*ಶ್ರೀನಿವಾಸ ಮೂರ್ತಿ ಎನ್ ಎಸ್
ನಾಡಿನಲ್ಲಿ ಆಚರಿಸುವ ಹಲವು ವ್ರತಗಳಲ್ಲಿ ಅನಂತ ಪದ್ಮನಾಭ ದೇವಾಲಯಗಳೂ ಒಂದು. ಭಾದ್ರಪದ ಮಾಸದ ಶುಕ್ಲಪಕ್ಷದಂದು ಆಚರಿಸುವ ಈ ವ್ರತ ಹಲವೆಡೆ ತುಂಬಾ ಶ್ರದ್ಧಾ ಭಕ್ತಿಯಿಂದ ಆಚರಿಸಿಲಾಗುತ್ತದೆ. ನಾಡಿನಲ್ಲಿ ಹಲವು ಅನಂತ ಪದ್ಮನಾಭ ದೇವಾಲಯಳು ಕಾಣ ಸಿಗುತ್ತವೆ. ಅಂತಹ ದೇವಾಲಯಗಳಲ್ಲಿ ಆಯ್ದ ದೇವಾಲಯಗಳ ಪರಿಚಯ ಇಲ್ಲಿದೆ.
ಕುಡುಪು ಅನಂತ ಪದ್ಮನಾಭ ದೇವಾಲಯ
ಇಲ್ಲಿನ ದೇವಾಲಯವನ್ನು ರಾಜ ಶ್ರತಸೇನನಿಂದ ನಿರ್ಮಿಸಿಲಾಗಿದೆ ಎಂಬ ನಂಬಿಕೆ ಇದೆ.
ಪಶ್ಚಿಮಾಭಿಮುಖವಾಗಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಅನಂತ ಪದ್ಮಾನಭನ ಮೂರ್ತಿ ಇದೆ.
ಇಲ್ಲಿ ಪಕ್ಕದಲ್ಲಿಯೇ ನಾಗಬನವಿದ್ದು, ಸುಮಾರು 300 ಕ್ಕೂ ಅಧಿಕ ನಾಗರಕಲ್ಲುಗಳು ಇವೆ. ಈ
ದೇವಾಲಯದ ಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿ ಇದ್ದು ಪಕ್ಕದಲ್ಲಿ ಜಯ ವಿಜಯರ ಶಿಲ್ಪಗಳಿವೆ.
ದೇವಾಲಯದ ಎಡ ಭಾಗದಲ್ಲಿ ಸರಸ್ವತಿ ತೀರ್ಥ ಎಂಬ ಪವಿತ್ರ ಕಲ್ಯಾಣಿ ಇದೆ. ಈ ದೇವಾಲಯದ
ಗರ್ಭಗುಡಿಯನ್ನ ಹೊರತು ಪಡಿಸಿ ಸಂಪೂರ್ಣ ನವೀಕರಣಗೊಂಡಿದೆ.
ಸ್ಥಳೀಯ ಪುರಾಣದಂತೆ ಒಮ್ಮೆ ಕೇದಾರನೆಂಬ ಬ್ರಾಹ್ಮಣ ತನಗೆ ಸಂತಾನ ಭಾಗ್ಯದ ಇಲ್ಲಿನ ಸರಸ್ವತಿ
ತೀರ್ಥಕ್ಕೆ ಬಂದ. ಆಗ ಅಲ್ಲಿದ್ದ ಶೃಂಗ ಮುನಿಯ ಸಲಹಯಂತೆ ಸುಬ್ರಹಣ್ಯನ ಕುರಿತು ತಪಸ್ಸು
ಮಾಡತೊಡಗಿದ. ಅವನ ತಪಸ್ಸಿನ ತಾಪಕ್ಕೆ ದೇವರುಗಳು ಸುಬ್ರಹಣ್ಯನ ಬಳಿ ಬರಲು ಅವನು ಕೇದಾರನಿಗೆ
ದರ್ಶನ ನೀಡಿ ಅಲ್ಲಿಯೇ ಅಂತರ್ಧಾನನಾಗುತ್ತಾನೆ. ಆದರೆ ಅವರ ಆಶಿರ್ವಾದದಿಂದ ಮೂರು ಸರ್ಪದ
ಅಂಡಗಳು ಜನಿಸಿದಾಗ ಕೇದಾರ ದುಃಖತಪ್ತನಾಗುತಾನೆ. ಆಗ ಅಶರೀರವಾಣಿಯು ಈ ಉರಗಾಂಡಗಳು
ಮಹಾಶೇಷ, ಮಹಾವಿಷ್ಣು ಮತ್ತು ಸುಬ್ರಹ್ಮಣ್ಯ ಸ್ವರೂಪಿಗಳು. ಲೋಕನುಗ್ರಹಕ್ಕಾಗಿ ಮತ್ತು ನಿನ್ನ
ಒಳಿತಿಗಾಗಿ ಈ ತ್ರಿಮೂರ್ತಿಗಳು ನಿನ್ನ ಧರ್ಮಪತ್ನಿಯ ಗರ್ಭದಲ್ಲಿ ಜನಿಸಿದವರು. ಈ ಸಂತತಿಯ ಹೊರತು
ನಿನಗೆ ಬೇರೆ ಸಂತತಿಯಾಗಲಾರರು. ಕಾರಣ ನೀನು ಮೋಕ್ಷವನ್ನು ಪಡೆಯತಕ್ಕವನು. ಭದ್ರಾ ಸರಸ್ವತೀ
ತೀರದಲ್ಲಿ ಈ ಅಂಡಗಳನ್ನು ಪ್ರತಿಷ್ಠೆ ಮಾಡು. ನಾನು ಮಹಾಶೇಷವಾಗಿ ಬಂದು ಅಲ್ಲಿ ನೆಲೆಸುವೆನು. ನೀನು ಶ್ರೀ ಪದ್ಮನಾಭ ಸ್ವಾಮಿಯನ್ನು ಪೂಜಿಸುತ್ತಾ ಬಂದಲ್ಲಿ ಕೊನೆಗೆ ನಿನಗೆ ಮೋಕ್ಷವು ದೊರೆಯುತ್ತದೆ. ಮುಂದೆ ಈ ಕ್ಷೇತ್ರವು ಅನಂತಪದ್ಮನಾಭ ಕ್ಷೇತ್ರವೆಂದು ಪ್ರಖ್ಯಾತವಾಗುವುದು. ಇದನ್ನ ಕೇಳಿದ ಕೇದಾರ ಮೂರು ಉರಗಾಂಡಗಳನ್ನು ಕಾಡು ಬಳ್ಳಿಗಳಿಂದ ಹೆಣೆದು ಮಾಡಿದ ಬುಟ್ಟಿಯಲ್ಲಿ (ಕುಡುಪು)
ಜೋಪಾನವಾಗಿಟ್ಟುಕೊಂಡು ಹೋಗಿ ಪ್ರತಿಷ್ಠೆ ಮಾಡಿದನು. ಈ ಕ್ಷೇತ್ರ ಕುಡುಪು ಕ್ಷೇತ್ರವೆಂದು ಪ್ರಸಿದ್ಧವಾಗಿದೆ.
ತಲುಪುವ ಬಗ್ಗೆ: ಈ ದೇವಾಲಯ ಮಂಗಳೂರಿನಿಂದ ಮೂಡಬಿದರೆ ಮಾರ್ಗದಲ್ಲಿ ಸುಮಾರು 8 ಕಿ ಮೀ
ದೂರದಲ್ಲಿದೆ.
ಪೆರ್ಡೂರು ಅನಂತ ಪದ್ಮನಾಭ ದೇವಾಲಯ
ಮೂಲತಹ ಈ ದೇವಾಲಯ ಸುಮಾರು 12 ನೇ ಶತಮಾನಕ್ಕೆ ಸೇರಿರಬಹುದು ಎಂಬ ನಂಬಿಕೆ ಇದೆ. ಇಲ್ಲಿಬಾರಕೂರಿನಲ್ಲಿ ರಾಜಾಧಾನಿಯನ್ನಾಗಿ ಮಾಡಿಕೊಂಡಿದ್ದ ಅಳುಪರು ಈ ದೇವಾಲಯವನ್ನು ನಿರ್ಮಿಸಿದರು ಎಂಬ ಊಹೆ ಇದೆ. ಇನ್ನು ಇಲ್ಲಿನ ಸ್ಥಳೀಯ ಪುರಾಣದಂತೆ ‘ಕೋಟಿಕುಂಜ’ವನ್ನು ಆಳುತ್ತಿದ್ದ ರಾಜ ಶಂಕರನು ತನ್ನ ಆಶ್ರಿತನಾದ ಮುನ್ನೂರು ಗ್ರಾಮದ ಕೃಷ್ಣಶರ್ಮನೆಂಬ ಬ್ರಾಹ್ಮಣೋತ್ತಮನು ಕಾಡಿನ ಮಧ್ಯದಲ್ಲಿ ಫಾಲ್ಗುಣ ಮಾಸ ಶುಕ್ಲಪಕ್ಷ ಪ್ರತಿಷ್ಠಾಪಿಸಿದ ಅನಂತಪದ್ಮನಾಭ ಸ್ವಾಮಿಗೆ ಸುಂದರವಾದ ಆಲಯ, ಪ್ರಾಕಾರ, ಕೆರೆ, ಕಟ್ಟಡಗಳನ್ನು ಕಟ್ಟಿಸಿದ್ದಲ್ಲದೆ ಹಲವ ದತ್ತಿ ನೀಡಿದ ಉಲ್ಲೇಖವಿದೆ. ಗೆಜೆಟಿಯರ್ ಪ್ರಕಾರ ಸುಮಾರು 1419 ರಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆ ಮಾಡಿದರೆಂದೂ,ಬಳಿಕ ಬಾರಕೂರು ರಾಜ ವಿಜಯಪ್ಪ ಒಡೆಯರು ದತ್ತಿ ನೀಡಿದ ಉಲ್ಲೇಖವಿದೆ. ಗರ್ಭಗುಡಿಯಲ್ಲಿ ಸುಮಾರು 3 ಅಡಿ ಎತ್ತರದ ಮೂತಿ ಇದ್ದು ಚಕ್ರ, ಶಂಖ, ಗದಾ ಮತ್ತು ಪದ್ಮಧಾರಿಯಾಗಿದ್ದು ಇದು ಮೂಲತಹ ವಿಷ್ಣುವಿನ ಜನರ್ಧಾನ ಸ್ವರೂಪ. ಇಲ್ಲಿನ 1458 ರ ಶಾಸನದಲ್ಲಿ ಇದೇ ಉಲ್ಲೇಖವಿದ್ದರೆ ನಂತರದ ಸುಮಾರು 1520 ರ ಶಾಸನದಲ್ಲಿ ಅನಂತ ಪದ್ಮನಾಭನ ಹೆಸರು ಕಾಣುವುದರಿಂದ ನಂತರ ಕಾಲದಲ್ಲಿ ಈ ದೇವರನ್ನು ಅನಂತ ಪದ್ಮನಾಭ ಎಂದು ಕರೆಯುತ್ತಿದ್ದು ಶಿಲ್ಪದ ಪ್ರಭಾವಳಿಯಲ್ಲಿ ನಾಗನ ಹೆಡೆ ಇದ್ದು ನಾಭಿಯಲ್ಲಿ ಪದ್ಮವಿದೆ. ಬಹುಶಹ ಇದರಿಂದಲೇ ಈ ಹೆಸರು ಬಂದಿರಬಹುದು. ಕಾರಣಿಕ ದೇವರೆಂದು ಪ್ರಸಿದ್ದಿ ಪಡೆದಿರುವ ಈ ಮೂರ್ತಿಯನ್ನ ಅನಂತ ಪದ್ಮನಾಭ ಹಬ್ಬದಂದು ವಿಶೇಷ ಪೂಜೆ ನಡೆಯುತ್ತದೆ.
