ಶ್ರೀ ಗೋಪಾಲದಾಸರಿಗೆ ನಮನ

ಗೋಪಾಲದಾಸರೆ ನಿಮಗೆ ವಂದಿಪೆ
ಅಪಾರಶಕ್ತರೆ ನಿಮ್ಮ ಪಾದಕ್ವಂದಿಪೆ
ಅಪರೋಕ್ಷ ಜ್ಞಾನಿಗಳ ನೆನೆದು ಹರ್ಷಿಪೆ
ಕಾಪಾಡಿ ಎಂದು ಶೆರಗೊಡ್ಡಿ ಪ್ರಾರ್ಥಿಪೆ

ಕಡುಬಡತನದಲ್ಲೂ ಸಾಧನೆಯ ಮಾಡುತ
ಬಿಡದೆ ಗಾಯತ್ರಿ ಮಂತ್ರ ಸಿದ್ಧಿಪಡೆಯುತ
ಗುಡಿಯಲ್ಲಿ ವಾಸಿಸಿ ಭವಿಷ್ಯ ಹೇಳುತ
ಎಡೆಬಿಡದೆ ಭಕ್ತಿಯಲಿ ಹರಿಯ ಮೆಚ್ಚಿಸುತ

ವಿಜಯದಾಸರಿಂದ ಅಂಕಿತವ ಪಡೆಯುತ
ನಿಜ ಭಕ್ತಿಯಲ್ಲಿ ಗೋಪಾಲವಿಠಲ ಎನ್ನುತ
ನಿಜ ಸುಜ್ಞಾನವ ಪದಗಳಲಿ ತುಂಬುತ
ಭಜನೆ ಕೀರ್ತನೆಯಲ್ಲಿ ಹರಿಯನ್ನು ಸ್ಮರಿಸುತ

ಗುರುವಾಜ್ಞೆಯಂತೆ ಆಯರ್ದಾನ ನೀಡುತ
ತರುಣ ಆಚಾರ್ಯನ ಉದರಶೂಲೆ ಕಳೆಯುತ
ಪರಮ ಜಗನ್ನಾಥದಾಸರುದ್ಧಾರ ಮಾಡುತ
ನಿರುಪಮ ಆನಂದದಲಿ ತೇಲಾಡುತ

ಸುಳಾದಿಯಲ್ಲಿ ತುಂಬಿಹರು ಭಕ್ತಿಸಾರವ
ಸುಳಿವು ಬಿಂಬೋಪಾಸನೆಗೆ ಯೋಗ್ಯಮಾರ್ಗವ
ಹಲವಾರು ಕೀರ್ತನೆಯಲಿ ಭಕ್ತಿ ಶಿಖರವ
ನಲಿಯುತ ಕಟ್ಟಿಹರು ಭಾಗಣ್ಣ ಸೌಧವ

ಗಣಪತಿಯ ಅಂಶದಿಂದ ಬಂದ ಶ್ರೇಷ್ಠರೆ
ಬಣ್ಣಿಸಲಸದಳವು ನಿಮ್ಮ ದಾಸವರ್ಯರೆ
ಕಣ್ಣಿಗೆ ಸಿರಿಹರಿಯ ತೋರಿ ಸಚ್ಚಾರಿತ್ರರೆ
ಮಣಿಯುವೆ ನಿಮ್ಮಡಿಗಳಿಗೆ ಭಾಗ್ಯದಾತರೆ.

*ರೂಪಶ್ರೀ ಶಶಿಕಾಂತ್

Related Articles

ಪ್ರತಿಕ್ರಿಯೆ ನೀಡಿ

Latest Articles