*ಶ್ರೀನಿವಾಸ ಮೂರ್ತಿ ಎನ್ ಎಸ್
ನಾಡಿನ ಸಾಹಿತ್ಯದಲ್ಲಿ ದಾಸ ಪರಂಪರೆ ಅತ್ಯಂತ ಪ್ರಮುಖ ಘಟ್ಟವಾಗಿ ಗುರುತಿಸಿಕೊಂಡಿದೆ. ಹಲವು ದಾಸರು ಅನೇಕ ಕೃತಿಗಳ ಮೂಲಕ ಸಂದೇಶ ಸಾರಿದ್ದು ಅವುಗಳಲ್ಲಿ ಕುಲವನ್ನು ಮೀರಿ ನಿಂತ ಪ್ರಮುಖ ದಾಸವರೇಣ್ಯರಲ್ಲಿ ಕನಕದಾಸರು ಒಬ್ಬರು.
ಬಯಲಳೊಗೆ ಆಲಯವೋ, ಆಲಯದೊಳಗೆ ಬಯಲೋ, ಬಯಲು ಆಲಯವೆರೆಡು ನಯನದೊಳಗೋ, ನಯನ ಬುದ್ದಿಯ ಒಳಗೊ, ಬುದ್ದಿ ನಯನದ ಒಳಗೊ, ನಯನ ಬುದ್ದಿಗಳುರಡು ನಿನ್ನೊಳಗೋ ಹರಿಯ ಎನ್ನುತ್ತಾ ಬದುಕಿನ ದಾರ್ಶನಿಕ ಸತ್ಯವನ್ನು ಜಗಕ್ಕೆ ಉಣ ಬಡಿಸಿದ ದಾಸ ಶ್ರೇಷ್ಠರಲ್ಲಿ ಕನಕದಾಸರು ಪ್ರಮುಖರು. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೀದಾರೂ ಬಲ್ಲಿರ ಎನ್ನುತ್ತ ಜನರ ನಡುವಿನ ಕುಲದ ಕಲಹವನ್ನ ಮೀರಿ ನಂತ ಕನಕದಾಸ ಹುಟ್ಟಿದ್ದು ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ ನೆಲೆ ನಿಂತು ಆರಾಧಿಸಿದ್ದು ಕಾಗಿನೆಲೆಯ ಕೇಶವನನ್ನು. ಇಲ್ಲಿನ ಪ್ರಸಿದ್ಧ ಪೀಠವೆ ಶ್ರೀ ಕನಕ ಗುರು ಪೀಠ. ಇಲ್ಲಿ ಇರುವ ಆದಿಕೇಶವ ದೇವಾಲಯ ಅವರ ಆರಾಧ್ಯ ದೈವ.
ಇತಿಹಾಸ ಪುಟದಲ್ಲಿ ಕದಂಬರ ಕಾಲದಿಂದಲೂ ಇತಿಹಾಸ ಹೊಂದಿರುವ ಈ ಗ್ರಾಮ ಚಾಲುಕ್ಯ, ವಿಜಯಗನಗರ ಕಾಲದಲ್ಲಿ ದತ್ತಿ ನೀಡಿದ ಉಲ್ಲೇಖವಿದೆ, ವಿಜಯನಗರ ಕಾಲದಲ್ಲಿ ಕನಕ ಇಲ್ಲಿ ಮಾಂಡಲಿಕನಾಗಿದ್ದ ಉಲ್ಲೇಖವಿದೆ.
