ಸಮೃದ್ಧಿ ತರುವ ಸೌರಮಾನ ಯುಗಾದಿ

ಕಣಿ ಕಾಣುವ ಹಬ್ಬವೆಂದೇ ಖ್ಯಾತಿ ಪಡೆದ ಸೌರಮಾನ ಯುಗಾದಿಯಾದ `ವಿಷು’ ಹಬ್ಬವನ್ನು ಕರಾವಳಿ ಕರ್ನಾಟಕದಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ವಿಷು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ.

ವಿಷು ಹಬ್ಬ ಇದು ಪ್ರಕೃತಿ ಪೂಜೆಯ ದಿನ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯ, ಬಂಗಾಳ, ತಮಿಳುನಾಡು, ಪಂಜಾಬ್, ಉತ್ತರಾಖಂಡ, ಹರಿಯಾಣದಲ್ಲಿ ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ವಿಷು ಹೊಸ ವರುಷದ ಆರಂಭ. ಸಮೃದ್ಧಿ ತರುವ, ಹೊಸ ಬದುಕಿಗೆ ಸಂಕಲ್ಪ ಮಾಡುವ ದಿನ. ವರ್ಷವಿಡೀ ಸುಖ, ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ವಿಷು ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.

ವಿವಿಧ ಹೆಸರುಗಳು
ಸೌರಮಾನ ಯುಗಾದಿ' ಎಂದೇ ಜನಪ್ರಿಯವಾಗಿರುವ, ಹೊಸ ಸಂವತ್ಸರವನ್ನು ಸ್ವಾಗತಿಸುವ ಈ ಹಬ್ಬವನ್ನು ಬೇರೆಬೇರೆ ಕಡೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ತುಳುವರುಬಿಸು ಪರ್ಬ’, ಕೇರಳದಲ್ಲಿ ವಿಷು', ತಮಿಳುನಾಡಿನಲ್ಲಿಪುತ್ತಾಂಡ್’, ಪಂಜಾಬ್‍ನಲ್ಲಿ ಬೈಸಾಕಿ', ಅಸ್ಸಾಂನಲ್ಲಿಬಿಹು’ ಎಂದು ಕರೆಯುತ್ತಾರೆ.
ಚಾಂದ್ರಮಾನ ಯುಗಾದಿ ಬರುವುದು ಚೈತ್ರ ಮಾಸದ ಮೊದಲ ದಿನ. ಆದರೆ ಸೌರಮಾನ ಯುಗಾದಿಯ ಆಚರಣೆ ಮೇಷ ಮಾಸದ ಮೊದಲ ದಿನ. ಅಂದು ಸೂರ್ಯ ಮೇಷರಾಶಿಯನ್ನು ಪ್ರವೇಶಿಸುತ್ತಾನೆ. ಚಾಂದ್ರಮಾನ ಯುಗಾದಿಯಲ್ಲಿ ಬೇವು-ಬೆಲ್ಲ ತಿಂದು, ಜೀವನದಲ್ಲಿ ನೋವು-ನಲಿವುಗಳನ್ನು ಸಮನಾಗಿ ಸ್ವೀಕರಿಸುವ ದೃಢ ಸಂಕಲ್ಪ ಮಾಡಿ ಹೊಸ ಯುಗವನ್ನು ಸ್ವಾಗತಿಸುತ್ತೇವೆ. ಆದರೆ ಸೌರಮಾನ ಯುಗಾದಿ ಇದಕ್ಕಿಂತ ಭಿನ್ನ. ಈ ಹಬ್ಬ ಪ್ರಕೃತಿ ಪೂಜೆಗೆ ಮೀಸಲು. ತಮ್ಮ ಕೃಷಿ ಭೂಮಿಯಲ್ಲಿ ಬೆಳೆದ ಫಸಲುಗಳನ್ನಿಟ್ಟು ಪೂಜಿಸುವ ಮೂಲಕ ಹೊಸ ವರ್ಷದಲ್ಲಿ ಸಂಪದ್ಭರಿತ ಕೃಷಿ, ಸುಖ ಜೀವನ ಸಮೃದ್ಧಿ ಉಂಟಾಗಲಿ ಎಂದು ಈ ದಿನ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಆಚರಣೆ ಹೀಗೆ….
ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು ಹಂಪಲು, ಧವಸ ಧಾನ್ಯಗಳೂ ಸೇರಿದಂತೆ, ಆಭರಣ, ರವಿಕೆ ಕಣ, ತೆಂಗಿನ ಕಾಯಿ, ಕನ್ನಡಿ, ಕುಂಕುಮವನ್ನು ದೇವರ ಮುಂದೆ ಇಟ್ಟು ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ವಿಷುವಿನ ದಿನ ಬೆಳಗ್ಗೆ ಎದ್ದ ಕೂಡಲೇ ಮೊದಲಿಗೆ ದೇವರ ಮುಂದೆ ದೀಪ ಹಚ್ಚಿ, ಕಣಿಯಲ್ಲಿ ಇಟ್ಟ ಹಲ-ಫಲಗಳ ವಸ್ತುಗಳನ್ನು ನೋಡುತ್ತಾರೆ. ಅಲ್ಲಿ ಇಟ್ಟಿರುವ ಕನ್ನಡಿಯಲ್ಲಿ ಮುಖ ನೋಡಿ ಕುಂಕುಮವನ್ನು ಹಣೆಗೆ ಹಚ್ಚಿಕೊಂಡು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿಷು ಕಣಿಯನ್ನು ನೋಡುವ ಪದ್ಧತಿಯೂ ಉಂಟು. ಆ ನಂತರವೇ ಅಭ್ಯಂಗ ಸ್ನಾನ, ಹೊಸ ಬಟ್ಟೆ ಧರಿಸಿ ಪಂಚಾಗ ಶ್ರವಣ ಮಾಡುತ್ತಾರೆ ಇಲ್ಲವೇ ಪಠಿಸುತ್ತಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ವಿಶೇಷ ಭೋಜನ ಸವಿಯುತ್ತಾರೆ.
ಭಾರತೀಯರ ಪ್ರತಿಯೊಂದು ಆಚರಣೆಯಲ್ಲೂ ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧ. ಮರ, ಗಿಡ, ಗಾಳಿ, ಬೆಳಕು, ಬೆಂಕಿ, ಭೂಮಿ ಎಲ್ಲದರಲ್ಲೂ ದೇವರನ್ನು ಕಾಣುವ ಭಾರತೀಯರು ಬದುಕಿಗೆ ಅನಿವಾರ್ಯವಾದ ಇವೆಲ್ಲವನ್ನೂ ಕರುಣಿಸಿದ ಪ್ರಕೃತಿಗೆ ಹಬ್ಬಗಳ ಆಚರಣೆ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.

