ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ
ಪರಶುರಾಮ ಕ್ಷೇತ್ರವಾದ ಕಡಲತೀರದ ಉಡುಪಿಯ ಹತ್ತಿರವಿರುವ, ಬೆಟ್ಟ ಗುಡ್ಡ, ಹಚ್ಚಹಸಿರಿನಿಂದ ಕಣ್ಮನ ಸೆಳೆಯುವ ಪ್ರಕೃತಿಯೇ ಮೈದಳೆದು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ನಿಂತಂತಿರುವ ಪಾಜಕವೆಂಬ ಪುಟ್ಟಹಳ್ಳಿಯಲ್ಲಿ ಮಧ್ಯಗೇಹಭಟ್ಟ ಹಾಗೂ ವೇದವತಿ ದಂಪತಿಗಳಲ್ಲಿ ಜಗತ್ತನ್ನು ಬೆಳಗುವ ಸನ್ಯಾಸಪುಷ್ಟ ಅರಳಿತು.
ಮಧ್ವಸಿದ್ಧಾಂತವನ್ನು ಸ್ಥಾಪಿಸಿ, ವಿಷ್ಣುಸರ್ವೋತ್ತಮ ತತ್ವವನ್ನು ಸಾರಿ ಸಾರಿ ಹೇಳುವ, ಪಂಚಬೇಧ ಜಗತ್ಸತ್ಯ, ದ್ವೈತಸಿದ್ಧಾಂತದ ಸಾಮ್ರಾಜ್ಯವನ್ನು ಬೆಳಗುವ ಸೂರ್ಯನಂತಹ ಪ್ರಖರ ತೇಜಸ್ಸಿನ ಕೂಸು ಜನಿಸಿತು.
ಭಗವದಿಚ್ಛೆಯಂತೆ ಭಗವತತ್ವಗಳನ್ನು ಪ್ರಚುರಿಸಲು ದೇವತೆಗಳು ಭುವಿಯಲ್ಲವತರಿಸುತ್ತಾರೆ. `ದುಷ್ಟ ಶಿಕ್ಷಣೆ ಮತ್ತು ಶಿಷ್ಟರಕ್ಷಣೆ’ ಯು ಭಗವತ್ಸಂಕಲ್ಪವನ್ನು ಸಾಧಿಸಲೆಂದೇ ಅವತರಿಸುವ ಅಂತಹ ದೇವತೆಗಳಲ್ಲಿ ಜೀವೋತ್ತಮರಾದ ವಾಯುದೇವರು ಪ್ರಮುಖರಾದವರು.
ಭಗವತ್ಕಾರ್ಯ ಸಾಧಕರಾದ ವಾಯುದೇವರು ತ್ರೇತಾಯುಗದಲ್ಲಿ ಹನುಮಂತನಾಗಿ ಅವತರಿಸಿ, ದ್ವಾಪರಯುಗದಲ್ಲಿ ಭೀಮಸೇನನಾಗಿ ಜನಿಸಿ, ಈ ಕಲಿಯುಗದಲ್ಲಿ ಶ್ರೀಮದಾಚಾರ್ಯರಾಗಿ ಜನಿಸಿದರು. ವಾಸುದೇವನೆಂಬ ನಾಮದಿಂದ ಬಿದಿಗೆಯ ಚಂದ್ರನಂತೆ ಬೆಳೆಯುತ್ತಿದ್ದ ಕೂಸು ಅತಿಮಾನುಷವಾದ ಕೆಲಸಗಳನ್ನು ಮಾಡುತ್ತಿದ್ದುದನ್ನು ಕಂಡು ಹೆತ್ತವರು ಹಾಗೂ ಊರ ಜನತೆ ನಿಬ್ಬೆರಗಾಗುತ್ತಿದ್ದರು.
ಒಂದು ಬಾರಿ ತಾಯಿಯು ಎಲ್ಲೊ ಹೊರಗೆ ಹೋಗಬೇಕಾದ ಪ್ರಸಂಗ ಬಂದಾಗ ಪುಟ್ಟ ವಾಸುದೇವನನ್ನು ಮಗಳಿಗೆ ನೋಡಿಕೊಳ್ಳಲು ಹೇಳಿದ್ದರು. ಮಗು ಅಳುವುದನ್ನು ಕಂಡ ಅಕ್ಕ ಮಗುವಿಗೆ ಹಸಿವಾಗಿರಬಹುದೆಂದು ಭಾವಿಸಿ ಕಡೆಗೆ ಉಪಾಯಗಾಣದೆ ಹಸುವಿಗಾಗಿ ಅಲ್ಲಿಯೇ ಬೇಯಿಸಿಟ್ಟಿದ್ದ ಹುರುಳಿಯನ್ನೇ ತಿನ್ನಿಸಿದ್ದಳು. ದನ ತಿಂದು ಜೀರ್ಣಿಸಿಕೊಳ್ಳುವ ಹುರುಳಿಯನ್ನು ಬುಟ್ಟಿ ತುಂಬ ತಿಂದುಬಿಟ್ಟಿತ್ತು ಕೂಸು. ಕಾಲು ಬಂದ ಮಗು ಒಮ್ಮೆ ಆಟವಾಡುತ್ತಲೇ ಹೋಗಿ ಬರುತ್ತಿದ್ದ ದೊಡ್ಡ ಎತ್ತಿನ ಬಾಲವನ್ನು ಹಿಡಿದು ಜೋತಾಡುತ್ತಾ ಕಾಡೆಲ್ಲಾ ಸುತ್ತಿಬಂದಿತ್ತು. ಬಾಲಕ ವಾಸುದೇವನನ್ನು ಹುಡುಕುತ್ತಿದ್ದ ತಂದೆಗೆ ಜನ ಈ ವಿಷಯ ಹೇಳಿದ್ದರು.
ಕುಂಜಾರುಗಿರಿಯ ಬೆಟ್ಟದ ಮೇಲಿನ ದುರ್ಗೆಯ ದರ್ಶನಕ್ಕೆಂದು ಬರುತ್ತಿದ್ದ ಬಾಲ ಮಧ್ವರು ದೇವಸ್ಥಾನದಲ್ಲಿದ್ದಾಗಲೇ ಊಟಕ್ಕೆಂದು ಕರೆಯುತ್ತಿರುವ ತಾಯಿಯ ಧ್ವನಿ ಕೇಳಿಸಿದಾಗ, ತಾಯಿಯ ಕೂಗಿಗೆ ತಡಮಾಡದೇ ಆ ಕೂಡಲೇ ಆ ಬೆಟ್ಟದಿಂದ ಜಿಗಿದರು. ಆಗ ಅವರ ಪುಟ್ಟ ಪಾದಗಳ ಗುರುತು ಅಲ್ಲಿ ಮೂಡಿತು. ವಾಸುದೇವ ನಿತ್ಯವೂ ಪರಶುರಾಮ ದೇವರಿಂದ ನಿರ್ಮಿತಗೊಂಡ ನಾಲ್ಕು ತೀರ್ಥಗಳಲ್ಲಿ ಸ್ನಾನಕ್ಕಾಗಿ ಹೋಗುವುದನ್ನು ರೂಢಿಮಾಡಿಕೊಂಡಿದ್ದ.
ಹೀಗೆ ಹೋದಾಗ, ಒಮ್ಮೆ ಬಾಲಕನ ರೂಪದಲ್ಲಿದ್ದ ವಾಯುದೇವನನ್ನು ಕೊಲ್ಲಬೇಕೆಂದು ಮಣಿಮಂತನೆಂಬ ರಾಕ್ಷಸನು ಸರ್ಪರೂಪದಿಂದ ಅಲ್ಲಿ ಹೊಂಚುಹಾಕಿ ಕುಳಿತಿದ್ದ. ವಾಸುದೇವ ಹತ್ತಿರ ಬರುತ್ತಲೇ ಅವನ ಮೃದು ಪಾದಗಳನ್ನು ಕಚ್ಚಿಬಿಟ್ಟ. ಆದರೆ ವಾಯುದೇವರಿಗೆ ಏನಾಗಲು ಸಾಧ್ಯ? ಏನೂ ಆಗಲಿಲ್ಲ. ಕೂಡಲೇ ವಾಸುದೇವ ತನ್ನ ಕಾಲಿನ ಹೆಬ್ಬೆರಳಿನಿಂದ ಆ ಸರ್ಪವನ್ನು ಹೊಸಕಿಹಾಕಿಬಿಟ್ಟ.
