ಸದ್ಭಾವನೆಯಿಂದ ಶಾಂತಿ ಸಮೃದ್ಧಿ ಪ್ರಾಪ್ತಿ: ಶ್ರೀ ರಂಭಾಪುರಿ ಜಗದ್ಗುರು

ರಾಣೆಬೆನ್ನೂರು:
ಸತ್ಯ ಧರ್ಮ ನಮ್ಮನ್ನು ಬದಲಿಸುತ್ತದೆ. ಆದರೆ ಸತ್ಯವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಸತ್ಯ ಸದ್ಭಾವನೆಯಿಂದ ಜಗದಲ್ಲಿ ಶಾಂತಿ ಸಮೃದ್ಧಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ನಗರದ ಹಿರೇಮಠದ ಶ್ರೀ ಶನೈಶ್ಚರ ಮಂದಿರದಲ್ಲಿ ಡಿಸೆಂಬರ್ 4ರಂದು ಜರುಗಿದ ಸದ್ಭಾವನಾ ಧರ್ಮ ಸಮಾರಂಭ ಹಾಗೂ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಮಾನವ ಜೀವನದ ಶ್ರೇಯಸ್ಸಿಗಾಗಿ ಧರ್ಮಾಚರಣೆ ಅತ್ಯಂತ ಅವಶ್ಯಕ. ಶನೈಶ್ಚರ ಮಂದಿರದಲ್ಲಿ ೩೮೪ ದಿನಗಳ ಕಾಲ ನಿರಂತರ ಕಾರ್ಯಕ್ರಮ ನಡೆದುಕೊಂಡು ಬಂದಿರುವುದು ಹೊಸ ದಾಖಲೆ ನಿರ್ಮಿಸಿದೆ. ಗ್ರಹಗಳಲ್ಲಿ ಗುರು ಮತ್ತು ಶನಿ ಅತ್ಯಂತ ಪ್ರಭಾವಶಾಲಿ ಗ್ರಹಗಳು. ಶನಿ ಜೀವನದಲ್ಲಿ ಪ್ರವೇಶ ಮಾಡಿದರೆ ಏಳೂವರೆ ವರ್ಷ ಕಾಡಿಸದೇ ಬಿಡಲಾರ. ಗುರು ದೃಷ್ಠಿ ಇದ್ದರೆ ಬರುವ ಕಷ್ಟಗಳು ಮಂಜಿನ0ತೆ ಕರಗಬಹುದು. ಇವೆರಡು ಗ್ರಹಗಳ ಕೃಪಾ ಕಾರುಣ್ಯಕ್ಕಾಗಿ ಸದಾ ಮನುಷ್ಯರು ಹಂಬಲಿಸುತ್ತಾರೆ. ಓದಿದ ಪಾಠಗಳನ್ನು ಮನುಷ್ಯ ಮರೆಯಬಹುದು. ಆದರೆ ಜೀವನದಲ್ಲಿ ಕಲಿತ ಪಾಠಗಳನ್ನು ಮರೆಯಲು ಸಾಧ್ಯವಿಲ್ಲ. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವ ಶಕ್ತಿ ಇರುತ್ತದೆ. ಸಿಹಿ ಹಣ್ಣು ಕೊಡುವ ಹಣ್ಣಿನ ಮರಕ್ಕೆ ಕಲ್ಲು ಹೊಡೆಯುವ ಜನ ಹೆಚ್ಚು ಇರುತ್ತಾರೆ. ಹಾಗೆಯೇ ಉಪಕಾರ ಮಾಡುತ್ತಿರುವ ಜನರಿಗೆ ಹೆಚ್ಚು ಕಷ್ಟ, ನಿಂದನೆ ಮತ್ತು ಅಪವಾದಗಳು ಬರುತ್ತವೆ. ಕಷ್ಟಗಳು ಸುಖಾಗಮನದ ಹೆಗ್ಗುರುತು ಎಂದು ತಿಳಿದು ಬಾಳಿದರೆ ಜೀವನದಲ್ಲಿ ಉತ್ಕರ್ಷತೆ ಹೊಂದಲು ಸಾಧ್ಯವಾಗುತ್ತದೆ.

ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಲೋಕ ಕಲ್ಯಾಣ ಮತ್ತು ಪ್ರದೇಶಾಭಿವೃದ್ಧಿಗಾಗಿ ಎರಡು ಮಹಾಮಂಡಲ ಪೂಜೆಯನ್ನು ಶನೈಶ್ಚರನಿಗೆ ಸಲ್ಲಿಸಿ ಭಕ್ತ ಸಂಕುಲದ ಶ್ರದ್ಧೆ ವಿಶ್ವಾಸಕ್ಕೆ ಪಾತ್ರರಾಗಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ಶ್ರೀಗಳಿಗೆ ರೇಶ್ಮೆ ಮಡಿ, ಸ್ಮರಣಿಕೆ ಮತ್ತು ಫಲ ಪುಷ್ಪವಿತ್ತು ಶುಭ ಹಾರೈಸಿದರು. ಲಕ್ಷ ದೀಪೋತ್ಸವ ಸಮಾರಂಭವನ್ನು ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸಿದರು.


ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ಖಾತೆ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ “ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಯು.ಬಿ. ಬಣಕಾರ, ರಾಮಲಿಂಗಣ್ಣನವರ ವಕೀಲರು ಇನ್ನೂ ಮೊದಲಾದ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಬಂಕಾಪುರ ಅರಳೆಲೆಮಠ, ಮಳಲಿ, ಸಂಗೊಳ್ಳಿ, ಹಂಪಸಾಗರ, ಸಿಂಧನೂರು, ಕೆಂಭಾವಿ, ದಿಂಡದಹಳ್ಳಿ, ಮಠಗಳ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ನಿರೂಪಕಿ ದಿವ್ಯಾ ಆಲೂರು ನಿರೂಪಣೆ ಮಾಡಿದರು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles