಿಮೆ ವಿದ್ವತ್ತುಗಳಿಂದ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ರಂಗ ವಿಠ್ಠಲ ಅಂಕಿತದಿಂದ ನೂರಾರು  ಕೃತಿಗಳ ರಚನೆ ಮಾಡಿದರು. ಕರ್ನಾಟಕದಲ್ಲಿ ಧರ್ಮ ಜಾಗೃತಿಯನ್ನು ಉಂಟು ಮಾಡಿದರು. ತಮ್ಮ ಕೀರ್ತನೆಗಳನ್ನು ಸಂಗೀತಬದ್ಧವಾಗಿ ರಚನೆ ಮಾಡಿದರು. ರಾಗ, ತಾಳ, ಲಯಗಳಿಂದ ಶ್ರೀಪಾದರಾಜರ ಭಗವನ್ನಾಮ ಕೃತಿಗಳು ನಮ್ಮ ಕನ್ನಡ ಭಾಷೆಗೆ ಒಂದು ವಿಶೇಷ ಕೊಡುಗೆ. ಶ್ರೀ ಶ್ರೀಪಾದರಾಜರನ್ನು ಕನ್ನಡ ದಾಸ ಸಾಹಿತ್ಯದ ಉದಯ ಎಂದೇ ಹೇಳಲಾಗಿದೆ . ಸಾಮಾನ್ಯ ಜನರ ಹೃದಯವನ್ನು ನೇರವಾಗಿ ಮುಟ್ಟಲು ಮಾತೃ ಭಾಷೆಯೇ ಅತ್ಯುತ್ತಮ ಸಾಧನವೆಂದು ಅವರು ಕಂಡಿದ್ದರು. 
ಶ್ರೀ ಶ್ರೀಪಾದರಾಜ ಯತಿಗಳನ್ನು ನಾವು ಸ್ಮರಿಸಿಕೊಳ್ಳುವುದು ಈ ಪ್ರೀತಿ ಅಭಿಮಾನಗಳಿಂದ. ಕೀರ್ತನೆಗಳಲ್ಲದೆ ಶ್ರೀ ಶ್ರೀಪಾದರಾಜರು "ಗೋಪಿಗೀತೆ", "ವೇಣುಗೀತೆ", "ಭ್ರಮರಗೀತೆ", "ರುಕ್ಮಿಣಿ ಸತ್ಯಭಾಮ ವಿಲಾಸ", "ಮಧ್ವನಾಮ" ಎಂಬ ಕನ್ನಡ ಕಾವ್ಯಗಳನ್ನು ರಚಿಸಿದ್ದಾರೆ. "ಗೀತಗೋವಿಂದ"ದ ಶ್ಲೋಕಗಳನ್ನು ಸಂಗೀತ ರೂಪದಲ್ಲಿ ಕನ್ನಡದಲ್ಲಿ  ವೃತ್ತನಾಮಗಳಂತೆ ಬರೆದರು. ಹೀಗೆ ಹಲವು ಅಂಶಗಳಲ್ಲಿ ಅವರು ನಮ್ಮ ಕನ್ನಡ ನಾಡಿಗೆ ಪ್ರಾತಃಸ್ಮರಣೀಯರಾಗಿದ್ದಾರೆ. ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಬೇಕಾದರೆ ಸಂಗೀತ ಗಾನ ಇದರಿಂದ ಮಾತ್ರ ದೇವರು ಸುಲಭವಾಗಿ ಒಲಿಯಲು ಸಾಧ್ಯ ಎಂದು ಶ್ರೀ ಶ್ರೀಪಾದರಾಜರು ನಂಬಿದ್ದರು. 

 ಶ್ರೀಪಾದರಾಜರು ವೃಂದಾವನಸ್ಥರಾಗಿದ್ದು
ಶ್ರೀ ಶ್ರೀಪಾದರಾಜರು ತೊಂಬತ್ತೆಂಟು ವರ್ಷಗಳವರೆಗೆ ಜೀವಿಸಿದ್ದರು. ಅವರು ವೃಂದಾವನಸ್ಥರಾಗಿದ್ದು ಜ್ಯೇಷ್ಠ ಶುದ್ಧ ಚತುರ್ದಶಿಯ ದಿನ. ಅವರ ವೃಂದಾವನ ಮುಳಬಾಗಿಲಿನ ನರಸಿಂಹತೀರ್ಥದ ದಂಡೆಯಲ್ಲಿ ಇದೆ. ವರಧ್ರುವನ ಅಂಶದವರಾದ ಶ್ರೀಪಾದರಾಜರು ಎಲ್ಲರಿಗೂ ಮಂಗಲವನ್ನು ಉಂಟು ಮಾಡಲಿ. ಈ ಪುಣ್ಯ ದಿನದಲ್ಲಿ  ಶ್ರೀಪಾದರಾಜರನ್ನು ನೆನೆದು ಧನ್ಯರಾಗೋಣ. ಅವರ ಸ್ಮರಣೆ ನಮಗೆ ನಿರಂತರವಾಗಿರಲಿ .


Related Articles

ಪ್ರತಿಕ್ರಿಯೆ ನೀಡಿ

Latest Articles