ಕಾರ ಹುಣ್ಣಿಮೆಯಂದು ಉತ್ತರ ಕರ್ನಾಟಕದಲ್ಲಿ ಹೀಗೊಂದು ವಿಶಿಷ್ಟ ಆಚರಣೆ

*ವೈ.ಬಿ.ಕಡಕೋಳ

ಜೂನ್ 24 ರಂದು ಕಾರಹುಣ್ಣಿಮೆ. ಕೊರೊನಾದಿಂದಾಗಿ ಈ ಹಬ್ಬದ ಆಚರಣೆಯ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಆದರೂ ಪ್ರಕೃತಿಯನ್ನು ಪೂಜಿಸಿ ಉತ್ತಮ ಮಳೆ ಬೆಳೆಗೆ ಪ್ರಾರ್ಥಿಸುವ ಸಂಪ್ರದಾಯ ಉತ್ತರಕರ್ನಾಟಕದ ಮನೆಮನೆಗಳಲ್ಲಿ ನಡೆಯುತ್ತದೆ.

*ವೈ ಬಿ ಕಡಕೋಳ

“ಕಾರ ಹುಣ್ಣಿಮೆ ಕರಕೊಂಡು ಬಂತು. ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು” ಇದು ಉತ್ತರ ಕರ್ನಾಟಕದಲ್ಲಿ ಜನಪದರಾಡುವ ಮಾತು. ಇದರರ್ಥ ಕಾರಹುಣ್ಣಿಮೆಯೊಂದಿಗೆ ಹಬ್ಬಗಳು ಸಾಲು ಸಾಲು ಆರಂಭಗೊ0ಡರೆ, ಬೇಸಿಗೆ ಬಿಸಿಲನ್ನು ಆಹ್ವಾನಿಸುವ ಹೋಳಿ ಹಬ್ಬ ಕಾಮ ದಹನದೊಂದಿಗೆ ಮುಂದಿನ ಹಲವು ದಿನಗಳು ಹೇಳಿಕೊಳ್ಳುವ ಸಡಗರ ಸಂತಸದ ಹಬ್ಬ ತರುವುದಿಲ್ಲ. ಮತ್ತೆ ಮಳೆಗಾಲದ ಆರಂಭದ ಸೂಚನೆಯೊಂದಿಗೆ ಕಾರ ಹುಣ್ಣಿಮೆಯು ಸಡಗರಕ್ಕೆ ದಾರಿ ಮಾಡುತ್ತದೆ.

ಅತ್ಯಂತ ಪ್ರಾಚೀನ ಕಾಲದಿಂದಲೂ ಹಬ್ಬ- ಹರಿದಿನಗಳನ್ನು ಎಲ್ಲ ಜನಾಂಗದವರೂ ವಿವಿಧ ಬಗೆಯಲ್ಲಿ ಆಚರಿಸುತ್ತ ಬಂದಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಕೂಡ ಆಚರಣೆಗಳಲ್ಲಿ ನಡೆಯುತ್ತ ಬಂದಿದೆ. ಹಬ್ಬ ಹರಿದಿನಗಳು ಕೇವಲ ಕರ್ಮಕಾಂಡಕ್ಕೆ ಮಾತ್ರ ಸಂಬ0ಧಿಸಿದವುಗಳಲ್ಲ. ಅವು ಜ್ಞಾನಕಾಂಡಕ್ಕೂ ಸಂಬ0ಧಿಸಿವೆ. ಇವುಗಳ ಸಂಬ0ಧವೇ ಆಚಾರ-ವಿಚಾರ. ಪ್ರಕೃತಿ ಪುರುಷ ಸಂಬ0ಧ ಅದ್ಭುತವೂ; ಸೋಜಿಗವೂ ಆಗಿವೆ. ಈ ದಿಸೆಯಲ್ಲಿ ಕಾರ ಹುಣ್ಣಿಮೆ ಆಚರಣೆ ಉತ್ತರ ಕರ್ನಾಟಕದಲ್ಲಿ ವಿಶಿಷ್ಟವೂ ಮತ್ತು ವಿಶೇಷವೂ ಆಗಿದೆ.

ಭೂಮಿಯೆಲ್ಲ ಬಿರುಬೇಸಿಗೆಯಿಂದ ತತ್ತರಿಸಿದ ಸಂದರ್ಭ ಭೂಮಿ ಒಣಗಿ ಪೈರಿಲ್ಲದೇ ಬಿರುಕು ಬಿಟ್ಟಿರುವಾಗಲೇ ರೈತ ತನ್ನ ಒಕ್ಕಲನ್ನು ಮುಗಿಸಿ ಇನ್ನು ಮಳೆಯನ್ನು ದಿಟ್ಟಿಸುತ್ತ ಮನೆಯಲ್ಲಿ ಮಕ್ಕಳ ಮದುವೆ ಮುಂಜಿ ಎಲ್ಲ ಕಾರ‍್ಯಗಳನ್ನು ಬೇಸಿಗೆ ಕಾಲದಲ್ಲಿ ಪೂರೈಸಿ ಎತ್ತುಗಳಿಗೆ ಪೂಜಿಸಿ ಹೊಲ ಬಿತ್ತನೆಗೆ ಅನುವಾಗುವ ಕಾಲ ಬರುವುದು ಕಾರ ಹುಣ್ಣಿಮೆ. ಆಗಸದಲ್ಲಿ ಮುಂಗಾರು-ಹಿ0ಗಾರು ಮೋಡಗಳು ಕಪ್ಪಾಗಿ ಒಂದಕ್ಕೊ0ದು ಬಿಂಬಿಸುವ ಈ ಕಾಲ ಕಾರ್ಮೋಡಗಳು ಬರುವ ಸೂಚಕ ಕಾರ ಹುಣ್ಣಿಮೆ.


ಎರಡು ದಿನಗಳ ಹಬ್ಬ

ಇದು ಉತ್ತರ ಕರ್ನಾಟಕದಲ್ಲಿ ಎರಡು ದಿನಗಳ ಹಬ್ಬ. ಮೊದಲ ದಿನ ಹೊನ್ನುಗ್ಗಿ ಮರುದಿನ ಕಾರ ಹುಣ್ಣಿಮೆ. ಹೊನ್ನುಗ್ಗಿ ದಿನ ನಸುಕಿನಲ್ಲಿಯೇ ತಮ್ಮ ಜಾನುವಾರಗಳಿಗೆ ಅಂದರೆ ಎತ್ತುಗಳಿಗೆ ಬಿದಿರಿನ ಬಂಬುವಿನಲ್ಲಿ ಒಳ್ಳೆಣ್ಣೆ, ಅರಿಷಿನಪುಡಿ, ತತ್ತಿ, ಉಪ್ಪನ್ನು ಮಿಶ್ರಣ ಮಾಡಿ ಕುಡಿಸುತ್ತಾರೆ. ಇದನ್ನು ಗೊಟ್ಟ ಹಾಕುವುದು ಎಂದು ಕರೆಯುವರು. ಇದು ಔಷಧ ಎನ್ನುವರು. ಅಂದರೆ ಮಳೆಗಾಲಕ್ಕೆ ಎತ್ತುಗಳು ಕೃಷಿಗೆ ಸಜ್ಜಾಗಲು ದೈಹಿಕವಾಗಿ ಸಮರ್ಥವಾಗಲು ಯಾವ ರೋಗ ರುಜಿನಗಳು ಕಾಡಬಾರದು ಎಂದುಕೊ0ಡು ಗೊಟ್ಟ ಹಾಕುವ ಸಂಪ್ರದಾಯ. ಎತ್ತುಗಳ ಕೋಡುಗಳನ್ನು ಪಾಲಿಶ್ ಮಾಡಿ ಬಣ್ಣ ಸವರಿ,ಮೈ ಚೆನ್ನಾಗಿ ತೊಳೆದು, ಕೊರಳಲ್ಲಿ ಗೆಜ್ಜೆ ಪಟ್ಟಿ, ಕೋಡುಗಳಿಗೆ ರಿಬ್ಬನ್ ಕಟ್ಟಿ ಶೃಂಗರಿಸುವರು. ಆ ದಿನವಿಡೀ ಎತ್ತುಗಳಿಗೆ ಪೂರ್ಣ ವಿರಾಮ. ಅಷ್ಟೇ ಅಲ್ಲ ಬೆಳಗ್ಗೆ ಗೊಟ್ಟ ಹಾಕಿದ ಮೇಲೆ ಹಿಂಡಿ, ನುಚ್ಚು, ಹತ್ತಿಕಾಳನ್ನು ಚೆನ್ನಾಗಿ ಕಲಸಿ ಕೂಡಿಸಿ ತಿನ್ನಿಸುವರು. ನಂತರ ಹೊಟ್ಟು ಮೇವನ್ನು ಹಾಕುವರು.

ಆಚರಣೆ ಹೀಗೆ…
ಕಾರ ಹುಣ್ಣಿಮೆಯನ್ನು ಹೊನ್ನುಗ್ಗಿ ಎಂದೂ ಆಚರಿಸುವರು. ಆ ದಿನ ಮನೆಯಲ್ಲಿ ಚಕ್ಕುಲಿ, ಕೋಡುಬಳೆ, ಅಕ್ಕಿ ಹುಗ್ಗಿಯನ್ನು ಮಾಡಿ ಸಂಜೆ ಎತ್ತುಗಳನ್ನು ಮನೆಯಲ್ಲಿ ಕರಿ ಕಂಬಳಿ ಹಾಸಿ ಅದರ ಮೇಲೆ ಎತ್ತುಗಳ ಮುಂಗಾಲನ್ನು ಇರಿಸಿ ತಮ್ಮ ಮನೆಯಲ್ಲಿದ್ದ ಬಂಗಾರವನ್ನೋ ಅಥವ ಬಂಗಾರದ ವಸ್ತುವನ್ನೋ ಎತ್ತಿನ ಮುಂಗಾಲಿಗೆ ಮುಟ್ಟಿಸಿ ಮುಂಗಾಲು ಮತ್ತು ಹಿಂಗಾಲುಗಳನ್ನು ಪೂಜಿಸಿ ಕೋಡುಗಳಿಗೆ ಚಕ್ಕುಲಿ ಕೋಡು ಬಳಿ ಸರ ಮಾಡಿ ಕಟ್ಟಿ ಮಾಲೆ ಹಾಕಿ ಪೂಜಿಸುವರು. ವರ್ಷವಿಡೀ ಹೊನ್ನುಗ್ಗಿಯಂತೆ ಅಂದರೆ ಬಂಗಾರ ಮತ್ತು ಹುಗ್ಗಿ(ಅಕ್ಕಿ ಹುಗ್ಗಿ) ಫಸಲಿನ ರೂಪದಲ್ಲಿ ವ್ಯವಸಾಯದ ಬದುಕು ಹಸನಾಗಲಿ ಎಂದು ಪ್ರಾರ್ಥನೆ ಸಲ್ಲಿಸಿ ಎತ್ತಿಗೆ ಅನ್ನದ ಹುಗ್ಗಿ ತಿನ್ನಿಸುವರು.