ಈಗಲೂ ಘಟನೆಯ ಸಾಕ್ಷಿಯಾಗಿ ಪಾದದ ಗುರುತು ಮೂಡಿರುವುದನ್ನು ನೋಡಬಹುದು. ಈ ಘಟನೆಯಾದ ನಂತರ ತಂದೆತಾಯಿಗಳಿಗೆ ಮಗ ಪ್ರತಿದಿವಸವೂ ಸ್ನಾನಕ್ಕಾಗಿ ಅಷ್ಟು ದೂರ ಹೋಗುವುದು ಕ್ಷೇಮವಲ್ಲವೆನ್ನಿಸಿ ತಾಯಿ ಹೋಗಬೇಡವೆಂದು ಹಠ ಹಿಡಿದಳು. ತಾಯಿಯ ಪ್ರೀತಿಗೆ ಕಟ್ಟುಬಿದ್ದು ವಾಸುದೇವ `ಅಮ್ಮಾ ಯೋಚಿಸಬೇಡ ನಾನು ಇನ್ನು ಮುಂದೆ ಸ್ನಾನಕ್ಕಾಗಿ ಅಷ್ಟು ದೂರ ಹೋಗುವುದಿಲ್ಲ. ಆ ತೀರ್ಥಗಳೇ ಇಲ್ಲಿಗೆ ಬರುವವು’ ಎಂದು ಸಮಾಧಾನ ಹೇಳಿ ಮನೆಯ ಈಶಾನ್ಯ ಮೂಲೆಗೆ ಬಂದು ಒಂದು ಕಡ್ಡಿಯಿಂದ ನೆಲವನ್ನು ಬಗೆದ. ಅವನು ಹಳ್ಳ ತೋಡಿದ ಕಡೆ ಶುದ್ಧವಾದ ಜಲ ಜುಳುಜುಳು ಜಿನುಗತೊಡಗಿತು. ಅದೇ ವಾಸುದೇವ ತೀರ್ಥವಾಯಿತು. ಅದರಲ್ಲಿ ಪರಶುರಾಮ ನಿರ್ಮಿತ ನಾಲ್ಕು ತೀರ್ಥಗಳಾದ ಪರಶುರಾಮತೀರ್ಥ, ಬಾಣತೀರ್ಥ, ಧನುಸ್ತೀರ್ಥ, ಗದಾತೀರ್ಥ, ಗಂಗಾದಿ ಸಕಲ ತೀರ್ಥಗಳು ಸಂಗಮಿಸಿತು.
ವಾಸುದೇವ ಸ್ನಾನ ಮಾಡುತ್ತಿದ್ದ ಶುದ್ದ ಜಲದಿಂದ ಕಂಗೊಳಿಸುವ ವಾಸುದೇವತೀರ್ಥವನ್ನು ಈಗಲೂ ಪಾಜಕ ಕ್ಷೇತ್ರದಲ್ಲಿ ನೋಡಬಹುದು. ಇನ್ನೊಮ್ಮೆ ಮಧ್ಯಗೇಹರು ಧನಿಕನೊಬ್ಬನಿಂದ ಎತ್ತೊಂದನ್ನು ಕೊಂಡುತಂದಿದ್ದರು. ಆದರೆ ಅದರ ಹಣವನ್ನು ಪೂರ್ಣವಾಗಿ ತೀರಿಸಲು ಸಾಧ್ಯವಾಗಿರಲಿಲ್ಲ. ಧನಿಕ ಎಷ್ಟು ಅಂತ ನೋಡಿಯಾನು. ಒಂದು ದಿವಸ `ನಡುಮನೆ’ಯ ಬಾಗಿಲಿಗೇ ಬಂದು ಬಾಕಿ ಇರುವ ಹಣವನ್ನು ಹಿಂದಿರುಗಿಸುವ ತನಕ ಏಳುವುದಿಲ್ಲವೆಂದು ಧರಣಿ ಕುಳಿತುಬಿಟ್ಟ. ಪಾಪ ಕಡು ಬಡವರಾದ ಮಧ್ಯಗೇಹರು ಏನು ತಾನೇ ಮಾಡಿಯಾರು? ಹಸಿವು ಬಾಧಿಸುತ್ತಿದ್ದರೂ ಋಣದ ಬಾಧೆಯ ತೀವ್ರತೆಯಿಂದ ಅವರು ಅಂದು ಊಟ ಮಾಡಲಿಲ್ಲ. ಹಸಿದಿರುವ ಅಪ್ಪನನ್ನು ಬಿಟ್ಟು ವಾಸುದೇವನಿಗೆ ಊಟಮಾಡಲು ಮನಸಾಗಲಿಲ್ಲ. ವಾಸುದೇವನಿಗೆ ಏನೆನ್ನಿಸಿತೋ, ಅಪ್ಪನ ಕಣ್ಣುತಪ್ಪಿಸಿ ಮೆಲ್ಲನೆ ಹೊರನಡೆದ. ಧನಿಕನು ಧರಣಿ ಕುಳಿತಿದ್ದ ಸ್ಥಳದಲ್ಲಿ ಹುಣಸೆಮರವೊಂದಿದ್ದು ಅದರ ಕೆಳಗೆ ಹುಣಸೆ ಬೀಜಗಳು ಯಥೇಚ್ಛವಾಗಿ ಬಿದ್ದಿದ್ದವು. ವಾಸುದೇವ ಆ ಹುಣಸೆ ಬೀಜಗಳನ್ನು ತನ್ನ ಪುಟ್ಟ ಬೊಗಸೆಯಲ್ಲಿ ತುಂಬಿಕೊಂಡು ಧನಿಕನಿಗೆ ನೀಡಿದ. ಇಲ್ಲೂ ಒಂದು ಆಶ್ಚರ್ಯ ಕಾದಿತ್ತು ಬೊಗಸೆ ತುಂಬಾ ನೀಡಿದ ಹುಣಸೆಯೇ ಹಣವಾಗಿ ಪರಿವರ್ತಿತವಾಗಿತ್ತು. ಧನಿಕನಿಗೆ ಸಂದಾಯವಾಗಬೇಕಿದ್ದ ಹಣ ಅವನಿಗೆ ಸೇರಿತ್ತು. ಅವನು ತೃಪ್ತಿಯಿಂದ ಮಧ್ಯಗೇಹರಿಗೆ ಈ ವಿಷಯ ತಿಳಿಸಿ ಸಂತೋಷದಿಂದ ಹಿಂದಿರುಗಿದ.
ಭಟ್ಟರಿಗಂತೂ ಇದನ್ನು ನಂಬಲಿಕ್ಕೇ ಆಗಲಿಲ್ಲ. ಆದರೆ ಕಣ್ಣೆದುರಿಗೇ ನಡೆದ ಘಟನೆ ತಮ್ಮ ಅಮೃತಸ್ಪರ್ಶದಿಂದ ಹುಣಸೆ ಬೀಜದಿಂದ ಋಣ ನೀಗಿಸಿದ್ದರು. ಈಗಲೂ ಪಾಜಕದಲ್ಲಿ ಮಂತ್ರಾಕ್ಷತೆಯೊಂದಿಗೆ ಹುಣಸೇಬೀಜಗಳನ್ನು ನೀಡುತ್ತಾರೆ. ಮನೆಯಲ್ಲಿಟ್ಟರೆ ನಾವೂ ಕೂಡಾ ಮಾಡಿದ ಸಾಲದಿಂದ ಋಣಮುಕ್ತರಾಗುತ್ತೇವೆ.
ಮಧ್ಯಗೇಹರಿಗೆ ತಮ್ಮ ಮಗು ಸಾಮಾನ್ಯವಾದುದಲ್ಲ ಎಂದು ಪದೇ ಪದೇ ಭಾಸವಾಗುತ್ತಿತ್ತು. ಅವರು ವಾಸುದೇವನಿಗೆ ಒಂದು ಶುಭ ಮುಹೂರ್ತದಲ್ಲಿ ಅಕ್ಷರಾಭ್ಯಾಸ ಮಾಡಿಸಲು ಸಂಕಲ್ಪಿಸಿದರು. ದೊಡ್ಡ ಹಾಸುಕಲ್ಲಿನ ಮೇಲೆ ಮಧ್ಯಗೇಹಭಟ್ಟರು ಕೆಲವು ಅಕ್ಷರಗಳನ್ನು ಬರೆದು ಮಗನಿಂದ ತಿದ್ದಿಸಿದರು. ಮತ್ತೆ ಮರುದಿವಸವೂ ತಂದೆ ಹಿಂದಿನ ದಿವಸ ಬರೆದ ಅಕ್ಷರಗಳನ್ನು ಬರೆದು ತಿದ್ದಲು ಹೇಳಿದಾಗ `ಅಪ್ಪಾ ನಿನ್ನೆ ಬರೆದ ಅಕ್ಷರಗಳನ್ನೇ ಮತ್ತೇಕೆ ಬರೆಯುತ್ತಿರುವಿರಿ’ ಎಂದು ವಾಸುದೇವ ಮುದ್ದುಮುದ್ದಾಗಿ ಪ್ರಶ್ನಿಸಿದ.
ಇದನ್ನು ಕೇಳಿದ ನಂತರ ಭಟ್ಟರಿಗೆ ತಮ್ಮ ಮಗ ಜ್ಞಾನಸೂರ್ಯ ಎಂದು ತಿಳಿಯಿತು. ಅಂದಿನಿಂದ ಜನರ ದೃಷ್ಟಿ ತಾಕೀತೆಂದು ಅಂದಿನಿಂದ ಏಕಾಂತದಲ್ಲಿ ಅಕ್ಷರಾಭ್ಯಾಸ ಮಾಡಿಸತೊಡಗಿದರು. ಒಂದು ಶುಭಮಹೋತ್ಸವದಲ್ಲಿ ಉಪನಯನ ಮಹೋತ್ಸವ ನಡೆಯಿತು. ಸ್ವಯಂ ತೇಜೋಮೂರ್ತಿಗಳಾದ ಜೀವೋತ್ತಮರಿಗೆ, ಉಪನಯನವಾದ ನಂತರ ತಮ್ಮ ಮಗನ ತೇಜಸ್ಸು ನೂರ್ಮಡಿಯಾಯಿತೆಂದು ಹೆತ್ತವರು ಭಾವಿಸಿದರು.
