ಮಂತ್ರಾಲಯ : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ, ಆ.29ರಿಂದ ಸೆ.4ರವರೆಗೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್ ಅವರ ಉಪಸ್ಥಿತಿಯಲ್ಲಿವಿದ್ವಾನ್ ರಾಮ ವಿಠ್ಠಲಾಚಾರ್ಯ, ವಿದ್ವಾನ್ ಗರಿಕಿಪಟ್ಟಿ ನರಸಿಂಹರಾವ್, ಟಾಟಾ ಸಂಸ್ಥೆಯ ಕಾರ್ಯಾಧ್ಯಕ್ಷ ಎನ್.ಚಂದ್ರಶೇಖರ್ ಹಾಗೂ ಪೂರ್ಣವಿಶ್ವವಿದ್ಯಾಲಯ ಡಾ. ವಿಶ್ವನಾಥ್ ಡಿ. ಕಾರಟ್ ಅವರಿಗೆ ಪ್ರಸಕ್ತ ಸಾಲಿನ ‘ಶ್ರೀ ಗುರು ರಾಘವೇಂದ್ರ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ.
ವಿವಿಧ ಕಾರ್ಯಕ್ರಮಗಳು
ಆ.29ರಿಂದ ಆರಾಧನಾ ಮಹೋತ್ಸವ ಪ್ರಾರಂಭವಾಗಲಿದೆ. ಅಂದಿನಿಂದ ಪ್ರತಿದಿನ ಸಂಜೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆರಾಧನಾ ಸಪ್ತರಾತ್ರೋತ್ಸವ ಅಂಗವಾಗಿ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧನ್ಯೋತ್ಸವ, ಋುಗ್ವೇದ ನಿತ್ಯ ನೂತನ ಉಪಕರ್ಮಗಳು ನಡೆಯಲಿವೆ.
ಆ.30ರಂದು ಶಾಖೋತ್ಸವ, ರಜತ ಮಂಟಪೋತ್ಸವ, ಯಜುರ್ವೇದ ನಿತ್ಯ ನೂತನ ಉಪಕರ್ಮ, ಆ.31ರಂದು ಪೂರ್ವಾರಾಧನಾ ರಜತ ಸಿಂಹವಾಹನೋತ್ಸವ, ಸೆ.1ರಂದು ಮಧ್ಯಾರಾಧನೆ ನಿಮಿತ್ತ ಮಹಾಪಂಚಾಮೃತ ಅಭಿಷೇಕ, ಸ್ವರ್ಣರಥೋತ್ಸವ, ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀರಾಯರ ಮೂಲ ಬೃದಾವನಕ್ಕೆ ಶ್ರೀ ಶ್ರೀನಿವಾಸದೇವರ ಶೇಷವಸ್ತ್ರ ಸಮರ್ಪಿಸಲಾಗುತ್ತದೆ. ನಂತರ ಶ್ರೀಪಾದಂಗಳವರಿಂದ ಮಹಾಪಂಚಾಮೃತಾಬಿಷೇಕ, ಪ್ರಾಕಾರದಲ್ಲಿಸುವರ್ಣ ರಥೋತ್ಸವ ನಡೆಯಲಿದೆ. ಸಂಜೆ ವೇಳೆ ಗಜರಜತ, ಸ್ವರ್ಣರಥೋತ್ಸವಾದಿಗಳು ನಡೆಯಲಿವೆ.
ಸೆ.2ರಂದು ಉತ್ತರಾರಾಧನಾ ಅಂಗವಾಗಿ ಬೆಳಗ್ಗೆ 10 ಕ್ಕೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವ.
ಸೆ.3ರಂದು ಶ್ರೀಸುಜ್ಞಾನೇಂದ್ರ ತೀರ್ಥರ ಆರಾಧನೆ ಹಾಗೂ ಸಂಜೆ ಅಶ್ವವಾಹನೋತ್ಸವ.
ಸೆ.4ರ ಸಂಜೆ ಶ್ರೀಮಠದ ಪ್ರಾಕಾರದಲ್ಲಿಸರ್ವಸಮರ್ಪಣೋತ್ಸವ ಹಾಗೂ ಆರಾಧನಾ ಸಪ್ತರಾತ್ರೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.