ಶಾಶ್ವತವಲ್ಲಈ ಶರೀರ

*ಯೋಗೀಂದ್ರ ಭಟ್, ಉಳಿ
ಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ

ನಮಗೆ ದೇವರು ಕೊಟ್ಟ ವರ ಈ ಶರೀರ. ಆದರೆ ಸ್ವಭಾವತಃ ಇದು ನಶ್ವರ. ಸ್ವಾಧೀನದಲ್ಲಿಇರುವ ತನಕ ಮಾತ್ರ ಸಾಧನೆಗೆ ಅವಕಾಶ.  

ಎಲ್ಲರ ದೇಹಕ್ಕೂ ಇರುವುದು ಎರಡೇ ಅವಸ್ಥೆಗಳು. ಬೆಳೆಯುವುದು ಮತ್ತು ನಶಿಸುವುದು.  ಬಾಲ್ಯದಿಂದ ಯೌವನದದ ವರೆಗಿನದ್ದು ಬೆಳೆಯುವ ದೇಹವಾದರೆ, ಮುಂದೆ ವಾರ್ಧಕ್ಯದ ಕೊನೆಯ ಅವಧಿಯ ತನಕದ್ದು ನಶಿಸುವ ಶರೀರ. ’ಶೀರ್ಯತೇ ಇತಿ ಶರೀರಂ’.  ಅನುದಿನವೂ ಹುಟ್ಟಿ ಸಾಯುವ ಸೂರ್ಯನಂತೆ. 

ಹೊಂಬೆಳಕಿನ ತಂಪು ಕಿರಣಗಳೊಂದಿಗೆ ಮೆಲ್ಲನೆ ಉದಯಿಸಿ, ಅಂಧಕಾರವನ್ನು ಗೆದ್ದು ಬಂದ ಸೂರ್ಯ  ಮಧ್ಯಾಹ್ನದ ಹೊತ್ತಿಗೆ ಬಾನಂಗಳದಲ್ಲಿ ದೇದೀಪ್ಯಮಾನನಾಗಿ ಮೆರೆದುನಿಂತ.  ನಂತರ ನಿಧಾನವಾಗಿ ಕಳೆಗುಂದುತ್ತಾ ಬಂದು ಸಂಜೆಯ ಹೊತ್ತಿಗಾಗುವಾಗ ಮತ್ತದೇ ಕತ್ತಲಿನ ಹಿತ್ತಿಲಿನಲ್ಲಿ ಹೇಳಹೆಸರಿಲ್ಲದಂತೆ ಮರೆಯಾಗಿ ಹೋದ!   

ಮುಂಜಾವಿನ ಹೊತ್ತು ಹೆಮ್ಮೆಯಿಂದರಳಿ ತಲೆಯೆತ್ತಿ ನಿಂತ ಮಲ್ಲಿಗೆಯ ಹೂವು,  ಕಮ್ಮನೆಯ ಕಂಪನ್ನು ಬೀರಿ ಮೆರೆದಾಡಿದರೇನು ಬಂತು? ಸಂಜೆಯ ಹೊತ್ತಿಗೆ ಕಳೆಗುಂದಿ  ಬಿಸಿಲ ಬೇಗೆಗೆ ಬಾಡಿ ಬಳಲಿ ನಿತ್ರಾಣವಾಗಿ ನೆಲವನ್ನು ಸೇರಿಬಿಟ್ಟಿತು!   


ಬಾಡಿದ ಮೇಲೆ ಬಾಳು ವ್ಯರ್ಥ
ಅರಳಿದ ಹೂವು ಹಸನಾಗಿರುವಾಗಲೇ ಮುಡಿಯನ್ನೇರಬೇಕು. ಬಾಡಿದ ಮೇಲೆ ಬಾಳು ವ್ಯರ್ಥ.  
ಸಾಧನೆಗೆಂದು ಸಿಕ್ಕಿದ ಈ ದೇಹದ ವ್ಯವಸ್ಥೆಯೂ ಹೀಗೆಯೇ ತಾನೆ? ಏನು ಮಾಡಿದರೇನು? ಎಷ್ಟು ಮೆರೆದಾಡಿದರೇನು? ಒಂದಷ್ಟುದಿನ ಎಲ್ಲೆಂದೆರಲ್ಲಿ ಹರಿದಾಡಿದ ಹೆಸರು ಈ ಶರೀರದ ಅವಸಾನವಾಗುತ್ತಲೇ ಮರೆಯಾಗಿ ಹೋಗುತ್ತದೆ.  
ಆದರೂ ಒಳ್ಳೆಯ ಸಾಧನೆಯನ್ನು, ಜ್ಞಾನೋಪದೇಶವನ್ನು ಮತ್ತು ಪರೋಪಕಾರವನ್ನು ಮಾಡಿದವರ ನೆನಪು ಮಾತ್ರ ಸಜ್ಜನ ಪರಂಪರೆಯ  ನೆನಪಿನಂಗಳದಲ್ಲಿ ಹಸನಾಗಿ ಉಳಿಯುತ್ತದೆ.  ಸಾಕಷ್ಟು ಸೊರಗಿ ಒಣಗಿ ಉದುರಿ ಹೋದರೂ ಕಂಪುಸೂಸುತ್ತಲೇ ಇರುವ ಸುರಗಿ ಹೂವಿನಂತೆ.    
ಸಾಧನೆಗೆಂದೇ ದೊರಕಿದ ಈ ಶರೀರವನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಜೊತೆಗೆ ಅಮೂಲ್ಯವಾದ ನಮ್ಮ ಆಯುಷ್ಯದ ಕ್ಷಣಗಳನ್ನು ಕೂಡ. 
ಈ ದೇಹವನ್ನೇ ನೆಚ್ಚಿಕೊಂಡು ನಿಂತಿರುವುದು ನಮ್ಮ ಸಾಧನೆಯ ಬದುಕು. ಚೆನ್ನಾಗಿ ಸಂರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಶರೀರದ ಸ್ವಚ್ಚತೆ,  ಆಹಾರ, ವಿಶ್ರಾಂತಿಗಳಿಗೆ ಅವಕಾಶವನ್ನು ನಾವೇ ಕಲ್ಪಿಸಿಕೊಳ್ಳಬೇಕು.  ನಿರ್ಲಕ್ಷಿಸಬಾರದು. 
 ದೇಹದ ಮೇಲೆ ಅಭಿಮಾನಬೇಕು. ಆದರೆ ಅದು ಅತಿಯಾಗಬಾರದು. ಕಪಿಲಾಂ ದರ್ಪಣಂ ಭಾನುಂ ಪ್ರಾತಃ ಪಶ್ಯೇತ್. ಮುಂಜಾನೆಯೆದ್ದೊಮ್ಮೆ ಕನ್ನಡಿಯಲ್ಲಿ ಮುಖನೋಡುವುದು ಶುಭಲಕ್ಷಣವಂತೆ. ಕನ್ನಡಿಯೆದುರೇ ಕಾಲಕಳೆಯುವುದು ಅತಿರೇಕದ ಅವಲಕ್ಷಣ.   

 ಸಾಧಿಸುವುದಿದ್ದರೆ ಶಾಶ್ವತವಾಗಿ ಉಳಿಯುವುದನ್ನು ಸಾಧಿಸಬೇಕು. ಅದು ಸಾರ್ಥಕ. ಸಿಕ್ಸ್ ಪ್ಯಾಕ್ , ಮೇಕಪ್ ಅಂದುಕೊಂಡು ಕ್ಷಣಿಕ ಮತ್ತು ಕ್ಷುಲ್ಲಕ ಸಂತೋಷಕ್ಕಾಗಿ ನಡೆಸುವ ದೇಹದಂಡನೆ ಕೇವಲ ಹುಚ್ಚುತನ. ಕಡಲ ತೀರದ ಮರಳಲ್ಲಿ ಕಟ್ಟಿದ ಮನೆಯಂತೆ. ಬಹುಕಾಲ ಉಳಿಯುವುದಿಲ್ಲ. ಅಲೆಬಂದಾಗ ಅಳಿದುಹೋಗುತ್ತದೆ. 
ದೇಹದ ಸ್ವಾಸ್ಥ್ಯದ ಹೆಸರಿನಲ್ಲಿ ನಡೆಸುವ ಆಸನ ವ್ಯಾಯಾಮಗಳೂ ಮಿತಿಯಲ್ಲಿರಬೇಕು. ಹೆಚ್ಚಾದರೆ ಅದೂ ಅನಾಹುತಕ್ಕೆ ಕಾರಣವಾಗುತ್ತದೆ.  

ಕೇವಲ ಯೋಗ, ಆಸನ, ಪ್ರಾಣಾಯಾಮಗಳಲ್ಲಿನ ಪ್ರಾವೀಣ್ಯವೇ ಬದುಕಿನ ಉದ್ದೇಶವಲ್ಲ. ಆರೋಗ್ಯವಾಗಿ ಬದುಕಲು ಯೋಗ ಬೇಕು. ಪ್ರಾಣಾಯಾಮವೂ ಬೇಕು.  ಆದರೂ, ಚೆನ್ನಾಗಿ ಬದುಕಿ ಸಾಧಿಸುವುದೇನನ್ನು ಎನ್ನುವುದೇ ಮುಖ್ಯವಲ್ಲವೇ? 

ಆರೋಗ್ಯವಂತ ದೇಹವೆನ್ನುವುದು ಒಳ್ಳೆಯ ಕಾರು ಇದ್ದ ಹಾಗೆ. ಚೆನ್ನಾಗಿ ತೊಳೆದು ಧೂಳು ವರಸಿ ಅಂದವಾಗಿ ಇಟ್ಟು ಕೊಂಡರಷ್ಟೇ ಸಾಕೇ? ಕಾರಿನ ಮುಖ್ಯ ಉದ್ದೇಶ ಪ್ರಯಾಣವೇ ತಾನೆ? ಸಾಕಷ್ಟು ದೂರ ಪ್ರಾಯಾಣಿಸಲು ಅನುಕೂಲವಾಗುವಂತೆ ಕಾರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಮತ್ತು ಮುಖ್ಯವಾಗಿ ಕಾರನ್ನು ಪ್ರಯಾಣಕ್ಕೋಸ್ಕರ ಸಮರ್ಪಕವಾಗಿ ಬಳಸಿಕೊಳ್ಳಬೇಕು. 

ದೇವರಿತ್ತ ಈ ದೇಹವನ್ನು ಚೆನ್ನಾಗಿ ದುಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಶ್ರಮಪಟ್ಟು ಜ್ಞಾನಸಂಪಾದನೆ ಮಾಡಿಕೊಳ್ಳಬೇಕು. ಉಪವಾಸ, ತಪಸ್ಸು, ಧ್ಯಾನ, ಪರೋಪಕಾರಗಳು ಕಷ್ಟಸಾಧ್ಯವೆಂದು, ಕೇವಲ ವ್ಯರ್ಥಾಲಾಪಗಳಿಂದ, ತಾತ್ಕಾಲಿಕ ಆನಂದಗಳಿಂದ ಸಮಯ ಕಳೆದರೆ ಅಮೂಲ್ಯ ಬದುಕನ್ನು ಅನಗತ್ಯವಾಗಿ ವ್ಯರ್ಥ ಮಾಡಿಕೊಂಡಂತೆ.  ಮಳೆಗಾಲದಲ್ಲಿ ಕೊಡೆ ಹಾಳಾಗುತ್ತದೆಂದು ಕಂಕುಳಲ್ಲಿಟ್ಟುಕೊಂಡು ನಡೆಯುವ ಮೂರ್ಖನಂತೆ.         

ಈ ಶರೀರವನ್ನು ಹೆಚ್ಚಾಗಿ ನೆಚ್ಚಿಕೊಳ್ಳಲು ಹೋಗಬಾರದು. ಪ್ರಯಾಣಕ್ಕೆ ಬಳಸುವ ಬಸ್ಸಿನಂತಿರಬೇಕು. ಬಸ್ಸು ಎಷ್ಟು ಸುಂದರ, ಸುಖಕರವಾಗಿದ್ದರೂ ಅದರ ಜೊತೆಗಿನ ಬಾಂಧವ್ಯ ನಿಲ್ದಾಣ ತಲುಪುವ ತನಕ ಮಾತ್ರ.   ಸ್ವಾದಿಷ್ಟ ತಿನಿಸುಗಳನ್ನು ನಿರ್ಲಿಪ್ತನಾಗಿ ಮಾರುವ ವ್ಯಾಪಾರಿಯಂತೆ. ಮುಂಜಾವಿನಿಂದ ಸಂಜೆಯ ತನಕ  ಎಷ್ಟು ಸಾಧ್ಯವೋ ಅಷ್ಟು ವ್ಯಾಪಾರ ಮಾಡಬೇಕು. ಮುಂದೆ ಕತ್ತಲಾದಾಗ ಅಂಗಡಿಗೆ ಬಾಗಿಲು ಹಾಕಿ ಮನೆಗೆ ನಡೆಯಬೇಕು. ಅದಷ್ಟೇ ಅವನ ಧ್ಯೇಯ. ರುಚಿಗೆ ಮರುಳಾಗಿ ಮೈಮರೆತನೆಂದರೆ ಸಂಪಾದನೆ ಸಾಧ್ಯವಿಲ್ಲ. 


ಮಕ್ಕಳನ್ನು ಮಾನಸಿಕವಾಗಿ ಎಚ್ಚರಗೊಳಿಸಬೇಕು
ಬೆಳೆಯುವ ಹಂತದಲ್ಲೇ ನಮ್ಮ ಶಾರೀರಿಕ ಸಾಧನೆಗಳು ಪ್ರಾರಂಭವಾಗಬೇಕು. ಅದಕ್ಕೆ ಬಾಲ್ಯದಲ್ಲಿಯೇ ಪೋಷಕರು ಮಕ್ಕಳನ್ನು ಮಾನಸಿಕವಾಗಿ ಎಚ್ಚರಗೊಳಿಸಬೇಕು. ಇದು ನಶ್ವರವೆಂಬ ಸತ್ಯವನ್ನು ಅವರಿಗೂ ಮನದಟ್ಟಾಗಿಸಬೇಕು. ಸಮಯದ ಮೌಲ್ಯವನ್ನು , ಬಳಸಿಕೊಳ್ಳುವ ಬಗೆಯನ್ನುಬದುಕಿನ ಆರಂಭದಲ್ಲೇ ಕಲಿಸಿಕೊಡಬೇಕು. 


ಮೈಮರೆಸುವ ಮರೀಚಿಕೆಗಳು
ಕೇವಲ ಹೊರನೋಟದಿಂದ ಗುಣವನ್ನು ಗುರುತಿಸಲು ಬರುವುದಿಲ್ಲ. ಶರೀರದ ಗಾತ್ರ, ಆಕಾರ, ಬಣ್ಣ ಎಲ್ಲವೂ ದೈವದತ್ತ.  ಜಗತ್ತಿನಲ್ಲಿ ಯಾರಿಗೂ ನನ್ನ ಶರೀರ ಹೀಗೇ ಇರಬೇಕು ಎನ್ನುವ ಆಯ್ಕೆಗೆ ಅವಕಾಶವಿಲ್ಲ.  ದೇವರು ಕೊಟ್ಟದ್ದು.  
ಎಲ್ಲ ಶರೀರದಲ್ಲೂ ಪ್ರತ್ಯೇಕ ಹೃದಯವಿದೆ.  ಪ್ರತಿ ಹೃದಯದಲ್ಲೂ ಭಗವಂತನಿದ್ದಾನೆ. ’ಈಶ್ವರಃ ಸರ್ವಭೂತಾನಾಂ ಹೃದ್ದೇಶೇ’.  ಆದ್ದರಿಂದ ಎಲ್ಲರ ದೇಹವೂ ದೇವರಿರುವ ಪ್ರತ್ಯೇಕ ಗರ್ಭಗುಡಿ. ನಾವು ನಮ್ಮನ್ನು ಪ್ರೀತಿಸುವಂತೆ ಎಲ್ಲರನ್ನೂ ಪ್ರೀತಿಸಬೇಕು. ಗೌರವಿಸಬೇಕು.  ರೂಪ ಮತ್ತು ಯೌವನ. ಇವೆರಡೂ ನಮ್ಮನ್ನು ಮೈಮರೆಸುವ ಮರೀಚಿಕೆಗಳು. ಮರುಳಾಗದಿರೋಣ.   
 ಚಿತ್ರ : ಕಿರಣ್ ಮಾಡಾಳು 

Related Articles

ಪ್ರತಿಕ್ರಿಯೆ ನೀಡಿ

Latest Articles