ವಾಸುದೇವನೂ ತಂದೆ ತಾಯಿಗಳ ಮನಸ್ಸನ್ನು ಸಂತೋಷಪಡಿಸಲು ಲೋಕದ ರೀತಿಯಲ್ಲಿಯೇ ವರ್ತಿಸತೊಡಗಿದ. ದಿನದಿಂದ ದಿನಕ್ಕೆ ಶೋಭಿಸುತ್ತಾ ಸಂಧ್ಯಾದಿ ಕರ್ಮಗಳನ್ನು ಅತಿ ನಿಷ್ಠೆಯಿಂದ ಮಾಡತೊಡಗಿದ.
ಮಧ್ಯಗೇಹಭಟ್ಟರು ಒಂದು ಕಡೆ ಪ್ರವಚನ ಮಾಡುತ್ತಿದ್ದಾಗ ಪುರಾಣ ಶ್ಲೋಕಗಳ ಅರ್ಥ ವಿವರಣೆಯನ್ನು ನೀಡುತ್ತಾ `ಲಿಕುಚ’ ಎಂಬ ಶಬ್ದದ ಅರ್ಥವನ್ನು ಸರಿಯಾಗಿ ತಿಳಿಯದಿದ್ದರಿಂದ ಅದರರ್ಥವನ್ನು ತೇಲಿಸಿಬಿಟ್ಟರು. ಆದರೆ ವಾಸುದೇವ ಬಿಡಲಿಲ್ಲ. ತಂದೆಯನ್ನೇ ಪ್ರಶ್ನಿಸಿದ. ತಂದೆ ತಬ್ಬಿಬ್ಬಾದಾಗ ತಾನೆ `ಲಿಕುಚ’ ಎಂಬ ಶಬ್ದಕ್ಕೆ `ಹೆಬ್ಬಲಸು’ ಎಂಬ ಅರ್ಥ ವಿವರಣೆಯನ್ನು ನೀಡಿದ. ಮಧ್ಯಗೇಹರು ಈ ವಿವರಣೆಯನ್ನು ಪರಿಶೀಲಿಸಿದಾಗ ವಾಸುದೇವನ ಉತ್ತರ ಸೂಕ್ತವಾಗಿತ್ತು. ತನ್ನನ್ನು ತುಂಬಿದ ಸಭೆಯಲ್ಲಿ ಮಗ ಪ್ರಶ್ನಿಸಿದನೆಂದು ತಂದೆಗೆ ಅವಮಾನವೆನ್ನಿಸಲಿಲ್ಲ ಇಂಥಾ ಮಗನನ್ನು ಪಡೆದಿದ್ದಕ್ಕೆ ಅವರಿಗೆ ಅತೀವ ಅಭಿಮಾನವುಂಟಾಯಿತು.
ವಾಸುದೇವನ ಬುದ್ಧಿಶಕ್ತಿಯಂತೆ ಅವನ ದೇಹ ಸಾಮರ್ಥ್ಯವೂ ಅಸಾಮಾನ್ಯವಾಗಿತ್ತು. ವಯಸ್ಸಿಗೆ ಮೀರಿದ ಬೆಳವಣಿಗೆ ಆತನದು. ಅವನ ಸಾಹಸ ಕಾರ್ಯಗಳಂತೂ ಬಲಭೀಮನ ನೆನಪನ್ನು ಹೆಜ್ಜೆ ಹೆಜ್ಜೆಗೂ ತರುತ್ತಿದ್ದವು. ಕೆಲವೊಮ್ಮೆ ಆತ ಅನೇಕ ಜನ ಬಲಾಡ್ಯರಿಂದಲೇ ಅಲುಗಾಡಿಸಲಸಾಧ್ಯವಾದ ಬಂಡೆ ಕಲ್ಲುಗಳನ್ನು ಏಕಹಸ್ತನಾಗಿ ಸಹಜವೆಂಬಂತೆ ಸುಲಭವಾಗಿ ಎತ್ತಿಟ್ಟುಬಿಡುತ್ತಿದ್ದ.
ತಾಯಿ ಒಮ್ಮೆ ಹೊರಗೆ ಹೋದಾಗ ಹಾಲು ಮತ್ತು ಮೊಸರಿನ ಪಾತ್ರೆಗಳ ಮೇಲೆ ಮುಚ್ಚಿಡಲು ಹೇಳಿದಾಗ ದೊಡ್ಡ ದೊಡ್ಡ ಬಂಡೆಗಳನ್ನು ಮುಚ್ಚಿಟ್ಟಿದ್ದ. ತಾಯಿ ಬಂದು ನೋಡಿದಾಗ ಎದೆ ಒಡೆದುಬಿಟ್ಟಳು. ಹತ್ತಾರು ಜನ ಎತ್ತುವ ಹಾಸುಬಂಡೆಯೊಂದನ್ನು ಈ ಪುಟ್ಟ ಬಾಲಕನೊಬ್ಬನೇ ಎತ್ತಟ್ಟಿದ್ದು ನೋಡಿ ತಾಯಿಗೆ ಹೇಗಾಗಿರಲಿಕ್ಕಿಲ್ಲ. ಈಗಲೂ ಆ ಎರಡು ಹಾಸುಬಂಡೆಗಳು ಪಾಜಕದಲ್ಲಿವೆ. ಗುರುಕುಲವಾಸ ತೌಳ ಪ್ರಾಂತದಲ್ಲಿಯೇ ಪ್ರಸಿದ್ದವಾದ ತೋಟಂತಿಲ್ಲಾಯ ಎಂಬ ವಿಪ್ರಶ್ರೇಷ್ಠರೊಬ್ಬರು ಗುರುಕುಲವನ್ನು ನಡೆಸುತ್ತಿದ್ದರು. ಬಳಿ ನೂರಾರು ವಿದ್ಯಾರ್ಥಿಗಳು ಶಾಸ್ತ್ರವ್ಯಾಸಂಗವನ್ನು ಮಾಡುತ್ತಿದ್ದರು.
ಮಧ್ವರು ನಿರ್ಮಿಸಿದ ದಂಡತೀರ್ಥ
ಮಧ್ಯಗೇಹಭಟ್ಟರೂ ಸಹ ತಮ್ಮ ಪುತ್ರನಾದ ವಾಸುದೇವನಿಗೆ ಹೆಚ್ಚಿನ ಶಾಸ್ತ್ರ ಶಿಕ್ಷಣವನ್ನು ಕೊಡಿಸಬೇಕೆಂದು ನಿರ್ಧರಿಸಿ ತೋಟಂತಿಲ್ಲಾಯರ ಗುರುಕುಲಕ್ಕೆ ಕಳುಹಿಸಿಕೊಟ್ಟರು. ಅಲ್ಲಿಯೂ ಕೂಡಾ ತಮ್ಮ ದೈವದತ್ತವಾದ ಪ್ರತಿಭೆ ಜಾಣ್ಮೆಯಿಂದ ಗುರುಗಳನ್ನು ಅಚ್ಚರಿಗೊಳಿಸುತ್ತಿದ್ದರು. ಈ ಬಾಲಕ ಸಾಮಾನ್ಯವಲ್ಲ ದೈವಾಂಶ ಎನ್ನುವ ಸತ್ಯ ಗುರುಗಳಿಗೆ ಅರಿವಾಗಿತ್ತು. ಆ ಸತ್ಯವನ್ನು ತಿಳಿಸುವ ಅನೇಕ ಪ್ರಸಂಗಗಳು ತೋಟಂತಿಲ್ಲಾಯರ ಗುರುಕುಲದಲ್ಲಿ ನಡೆದವು. ಗುರುಕುಲದಲ್ಲಿದ್ದಾಗ ಗುಣಪಡಿಸಲಾಗದ ತಲೆನೋವಿನಿಂದ ಬಳಲುತ್ತಿದ್ದ ಗುರುಪುತ್ರನ ಕಿವಿಯಲ್ಲಿ ಗಾಳಿಯನ್ನು ಊದುವ ಮಾತ್ರದಿಂದಲೇ ವಾಸುದೇವ ಆತನ ಶಿರೋವ್ಯಾಧಿಯನ್ನು ಶಾಶ್ವತವಾಗಿ ಪರಿಹರಿಸಿದ. ಮುಖ್ಯಪ್ರಾಣನ ಮುಖಾರವಿಂದದಿಂದ ಬಂದ ಗಾಳಿ ಸೋಕಿದೊಡನೆ ಗುರುಪುತ್ರನಿಗೆ ಅಪೂರ್ವವಾದ ಪ್ರಜ್ಞಾಶಕ್ತಿ ಮೂಡಿತಲ್ಲದೇ ಜನ್ಮಜನ್ಮಾಂತರದ ಸ್ಮೃತಿಯೂ ಲಭಿಸಿತು. ಮೂಡಿತಲ್ಲದೇ ಜನ್ಮಜನ್ಮಾಂತರದ ಸ್ಮೃತಿಯೂ ಲಭಿಸಿತು. ಅಷ್ಟೇ ಅಲ್ಲದೇ ಗುರುಗಳ ಆಶ್ರಮದಲ್ಲಿದ್ದ ನೀರಿನ ಅಭಾವವನ್ನು ಗಮನಿಸಿದ ವಾಸುದೇವನು ಒಂದು ದಂಡವನ್ನು ತೆಗೆದುಕೊಂಡು ಭೂಮಿಯನ್ನು ಬಗೆದ ಕೂಡಲೇ ಜಲಧಾರೆಯೇ ಹರಿಯಿತು. ಆ ತೀರ್ಥದಿಂದ ಜಲ ಸಮೃದ್ಧವಾಗಿ ಇಡೀ ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸಿತು. ಬಾಲಮಧ್ವರು ನಿರ್ಮಿಸಿದ ಆ ದಂಡತೀರ್ಥ ಉಡುಪಿ ಸಮೀಪದ ಕಾಪು ಎಂಬ ಸ್ಥಳದಲ್ಲಿ ಈಗಲೂ ನಾವು ನೋಡಬಹುದು.
