*ಶ್ರೀನಿವಾಸ ಮೂರ್ತಿ ಎನ್ ಎಸ್
ದೇವಾಲಯಗಳ ವಾಸ್ತು ಲೋಕದಲ್ಲಿ ಕಲ್ಯಾಣ ಚಾಲುಕ್ಯರ ಕೊಡುಗೆ ದೊಡ್ಡದು. ದೇವಾಲಯದ ನಿರ್ಮಣದಲ್ಲಿ ಹೊಸ ಸ್ವರೂಪವನ್ನ ನೀಡಿದ ಇವರ ಹಲವು ದೇವಾಲಯಗಳು ಪ್ರಮುಖವಾಗಿ ಗುರುತಿಸಿಕೊಂಡಿದೆ.
ನಂತರ ಇವರ ಸಾಮಂತರಾಗಿದ್ದ ಹೊಯ್ಸಳರು ಇನ್ನಷ್ಟು ಸುಂದರಗೊಳಿಸಿದರು. ಇವರ ಹಲವು ದೇವಾಲಯಗಳು ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಕಾಣ ಸಿಗಲಿದ್ದು ಅದರಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವು ದೇವಾಲಯಗಳನ್ನು ನೋಡಬಹುದು. ಅಂತಹ ಸುಂದರ ದೇವಾಲಯಗಳಲ್ಲಿ ಹಾವೇರಿ ತಾಲ್ಲೂಕಿನ ಹರಳಹಳ್ಳಿಯ ಸೋಮೇಶ್ವರ ದೇವಾಲಯವೂ ಒಂದು.
ಇತಿಹಾಸ ಪುಟದಲ್ಲಿ ಪ್ರಮುಖ ಪಟ್ಟಣವಾಗಿ ಗುರುತಿಸಿಕೊಂಡಿದ್ದ ಇದು ಕಲ್ಯಾಣ ಚಾಲುಕ್ಯರ ಹಾಗು ಗುತ್ತರ ಅರಸರ ಕಾಲದಲ್ಲಿ ಪ್ರಮುಖ ಕೆಂದ್ರವಾಗಿದ್ದು ಗುತ್ತಲ ಅರಸರ ಕುಲ ದೇವರಾಗಿಯೂ ಗುರುತಿಸುಕೊಂಡಿತ್ತು. ಇನ್ನು ಶಾಸನಗಳಲ್ಲಿ ವಿಕ್ರಮಪುರ ಹಾಗು ಸೊಮೇಶ್ವರಪುರ ಎಂದು ಕರೆಯಲಾಗುತ್ತಿತ್ತು. 1188 ರ ಶಾಸನದಲ್ಲಿ ಈ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಇಲ್ಲಿನ ಕಲ್ಯಾಣ ಶಕ್ತಿಯ ಅಪೇಕ್ಷೆಯಂತೆ ಜೋಯಿ ದೇವರಸನು ಇಲ್ಲಿ ವಿಕ್ರಮಪುರ ಎಂದು ಈ ಗ್ರಾಮವನ್ನು ಕರೆದು ಇಲ್ಲಿನ ಸ್ವಯಂಭೂ ಸೋಮೇಶ್ವರ ಲಿಂಗದ ಜೊತೆಗೆ ವಿಕ್ರಮೇಶ್ವರ ಮತ್ತು ಗುತ್ತೇಶ್ವರ ಎಂಬ ಶಿವಲಿಂಗ ಸ್ಥಾಪಿಸಿದ ಉಲ್ಲೇಖವಿದೆ.
ಇದು ಮೂಲತಹ ತ್ರಿಕುಟಾಚಲ ದೇವಾಲಯ. ಇನ್ನು ಸುಮಾರು 12 ನೇ ಶತಮಾನದಲ್ಲಿ ಕಲ್ಯಾಣ ಚಾಳುಕ್ಯರ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡಿದ್ದು ಮೂರು ಗರ್ಭಗುಡಿ, ಅಂತರಾಳ ಹಾಗು ನವರಂಗವನ್ನು ಹೊಂದಿದೆ. ಪೂರ್ವಾಭಿಮುಖವಾಗಿರುವ ಮುಖ್ಯ ಗರ್ಭಗುಡಿಯಲ್ಲಿ ಸೋಮೇಶ್ವರ ಎಂದು ಕರೆಯುವ ಸ್ವಯಂಭೂ ಶಿವಲಿಂಗವಿದ್ದು ಉಳಿದ ಗರ್ಭಗುಡಿಯಲ್ಲಿ ವಿಕ್ರಮೇಶ್ವರ ಮತ್ತು ಗುತ್ತೇಶ್ವರ ಎಂಬ ಶಿವಲಿಂಗವಿದೆ.