ಇಲ್ಲಿನ ಪ್ರಮುಖ ದೇವಾಲಯ ಶ್ರೀ ಆದಿಕೇಶವ ದೇವಾಲಯ ಹಲವು ಕಾಲಘಟ್ಟಗಳಲ್ಲಿ ನಿರ್ಮಾಣವಾದ ಈ ದೇವಾಲಯ ಈಗ ಸಾಕಷ್ಟು ಜೀರ್ಣೋದ್ದಾರಗೊಂಡಿದೆ. ದೇವಾಲಯದ ಗರ್ಭಗುಡಿಯಲ್ಲಿ ಸುಂದರವಾದ ಸುಮಾರು ಮೂರು ಅಡಿ ಎತ್ತರದ ಕೇಶವನ ಶಿಲ್ಪವಿದೆ. ಶಂಖ, ಚಕ್ರ, ಗದಾ ಹಾಗು ಪದ್ಮಧಾರಿಯಾಗಿರುವ ಈ ಶಿಲ್ಪವನ್ನು ಕನಕದಾಸರು ಬಾಡದಿಂದ ತಂದು ಸ್ಥಾಪಿಸಿದರು ಎಂಬ ನಂಬಿಕೆ ಇದೆ. ಕನಕದಾಸರು ಉಪಯೋಗಿಸುತ್ತಿದ್ದ ಶಂಖ ಈಗಲೂ ಅಲ್ಲಿ ಇದೆ. ಸುಮಾರು 50 ವರ್ಷದ ಕೆಳಗೆ ಇಲ್ಲಿ ಕನಕದಾಸರ ಶಿಲ್ಪವನ್ನು ಸ್ಥಾಪಿಸಲಾಗಿದೆ.
ಕೇಶವನ ದೇವಾಲಯದ ಪಕ್ಕದಲ್ಲಿ ನರಸಿಂಹ ದೇವಾಲಯವಿದ್ದು ನವೀಕರಣಗೊಂಡ ಈ ದೇವಾಲಯದ ಗರ್ಭಗುಡಿಯಲ್ಲಿ ವಿಜಯನಗರೋತ್ತರ ಕಾಲದ ಉಗ್ರನರಸಿಂಹನ ಶಿಲ್ಪವಿದೆ. ಆದಿ ಕೇಶವ ಪ್ರಾಂಗಣದಲ್ಲಿ ಕಾಂತೇಶ, ಶಾಂತೇಶ ಮತ್ತು ಭ್ರಾಂತೇಶನ ಪ್ರತಿಕೃತಿಗಳು ಹಾಗು ಈ ಶಿಲ್ಪವನ್ನು ನೋಡಿದರೆ ಮೂರೂ ದೇ ವಾಲಯವನ್ನು ನೋಡಿದ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.
ಕಾಗಿನೆಲೆಯಲ್ಲಿ ಕನಕದಾಸರ ಹೆಸರಿನಲ್ಲಿ ಕನಕ ಗುರು ಪೀಠವಿದೆ. ಇಲ್ಲಿ 1992 ರ ಫೆಬ್ರವರಿಯಲ್ಲಿ ಸ್ಥಾಪನೆಯಾದ ಈ ಮಠ ಕನಕದಾಸರ ಆಶಯದಂತೆ ಅವರ ಸಾಹಿತ್ಯದ ಪ್ರಚಾರ ಮತ್ತು ಸಮಾಜದ ಹಿತ ಕಾಯುತ್ತ ಕಾರ್ಯ ನಿರ್ವಹಿಸುತ್ತಿದೆ. ಈ ಮಠ ನಾಡಿನ ಕುರುವ ಗೌಡ ಮತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಗೊಂಡಿದೆ. ಇದರ ಪೀಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದ ಪುರಿ ಸ್ವಾಮೀಜಿಯವರು, ಬಡವರು ವಿದ್ಯಾಭ್ಯಾಸ ಸೇರಿದಂತೆ ಸಮಾಜಮುಖಿ ಕೆಲಸ ಮಾಡಿದ್ದರು.
ಪ್ರಸ್ತುತ ಇಲ್ಲಿ ಶ್ರೀ ಶ್ರೀ ಶ್ರೀ ನಿರಂಜನಾನಂದ ಪುರಿ ಮಹಾ ಸ್ವಾಮೀಜಿಗಳು ಪೀಠಾಧೀಶರಾಗಿದ್ದು ವಂಚಿತ ಸಮುದಾಯದ ಪರ ಕೆಲಸ ಮಾಡುತ್ತಿದ್ದಾರೆ. ಸರಕಾರ ಸಹ ಕಾಗಿನೆಲೆ ಪ್ರಾಧಿಕಾರದ ರಚನೆ ಮಾಡಿದ್ದು ರಚನಾತ್ಮಕ ಕೆಲಸಕ್ಕೆ ಕೈ ಜೋಡಿಸಿದೆ.