ಗುರುಕುಲವಾಸ ಪೂರ್ಣವಾದ ನಂತರ ವಾಸುದೇವನ ಮನಸ್ಸು ಸನ್ಯಾಸದತ್ತ ಎಳೆಯಿತು. ತನ್ನ ಅವತಾರದ ಉದ್ದೇಶವನ್ನು ಸ್ಪಷ್ಟವಾಗಿ ತಿಳಿದಿದ್ದ ಅವರು “ದಂಡ ಹಿಡಿದು ಯತಿಯಾಗಬೇಕು. ದುರ್ವಾದಿಗಳನ್ನು ಖಂಡಿಸಬೇಕು. ತನಗಾಗಿಯೇ ಕಾತರಿಸುತ್ತಿರುವ ಅಸಂಖ್ಯಾತ ಸುಜೀವಿಗಳನ್ನು ಸತ್ಪಥದಲ್ಲಿ ಮುನ್ನಡೆಸಿ ಬ್ರಹ್ಮಾಂಡದೊಡೆಯನಾದ ಕೋದಂಡನನ್ನು ಕಾಣಿಸಿಕೊಡಬೇಕು” ಎಂದು ಸಂಕಲ್ಪಿಸಿ ಆಗ ಉಡುಪಿಯ ಶ್ರೀ ಅನಂತೇಶ್ವರನ ಸನ್ನಿಧಾನದಲ್ಲಿ ನೆಲೆಸಿದ್ದ ಅಚ್ಯುತಪ್ರೇಕ್ಷರೆಂಬ ಯತಿಗಳಲ್ಲಿಗೆ ಪ್ರಯಾಣ ಬೆಳೆಸಿದರು. ಅಚ್ಯುತಪ್ರೇಕ್ಷರು ಸಾಮಾನ್ಯ ಯತಿಗಳಲ್ಲ. ಇಂದ್ರಿಯ ನಿಗ್ರಹವುಳ್ಳ ವೈರಾಗ್ಯನಿಧಿಗಳಾಗಿದ್ದವರು. ಹಂಸನಾಮಕ ಪರಮಾತ್ಮನ ಪವಿತ್ರಪರಂಪರೆಯಲ್ಲಿ ಬಂದ ಯತಿವರೇಣ್ಯರು. ವಿದ್ಯಾ ವಿನಯ ಸಂಪನ್ನರಾಗಿ ಜ್ಞಾನಮಣಿಯಾಗಿದ್ದವರು. ಅವರ ಮನಸ್ಸಿನಲ್ಲಿ ತತ್ವ ವಿಪ್ಲವವೇ ನಡೆದಿತ್ತು. ಆಗ ಹೆಚ್ಚಾಗಿ ಪ್ರಚಲಿತದಲ್ಲಿದ್ದ ಅದ್ವೈತ ಸಿದ್ಧಾಂತವನ್ನು ಅಭ್ಯಾಸ ಮಾಡಿದ್ದರೂ ಅವರಿಗೆ ಸಂಶಯ ಬಾಧಿಸುತ್ತಿತ್ತು. ನಿರ್ಮಲ ಭಕ್ತಿಗೆ ಕಾರಣವಾಗುವ ಸತ್ಪಥ ತೋರೆಂದು ಆ ಸತ್ಯಶೋಧಕರು ಜಗಧೀಶ್ವರನಾದ ಅನಂತೇಶ್ವರನನ್ನೇ ಮೊರೆಹೊಕ್ಕಿದ್ದರು. ಶುದ್ಧಾತ್ಮರಾದ ಅವರ ಕೂಗು ಅನಂತೇಶ್ವರನಿಗೆ ಕೇಳಿಸಿರಬೇಕು. ಇಡೀ ಜಗತ್ತಿಗೆ ಸತ್ಪಥ ತೋರಲೆಂದೇ ಅವತರಿಸಿದ ಮುಖ್ಯಪ್ರಾಣನನ್ನೇ ಅನಂತೇಶ್ವರ ಅಚ್ಯುತಪ್ರೇಕ್ಷರಿಗೆ ಕರುಣಿಸಿದ. ಶಿಷ್ಯನಿಂದಲೇ ಗುರುವಿನ ಉದ್ದಾರವಾಗುವಂತಹ ಅಪೂರ್ವಘಟನೆಯೊಂದು ಧಾರ್ಮಿಕ ಇತಿಹಾಸದಲ್ಲಿ ದಾಖಲಾಯಿತು.
ವಾಸುದೇವನ ಸನ್ಯಾಸ ಸ್ವೀಕಾರಕ್ಕೆ ಅವನ ತಂದೆ ತಾಯಿಗಳು ಸುಲಭವಾಗಿ ಒಪ್ಪಲಿಲ್ಲ. ದುಃಖದ ಭರದಲ್ಲಿ ಅವನಿಗೆ ನಮಸ್ಕರಿಸುತ್ತಾ `ನಮಗೆ ನೀನೊಬ್ಬನೇ ಮಗ, ಹನ್ನೆರಡು ವರ್ಷ ಅನಂತೇಶ್ವರನನ್ನು ಸೇವಿಸಿ ನಿನ್ನನ್ನು ಪಡೆದಿದ್ದೇವೆ. ನೀನು ಸನ್ಯಾಸ ತೆಗೆದುಕೊಂಡರೆ ವೃದ್ಧರಾದ ನಮಗೆ ಯಾರು ದಿಕ್ಕು’ ಎಂದು ಕಣ್ಣೀರಿಟ್ಟರು. ಆಗ ವಾಸುದೇವ ಸಮಾಧಾನದಿಂದ ಅವರಿಗೆ ತನ್ನ ಮನದಿಚ್ಛೆಯನ್ನು ತಿಳಿಸುತ್ತಾ, `ದೊಡ್ಡವರಾದ ನೀವು ನನಗೆ ನಮಸ್ಕರಿಸುವ ಮೂಲಕ ಸನ್ಯಾಸಿಯಾಗಲು ಅನುಮತಿಯನ್ನೇ ಸೂಚಿಸಿದಂತಾಯಿತು’ ಎಂದು ನಕ್ಕು ನುಡಿದ. ಅವರು ಏನುಮಾಡಿದರೂ ಸನ್ಯಾಸಕ್ಕೆ ಸಮ್ಮತಿಸಲಿಲ್ಲ.
ಕಡೆಗೆ ‘ವಾಸುದೇವ ಒಬ್ಬನೇ ಮಗನಾದ ನಾನು ಸನ್ಯಾಸಿಯಾದರೆ ಮುಂದೆ ಯಾರು ದಿಕ್ಕೆಂದು ತಾನೇ ನಿಮ್ಮ ಕೊರಗು. ನಿಮಗೆ ಶೀಘ್ರದಲ್ಲಿಯೇ ಮತ್ತೊಬ್ಬ ಮಗ ಹುಟ್ಟುತ್ತಾನೆ. ಆನಂತರವೇ ನಾನು ಸನ್ಯಾಸ ಸ್ವೀಕರಿಸುತ್ತೇನೆ’ ಎಂದು ದಾರ್ಢ್ಯದಿಂದ ನುಡಿದು ಬಿಟ್ಟ.
ಅನತಿ ಕಾಲದಲ್ಲಿಯೇ ಮಧ್ಯಗೇಹ ದಂಪತಿಗಳಿಗೆ ಪುತ್ರೋತ್ಸವವಾಯಿತು. ಆ ನಂತರವೂ ಮಗನಿಗೆ ಅನುಮತಿ ನೀಡಲು ವೇದವತಿಯ ಮಾತೃ ಹೃದಯ ಹಿಂಜರಿಯಿತು. ‘ನೀವು ನನಗೆ ಸನ್ಯಾಸವನ್ನು ಸ್ವೀಕರಿಸಲು ಅನುಮತಿ ನೀಡಿರಿ. ಇಲ್ಲದಿದ್ದಲ್ಲಿ ನಿಮ್ಮಿಬ್ಬರ ಕಣ್ಣಿಗೆ ಮತ್ತೆ ನಾನು ಎಂದೂ ಬೀಳದಂತೆ ದೇಶಾಂತರಕ್ಕೆ ಹೋಗಿ ಬಿಡುತ್ತೇನೆ” ಎಂದು ವಾಸುದೇವ ಹೇಳಿದ ಮೇಲೆ ಆಕೆ ನಿರ್ವಾಹವಿಲ್ಲದೆ ಮೌನವಾಗಿ ತನ್ನ ಸಮ್ಮತಿ ಸೂಚಿಸಬೇಕಾಯಿತು. ಇದಾದ ನಂತರ ವಾಸುದೇವ ಅಚ್ಯುತಪ್ರೇಕ್ಷರ ಬಳಿ ತೆರಳಿದ. ತನ್ನ ಅವತಾರಕಾರ್ಯದ ಸಾಧನೆಗಾಗಿ ವಿಶೇಷವೆನ್ನಿಸಿದ ಸನ್ಯಾಸಾಶ್ರಮವನ್ನು ಸ್ವೀಕರಿಸಲು ಸಿದ್ಧವಾದ. ಅಚ್ಯುತಪ್ರೇಕ್ಷರೂ ಸಹ ವಾಸುದೇವನಿಗೆ ಯತ್ಯಾಶ್ರಮವನ್ನು ನೀಡಲು ಕಾತುರದಿಂದ ಕಾಯುತ್ತಿದ್ದರು. ಒಂದು ಶುಭ ಮುಹೂರ್ತದಲ್ಲಿ ವಿದ್ಯುಕ್ತವಾಗಿ ಸನ್ಯಾಸದೀಕ್ಷೆಯಿತ್ತು ‘ಪೂರ್ಣಪ್ರಜ್ಞ’ ಎಂಬ ಹೆಸರಿಟ್ಟರು. ಕೆಲವೇ ದಿನಗಳಲ್ಲಿ ಗುರುಗಳಿಗೆ ಅತ್ಯಂತ ಪ್ರಿಯವಾದರು. ಗುರುಗಳ ಹಲವು ಸಂದೇಹ ನಿವಾರಿಸಿದರಲ್ಲದೆ ಗುರುಗಳ ಅಪೇಕ್ಷೆಯಂತೆ ಅತ್ಯಂತ ಕಠಿಣ ಭಾಗವೆಂದು ಹೆಸರಾದ ಭಾಗವತದ ಪಂಚಮಸ್ಕಂದವನ್ನು ಗ್ರಂಥದ ಸಹಾಯವಿಲ್ಲದೆ ಸಾದ್ಯಂತ ನಿರೂಪಿಸಿ ಅರ್ಥ ವಿವರಣೆಯನ್ನು ನೀಡಿದರು. ಅಚ್ಯುತಪ್ರೇಕ್ಷರಿಗೆ ಪೂರ್ಣಪ್ರಜ್ಞರ ಸರ್ವಜ್ಞತೆಯನ್ನು ಕಂಡು ಪರಮಾನಂದವಾಯಿತು. ಜೊತೆಗೆ ಉತ್ತರ ಸಿಗದ ವಿಸ್ಮಯ.
ಹನ್ನೊಂದರ ಬಾಲಯತಿ ಇಷ್ಟೆಲ್ಲಾ ಕಲಿತದ್ದು ಯಾವಾಗ? ಈ ಜನ್ಮದಲ್ಲಂತೂ ಅವರು ಇಷ್ಟೆಲ್ಲಾ ಓದಿರಲಿಕ್ಕೆ ಸಾಧ್ಯವೇ ಇಲ್ಲ. ಕುತೂಹಲ ತಡೆಯಲಾರದೆ ಅಚ್ಯುತಪ್ರೇಕ್ಷರು ಕೇಳಿಯೇಬಿಟ್ಟರು. ಆಗ ಪೂರ್ಣಪ್ರಜ್ಞರು ಹೀಗೆ ಉತ್ತರ ಕೊಟ್ಟರು. `ಪೂರ್ವಜನ್ಮಸು ಹಿ ವೇದ ಪುರೇದಂ ಸರ್ವಮಿತ್ಯಮಿತಬುದ್ದಿರುವಾಚ’ – ಇವೆಲ್ಲವನ್ನೂ ನಾನು ಹಿಂದಿನ ಜನ್ಮಗಳಲ್ಲಿಯೇ ಓದಿಕೊಂಡಿದ್ದೇನೆ’ ಎಂದಾಗ ಗುರುಗಳಿಗೆ ಮಹದಾನಂದವಾಯಿತು.
ಅಚ್ಯುತಪ್ರೇಕ್ಷರು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಲು ಇಂತಹ ಉತ್ತಮಾಧಿಕಾರಿಯ ನಿರೀಕ್ಷಣೆಯಲ್ಲಿಯೇ ಇದ್ದರು. ವೇದಾಂತ ಸಾಮಾಜ್ಯದ ಚಕ್ರವರ್ತಿಗಳಾಗಲು ಪೂರ್ಣಪ್ರಜ್ಞರೇ ತಕ್ಕವರೆಂದು ಅವರಿಗೆ ಅನ್ನಿಸಿತು. ಅಚ್ಯುತಪ್ರೇಕ್ಷರು ತಡ ಮಾಡಲಿಲ್ಲ. ಒಂದು ಶುಭಮುಹೂರ್ತದಲ್ಲಿ ಪೂರ್ಣಪ್ರಜ್ಞರನ್ನು ಹಂಸನಾಮಕ ಪರಂಪರೆಯಲ್ಲಿ ಬಂದ ಪವಿತ್ರ ಪೀಠದಲ್ಲಿ ಕೂಡಿಸಿ ವಿದ್ಯುಕ್ತವಾಗಿ ಪಟ್ಟಾಭಿಷೇಕವನ್ನು ಮಾಡಿ “ಆನಂದತೀರ್ಥ” ಎಂಬ ಮಂಗಳಕರ ನಾಮವನ್ನು ಕರುಣಿಸಿದರು.
ಕೆಲ ದಿನಗಳ ನಂತರ ಆನಂದತೀರ್ಥರು ಉಡುಪಿಗೆ ಬಂದಿದ್ದ ಪರವಾದಿಗಳಾದ ಯತಿಗಳೊಂದಿಗೆ ವಾದ ಮಾಡಿ ಅವರನ್ನು ಜಯಿಸಿದರು. ಅನುಮಾನದ ಕುರಿತಾಗಿ ಅಪೂರ್ವ ವ್ಯಾಖ್ಯಾನವನ್ನೇ ನೀಡಿದ ಆನಂದತೀರ್ಥರಿಗೆ “ಅನುಮಾನತೀರ್ಥ” ಎಂಬ ಬಿರುದೂ ಪ್ರಾಪ್ತವಾಯಿತು.
ಒಮ್ಮೆ ಪೂರ್ಣಪ್ರಜ್ಞರಿಗೆ ಗಂಗಾಸ್ನಾನಕ್ಕಾಗಿ ಕಾಶಿಗೆ ಹೋಗಬೇಕೆಂಬ ಅಪೇಕ್ಷೆಯುಂಟಾಯಿತು. ಗುರುಗಳ ಅಪ್ಪಣೆಯನ್ನು ಮಾಡಿದರು. ಆದರೆ ತಮ್ಮ ಅಚ್ಚುಮೆಚ್ಚಿನ ಶಿಷ್ಯರನ್ನು ತುಂಬಾ ಹಚ್ಚಿಕೊಂಡಿದ್ದ ಅಚ್ಚುತಪ್ರೇಕ್ಷರಿಗೆ ಅವರನ್ನು ಬಿಟ್ಟಿರಲು ಮನಸ್ಸಾಗಲಿಲ್ಲ. ಅವರು ಭಗವಂತನನ್ನೇ ಮೊರೆಹೊಕ್ಕರು. ಆಗೊಂದು ಆಶ್ಚರ್ಯಕರ ಸಂಗತಿ ನಡೆಯಿತು.
ದೈವಸೂಚನೆಯಂತೆ ಪೂರ್ಣಪ್ರಜ್ಞರ ಅಪೇಕ್ಷೆಯನ್ನು ಪೂರೈಸಲು ವಿಷ್ಣುಪಾದೋದ್ಭವೆಯಾದ ಭಾಗೀರಥಿಯೇ ಉಡುಪಿಯ ಅನಂತ ಸರೋವರಕ್ಕೆ ಆಗಮಿಸಿದಳು. ಭಗವದಾಜ್ಞೆಯಂತೆ ಅನಂತ ಸರೋವರಕ್ಕೆ ಆಗಮಿಸಿದ ಜಾಹ್ನವೀಜಲದಲ್ಲಿ ಪೂರ್ಣಪ್ರಜ್ಞರನ್ನು ಮುಂದಿಟ್ಟುಕೊಂಡು ಎಲ್ಲರೂ ಸ್ನಾನಮಾಡಿ ಉಡುಪಿಯಲ್ಲಿಯೇ ಗಂಗಾಸ್ನಾನದ ಫಲ ಪಡೆದುಕೊಂಡರು. ಬಾಲ ಮಧ್ವರಿಗಾಗಿ ಗಂಗಾವತರಣವಾಗಿದ್ದರಿಂದ ಅಂದಿನಿಂದ ಅನಂತ ಸರೋವರ `ಮಧ್ವಸರೋವರ’ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.
ತಮ್ಮ ಅವತಾರದ ಉದ್ದೇಶ ಸಾಧನೆಗಾಗಿ ದೇಶದ ಉದ್ದಗಲಕ್ಕೂ ಮಿಂಚಿನಂತೆ ಸಂಚರಿಸಿ ತಮ್ಮ ಅಸ್ಟಲಿತ ವಾಗೈಖರಿಯಿಂದ ದುರ್ವಾದಿಗಳ ಸದ್ದಡಗಿಸಿದರು. ವೇದವ್ಯಾಸರಿಗೆ ಸಮ್ಮತವಲ್ಲದ ಇಪ್ಪತ್ತೊಂದು ಕುಮತಗಳನ್ನು ಖಂಡಿಸಿ ಅಪೌರುಷೇಯವಾದ ವೇದಗಳು ಸಾರಿದ ಸತ್ಯಾನ್ವೇಷಣೆಯ ಬೆಳಕಿನಲ್ಲಿ ಸಚ್ಛಾಸ್ತ್ರಗಳನ್ನು ನಿರ್ಮಿಸಿ ಮುಮುಕ್ಷುಗಳಿಗೆ ಮೋಕ್ಷಪಥವನ್ನು ತೋರಿದರು ದ್ವಾರಕೆಯಿಂದ ಬರುತ್ತಿದ್ದ ಹಡಗೊಂದರಲ್ಲಿ ದೈವದತ್ತವಾಗಿ ಲಭ್ಯವಾದ ಗೋಪೀಚಂದನದಿಂದಾವೃತವಾದ ಬಾಲಕೃಷ್ಣನ ಪುಟ್ಟ ವಿಗ್ರಹವನ್ನು ಉಡುಪಿಯ ಮಧ್ವಸರೋವರದ ದಂಡೆಯ ಮೇಲೆ ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಿ ಉಡುಪಿಯನ್ನು ಮತ್ತೊಂದು ದ್ವಾರಕಾಪುರವಾಗಿಸಿದ್ದರು. ಶ್ರೀಮಧ್ವರು ೧೨ನೇ ಶತಮಾನ/೧೩ನೇ ಶತಮಾನಗಳಲ್ಲಿ ಪ್ರಚಲಿತದಲ್ಲಿದ್ದ ಹಲವು ವಿಚಾರಗಳ ಚಿಂತನ ಮಂತನ ನಡೆಸಿ ತತ್ವವಾದವನ್ನು ಬೆಳಕಿಗೆ ತಂದರು.
ಉಡುಪಿಯಲ್ಲಿ ಶ್ರೀಕೃಷ್ಣನ ಪ್ರತಿಷ್ಠಾಪನೆ
ಸಜ್ಜನರಾದ ಸಾಧಕರಿಗೆ ಸಾಧನಾ ಮಾರ್ಗದಲ್ಲಿ ಮುಂದುವರಿಯಲು ಪ್ರೇರಣೆಯಾಗಲೆಂದು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ತಾವು ಪ್ರತಿಷ್ಠಾಪಿಸಿದ ಸಾಲಿಗ್ರಾಮಶಿಲೆಯ ಬಾಲಕೃಷ್ಣನ ಪೂಜೆಗಾಗಿ ಮತ್ತು ತತ್ವವಾದದ ಪ್ರಸಾರಕ್ಕೆ ಅಷ್ಟ ಹೃಷಿಕೇಶತೀರ್ಥರು, ನರಹರಿತೀರ್ಥರು, ಜನಾರ್ದನತೀರ್ಥರು, ಉಪೇಂದ್ರತೀರ್ಥರು, ವಾಮನತೀರ್ಥರು, ವಿಷ್ಣುತೀರ್ಥರು, ರಾಮತೀರ್ಥರು ಮತ್ತು ಅಧೋಕ್ಷಜತೀರ್ಥರೆಂಬ ಸಂನ್ಯಾಸಿಗಳನ್ನು ನೇಮಿಸಿದರು. ಹಾಗೆಯೇ ಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥ ಮತ್ತು ಅಕ್ಷೋಭ್ಯತೀರ್ಥರೆಂಬ ತಮ್ಮ ನಾಲ್ಕು ಜನ ಘಟ್ಟದ ಮೇಲಿನ ಶಿಷ್ಯರಿಗೆ ಮಧ್ವ ಮತಪ್ರಚಾರವನ್ನು ಮಾಡಲು ಆಜ್ಞಾಪಿಸಿದರು.
ಭಾರತೀಯ ದಾರ್ಶನಿಕ ಪರಂಪರೆಯ ಅಗ್ರಗಣ್ಯ ಆಚಾರ್ಯತ್ರಯರಲ್ಲಿ ಒಬ್ಬರಾದ ಜಗದ್ಗುರು ಶ್ರೀ ಮಧ್ವಾಚಾರ್ಯರು ಉಡುಪಿಯ ಶ್ರೀಕೃಷ್ಣನ ಕೀರ್ತಿಯನ್ನು ಅಷ್ಟ ಯತಿಗಳ ಮೂಲಕ ವಿಶ್ವಮಾನ್ಯಗೊಳಿಸಿದ ದ್ವೈತ ಸಿದ್ಧಾಂತದ ಪ್ರತಿಪಾದನಾಚಾರ್ಯರು. ಅವರ ತತ್ವಾದದ ತವರು, ಜಗದೋದ್ಧಾರಕ ಕೃಷ್ಣನ ನೆಲೆವೀಡಾದ ಪರಶುರಾಮ ಕ್ಷೇತ್ರವೇ ಉಡುಪಿ. ಇವರು ಇಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಮೇಲೆಯೇ ಉಡುಪಿ ಇನ್ನಷ್ಟು ಪ್ರಸಿದ್ಧವಾಯಿತು.
ಹಾಡುಗಬ್ಬಗಳನ್ನು ಬರೆದು ಹರಿದಾಸ ಪಂಥಕ್ಕೆ ನಾಂದಿ ಹಾಡಿದರು. ಆಚಾರ್ಯರ ದ್ವಾದಶಸ್ತೋತ್ರ ದಾಸಸಾಹಿತ್ಯಕ್ಕೂ ಮೂಲವಾಯಿತೆನ್ನಬಹುದು. ಅಷ್ಟಮಠಗಳ ಕಲ್ಪನೆ, ಎರಡು ತಿಂಗಳ ಪರ್ಯಾಯ ವಿಧಾನವನ್ನು ಉಡುಪಿಯಲ್ಲಿ ಅನುಷ್ಠಾನಗೊಳಿಸಿದರು ಆಚಾರ್ಯರು. ಆಚಾರ್ಯರದ್ದು ಸರಳ ತತ್ವಜ್ಞಾನದ ನಿರೂಪಣೆ, ಸರ್ವಸಮಭಾವದ ಉದಾತ್ತ ಧೋರಣೆ, ಜನಪದಕ್ಕೆ ಸಮೀಪವಾದ ವಿಚಾರಧಾರೆ ಮಧ್ವರ ಚಿಂತನೆ. ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಜ್ಞಾನ, ಸ್ವಧರ್ಮಾಚರಣೆ, ಸತ್ಯಸಂಧತೆ, ಧ್ಯಾನಗಳೆಂಬ ಎಂಟು ಜ್ಞಾನ ಪ್ರಸ್ಥಾನಗಳ ಮೂಲಕ ಕೃಷ್ಣಪೂಜೆ ನಡೆಯಲು ಅಷ್ಟಮಠಗಳ ಸ್ಥಾಪನೆ.
ಗುಣವಿಲ್ಲದ ಬ್ರಾಹ್ಮಣನೂ ನಿಂದ್ಯನೇ
ಆಚಾರ್ಯರ ತತ್ವವಾದದಲ್ಲಿ ಸಮಾಜದ ಯಾವ ವರ್ಗದ ಮೇಲೂ ತಿರಸ್ಕಾರ ತೋರಿದವರಲ್ಲ. ವರ್ಣಹೀನತೆ ಮುಖ್ಯವಲ್ಲ, ಗುಣ ಹಿರಿತನ ವ್ಯಕ್ತಿಗೆ ಪೂಜ್ಯತೆಯನ್ನು ನೀಡುತ್ತದೆ. ಗುಣವಿಲ್ಲದ ಬ್ರಾಹ್ಮಣನೂ ನಿಂದ್ಯನೇ ಎಂಬುವುದು ಮಧ್ವರ ದೃಢ ನಿಲುವು. ಸ್ತ್ರೀ ಸಮುದಾಯದ ಬಗ್ಗೆ ಅಪಾರ ಆದರ ತೋರಿದ ಏಕಮಾತ್ರ ಆಚಾರ್ಯರು ಮಧ್ವರು. ಪ್ರಾಣಿಗಳಿಗೆ ಸಲ್ಲುವ ಸೇವೆಯೂ ಭಗವಂತನಿಗೆ ಪ್ರಿಯವಾದುದು ಎಂದು ವಿವರಿಸುತ್ತಿದ್ದ ಆಚಾರ್ಯರು ಸರಳ ಸುಂದರ ತತ್ವಜ್ಞಾನವನ್ನು ಜಗತ್ತಿಗೆ ನೀಡಿದವರು.
