ಶ್ರೀ ಶಂಕರಾಚಾರ್ಯರು ರಚಿಸಿರುವ ಕನಕಧಾರ ಸ್ತೋತ್ರವು ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿ ಮಾಡುತ್ತದೆ. ಈ ಸ್ತೋತ್ರವನ್ನು ಪಠಿಸಿದರೆ ಕಷ್ಟಗಳು ಹೋಗಿ, ಐಶ್ವರ್ಯ, ಸಂಪತ್ತು, ಅಭಿವೃದ್ಧಿ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಮಹಾಲಕ್ಷ್ಮಿಯ ಭಕ್ತರುಗಳಲ್ಲಿ ಇದೆ.ಇಲ್ಲಿ ‘ಕನ’ ಎಂದರೆ ಬಂಗಾರ ಮತ್ತು ‘ಧಾರ” ಎಂದರೆ ಧಾರಣೆ ಅಥವಾ ಹಿಡಿದಿರುವಾಕೆ ಎಂದರ್ಥ. ಇದು ಮಹಾಲಕ್ಷ್ಮಿಯನ್ನು ಹೊಗಳಲು ಇರುವಂತಹ ಸ್ತೋತ್ರವಾಗಿದ್ದು ಕೈಯಲ್ಲಿ ಚಿನ್ನವನ್ನು ಹಿಡಿದಿರುವಳೇ ಮಹಾಲಕ್ಷಿ ಎಂದು ವರ್ಣಿಸುತ್ತದೆ. ಈ ಸ್ತೋತ್ರವನ್ನು ದಿನ ಪಠಿಸಿದರೆ, ಬಡತನ ನೀಗುವುದಂತೆ.ಶಂಕರಾಚಾರ್ಯರ ಬಾಲ್ಯ ಜೀವನದ ಶಿಕ್ಷಣ ದಿನಗಳಲ್ಲಿ ಗುರುಕುಲ ಪದ್ಧತಿಯಂತೆ ವಿದ್ಯಾರ್ಥಿಗಳು ಊಟಕ್ಕೆ ಬಿಕ್ಷೆ ಬೇಡಿ ತರಬೇಕಾಗಿತ್ತು. ಹೀಗೊಂದುದಿನ ಪುಟ್ಟ ಶಂಕರ ಒಂದು ಮನೆಯ ಮುಂದೆ ನಿಂತು “ಭವತಿ ಭಿಕ್ಷಾಂದೇಹಿ” ಎಂದ. ಮನೆಯಾಕೆ ಕಡು ಬಡವಳು. ಎರಡು ದಿನದಿಂದ ಊಟಮಾಡದೆ ನಿಶ್ಯಕ್ತಳಾಗಿದ್ದಳು. ”ಬಾಲಕ ಶಂಕರಾ, ನಿನ್ನಂತಹ ವಟುಗಳನ್ನು ಬರಿಗೈಲಿ ಕಳುಹಿಸಬಾರದು. ನನ್ನ ಮನೆಯೊಳಗೆ ಗಿಡದಿಂದ ಕೊಯಿದಿಟ್ಟ ಒಂದು ನೆಲ್ಲಿಕಾಯಿ ಮಾತ್ರವೇ ಇದೆ. ಅದನ್ನಾದರೂ ನಿನಗೆ ಭಿಕ್ಷೆ ನೀಡುತ್ತೇನೆ” ಎಂದು ಶಂಕರನಿಗೆ ನೀಡಿದಳು. ಭಿಕ್ಷೆ ಪಡೆದ ಶಂಕರನ ಮನಸ್ಸು ನೊಂದಿತು. ಎಂತಹ ದುಸ್ಥಿತಿ ಈಕೆಯದು. ಮನೆಯೋ ಮುರುಕು ಗುಡಿಸಲು!. ಮನಸ್ಸೋ ನಿರ್ಮಲ ಸೌಧ!!. ಈಕೆಯನ್ನು ಹೇಗಾದರೂ ಮಾಡಿ ಉದ್ಧರಿಸಬೇಕೆಂದು ಮಹಾಲಕ್ಷ್ಮಿಗೆ ಮೊರೆಯಿಟ್ಟು ಸ್ತುತಿಸಿದ. ಸ್ವತಃ ಶ್ಲೋಕ ರಚಿಸಿ ಮಹಾಲಕ್ಷ್ಮಿಯನ್ನು ಅನನ್ಯ ಬೇಡಿಕೊಂಡ.ಏನಾಶ್ಚರ್ಯ! ಲಕ್ಷ್ಮಿ ಪ್ರತ್ಯಕ್ಷಳಾಗಿ ಆ ಬಡವಿಯ ಮನೆಗೆ ಬಂಗಾರದ ನೆಲ್ಲಿಕಾಯಿಯನ್ನು ಸುರಿಸಿದಳು. ಈ ಸ್ತೋತ್ರಕ್ಕೆ ಕನಕಧಾರ ಸ್ತೋತ್ರ ಎಂದು ಹೆಸರಾಯಿತು.