ಆದರ್ಶ ಸ್ತ್ರೀರತ್ನ ಸೀತಾಮಾತೆ

✍️ಎಸ್. ಎಲ್. ವರಲಕ್ಷ್ಮೀ ಮಂಜುನಾಥ್

ವೈದೇಹಿ,ಸೀತಾಮಾತೆ ಎಂದೊಡನೆ ಅಪೂರ್ವ ರೂಪ ರಾಶಿಯ, ಮಾತೃವಾತ್ಸಲ್ಯದಿಂದ ದಿಟ್ಟಿಸುತ್ತಿರುವ ರಾಮನ ಪಕ್ಕದಲ್ಲಿ ವಿರಾಜಮಾನಳಾದ ಸಾಧ್ವಿಮಣಿಯ ಚಿತ್ರ ಕಣ್ಣ ಮುಂದೆ ತೇಲಿ, ಕೈಗಳು ತನ್ನಿಂದ ತಾನೇ ಆ ಮಹಾಮಾತೆಗೆ ಮುಗಿಯುತ್ತವೆ.

ಸೀತಾ ಎಂಬ ಹೆಸರನ್ನು ಕೇಳದವರು ಭಾರತದಲ್ಲಿ ಇಲ್ಲವೆಂದೇ ಹೇಳಬಹುದು.ಹಿಂದೂ ಧರ್ಮದ ಪವಿತ್ರ ಗ್ರಂಥವಾದ ರಾಮಾಯಣದಲ್ಲಿನ ಪ್ರಮುಖ ಪಾತ್ರವಾಗಿ ಸೀತಾಮಾತೆ ಕಾಣಿಸಿಕೊಳ್ಳುತ್ತಾಳೆ. ಲಂಕೆಯ ದುರುಳ ರಾಕ್ಷಸ ರಾವಣನ ಅಂತ್ಯಕ್ಕಾಗಿ ವಿಷ್ಣು ತನ್ನ ಏಳನೇ ಅವತಾರವಾದ ರಾಮನಾಗಿ ಅವತರಿಸುತ್ತಾನೆ.ರಾಮನ ಮಡದಿಯಾಗಿ ಸಾಕ್ಷತ್ ಲಕ್ಷ್ಮಿದೇವಿ, ಸೀತೆಯಾಗಿ ಅವತರಿಸಿದಳೆಂದು ಪುರಾಣಗಳು ಹೇಳುತ್ತವೆ. ಪಂಚ ಮಹಾಪತಿವ್ರತಾ ಸ್ತ್ರೀಯಲ್ಲಿ ಸೀತೆಯು ಅಗ್ರಮಾನ್ಯಳು.

ಸೀತೆಯು ಬಿಹಾರದ ಸೀತಾಮರ್ಹಿ(ಸೀತಾಕುಂಡ್)ಎಂಬಲ್ಲಿ ಭೂತಾಯಿಯ ಮಗಳಾಗಿ ಅವತರಿಸುತ್ತಾಳೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಜನಕ ಮಹಾರಾಜ ಭೂಮಿಯನ್ನು ಉಳುವಾಗ ನೇಗಿಲ ತುದಿಗೆ ಸಿಕ್ಕ ದೈವೀ ಕಾಂತಿಯಿಂದ ಕಂಗೊಳಿಸುತ್ತಿದ್ದ ಹೆಣ್ಣುಶಿಶುವನ್ನು ಕಾಣುತ್ತಾನೆ. ದೇವರು ಕೊಟ್ಟ ವರವೆಂದು ಭಾವಿಸಿ ಆ ಮಗುವನ್ನು ತನ್ನ ಮಗಳಾಗಿ ಸ್ವೀಕರಿಸುತ್ತಾನೆ. ನೇಗಿಲ ತುದಿಗೆ ‘ಸೀತ’ಎಂದು ಹೆಸರು. ಹಾಗಾಗಿ ಆ ಮಗುವಿಗೆ ಸೀತಾ ಎಂದು ಹೆಸರಾಗುತ್ತದೆ. ಜನಕರಾಜನ ಮಗಳಾದ್ದರಿಂದ ಜಾನಕಿ ಎಂದೂ, ವಿದೇಹದ ರಾಜಕುಮಾರಿಯಾದ್ದರಿಂದ ವೈದೇಹಿ ಎಂದೂ ಕರೆಯಲ್ಪಡುತ್ತಾಳೆ. ಮುಂದೆ ತನ್ನ ಸ್ವಯಂವರದಲ್ಲಿ ಶಿವ ಧನುಸ್ಸನ್ನು ಮುರಿದ ವಿಷ್ಣು ಅವತಾರಿ ರಾಮನನ್ನು ವರಿಸುತ್ತಾಳೆ. ವಿವಾಹ ನಂತರ ಸೀತೆ ಎದುರಿಸುವ ಸಂಕಷ್ಟಗಳು ಒಂದೆರಡಲ್ಲ. ಅವಳು ಈ ಸಂದರ್ಭಗಳಲ್ಲಿ ತೋರಿದ ಧೈರ್ಯ, ಧರ್ಮಬದ್ಧತೆ,ಪಾವಿತ್ರ್ಯತೆ ಮುಂತಾದವುಗಳಿಂದಲೇ ಪ್ರಪಂಚದ ನಾರೀಮಣಿಯರಿಗೆ ಆದರ್ಶಮಯವಾಗಿ ನಿಲ್ಲುತ್ತಾಳೆ. ಅವಳು ಕೇವಲ ಆದರ್ಶ ಪತ್ನಿ ಮಾತ್ರವಲ್ಲ, ಆದರ್ಶ ರಾಣಿ, ಆದರ್ಶ ಮಗಳು,ಆದರ್ಶ ತಾಯಿಯಾಗಿಯೂ ಹೆಸರಾಗಿದ್ದಾಳೆ. ಸಂಸ್ಕಾರವಂತಳಾಗಿ, ಸಕಲ ವಿದ್ಯಾಪಾರಂಗತಳಾಗಿ ಜನಕ ಮಹಾರಾಜನಿಗೆ ತಕ್ಕ ಮಗಳೆನಿಸುತ್ತಾಳೆ.

ಈ ದೃಷ್ಟಿಯಲ್ಲಿ ಅವಳು ಓರ್ವ ಆದರ್ಶ ಪುತ್ರಿಯೂ ಹೌದು. ಪಿತೃವಾಕ್ಯ ಪರಿಪಾಲನೆಗಾಗಿ ರಾಮ ಅಡವಿ ದಾರಿ ಹಿಡಿದಾಗ,ತಾನು ರಾಜಕುವರಿಯಾಗಿದ್ದರೂ ಎಲ್ಲಾ ವೈಭೋಗ ತ್ಯಜಿಸಿ ಪತಿಯ ಹಿಂದೆ ನಡೆಯುತ್ತಾಳೆ. ಸೀತೆಯ ಈ ನಡೆ ಅವಳ ತ್ಯಾಗ,ಸತಿಧರ್ಮಕ್ಕೆ ನಿದರ್ಶನವಾಗಿದೆ. ಪತಿ ಶ್ರೀರಾಮ ರಾಜಧರ್ಮ ಪರಿಪಾಲನೆಗಾಗಿ ತೊರೆದರೂ, ಪತಿಯ ಮೇಲಿನ ಅವಳ ಪ್ರೀತಿ ಎಳ್ಳಷ್ಟೂ ಕಡಿಮೆಯಾಗುವುದಿಲ್ಲ.ದುರುಳ ರಾವಣ, ಅಶೋಕವನದಲ್ಲಿ ಬಂಧಿಸಿ ಬಗೆ ಬಗೆಯ ಪ್ರಲೋಭನೆಗಳನ್ನು ಒಡ್ಡಿದರೂ ವಿಚಲಿತಳಾಗದೆ ತನ್ನ ಸತಿಧರ್ಮಕ್ಕೆ ಅಚಲಳಾಗಿ ನಿಲ್ಲುತ್ತಾಳೆ. ಕೊನೆಗೆ ರಾವಣ ಪ್ರಾಣ ಬೆದರಿಕೆ ಒಡ್ಡಿದಾಗಲೂ ಹೆದರದೆ ಅವನನ್ನು ತೃಣಕ್ಕೆ ಸಮನಾಗಿ ಕಾಣುತ್ತಾಳೆ. ಹನುಮಂತನು,ಲಂಕೆಯಿಂದ ಬಂಧಮುಕ್ತಳನ್ನಾಗಿ ಮಾಡಿ ಕರೆದುಕೊಂಡು ಹೋಗುವುದಾಗಿ ಹೇಳಿದಾಗ ಅದನ್ನು ತಿರಸ್ಕರಿಸಿ, ಪತಿ ರಾಮ ವೀರೋಚಿತವಾಗಿ ರಾವಣನೊಂದಿಗೆ ಹೋರಾಡಿ ತನ್ನನ್ನು ಬಂಧಮುಕ್ತಳನ್ನಾಗಿ ಮಾಡಬೇಕೆಂದು ತಿಳಿಸುತ್ತಾಳೆ. ಸೀತೆ ಕೇವಲ ಸಾಧ್ವಿ ಶಿರೋಮಣಿ ಮಾತ್ರವಲ್ಲದೆ ಒಬ್ಬ ವೀರಸ್ತ್ರೀ ಎಂಬುದನ್ನು ಇದು ತೋರಿಸುತ್ತದೆ.

ಕೀಳು ಜನರ ಮಾತಿನಿಂದ ನೊಂದು ರಾಜಧರ್ಮ ಪಾಲನೆಗಾಗಿ,ತುಂಬು ಗರ್ಭಿಣಿಯಾಗಿದ್ದ ತನ್ನನ್ನು ತೊರೆದು ಕಾಡಿಗೆ ಕಳಿಸಿದಾಗಲೂ ಅವಳು ಧೈರ್ಯಗೆಡುವುದಿಲ್ಲ.ವಾಲ್ಮೀಕಿ ಮಹರ್ಷಿಗಳ ಆಶ್ರಯದಲ್ಲಿ ಅವಳಿ ಮಕ್ಕಳಾದ ಲವಕುಶರಿಗೆ ಜನ್ಮ ನೀಡಿ ನಿಗೆ ತಕ್ಕ ಸಂಸ್ಕಾರವಂತ,ಧರ್ಮನಿಷ್ಠ ಪರಾಕ್ರಮಿ ಯೋಧರನ್ನಾಗಿ ಬೆಳೆಸುತ್ತಾಳೆ.ಆ ಮೂಲಕ ತಾನೊಬ್ಬ ಆದರ್ಶ ತಾಯಿ ಎಂಬುದನ್ನು ಜಗಕ್ಕೆ ತೋರಿಸಿದ್ದಾಳೆ.ಹೀಗೆ ಇಡೀ ವಿಶ್ವಕೇ ಆದರ್ಶ ಪ್ರಾಯಳಾದ,ಪುಣ್ಯಚರಿತಳಾದ ಸೀತೆಯನ್ನು ಆರಾಧಿಸುವುದು ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು. ಹಿಂದೂ ಪಂಚಾಂಗದ ಪ್ರಕಾರ ಪ್ರತಿವರ್ಷದ ವೈಶಾಖ ಮಾಸದ ಶುಕ್ಲಪಕ್ಷದ ನವಮಿಯಂದು ಸೀತಾನವಮಿಯನ್ನು ಆಚರಿಸಲಾಗುತ್ತದೆ.ಈ ಪುಣ್ಯದಿನದಂದು ದೇವಿ ಲಕ್ಷ್ಮಿ ಸೀತೆಯಾಗಿ,ಭೂಸುತೆಯಾಗಿ ಪ್ರಕಟಳಾಗಿ ಜನಕ ಮಹಾರಾಜನಿಗೆ ದೊರಕಿದಳೆಂದು ಪ್ರತೀತಿ.ಈ ಶುಭದಿನದಂದು ಮುತ್ತೈದೆಯರು ಮನೆಯಲ್ಲಿ ಸುಖಶಾಂತಿ ನೆಲಸಲೆಂದು, ಸೌಭಾಗ್ಯ ಸ್ಥಿರವಾಗಿರಲೆಂದು ರಾಮಸೀತೆಯರ ಪೂಜೆ, ಅರ್ಚನೆ ಮಾಡುತ್ತಾರೆ. ಈ ಪುಣ್ಯ ವ್ರತವನ್ನು ಆಚರಿಸುವುದರಿಂದ ಅನೇಕ ತೀರ್ಥಯಾತ್ರೆಗಳನ್ನು ಮತ್ತು ದಾನ ಧರ್ಮಾದಿಗಳನ್ನು ಮಾಡಿದ ಪುಣ್ಯ ಲಭ್ಯವಾಗುತ್ತದೆಂದು ನಂಬಲಾಗಿದೆ.

ಸೀತಾನವಮಿ ಆಚರಣಾ ವಿಧಾನ:

ಸುಹಾಸಿನಿಯರು ಪ್ರಾತಃಕಾಲದಲ್ಲಿ ಬೇಗನೆ ಎದ್ದು ವ್ರತದ ಸಂಕಲ್ಪ ಮಾಡಬೇಕು. ಮನೆಯಲ್ಲಿನ ಶುದ್ಧ ನೀರಿನಿಂದ ಸೀತಾರಾಮರ ವಿಗ್ರಹಗಳನ್ನು ಸ್ವಚ್ಛಗೊಳಿಸಿ, ಅದನ್ನು ವಿಧಿಪೂರ್ವಕವಾಗಿ ಪೂಜಿಸಬೇಕು. ದೀಪಗಳನ್ನು ಬೆಳಗಿಸಿ ಆರತಿ ಮುಂತಾದ ಷೋಡಶೋಪಚಾರ ಸೇವೆ ಮಾಡಿ, ಸಿಹಿ ನೈವೇದ್ಯ ಮಾಡಿ ಹಂಚಬೇಕು. ಸುಹಾಸಿನಿಯರನ್ನು ಕರೆದು ಅರಸಿನ ಕುಂಕುಮ ಮಂಗಳ ದ್ರವ್ಯಗಳನ್ನು ನೀಡಿ ಸತ್ಕರಿಸಬೇಕು. ಒಟ್ಟಾರೆಯಾಗಿ ಭಾರತೀಯ ಮಹಿಳೆಯರಿಗೆ ಭೂಷಣಪ್ರಾಯಳಾದ, ಆದರ್ಶಪ್ರಾಯಳಾದ ಸೀತೆಯನ್ನು ಆರಾಧಿಸುವುದು, ಸ್ಮರಿಸಿಕೊಳ್ಳುವುದು ನಾವು ಅವಳ ಮಹಾನ್ ವ್ಯಕ್ತಿತ್ವಕ್ಕೆ ನೀಡುವ ಗೌರವವೆಂದರೆ ಅತಿಶಯೋಕ್ತಿಯಲ್ಲ.

Related Articles

2 COMMENTS

  1. ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳು ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳು

    ಅಧಿಕೃತವಾಗಿ ಬದುಕು ಬರಹ ಎರಡು ಅವಶ್ಯ ಬರವಣಿಗೆ ಸರಳ ವಿಮರ್ಶೆ ಯೋಗ್ಯ ವಿಷಯ ಪೌರಾಣಿಕ ಸರಳ ವಿವರಗಳಿಗೆ ಸರಳ ಭಾಷೆ ಶುಭಾಶಯಗಳು

ಪ್ರತಿಕ್ರಿಯೆ ನೀಡಿ

Latest Articles