ಮಾಧ್ವ ತತ್ವ ಪ್ರಸಾರಕ್ಕೆ ಸಂಚಾರಕ್ಕೆಂದು ಹೋದಾಗ ಪರವಾದಿಗಳನ್ನು ಜಯಿಸುತ್ತಿದ್ದರು. ಒಮ್ಮೆ ಒಂದು ಸಭೆಯಲ್ಲಿ ಆನಂದತೀರ್ಥರು ‘ವಿಷ್ಣುಸಹಸ್ರನಾಮ’ವನ್ನು ಕುರಿತು ವ್ಯಾಖ್ಯಾನ ಮಾಡುತ್ತಾ ಅದರ ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳನ್ನು ಅತ್ಯಂತ ಸ್ಪಷ್ಟವಾಗಿ, ಪಟಪಟನೆ ಹೇಳಿದರು. ಅವುಗಳನ್ನು ನೆನಪಿಟ್ಟುಕೊಂಡು ಪುನರುಚ್ಛರಿಸಲೂ ಆ ಪಂಡಿತರಿಗೆ ಸಾಧ್ಯವಾಗಲಿಲ್ಲ.
‘ಮಧ್ವರು ಈ ಜಗತ್ತು ಕಂಡ ಮಹಾ ಅದ್ಭುತ’ ಎಂಬ ಪಂಡಿತರ ಉದ್ಗಾರವನ್ನು ಇಡೀ ಸಭೆ ಅನುಮೋದಿಸಿತು. ಒಮ್ಮೆ ಶ್ರೀಮುಷ್ಣಂಗೆ ಬಂದು ಭೂವರಾಹನ ದರ್ಶನ ಪಡೆದರು. ಕ್ಷೇತ್ರಮೂರ್ತಿಯನ್ನು ಕೊಂಡಾಡುತ್ತಾ ಕೆಲವು ಸಮಯ ಅಲ್ಲಿ ಮಧ್ವಮುನಿಗಳು ವಾಸಿಸಿದರು. ಆ ಕ್ಷೇತ್ರದಲ್ಲಿ ಅವರು ಒಂದು ಚಾತುರ್ಮಾಸ್ಯ ವ್ರತವನ್ನು ಕೈಗೊಂಡರು. ಎಂಬ ಐತಿಹ್ಯವೂ ಉಂಟು. ಆನಂದತೀರ್ಥರು ಶ್ರೀಮುಷ್ಣಂದಲ್ಲಿದ್ದಾಗ ಅವರ ಕಾರುಣ್ಯವನ್ನು ಬಿಂಬಿಸುವ ಪವಾಡವೊಂದು ನಡೆಯಿತು. ಆ ಸ್ಥಳದಲ್ಲಿ ಆಗ ನೀರಿನ ಅಭಾವ ತೀವ್ರವಾಗಿತ್ತು, ತುಂಬು ಗರ್ಭಿಣಿಯೊಬ್ಬಳು ಏದುಸಿರು ಬಿಡುತ್ತಾ ನೀರು ತುಂಬಿದ ಬಿಂದಿಗೆಯನ್ನು ಬಹುದೂರದಿಂದ ಹೊತ್ತು ತರುತ್ತಿದ್ದದ್ದು ಶ್ರೀಗಳವರ ಕಣ್ಣಿಗೆ ಬಿತ್ತು. ಅಲ್ಪಸ್ವಲ್ಪ ನೀರಿಗಾಗಿ ಆಕೆ ಪಡುತ್ತಿರುವ ತೊಂದರೆಯನ್ನು ಕಂಡು ಸ್ವಭಾವತಃ ಕರುಣಾಳುಗಳಾಗಿದ್ದ ಅವರಿಗೆ ತೀವ್ರವಾದ ಮರುಕವುಂಟಾಯಿತು. ಕೂಡಲೇ ಅವರು ತಮ್ಮ ಕೈಯಲ್ಲಿದ್ದ ದಂಡದಿಂದ ಭೂಮಿಯನ್ನು ಬಗೆದರು. ಆಗ ಆಶ್ಚರ್ಯವೆಂಬಂತೆ ಅಲ್ಲಿ ನೀರು ಕಾರಂಜಿಯಂತೆ ಪುಟಿದೆದ್ದು ಒಂದು ತೀರ್ಥವೇ ನಿರ್ಮಾಣವಾಯಿತು. ಜನರು ನೀರಿಗಾಗಿ ಪಡುತ್ತಿದ್ದ ಹಾಹಾಕಾರ ನಿಂತಿತು. ಈಗಲೂ ಶ್ರೀಮುಷ್ಣಂದಲ್ಲಿರುವ ದಂಡತೀರ್ಥ ಮಧ್ವಮುನಿಗಳ ಮಾನವಾನುಕಂಪಕ್ಕೆ ಸಾಕ್ಷಿಯಾಗಿ ಶುದ್ಧ ಸಮೃದ್ಧ ಜಲದಿಂದ ಶೋಭಿಸುತ್ತಿದೆ.
ಹೀಗೆ ದಕ್ಷಿಣ ಭಾರತದ ನೂರಾರು ಕ್ಷೇತ್ರಗಳನ್ನು ಸಂದರ್ಶಿಸಿ, ಸಾವಿರಾರು ಪರವಾದಿ ಪಂಡಿತರನ್ನು ಜಯಿಸಿ, ಅಸಂಖ್ಯಾತ ತತ್ವದಾಹಿಗಳಿಗೆ ಶುದ್ಧವೈದಿಕ ನೆಲಗಟ್ಟಿನ ಮೇಲೆ ತಾವು ಕಂಡುಕೊಂಡ ಅಪೂರ್ವ ತತ್ವಜ್ಞಾನವನ್ನು ಉಪದೇಶಿಸಿ, ಅಖಂಡ ಕೀರ್ತಿಯನ್ನು ಸಂಪಾದಿಸಿ ಶ್ರೀಮದಾನಂದತೀರ್ಥರು ಉಡುಪಿಗೆ ಹಿಂದಿರುಗಿದರು. ಉಡುಪಿಗೆ ಬಂದ ನಂತರ ಅವರಿಗೆ ವೇದವಿದ್ಯೆಯ ರಕ್ಷಣೆಗಾಗಿ ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನು ರಚಿಸುವ ಅಪೇಕ್ಷೆಯುಂಟಾಯಿತು. ಇದರ ಮೊದಲ ಹೆಜ್ಜೆಯಾಗಿ ಭಗವದ್ಗೀತೆಗೆ ಭಾಷ್ಯವನ್ನು ರಚಿಸಿ ತಮ್ಮಗುರುಗಳಾದ ಅಚ್ಯುತಪ್ರೇಕ್ಷರಿಗೆ ಮತ್ತು ಅವರ ಮತ್ತೊಬ್ಬ ಶಿಷ್ಯರಾದ ಜೇಷ್ಠಯತಿಗಳಿಗೆ ತೋರಿಸಿದರು. ಅಚ್ಯುತಪ್ರೇಕ್ಷರು ಗೀತಾಭಾಷ್ಯವನ್ನು ಓದಿ ಅದರ ಸಾದ್ಯಂತ ಗಾಂಭೀರ್ಯವನ್ನು ಕಂಡು ಪರಮಾನಂದಭರಿತರಾದರು. ಇದಾದ ಕೆಲವು ದಿವಸಗಳಲ್ಲಿಯೇ ಆನಂದತೀರ್ಥರು ತಮ್ಮ ಗುರುಗಳ ಅನುಮತಿಯನ್ನು ಪಡೆದು ಉತ್ತರ ಭಾರತದ ಬದರೀ ಕ್ಷೇತ್ರದತ್ತ ಪ್ರಯಾಣ ಬೆಳೆಸಿದರು. ಹೊರಡುವ ಮುನ್ನ ತಮ್ಮನ್ನು ಬಿಟ್ಟಿರಬೇಕಲ್ಲಾ ಎಂದು ವಿರಹತಾಪದಿಂದ ಪರಿತಪಿಸುತ್ತಿದ್ದ ಅಚ್ಯುತಪ್ರೇಕ್ಷರಿಗೆ ಮತ್ತು ಜೇಷ್ಠ ಯತಿಗಳಿಗೆ ತಾವು ರಚಿಸಿದ ಗೀತಾ ಭಾಷ್ಯದ ಒಂದು ಪ್ರತಿಯನ್ನು ಕೊಟ್ಟು ಇದನ್ನು ಕೃಪೆ ಯಿಟ್ಟು ಪರಾಮರ್ಶಿಸುತ್ತಿರಿ. ಇದರೊಂದಿಗೆ ನಾನು ಸದಾ ತಮ್ಮ ಬಳಿ ಇರುತ್ತೇನೆ’ ಎಂದು ವಿನಮ್ರವಾಗಿ ನುಡಿದರು.
ಬದರೀಯಾತ್ರೆ – ಭಾಷ್ಯರಚನೆ ಆನಂದತೀರ್ಥರು ಬದರೀ ಯಾತ್ರೆಗೆ ಹೊರಟಿದ್ದನ್ನು ಕಂಡು ಸತ್ಯತೀರ್ಥರೇ ಮೊದಲಾದ ಅವರ ಅನೇಕ ಶಿಷ್ಯರು ಗುರುಗಳನ್ನು ಹಿಂಬಾಲಿಸಿದರು. ವಾಹನ ಸೌಕರ್ಯಗಳು ಸಮರ್ಪಕವಾಗಿರದಿದ್ದ ಆ ಕಾಲದಲ್ಲಿ ತೀರ್ಥಕ್ಷೇತ್ರ ಯಾತ್ರೆ ತುಂಬಾ ಪ್ರಯಾಸಕರವಾಗಿತ್ತು, ಎಂದಿನಂತೆ ಆನಂದತೀರ್ಥರು ಮಾರ್ಗಮಧ್ಯದಲ್ಲಿ ಸಿಕ್ಕುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಅವುಗಳನ್ನು ಪವಿತ್ರೀಕರಿಸುತ್ತಾ, ದುರ್ವಾದಿಗಳನ್ನು ನಿಗ್ರಹಿಸುತ್ತಾ, ಹಲವಾರು ಶಿಷ್ಯಶ್ರೇಷ್ಟರನ್ನು ಪರಿಗ್ರಹಿಸುತ್ತಾ, ಸಾವಿರಾರು ಸುಜೀವಿಗಳನ್ನು ಅನುಗ್ರಹಿಸುತ್ತಾ, ಹಾದಿಯಲ್ಲಿ ಅಡ್ಡವಾಗುವ ದುರ್ಗಮವಾದ ದುರ್ಗಗಳನ್ನೂ, ನದಿಗಳನ್ನೂ ಅನಾಯಾಸವಾಗಿ ದಾಟುತ್ತಾ `ವಾಸುದೇವಪದಸಂತತಸAಗಿ’ಯಾದ ಮಧ್ವರು ಮಾಯಾಪುರಿ ಎಂದು ಪ್ರಸಿದ್ಧವಾದ ಹರಿದ್ವಾರವನ್ನು ತಲುಪಿದರು. ಅಲ್ಲಿ ತುಂಬಿ ಹರಿಯುವ ಗಂಗೆಯಲ್ಲಿ ಮಿಂದು ಹೃಷಿಕೇಶದ ಮಾರ್ಗವಾಗಿ ಬದರೀಕ್ಷೇತ್ರವನ್ನು ತಲುಪಿದರು. ಭರತಖಂಡಕ್ಕೆ ಆಲಂಕಾರಪ್ರಾಯನಾಗಿ ನೆಲೆಸಿರುವ ಅನಂತ ಗುಣಪೂರ್ಣನೂ, ಸರ್ವೋತಮನೂ ಆದ ಬದರೀನಾರಾಯಣನಿಗೆ ನಮಿಸಿ ಆನಂದತೀರ್ಥರು ತಾವು ರಚಿಸಿದ್ದ ಗೀತಾಭಾಷ್ಯವನ್ನು ಭಕ್ತಿಪುರಸ್ಪರವಾಗಿ ಗೀತಾಚಾರ್ಯನಿಗೆ ಸಮರ್ಪಿಸಿದರು. ಆನಂದತೀರ್ಥರು ವಿಶಾಲಬದರಿಯಲ್ಲಿ ನಲವತ್ತೆಂಟು ದಿವಸಗಳ ಕಾಲ ಕಾಷ್ಠಮೌನ ಮತ್ತು ಉಪವಾಸ ವೃತವನ್ನು ಕೈಗೊಂಡು ನಿತ್ಯವೂ ಅತಿಶೀತಲ ಗಂಗೆ ಯಾದ ಅಲಕನಂದಾ ನದಿಯಲ್ಲಿ ಸ್ನಾನಾದಿಗಳನ್ನು ಮಾಡುತ್ತಾ ಬದರೀನಾಥನನ್ನು ಸೇವಿಸಿದರು. ಹೀಗಿದ್ದಾಗ ಅವರಿಗೆ ಸಾಕ್ಷಾತ್ ವೇದವ್ಯಾಸದೇವರಿಂದಲೇ ಉತ್ತರ ಬದರಿಗೆ ಆಗಮಿಸುವಂತೆ ಆಹ್ವಾನ ಬಂದಿತು. ಅದರಂತೆ ಆಚಾರ್ಯರು ಸಂಭ್ರಮದಿಂದ ಉತ್ತರ ಬದರಿಗೆ ಹೊರಟರು. ಹೊರಡುವ ಮುನ್ನ ತಾವು ಕಾಷ್ಠಮೌನದಲ್ಲಿದ್ದ ಕಾರಣ ತಮ್ಮ ಶಿಷ್ಯರಿಗೆ: “ನೇದೃಶಂ ಸ್ಥಲಮಲಂ ಶಮಲಘ್ನಂ ನಾಸ್ಯ ತೀರ್ಥಸಲಿಲಸ್ಯ ಸಮಂ ವಾಃ ನಾಸ್ತಿ ವಿಷ್ಣುಸದೃಶಂ ನನು ದೈವಂ ನಾಸ್ಮದುಕ್ತಿಸದೃಶಂ ಹಿತರೂಪಮ್||’ ‘ಪಾಪವನ್ನು ಪರಿಪೂರ್ಣವಾಗಿ ಪರಿಹರಿಸುವ ಬದರಿಯಂತಹ ಸ್ಥಳ ಬೇರೆಲ್ಲೂ ಇಲ್ಲ. ವಿಷ್ಣುಪಾದೋದ್ಭವೆಯಾದ ಗಂಗೆಗಿಂತಲೂ ಇನ್ನೊಂದು ಪವಿತ್ರ ತೀರ್ಥವಿಲ್ಲ. ವಿಷ್ಣುವಿಗಿಂತಲೂ ಶ್ರೇಷ್ಠರಾದ ದೇವರು ಇನ್ನೊಬ್ಬರಿಲ್ಲ.
ವಿಷ್ಣುಸರ್ವೋತ್ತಮವನ್ನು ಸಾರುವ, ಸರ್ವಮೂಲಗಳೆಂದು ಗುರುತಿಸಲ್ಪಡುವ ಮೂವತ್ತೇಳು ಗ್ರಂಥಗಳನ್ನು ರಚಿಸಿದರು. ಮುಂದೆ ವಿಶಾಲಬದರಿಯಲ್ಲಿ ತಮ್ಮ ಶಿಷ್ಯರನ್ನು ಇರಲು ಸೂಚಿಸಿ ತಾವು ಉತ್ತರಬದರಿಗೆ ಪ್ರಯಾಣಮಾಡಿ ವ್ಯಾಸನಾರಾಯಣರಿಗೆ ತಾವು ರಚಿಸಿದ ಬ್ರಹ್ಮಸೂತ್ರ ಭಾಷ್ಯವನ್ನು ಸಮರ್ಪಿಸಿ ಅವರ ತುಂಬುಕೃಪೆಯನ್ನು ಪಡೆದುಕೊಂಡರು. ವ್ಯಾಸನಾರಾಯಣರು ಅನುಗ್ರಹಪೂರ್ವಕವಾಗಿ ನೀಡಿದ ವ್ಯಾಸಮುಷ್ಠಿಗಳನ್ನು ಪರಮಭಕ್ತಿಯಿಂದ ಸ್ವೀಕರಿಸಿದರಲ್ಲದೆ ಅವರ ಆದೇಶದಂತೆ `ಮಹಾಭಾರತ ತಾತ್ಪರ್ಯನಿರ್ಣಯ’ವನ್ನು ರಚಿಸಿ ಲೋಕೋಪಕಾರ ಮಾಡಿದರು.
ಸುಮಾರು ಎಪ್ಪತ್ತೊಂಬತ್ತು ವರ್ಷಗಳ ಕಾಲ ಜೀವಿಸಿದ್ದ ಆನಂದತೀರ್ಥರು ಕ್ರಿ.ಶ. ೧೩೧೭ರ ಮಾಘಶುದ್ಧ ನವಮಿಯ ಶುಭದಿವಸ ತಮ್ಮ ಅವತಾರಕ್ಕೆ ಸಾಕ್ಷಿಯಾದ ಉಡುಪಿಯ ಅನಂತೇಶ್ವರನ ಸನ್ನಿಧಿಯಲ್ಲಿ ಶಿಷ್ಯರಿಗೆ ಐತರೇಯ ಉಪನಿಷತ್ತುನ್ನು ಪಾಠಮಾಡುತ್ತಿದ್ದಾಗ ಕ್ಷಣಮಾತ್ರದಲ್ಲಿ ಅದೃಶ್ಯರಾಗಿ ವೇದವ್ಯಾಸರ ನಿತ್ಯಸೇವೆಗಾಗಿ ಬದರಿಕಾಶ್ರಮಕ್ಕೆ ಪ್ರಯಾಣ ಬೆಳೆಸಿದರು.
ಮಧ್ವರ ಅವತಾರದಂತೆ ಅದರ ಸಮಾಪ್ತಿಯೂ ಸಹ ಒಂದು ಪವಾಡದಂತೆ ಆಗಿಹೋಯಿತು. ಅವರು ಕಣ್ಮರೆಯಾದ ಸ್ಥಳದಲ್ಲಿ ದಿವ್ಯ ಪರಿಮಳ ಭರಿತವಾದ ದೇವಪುಷ್ಪಗಳ ಸುರಿಮಳೆಯೇ ಆಯಿತು. ಉಡುಪಿಯ ಅನಂತೇಶ್ವರನ ಸನ್ನಿಧಾನದಲ್ಲಿ ಗುರುಮಧ್ವರು ಅದೃಶ್ಯರಾದ ಸ್ಥಳವನ್ನು ನೋಡಬಹುದು.