ತಲುಪುವ ಬಗ್ಗೆ: ಈ ದೇವಾಲಯ ಉಡುಪಿ ಜಿಲ್ಲಿಯ ಪೆರ್ಡೂರಿನಲ್ಲಿದೆ.
ಕಾರ್ಕಳ ಅನಂತ ಪದ್ಮನಾಭ ದೇವಾಲಯ:
ಈ ದೇವಾಲಯ ಸುಮಾರು 1567ರಲ್ಲಿ ನಿರ್ಮಾಣವಾದ ಈ ದೇವಾಲಯದ ಗರ್ಭಗುಡಿಯಲ್ಲಿ ಸುಂದರ
ಸಾಲಿಗ್ರಾಮ ಶೇಷಶಯನ ಮೂರ್ತಿ ಇದೆ. ಇಲ್ಲಿನ ಸ್ಥಳೀಯ ಕಥೆಯಂತೆ ಒಮ್ಮೆ ಶೄಂಗೇರಿಯ ಸ್ವಾಮೀಜಿಗಳು ಇಲ್ಲಿಗೆ ಬಂದಾಗ ಇಲ್ಲಿ ಯಾವ ದೇವರು ಇರದ ಕಾರಣ ಇಲ್ಲಿ ನೆಲೆಸುವಿದಲ್ಲ ಎಂದರಂತೆ. ಆಗ ಅಲ್ಲಿನ ಭೈರವರಸ ರಾಜ ಸಮೀಪದ ನೆಲ್ಲಿಕಾರಿನಲ್ಲಿ ಇದ್ದ ಈ ಸುಂದರ ಮೂರ್ತಿಯನ್ನ ಸ್ಥಾಪಿಸಿದರು
ಎನ್ನಲಾಗುತ್ತದೆ. ದೇವಾಲಯ ಉತ್ತರಾಭಿಮುಖವಾಗಿದ್ದು ಚತುರ್ರಸ ಗರ್ಭಗುಡಿಯನ್ನ ಹೊಂದಿದ್ದು ಮುಂಭಾಗದಲ್ಲಿ ನಾಲ್ಕು ಕಂಭ ಹೊಂದಿರುವ ಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಆದಿ ಶೇಷನ ಮೇಲೆ ಮಲಗಿರುವ ಅನಂತ ಪದ್ಮನಾಭನ ಮೂರ್ತಿ ಇದೆ. ಶಿಲ್ಪದ ನಾಭಿಯಲ್ಲಿ ಭ್ರಹ್ಮನ ಹಾಗು ಪಾದದ ಬಳಿ ಕುಳುತಿರವ ಲಕ್ಷ್ಮೀಯನ್ನ (ಶ್ರೀದೇವಿ ಹಾಗು ಭೂದೇವಿ) ನೋಡಬಹುದು. ಗರ್ಭಗುಡಿಯ ದೇವ ಕೋಷ್ಟಕಗಳಲ್ಲಿ ಸಂಕರ್ಷಣ, ಪ್ರದ್ಯುಮ್ನ ಹಾಗು ಅನಿರುದ್ದನ ಮೂರ್ತಿ ಇದೆ. ದೇವಾಲಯದ ಆವರಣದಲಿ ಪಂಚಮುಖಿ ಗಣಪತಿಯ ವಿಗ್ರಹವಿದೆ. ಇಲ್ಲಿ ಅನಂತಪದ್ಮನಾಭ ವ್ರತದಂದು ಹಾಗು ರಥ ಸಪ್ತಮಿಯಂದು ವಿಶೇಷ ಪೂಜೆ ನಡೆಯುತ್ತದೆ.
ತಲುಪುವ ಬಗ್ಗೆ : ಈ ದೇವಾಲಯ ಉಡುಪಿ ಜಿಲ್ಲೆಯ ಕಾರ್ಕಳದ ಮುಖ್ಯರಸ್ತೆಯಲ್ಲಿದೆ.