ಅಕ್ಟೋಬರ್ 7 ರಿಂದ 15 ರವರೆಗೆ ಕಡೇನಂದಿಹಳ್ಳಿ ಪುಣ್ಯಾಶ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ 30 ನೇ ವರ್ಷದ ಶರನ್ನವರಾತ್ರಿ

ರಂಭಾಪುರಿ ಪೀಠ : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 30 ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭ ಸರಳ ಮತ್ತು ಸಾಂಪ್ರದಾಯಿಕವಾಗಿ ಅಕ್ಟೋಬರ್ 7ರಿಂದ 15 ರ ವರೆಗೆ ಜರುಗಲಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ಶ್ರೀ ಮಳೆಮಲ್ಲೇಶ್ವರ ಕ್ಷೇತ್ರದ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದ ಪರಿಸರದಲ್ಲಿ ನಿರ್ಮಿಸಿರುವ ‘ಮಾನವ ಧರ್ಮ ಮಹಾಮಂಟಪ’ದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುವುದು. ಸಂಸದ ಬಿ.ವೈ. ರಾಘವೇಂದ್ರ ಸಮಾರಂಭದ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.


7 ರಂದು ರಾಜ್ಯದ ನಿಕಟಪೂರ್ವ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವ ಸಮಾರಂಭದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಕೃಷಿ ಸಚಿವ ಬಿ.ಸಿ.ಪಾಟೀಲ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು.

15 ರ ವರೆಗೆ ಪ್ರತಿ ದಿನ 7ಘಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ರಂಭಾಪುರಿ ಬೆಳಗು ಪತ್ರಿಕೆ ಬಿಡುಗಡೆ ಮಾಡುವರು. ಗ್ರಾಮೀಣಾಭಿವೃದ್ಧಿ-ಪಂಚಾಯತ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ 2022 ರ ದಿನದರ್ಶಿಕೆ ಬಿಡುಗಡೆ ಮಾಡುವರು.

ವಿವಿಧ ದಿನಗಳಲ್ಲಿ ವಿಧಾನ ಸಭಾ ಉಪಾಧ್ಯಕ್ಷರಾದ ಆನಂದ ಮಾಮನಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಲೋಕಸಭಾ ಸದಸ್ಯರಾದ ಡಾ.ಜಿ.ಎಂ.ಸಿದ್ಧೇಶ್ವರ, ಶಿವಕುಮಾರ ಉದಾಸಿ, ಶಾಸಕರಾದ ಬಿ.ಕೆ.ಸಂಗಮೇಶ, ಎಂ.ಪಿ.ರೇಣುಕಾಚಾರ್ಯ, ಹರತಾಳು ಹಾಲಪ್ಪ, ಅಶೋಕ ನಾಯಕ, ವಿರುಪಾಕ್ಷಪ್ಪ ಬಳ್ಳಾರಿ, ಕೆ.ಎಸ್.ಲಿಂಗೇಶ, ಅರುಣಕುಮಾರ ಪೂಜಾರ ವಿಧಾನ ಪರಿಷತ್ ಸದಸ್ಯರಾದ ಪ್ರಸನ್ನಕುಮಾರ, ಆಯನೂರು ಮಂಜುನಾಥ, ಎಸ್. ರುದ್ರೇಗೌಡರು ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಮತ್ತು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಾಡಿನ ವಿವಿಧ ಮಠಗಳ ಪಟ್ಟಾಧ್ಯಕ್ಷರು ಆಗಮಿಸಿ ತಮ್ಮ ಉಪದೇಶಾಮೃತ ನೀಡುವರು.


ಪ್ರಶಸ್ತಿ ಪ್ರದಾನ: ಈ ವರ್ಷದ ‘ರಂಭಾಪುರಿ ಯುವ ಸಿರಿ’ ಪ್ರಶಸ್ತಿಯನ್ನು ಕೋಣಂದೂರಿನ ಕೆ.ಆರ್.ಪ್ರಕಾಶ ಇವರಿಗೆ, ‘ಸಾಹಿತ್ಯ ಸಿರಿ’ ಪ್ರಶಸ್ತಿಯನ್ನು ಲಕ್ಷ್ಮೇಶ್ವರದ ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ಇವರಿಗೆ, ‘ವೀರಶೈವ ಸಿರಿ’ ಪ್ರಶಸ್ತಿಯನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಇವರಿಗೆ, ‘ಶಿವಾಚಾರ್ಯ ರತ್ನ’ ಪ್ರಶಸ್ತಿಯನ್ನು ಬೀದರ ಜಿಲ್ಲೆ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ಹಾಗೂ ‘ಸಾಧನ ಸಿರಿ’ ಪ್ರಶಸ್ತಿಯನ್ನು ಕಡೇನಂದಿಹಳ್ಳಿ-ದುಗ್ಲಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಪ್ರದಾನ ಮಾಡಲಾಗುವುದು.


ದಿನಾಂಕ 15 ರಂದು ಶ್ರೀ ರಂಭಾಪುರಿ ಜಗದ್ಗುರುಗಳು ಶಮಿ ಸೀಮೋಲಂಘನ ಮಾಡಿ ಶಮಿ ಪೂಜೆ ನೆರವೇರಿಸಿದ ನಂತರ ಸಭಾ ಮಂಟಪಕ್ಕೆ ಆಗಮಿಸಿ ಶುಭಾಶೀರ್ವಾದ ಶಾಂತಿ ಸಂದೇಶ ಅನುಗ್ರಹಿಸುವರು. ಶಿಷ್ಯ ಸದ್ಭಕ್ತರಿಂದ ಶಮಿ ಕಾಣಿಕಾ ಸಮರ್ಪಣೆ ನಡೆಯಲಿದ್ದು ಸಮಿತಿಯ ಪದಾಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.


6 ರಂದು ಶುಭಾಗಮನ ಮಾಡುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳನ್ನು ಸಾರೋಟದ ಮೂಲಕ ಬರಮಾಡಿಕೊಳ್ಳಲಾಗುವುದು.

7 ರಂದು ಸಂಜೆ 5 ಘಂಟೆಗೆ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದ ನೂತನ ಕಟ್ಟಡವನ್ನು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಪ್ರತಿನಿತ್ಯ ಬೆಳಗ್ಗೆ 8 ಗಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸುವರು.

ಸಮಾರಂಭದಲ್ಲಿ ಪಾಲ್ಗೊಳ್ಳುವವರು ಮಾಸ್ಕ್ ಧರಿಸುವುದು ಅಂತರ ಕಾಪಾಡುವುದು ಕಡ್ಡಾಯವಾಗಿದೆ ಎಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮ ಕಡೇನಂದಿಹಳ್ಳಿಗೆ ಬರುವವರಿಗಾಗಿ ಮಾರ್ಗ ಮತ್ತು ಅಂತರ ಹೀಗಿದೆ: ಹಿರೇಕೆರೂರಿನಿಂದ 6 ಕಿ.ಮೀ. ಮಾಸೂರಿನಿಂದ 12 ಕಿ.ಮೀ. ಶಿರಾಳಕೊಪ್ಪದಿಂದ 18 ಕಿ.ಮೀ. ಶಿಕಾರಿಪುರದಿಂದ (ಅಂಬಾರಗೊಪ್ಪ-ವರಾಹದ ಮೂಲಕ) 25 ಕಿ.ಮೀ.


ಮಾಹಿತಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles