ನೀನಾರೋ ಎನೋ ನನಗಂತು ತಿಳಿಯದು ಮಿಡಿಯುತಿದೆ ಇಂದೇಕೋ ನನ್ನ ಮನವಿದು ತೊಳಲಾಡುತಿದೆ ಯಾಕೋ ಎನ್ನ ಹೃದಯವಿದು ಕಣ್ಣೀರ ಧಾರೆ ಕಿಂಚಿತ್ತೂ ನಿಲ್ಲಲೊಲ್ಲದು|| ತಂದೆ ಅಲ್ಲ ಮಗನಲ್ಲ ಸಹೋದರನಂತೂ ಅಲ್ಲ ಬಹುದೂರ ಇದ್ದರೂ ಮನದಲ್ಲೇ ಇರುವೆಯಲ್ಲ ಕರುಳೇ ಕಿತ್ತುಬಂದ ಹಾಗೆ ಆಗುತಿದೆಯಲ್ಲ ಮೂರು ದಿನವಾದರೂ ನೆನಪು ಸರಿಯುತಿಲ್ಲ|| ಜೊತೆಗಾರ ನೀನಲ್ಲ ಜೊತೆಯೂ ಇರುವುದಿಲ್ಲ ಬಳಿಯೇ ಸುಳಿದಾಡುವಂತೆ ಭಾಸವಾಗುತಿದೆಯಲ್ಲ ಕಣ್ ಮುಚ್ಚಿದರೂ ಮುದ್ದು ನಗು ಕಾಣುತಿದೆಯಲ್ಲ ಮುಗ್ದ ನಗು ಮರೆಯಾಯಿತೆಂದು ನಂಬಲಾಗುತ್ತಿಲ್ಲ|| ಎದೆಯಲ್ಲಿ ಇಷ್ಟೊಂದು ಕಳವಳ ಯಾವತ್ತೂ ಆಗಿಲ್ಲ ನೀನು ಯಾರೋ ನನಗೆ ಉತ್ತರ ಸಿಗಲೇ ಇಲ್ಲ ಸಾವುಗಳ ಸರಮಾಲೆ ಕಂಡರೂ ಇಂಥನೋವಾಗಿಲ್ಲ ಹೇಳಿದಷ್ಟು ದುಃಖ ಉಮ್ಮಳಿಸಿ ಬರುತಿದೆಯಲ್ಲ|| ಕನ್ನಡ ನಾಡಿನ ಪ್ರತಿ ಮನೆಯ ಪ್ರೀತಿ ನೀನು ಸುತನನ್ನೇ ಕಳೆದುಕೊಂಡಂತಾಗಿದೆ ಇಂದು ಮನೆಮನೆಯಲ್ಲಿ ಸೂತಕದಛಾಯೆ ಆವರಿಸಿದೆ ಇಂದು ದಯಮಾಡಿ ಹೇಳು ನೀ ಬರುವೆ ಎಂದು?|| ಕಂಪಿಸುತಿವೆ ಕೈಗಳು ಕವಿತೆಯನು ಬರೆಯಲು ಪದಗಳೇ ಸಾಲುತ್ತಿಲ್ಲ ಯುವರತ್ನನ ವರ್ಣಿಸಲು ಊಹಿಸಿಕೊಳ್ಳಲಾಗುತಿಲ್ಲ ಮಣ್ಣ ಸೇರಿದ ಮೇಲೂ ವರ್ಷಗಳೇ ಬೇಕೆನೋ ನಾ ನಿನ್ನ ಮರೆಯಲು|| ಬೇಡವಾಯಿತೇ ತಾಯಿ ರಾಜ್ಯೋತ್ಸವದ ಸಂಭ್ರಮ ಕನ್ನಡಿಗರ ಹೃದಯ ಒಡೆದು ಹೋದವಿಂದು ಮರಳಿ ಕಳಿಸಮ್ಮ ನಮ್ಮ ಕನ್ನಡದ ಕಂದನ ನಿಲ್ಲುತಿಲ್ಲ ಅಭಿಮಾನಿಗಳ ಅಳು ಆಕ್ರಂದನ|| ಕನ್ನಡಾಂಬೆಯ ಸಂಸ್ಕೃತಿಯೇ ಇಂಥಹದು ಮತ್ತೊಬ್ಬರ ನೋವಿಗೆ ಮಿಡಿಯುವಂಥಹದು ಕನ್ನಡಿಗರ ಅಭಿಮಾನವೇ ಮೆಚ್ಚುವಂಥಹದು ನೋಡಿರಿ ರಕ್ತ ಸಂಬಂಧ ವಿಲ್ಲದ ಬಂಧವಿದು||
*ರಚನೆ: ಶ್ರೀಮತಿ ಜ್ಯೋತಿ ಕೋಟಗಿ,
ಶಿಕ್ಷಕಿ, ಸ ಮಾ ಪ್ರಾ ಶಾಲೆ ತಲ್ಲೂರ.