ಸಂತಾನ ಭಾಗ್ಯ ಕರುಣಿಸುವ ದೇವನೆಂದೇ ಪ್ರಸಿದ್ಧಿ – ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ಸ್ವಾಮಿ

ಕುಕ್ಕೇ ಸುಬ್ರಹ್ಮಣ್ಯದಿಂದ ಶಾಂತವಾಗಿ ಹರಿದು ಬಂದ ಕುಮಾರಧಾರಾ ನದಿಯ ತಟ, ಶಾಂತಿಮೊಗರು ಬಳಿ, ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಸಿರಿಯ ನಡುವೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರು ನೆಲೆಯಾಗಿದ್ದಾನೆ. ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ ದೇವನೆಂದೇ ಪ್ರಸಿದ್ಧಿಯಾಗಿರುವ ಈ ದೇಗುಲ ೨೦೨೦ರಲ್ಲಿ ಪುನರ್ ಜೀರ್ಣೋದ್ಧಾರಗೊಂಡು ಏಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿತ್ತು. ಕೊರೊನಾ ಕಾರಣದಿಂದ ಬ್ರಹ್ಮಕಲಶೋತ್ಸವವನ್ನು ದೇವಸ್ಥಾನದ ಆಡಳಿತ ಸಮಿತಿ ಮುಂದೂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಭಕ್ತರ ಪಾಲಿನ ಪುಣ್ಯಕ್ಷೇತ್ರ. ಪೌರಾಣಿಕ ಹಿನ್ನೆಲೆ ಹೊಂದಿರುವ ಈ ದೇಗುಲವನ್ನು ಧೌಮ್ಯ ಮಹರ್ಷಿಗಳು ಪ್ರತಿಷ್ಠಾಪನೆ ಮಾಡಿದರು. ಕುಕ್ಕೆಯಲ್ಲಿ ನಡೆಯುವಂತೆ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಷಷ್ಠಿಸಂದರ್ಭದಲ್ಲಿ ಜಾನುವಾರು ಜಾತ್ರೆ ಕೂಡಾ ನಡೆಯುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಗ್ರಾಮದ ಹಿರಿಯರು.
೧೯೯೪ರ ಸುಮಾರಿನಲ್ಲಿ ಮರಗಿಡ, ಬಳ್ಳಿಗಳಿಂದ ಆವೃತವಾಗಿದ್ದ ದೇವರಪೀಠ ಹಾಗೂ ಲಿಂಗಸ್ವರೂಪಿ ಸುಬ್ರಹ್ಮಣ್ಯನ ಹೊರತಾಗಿ ಅಲ್ಲಿ ಬೇರೇನೂ ಇರಲಿಲ್ಲ. ಕಾಲಕ್ರಮೇಣ ಈ ದೇಗುಲ ಜೀರ್ಣಾವಸ್ಥೆಗೆ ಬಂದಿತು. ದೇಗುಲವನ್ನು ಊರಿನವರೆಲ್ಲಾ ಸೇರಿ ಜೀರ್ಣೋದ್ಧಾರಗೊಳಿಸಲು ಮುಂದಾದರು. ದೇವಾಲಯದಲ್ಲಿ ೨೦೦೨ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿದೆ.

ದೇಗುಲ ವಿಶೇಷ: ಸುಬ್ರಹ್ಮಣ್ಯದಲ್ಲಿರುವಂತೆಯೇ ಶಾಂತಿಮೊಗರು ದೇಗುಲದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸ್ವಯಾಂಭುಲಿ0ಗ ಸ್ವರೂಪಿಯಾಗಿ ನೆಲೆಯಾಗಿದ್ದಾನೆ. ಈ ದೇಗುಲಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿ, ಶಾಂತಿಮೊಗರುನಲ್ಲಿ ಹರಿಯುವ ಕುಮಾರಾಧಾರ ನದಿಯಲ್ಲಿರುವ ದೇವರ ಮೀನುಗಳಿಗೆ ತಿನ್ನಲು ಅಕ್ಕಿ ಹಾಕಿದರೆ ಮೈಮೇಲೆ ಬೀಳುವ “ಕೆಡು’ (ಮನುಷ್ಯನ ದೇಹದಲ್ಲಿ ಬೀಳುವ ಒಂದು ರೀತಿಯ ಕಜ್ಜಿ) ಇಲ್ಲವಾಗುತ್ತದೆ ಎಂಬ ನಂಬಿಕೆಯೂ ಇದೆ.

ವಿಶೇಷ ಸೇವೆಗಳು: ಶಾಂತಿಮೊಗರು ಶ್ರೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ಅದ್ಧೂರಿಯಾಗಿ ನೆರವೇರುತ್ತದೆ. ಅಲ್ಲದೇ ಪಂಚಮಿ ಉತ್ಸವ, ಪ್ರತಿವರ್ಷ ರ್ಶರಾವಣ ಮಾಸದಲ್ಲಿ ಗಣಹೋಮ, ತೆನೆ ಕಟ್ಟುವುದು, ನಾಗರಪಂಚಮಿಯAದು ನಾಗತಂಬಿಲ, ಕಿರುಷಷ್ಠಿಯಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ನವರಾತ್ರಿ ಪೂಜೆ, ದೀಪಾವಳಿಗೆ ಬಲಿಯೇಂದ್ರ ಪೂಜೆ, ಮತ್ತಿತರ ಪೂಜೆ ಪುನಸ್ಕಾರಗಳು ನಡೆಯುತ್ತವೆ. ವಿಷು ಸಂಕ್ರಮಣದ0ದು ಕಣಿ ಇಟ್ಟು ವಿಷು ವಿಶೇಷ ಪೂಜೆ ನಡೆಯುತ್ತದೆ. ಏಪ್ರಿಲ್ ೨೪ರಂದು ದೇಗಲದ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯುತ್ತದೆ. ಅಲ್ಲದೇ ಪ್ರತಿ ಹುಣ್ಣಿಮೆ ದಿನ ಭಜನಾ ಕಾರ್ಯಕ್ರಮ ನಡೆಯುತ್ತದೆ.
ಭಕ್ತರ ಹರಕೆ ಇದ್ದರೆ ದುರ್ಗಾಪೂಜೆ, ನಾಗತಂಬಿಲ, ಸರ್ಪ ಸಂಸ್ಕಾರ ಕೂಡಾ ನಡೆಯುತ್ತದೆ.

ಪೂಜಾ ಸಮಯ: ಬೆಳಗ್ಗೆ ೮.೩೦ ಹಾಗೂ ಮಧ್ಯಾಹ್ನ ೧೨ಗಂಟೆಗೆ ಮಹಾಪೂಜೆ.

ಹೋಗುವುದು ಹೀಗೆ: ಪುತ್ತೂರಿನಿಂದ ಬರುವಿರಾದರೆ ಪುತ್ತೂರು-ದರ್ಬೆ-ಸವಣೂರು ಮಾರ್ಗವಾಗಿ ಬಂದು, ಸವಣೂರಿನಿಂದ ೨ ಕಿಮೀ ಮುಂದಕ್ಕೆ ಬಂದರೆ ಬರೆಪ್ಪಾಡಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಎಡಕ್ಕೆ ೨ ಕಿಮೀ ಮುಂದೆ ಸಾಗಿದರೆ ಕುಮಾರಧಾರಾ ನದಿ ಹರಿಯುವುದು ಕಾಣಿಸುತ್ತದೆ. ಅಲ್ಲೇ ನದಿಯ ದಂಡೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆಲೆಯಾಗಿದ್ದಾನೆ.

Related Articles

ಪ್ರತಿಕ್ರಿಯೆ ನೀಡಿ

Latest Articles