ಕಣಿ ಕಾಣುವುದು
ವಿಷು ಹಬ್ಬದಂದು ಅಂದರೆ ವರುಷದ ಆರಂಭದ ದಿನದಂದು ಬೆಳಗ್ಗೆ ಎದ್ದು ಮೊದಲಿಗೆ ಆರಾಧ್ಯ ದೇವರನ್ನು ನೋಡುವ ಕ್ರಮವನ್ನು ಕಣಿ ಕಾಣುವುದು ಎನ್ನಲಾಗು ತ್ತದೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬ ಅರ್ಥಗಳೂ ಇವೆ. ಮನೆಯನ್ನು ಸಿಂಗರಿಸಿ ಹಿಂದಿನ ದಿನ ರಾತ್ರಿಯೇ ದೇವರ ವಿಗ್ರಹದ ಜತೆಗೆ ಕಣಿಯ ಸಾಮಗ್ರಿಗಳು -ನವ ಧಾನ್ಯಗಳು, ಹೊಸ ಬಟ್ಟೆ, ಬಂಗಾರದ ಆಭರಣ, ಫಲವಸ್ತುಗಳು, ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ಕನ್ನಡಿ ಇರಿಸಿ ಕಣಿಯನ್ನು ಮಾಡಿರುತ್ತಾರೆ.


ವಿಷು ವಿಶೇಷ ಕೊನ್ನ ಹೂ
ಗೊಂಚಲುಗೊಂಚಲಾಗಿ ಬಿಡುವ ಹಳದಿ ಬಣ್ಣದ ಹೂವಿನ ಸೊಬಗು ಸಾಮಾನ್ಯವಾಗಿ ಮಾರ್ಚ್‍ನಿಂದ ಮೇ ತಿಂಗಳಿನಲ್ಲಿ ಕಂಡುಬರುತ್ತದೆ. ಈ ಹೂವನ್ನು ಸ್ವರ್ಣಪುಷ್ಪ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಮರದ ತುಂಬಾ ಹಳದಿ ಬಣ್ಣದ ಹೂಗಳು ಗೊಂಚಲು ಗೊಂಚಲಾಗಿ ಬಿಡುತ್ತದೆ. ಈ ಹೂವನ್ನು ಇಂಗ್ಲಿಷ್‍ನಲ್ಲಿ ಗೋಲ್ಡನ್ ಶವರ್ ಟ್ರೀ ಎಂದು ಕರೆಯುತ್ತಾರೆ. ಇದು ಥಾಯ್ಲೆಂಡ್ ದೇಶದ ರಾಷ್ಟ್ರೀಯ ಪುಷ್ಪ ಮತ್ತು ಕೇರಳದ ರಾಜ್ಯ ಪುಷ್ಪ. ಇದು ಶ್ರೀಕೃಷ್ಣನಿಗೆ ತುಂಬಾ ಪ್ರಿಯವಾದ ಹೂವು. ಈ ಹೂವಿನ ಮರವು ಸಾಮಾನ್ಯವಾಗಿ ಎಲ್ಲ ಕಡೆ ಬೆಳೆಯುತ್ತದೆ. ಸುಂದರ ಆಭರಣದಂತೆ ಕಾಣುವ ಹೂ ಗೊಂಚಲುಗಳು ಎಲ್ಲರ ಕಣ್ಸೆಳೆಯುತ್ತವೆ. ವಿಷು ಹಬ್ಬದ ಸಂದರ್ಭದಲ್ಲಿ ಹಳದಿ ಬಣ್ಣದ ಹೂಗಳು ಮರದಲ್ಲಿ ನೇತು ಹಾಕಿದ ರೀತಿಯಲ್ಲಿ ಕಾಣಿಸುತ್ತದೆ. ಈ ಹೂವನ್ನು ಕೇರಳೀಯರು ಕೊನ್ನ ಹೂ ಎಂದು ಕರೆಯುತ್ತಾರೆ. ವಿಷು ಹಬ್ಬದಂದು ಸಿದ್ಧಪಡಿಸಿದ ಕಣಿಯಲ್ಲಿ ಬಳಸುತ್ತಾರೆ.


ಹೂವಿಗೊಂದು ಪುರಾಣ
ಕೇರಳದ ಸಣ್ಣ ಗ್ರಾಮದಲ್ಲಿ ಶ್ರೀಕೃಷ್ಣನ ಚಿಕ್ಕ ದೇವಸ್ಥಾನವಿರುತ್ತದೆ. ಆ ಗ್ರಾಮದ ಜಮೀನ್ದಾರ ತಿರುಮೇನಿ ಎಂಬುವವರನ್ನು ದೇವಸ್ಥಾನ ಪೂಜೆ ಭಟ್ಟರಾಗಿ ನೇಮಿಸುತ್ತಾರೆ. ಆತ ತನ್ನ ಮೂರು ವರ್ಷದ ಮಗನೊಂದಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಲು ಬರುತ್ತಾರೆ. ಮಧ್ಯಾಹ್ನದ ಹೊತ್ತು ಅರ್ಚಕ ಅಲ್ಲೇ ದೇವಸ್ಥಾನ ವರಾಂಡದಲ್ಲಿ ಮಲಗುತ್ತಾರೆ. ಮೂರು ವರ್ಷದ ಪುಟ್ಟ ಬಾಲಕ
ಹತ್ತಿರದಲ್ಲೇ ಆಟವಾಡುತ್ತಿರುತ್ತಾನೆ. ಹೀಗೆ ಹಲವು ದಿನಗಳು ನಡೆಯುತ್ತದೆ. ಒಂದೊಮ್ಮೆ ವಿಷುವಿನ ಹಿಂದಿನ ದಿನ ದೇವಸ್ಥಾನವನ್ನು ಶುಚಿಗೊಳಿಸಿ ಅಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತಾರೆ. ಆಗ ಅಲ್ಲಿಗೆ ಬಂದ ಕುಟ್ಟಿ ಕೃಷ್ಣ ಚಿನ್ನದ ಸೊಂಟದ ಸರವನ್ನು ಬಾಲಕನ ಕೈಗೆ ನೀಡುತ್ತಾನೆ. ಅದನ್ನು ಹಿಡಿದುಕೊಂಡು ಆಟ ಆಡುತ್ತಿರುತ್ತಾನೆ. ಅದೇ ಸಮಯಕ್ಕೆ ಜಮೀನ್ದಾರ ಅಲ್ಲಿಗೆ ಬರುತ್ತಾನೆ. ಬಾಲಕನ ಕೈಯಲ್ಲಿದ್ದ ಚಿನ್ನದ ಉಡಿದಾರವನ್ನು ನೋಡಿ, ಶ್ರೀಕೃಷ್ಣನ ಆಭರಣವನ್ನು ಅಪ್ಪ -ಮಗ ಸೇರಿ ಕದ್ದಿದ್ದಾರೆ ಎಂದು ಊರವರೆನ್ನೆಲ್ಲಾ ಸೇರಿಸುತ್ತಾನೆ. ಕುಟ್ಟಿ ಕೃಷ್ಣ ಅದನ್ನು ನೋಡುತ್ತಿರುತ್ತಾನೆ. ಕೋಪಗೊಂಡು ಕುಟ್ಟಿ ಕೃಷ್ಣ ಜಮೀನ್ದಾರನ ಕೈಯಿಂದ ಅದನ್ನು ತೆಗೆದುಕೊಂಡು ದೂರಕ್ಕೆಸೆಯುತ್ತಾನೆ. ಅದು ಕೊನ್ನ ಮರದ ಮೇಲೆ ಸಿಕ್ಕಿಹಾಕಿಕೊಳ್ಳುತ್ತದೆ. ಆ ಚಿನ್ನದ ಉಡಿದಾರವು ಮೃದುವಾದ ಹಳದಿ ಹೂವಾಗಿ ಮಾರ್ಪಡುತ್ತದೆ. ಹಾಗಾಗಿ ವಿಷು ಹಬ್ಬದ ಸಂದರ್ಭದಲ್ಲಿ ಈ ಹೂವನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles