ಮುತ್ತೈದೆ ಎಂದರೆ ಯಾರು?

ಸ್ತ್ರೀ ಎಂದರೆ ಅತ್ಯಂತ ತ್ಯಾಗಮಯಿ. ಅವಳು ಅನೇಕ ಜವಾಬ್ದಾರಿಗಳನ್ನು ಹೊತ್ತು ಈ ಧರೆಗೆ ಬಂದಿರುತ್ತಾಳೆ. (ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಕ್ಕನಾಗಿ, ಹಿಂದಿನ ಐದನೆಯ ತಲೆಯಾಗಿದ್ದ ಹಿರಿಯಳಾಗಿ ಇತ್ಯಾದಿ.. )

ಅವಳು ಯಾವ ಪೂಜೆ – ಪುನಸ್ಕಾರ ಇಲ್ಲದೆಯೂ ಭವವನ್ನು ದಾಟಿಬಿಡಬಹುದು. ಆದರೆ ತನ್ನ ಸಂಸಾರವನ್ನುಳಿದು ಬೇರೆ ಯಾವ ವಿಚಾರಕ್ಕೂ ಹೋಗಕೂಡದು. ಗಂಡ ಮಾಡಿದ ಪ್ರತೀ ಪುಣ್ಯದ ಕೆಲಸದಲ್ಲಿ ಅರ್ಧ ಪುಣ್ಯದ ಭಾಗ ಹೆಂಡತಿಗೆ ಸೇರುತ್ತದೆ. ಆದರೆ ಅವಳ ಪುಣ್ಯದಲ್ಲಿ ಅರ್ಧ ಗಂಡನಿಗೆ ಸೇರುವ ಬದಲು ಅವಳು ಮಾಡಿದ ಪಾಪಕರ್ಮದಲ್ಲಿ ಅದರ ಅರ್ಧಭಾಗ ಗಂಡನಿಗೆ ಸೇರುತ್ತದೆ ಎಂದು ಹೇಳುವರು.

ಒಮ್ಮೆ ಗುರುಬಂಧುವೊಬ್ಬರ ಮಗನ ಮದುವೆ ನಿಶ್ಚಿತಾರ್ಥದ ಪ್ರಯುಕ್ತ ಮುತ್ತೈದೆಯರಿಗೆ ಪೂಜೆ ಇಟ್ಟುಕೊಂಡಿದ್ದೇವೆ ಎನ್ನಲು, ಗುರುಗಳು ಅಲ್ಲಿದ್ದ ಸ್ತ್ರೀಯರನ್ನೆಲ್ಲ ಅರಿಸಿನ ಕುಂಕುಮವಿತ್ತು ಅಮಂತ್ರಿಸಲು ತಿಳಿಸಿದರು.

ಅದರಂತೆ ಮಾಡುತ್ತಿರುವಾಗ ಅಲ್ಲಿದ್ದ ಗುರುಬಂಧುಗಳನ್ನು ಗುರುಗಳು “ಮುತ್ತೈದೆ ಎಂದರೆ ಯಾರು?” ಎಂದು ಪ್ರಶ್ನಿಸಿದರು. ಆಗ ಅವರುಗಳು ‘ಕುಂಕುಮ ಇಟ್ಟವರು, ಕಾಲುಂಗುರ ಹಾಕಿದವರು’ ಮುಂತಾಗಿ ಹೇಳಿದಾಗ, ಗುರುಗಳು, “ಕೇವಲ ಕುಂಕುಮ ಇಟ್ಟವರು, ಕಾಲುಂಗುರ ಹಾಕಿದವರು ಮಾತ್ರವಲ್ಲ, ನಯ, ವಿನಯ, ಅನುಕಂಪ, ತ್ಯಾಗ, ಲಜ್ಜೆ ಇವೇ ಐದು ಮುತ್ತುಗಳು. ಆ ಗುಣವನ್ನು ಹೊಂದಿದಾಕೆ ಮುತ್ತೈದೆ. ಅಂಥವರ ಗರ್ಭದಲ್ಲಿ ಹಿರಣ್ಯಗರ್ಭ ಪ್ರಾಪ್ತವಾಗುತ್ತದೆ. ಹೆಣ್ಣು ಚಂಚಲೆ. ಅವಳ ಚಂಚಲತೆಯನ್ನು ಕಡಿಮೆ ಮಾಡಲು ಋಷಿ- ಮುನಿಗಳು ತಿಲಕದಿಂದ (ಕುಂಕುಮ ಇಟ್ಟು) ಅಗ್ನಿಬಂಧನ, ಮೂಗುತಿ ಹಾಕಿ ವಾಯುಬಂಧನ, ಕಿವಿ ಚುಚ್ಚಿ ಜಲ ತತ್ವದ ಬಂಧನ, ತಲೆಯಲ್ಲಿ ಬೈತಲೆ ತೆಗೆದು ಬಾಚಿ ಆಕಾಶ ತತ್ವ ಬಂಧನ, ಕಾಲುಂಗುರ ಅಥವಾ ಅರಸಿನ ಹಚ್ಚಿ ಭೂಬಂಧನದಿಂದ ಆಗುವ ಚಂಚಲ ಮನೋಭಾವವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ. ಕೇವಲ ಕುಂಕುಮ ಇಟ್ಟವರು, ಕಾಲುಂಗುರ ಹಾಕಿದವರು ಮಾತ್ರ ಮುತ್ತೈದೆಯೆಂದಲ್ಲ ಎಂದು ವಿವರಿಸಿದರು.

‘ಸ್ತ್ರೀ’ ಎಂದರೆ ಭೂಮಿ. ಭೂಮಿಯಂತಹ ತ್ಯಾಗ , ಸಮಾಧಾನವನ್ನು ಸ್ತ್ರೀಯರು ಗಳಿಸಿಕೊಳ್ಳಬೇಕು. ನಯ, ವಿನಯ, ಅನುಕಂಪ, ತ್ಯಾಗ, ಲಜ್ಜೆ ಇವೇ ಐದು ಮುತ್ತುಗಳು.. ಇವನ್ನು ಹೊಂದಿದಾಕೆ ಮುತೈದೆ.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು ಶ್ರೀ ಚನ್ನರಾಯಸ್ವಾಮಿ ದೇವಸ್ಥಾನ, ಹುಸ್ಕೂರು

Related Articles

ಪ್ರತಿಕ್ರಿಯೆ ನೀಡಿ

Latest Articles