*ಶ್ರೀನಿವಾಸ ಮೂರ್ತಿ ಎನ್ ಎಸ್
ಶ್ರಾವಣ ಮಾಸ ಬಂದಿತೆಂದರೆ ಹಬ್ಬಗಳ ಸರಮಾಲೆ. ವಿವಿಧ ದೇವರುಗಳ ಆರಾಧನೆ ಈ ಮಾಸದಲ್ಲಿ ನೋಡಬಹುದು. ಅವುಗಳಲ್ಲಿ ಪ್ರಮುಖವಾದದ್ದು ನಾಗರ ಪಂಚಮಿ ಹಬ್ಬವೂ ಒಂದು. ನಾಗ ದೇವತೆಯಾಗಿ ನಮ್ಮಲ್ಲಿ ಆರಾಧಿಸಿಲಾಗುತ್ತಿದ್ದು ವಿಷ್ಣು ಹಾಗು ಶಿವ ಇಬ್ಬರಲ್ಲೂ ನಾಗನ ಅಸ್ತಿತ್ವ ನೋಡಬಹುದು.
ನಾಡಿನಲ್ಲಿ ವಿವಿಧ ದೇವರ ಆರಾಧನೆ ಹಾಸು ಹೊಕ್ಕಿದಂತೆ ನಾಗ ದೇವರನ್ನು ಆರಾಧಿಸುವ ಪದ್ದತಿ ಇದೆ. ಸರ್ಪ ದೋಷಗಳಿಗೆ ಹಾಗು ಸಂತಾನಕ್ಕಾಗಿ ಪ್ರಾರ್ಥಿಸಲು ನಾಗ ದೇವತೆಯನ್ನ ಆರಾಧಿಸುವ ಪದ್ದತಿ ಮೊದಲನಿಂದಲೂ ನಮ್ಮಲ್ಲಿ ಬಂದಿದೆ. ನಾಡಿನಲ್ಲಿ ನಾಗ ದೇವತೆಯನ್ನು ಆರಾಧಿಸುವ ಹಲವು ದೇವಾಲಯಗಳಿದ್ದು ಅವುಗಳಲ್ಲಿ ಮೂರು ದೇವಾಲಯಗಳಲ್ಲಿ ಪ್ರಮುಖವಾದದ್ದು. ರಾಜ್ಯದಲ್ಲಿನ ಮೂರು ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ನಾಗಲಮಡಿಕೆ ಸುಬ್ರಹ್ಮಣ್ಯ ಕ್ಷೇತ್ರವೂ ಒಂದು.
ನಾಗಲಮಡಿಕೆ ಸುಬ್ರಹ್ಮಣ್ಯ ಕ್ಷೇತ್ರ : (ಅಂತ್ಯ ಸುಭ್ರಹ್ಮಣ್ಯ)
ಅಂತ್ಯ ಸುಬ್ರಹ್ಮಣ್ಯ ಕ್ಷೇತ್ರವೆಂದೆ ಖ್ಯಾತಿ ಪಡೆದ ಈ ದೇವಾಲಯ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿದೆ. ಸ್ಥಳ ಪುರಾಣದಂತೆ ಇಲ್ಲಿ ಶ್ರೀ ಅನ್ನಂಬಟ್ಟರಿಗೆ ಸ್ವಾಮಿಯು ಕನಸಿನಲ್ಲಿ ಬಂದು ನಾನು ಉತ್ತರ ಪಿನಾಕಿನಿ ನದಿಯ ದಂಡೆಯಲ್ಲಿ ನೆಲೆಸಿದ್ದು ಪ್ರತಿಷ್ಠಾಪಿಸಲು ಕೇಳಿದಾಗ ಆ ಸಲಹೆಯಂತೆ ಇಲ್ಲಿನ ಉತ್ತರ ಪಿನಾಕಿನಿ ನದಿಯಲ್ಲ್ಲಿ ನೇಗಿಲುಗಳಿಂದ ಉಳುಮೆ ಮಾಡುವಾಗ ಮೂಲ ವಿಗ್ರಹ ಸಿಗುತ್ತದೆ. ತೆಲುಗಿನ ಪ್ರಾಭಲ್ಯ ಇರುವ ಇಲ್ಲಿ ನಾಗಲು (ಸರ್ಪ) ಹಾಗು ಮಡಕ (ನೇಗಿಲು) ಎಂಬ ಅರ್ಥಕಲ್ಪನೆ ಹಿನ್ನೆಲೆಯಲ್ಲಿ ಊರಿಗೆ ನಾಗಲಮಡಿಕೆ ಎಂಬ ಹೆಸರು ಬಂದಿದೆ.
ಗರ್ಭಗುಡಿಯಲ್ಲಿ ಸಿಕ್ಕ ಮೂಲ ವಿಗ್ರಹ ಏಳು ಹೆಡೆಗಳನ್ನು ಹೊಂದಿದ್ದು ಮೂರು ಸುತ್ತ ಕುಳಿತಿರುವಂತೆ ಇರುವ ಶಿಲಾ ವಿಗ್ರಹ. ನಂತರ ಇಲ್ಲಿನ ಸುತ್ತಲಿನ ವರ್ತಕರಿಂದ ಈ ದೇವಾಲಯ ನವೀಕರಣಗೊಂಡಿದೆ. ಈ ದೇವಾಲಯದ ನಿರ್ಮಾಣದಲ್ಲಿ ರೊದ್ದಂನ ವರ್ತಕ ಬಾಲ ಸುಬ್ಬಯ್ಯ ಎಂಬುವರು ಪ್ರಮುಖರಾಗಿದ್ದಾರೆ. ತನ್ನ ವ್ಯಾಪಾರ ಅಭಿವೃದ್ಧಿಗೆ ಇಲ್ಲಿ ದೇವಾಲಯದ ನಿರ್ಮಾಣವನ್ನು ಮಾಡುತ್ತಾರೆ. ಈ ದೇವಾಲಯದಲ್ಲಿ ಸುಬ್ರಹಣ್ಯನ ಜೊತೆಯಲ್ಲಿ ಶಿವ ಮತ್ತು ಆಂಜನೇಯ ದೇವರಿಗೂ ಪೂಜೆ ಇದೆ. ಇಲ್ಲಿನ ಸಮೀಪದ ಚೆಕ್ ಡ್ಯಾಮ್ ಬಳಿಯೂ ಶಿವ ದೇವಾಲಯವಿದೆ.
ಇಲ್ಲಿ ನಿತ್ಯ ಬೆಳಗ್ಗೆ 8 ರಿಂದ 1 ಘಂಟೆಯವರೆಗೆ ಹಾಗು ಸಂಜೆ 4 ರಿಂದ 7 ವರೆಗೆ ಪೂಜೆ ಇರುತ್ತದೆ. ಇಲ್ಲಿ ಪುಷ್ಯ ಶುಕ್ಲ ಷಷ್ಠಿಯಂದು ಬ್ರಹ್ಮ ರಥೋತ್ಸವ ನಡೆಯಲಿದ್ದು ಸಹ ಸರ್ಪ ಸಂಸ್ಕಾರ ಹಾಗು ನಾಗ ಪ್ರತಿಷ್ಠೆಯಂತಹ ಕಾರ್ಯಗಳು ನಡೆಯುತ್ತವೆ. ಇಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ಪಂಚಲೋಹದ ನಾಗಾಭರಣಗಳನ್ನು ಉತ್ಸವದಲ್ಲಿ ಬಳಸುವುದು ವಿಶೇಷ. ನಾಗ ದೋಷಕ್ಕೆ ಇಲ್ಲಿ ನಾಗರ ಕಲ್ಲನ್ನು ನೆಡುವ ಪದ್ದತಿಯನ್ನೂ ನೋಡಬಹುದು.
ಈ ದೇವಾಲಯ ತಲುಪಲು ಪಾವಗಡದಿಂದ ಸುಮಾರು 17 ಕಿಮೀ ದೂರದಲ್ಲಿ ತಿರುಮಣಿ ದಾರಿಯಲ್ಲಿ ಸಾಗಬೇಕು. ಸಾರ್ವಜನಿಕ ವಾಹನಗಳು ಇದ್ದರೂ ಸ್ವಂತ ವಾಹನವಿದ್ದರೆ ಒಳಿತು.