ಇನ್ನು ಮುಖ್ಯ ಗರ್ಭಗುಡಿಯ ಬಾಗಿಲುವಾಡ ಪಂಚಶಾಖೆಯಿಂದ ಸುಂದರವಾಗಿ ಅಲಂಕೄತಗೊಂಡಿದ್ದು ಲಲಾಟದಲ್ಲಿ ಗಜಲಕ್ಶ್ಮಿಯ ಕೆತ್ತನೆ ನೋಡಬಹುದು. ಅಂತರಾಳದ ಬಾಗಿಲುವಾಡದಲ್ಲಿ ಅಕ್ಕ ಪಕ್ಕದಲ್ಲಿ ಜಾಲಂದ್ರಗಳಿದ್ದು ಮಕರ ತೊರಣದಲ್ಲಿ ಚಾಲುಕ್ಯರ ದೇವಾಲಯದಲ್ಲಿ ಇರುವಂತೆ ಬ್ರಹ್ಮ, ವಿಷ್ಣು ಹಾಗು ಶಿವ (ತ್ರಿಮೂರ್ತಿಗಳ) ಉಬ್ಬು ಶಿಲ್ಪಗಳಿದ್ದು ಜೊತೆಯಲ್ಲಿ ಗಣಪತಿ ಹಾಗು ಮಹಿಷಮರ್ದಿನಿಯ ಕೆತ್ತನೆ ಇದೆ. ಇನ್ನು ಉಳಿದ ಗರ್ಭಗುಡಿಗಳಲ್ಲೂ ಇದೇ ಮಾದರಿಯ ಕೆತ್ತನೆ ನೋಡಬಹುದು.
ನವರಂಗದಲ್ಲಿ ಚಾಲುಕ್ಯ ನಿರ್ಮಿತ ಸುಂದರ ನಾಲ್ಕು ಕಂಭಗಳಿದ್ದು ವಿತಾನದಲ್ಲಿ ಕಮಲದ ಅಲಂಕರಣವನ್ನು ನೋಡಬಹುದು. ಇನ್ನು ಇಲ್ಲಿನ ದೇವಕೊಷ್ಟಕಗಳಲ್ಲಿ ಸಪ್ತ ಮಾತೃಕೆ ಇದ್ದು ಶಿವಲಿಂಗದ ಎದುರಾಗಿ ನಂದಿಯ ಶಿಲ್ಪವಿದೆ. ಇನ್ನು ನವರಂಗದ ಬಾಗಿಲುವಾಡ ಸಪ್ತ ಶಾಖೆಗಳಿಂದ ಅಲಂಕೄತಗೊಂಡಿದೆ. ಇನ್ನು ಹೊರ ಭಿತ್ತಿಯಲ್ಲಿ ಅರ್ಧಗಂಭಗಳು, ವಿವಿಧ ಮಾದರಿಯ ಶಿಖರಗಳಿದ್ದು ಭೈರವ ಹಾಗು ಮದನಿಕೆಯರ ಶಿಲ್ಪಗಳನ್ನು ನೋಡಬಹುದು. ಇನ್ನು ಗರ್ಭಗುಡಿಯಲ ಮೇಲೆ ಘಾಂಸನಾ (ಕದಂಬ ನಾಗರ) ಶೈಲಿಯ ಶಿಖರವಿದೆ.
ತಲುಪವ ಬಗ್ಗೆ : ತುಂಗಭದ್ರಾ ನದಿಯ ತಟದಲ್ಲಿರುವ ಹರಳಹಳ್ಳಿ ಹಾವೇರಿಯಿಂದ ಸುಮಾರು 34 ಕಿ ಮೀ ದೂರದಲ್ಲಿದ್ದು ರಾಣೆ ಬೆನ್ನೂರಿನಿಂದ ಸುಮಾರು 30 ಕಿ ಮೀ ದೂರದಲ್ಲಿದೆ.