ಕಾರ ಹುಣ್ಣಿಮೆಯ ಸಡಗರ
ಕಾರ ಹುಣ್ಣಿಮೆಯ ಸಡಗರವಂತೂ ಹೇಳ ತೀರದ್ದು. ಏಕೆಂದರೆ ಕರಿ ಹರಿಯುವ ಸಂಪ್ರದಾಯ ಅನೇಕ ಕಡೆ ಹಳ್ಳಿಗಳಲ್ಲಿ ಇಂದಿಗೂ ಉಳಿದು ಬಂದಿದೆ. ತಮ್ಮ ಎತ್ತುಗಳನ್ನು ಶೃಂಗರಿಸಿ ಊರ ಅಗಸಿ ಬಾಗಿಲಿಗೆ ಸಣ್ಣ ಸಣ್ಣ ಕೊಬ್ಬರಿ ಬಟ್ಟಲುಗಳ ಸರ ಮಾಡಿ ಎತ್ತುಗಳಿಗೆ ತಲುಪುವ ರೀತಿ ಕಟ್ಟಿರುತ್ತಾರೆ. ಊರಲ್ಲಿ ಎತ್ತುಗಳನ್ನು ಸಡಗರದಿಂದ ಮೆರವಣಿಗೆ ಮಾಡಿಕೊಂಡು ಬಂದು ಕರಿ ಎತ್ತು ಮತ್ತು ಬಿಳಿ ಎತ್ತುಗಳನ್ನು ಊರಲ್ಲಿರುವ ದೇವಾಲಯದ ಮುಂದೆ ನಿಲ್ಲಿಸಿ ಒಂದೇ ಬಾರಿಗೆ ಅವುಗಳನ್ನು ಬೆದರಿಸಿ ಬಾಲ ತಿರುವಿ ಕರಿ ಹರಿಯಲು ಓಡಿಸುತ್ತಾರೆ ಬಾಲ ತಿರುವಿದ ರಭಸಕ್ಕೆ ಓಟ ಕೀಳುವ ಎರಡೂ ಎತ್ತುಗಳು ಅಗಸಿ ಬಾಗಿಲಿಗೆ ತಲುಪಿ ಅಲ್ಲಿ ಕಟ್ಟಿದ್ದ ಕೊಬ್ಬರಿ ಬಟ್ಟಲು ಹರಿದುಕೊಂಡು ಹೋಗುತ್ತವೆ. ಇದರಲ್ಲಿ ಯಾವ ಎತ್ತು ಮೊದಲು ತಲುಪಿ ಕರಿ ಹರಿಯುವುದೋ ಅದರ ಆಧಾರದ ಮೇಲೆ ಆ ವರ್ಷದ ಮಳೆ-ಬೆಳೆ ನಿರ್ಧರಿಸುವುದು ವಾಡಿಕೆ. ಕರಿ ಎತ್ತು ಬಿಳಿ ಎತ್ತಿಗಿಂತ ಮುಂದೆ ಹೋದರೆ ಆ ವರ್ಷದ ಮುಂಗಾರು ಉತ್ತಮ ಎಂತಲೂ ಬಿಳಿ ಎತ್ತು ಮುಂದೆ ಸಾಗಿದರೆ ಹಿಂಗಾರು ಉತ್ತಮ ಎಂತಲೂ ರೈತರು ನಿರ್ಧರಿಸುವರು.

ಈ ಕಾರ‍್ಯ ಹೆಚ್ಚಿನ ಸ್ಥಳಗಳಲ್ಲಿ ಸಂಜೆಯ ಸಂದರ್ಭ ಜರುಗುತ್ತದೆ. ಎಲ್ಲ ರೈತರು ಕೂಡ ತಮ್ಮ ತಮ್ಮ ಎತ್ತುಗಳನ್ನು ಸಡಗರದಿಂದ ಕರೆತಂದು ಮೊದಲು ನಿರ್ಧರಿಸಿದ ಜೋಡಿ ಎತ್ತುಗಳು ಕರಿ ಹರಿದ ನಂತರ ತಾವು ಕೂಡ ತಮ್ಮ ತಮ್ಮ ಎತ್ತುಗಳನ್ನು ಬೆದರಿಸಿ ಓಡಿಸಿ ಯಾವ ಎತ್ತು ಮುಂದೆ ಹೋಗುತ್ತದೆ ಎಂದು ಅದರ ಹಿಂದೆ ಓಡುತ್ತ ಸಂತಸ ಪಟ್ಟು ಈ ಹುಣ್ಣಿಮೆ ಆಚರಿಸುವುದು ನಿಜಕ್ಕೂ ರೈತರ ಮುಖದಲ್ಲಿ ಮಂದಹಾಸ ಈ ಹಬ್ಬದಲ್ಲಿ ಮೂಡಿ ಬರುವುದು ವಿಶಿಷ್ಟವಾಗಿದೆ. ಕಾರ ಹುಣ್ಣಿಮೆ ಮಳೆ-ಬೆಳೆಗಳ ಮುಂಭವಿಷ್ಯವನ್ನು ಕಂಡುಕೊಳ್ಳುವ ಹಬ್ಬವಾಗಿದೆ.
ಈ ಹುಣ್ಣಿಮೆ ಕುರಿತಂತೆ ಕೆಲವು ಆಚರಣೆಗಳು ಉತ್ತರ ಕರ್ನಾಟಕದಲ್ಲಿವೆ. “ಕಾರ ಹುಣ್ಣಿಮೆಯಾದ ಮೇಲೆ ಕತ್ತೇನೂ ಬಾಸಿಂಗ ಕಟ್ಟೋಲ್ಲ” ಎಂಬ ಮಾತಿದೆ. ಅಂದರೆ ಡಿಸೆಂಬರ್ ತುಳಸಿ ವಿವಾಹ ಬರೋವರೆಗೂ ವಿವಾಹಗಳು ಜರುಗವು ಎಂಬುದು. ಹೊಸದಾಗಿ ಮದುವೆಯಾದ ಮದುಮಕ್ಕಳು ಈ ಕರಿ ಹರಿಯುವ ಪ್ರಕ್ರಿಯೆಯನ್ನು ನೋಡುವಂತಿಲ್ಲ. ಹಾಗೂ ಆ ಮನೆಯ ಎತ್ತುಗಳನ್ನು ಆ ವರ್ಷ ಕರಿ ಹರಿಯಲು ಬಿಡುವುದಿಲ್ಲ. ಇದು ಗಂಡಿನ ಮನೆಯವರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಗೊಟ್ಟ ಹಾಕುವ ಮೂಲಕ ಹೊನ್ನುಗ್ಗಿ ಆಚರಿಸಿ ಎತ್ತುಗಳಿಗೆ ವಿಶ್ರಾಂತಿ ನೀಡುವುದನ್ನು ಮಾತ್ರ ಅನುಸರಿಸುತ್ತಾರೆ. ಇಂಥ ಮನೆಗಳಿಗೆ ಮಗಳನ್ನು ಕೊಟ್ಟ ಮನೆತನದವರು ಆ ದಿನ ಮಾಡಿದ ಸಿಹಿ ಅಡುಗೆಯನ್ನು ತಂದು ಬೀಗರ ಜೊತೆ ಊಟ ಮಾಡುವುದು ಕೊಡು ಕೊಳ್ಳುವಿಕೆಯ ಸಂಪ್ರದಾಯವನ್ನು ತೋರಿಸುತ್ತದೆ.
ಮಳೆರಾಯನ ಕೃಪೆಯಿಲ್ಲದಿದ್ದರೆ ಭೂಲೋಕವೇ ಉಳಿಯುತ್ತಿರಲಿಲ್ಲ. ಮಳೆಯಿಂದಲೇ ಬೆಳೆ, ಬೆಳೆಯಿಂದಲೇ ಇಳೆ. ಪ್ರಕೃತಿಯು ಎಲ್ಲರ ಆರಾಧ್ಯ ದೈವ. ಈ ದಿಸೆಯಲ್ಲಿ ಕಾರಹುಣ್ಣಿಮೆ ವಿಶಿಷ್ಟ. ದೈವವನ್ನು ನಿಷ್ಕಾಮ ಹೃದಯದ ಮೂಲಕ ನಿವೇದಿಸಿಕೊಳ್ಳುವ ಪ್ರಾಣಿ-ಪಕ್ಷಿಗಳನ್ನು ಪೋಷಿಸುವ ಆರಾಧಿಸುವ ಕರ್ಮ ಮತ್ತು ಪೂಜೆ ಕಾರ ಹುಣ್ಣಿಮೆಯ ಪ್ರತೀಕ.

Related Articles

ಪ್ರತಿಕ್ರಿಯೆ ನೀಡಿ

Latest Articles