ಮಂದಿರ ನಿರ್ಮಾಣ ಹೊತ್ತಲ್ಲೇ ರಾಮ ಸಂದೇಶ ಕೃತಿ ಲೋಕಾರ್ಪಣೆ – ಇದು ಯೋಗಾಯೋಗ: ಪಲಿಮಾರು ಶ್ರೀ

*ವಿದ್ವಾನ್ ಕೃಷ್ಣರಾಜ ಭಟ್ ಕುತ್ಪಾಡಿ

ಪಲಿಮಾರು ಮಠ ಯತಿ ಪರಂಪರೆಯಲ್ಲಿ ಬಂದ ಪ್ರಾತಃ ಸ್ಮರಣೀಯರೂ ಜ್ಞಾನಿ ಶ್ರೇಷ್ಠರೂ ಆದ ರಾಜರಾಜೇಶ್ವರ ಯತಿಗಳು ಸಂಸ್ಕೃತದಲ್ಲಿ ರಚಿಸಿದ ರಾಮಸಂದೇಶ ಕಾವ್ಯಕ್ಕೆ ಕನ್ನಡ ಕಾವ್ಯ ರೂಪದಲ್ಲೇ ಬನ್ನಂಜೆ ಗೋವಿಂದಾಚಾರ್ಯರು ಬರೆದ ಭಾವಾರ್ಥ ಕೃತಿಯನ್ನು ಶುಕ್ರವಾರ (ಜನವರಿ 22ರಂದು) ಬನ್ನಂಜೆಯವರ ನಿವಾಸ ಅಂಬಲಪಾಡಿಯ ಈಶಾವಾಸ್ಯಮ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಲೋಕಾರ್ಪಣೆಗೊಳಿಸಿದರು‌.

ಈಶಾವಾಸ್ಯ ಪ್ರತಿಷ್ಠಾನ ಉಡುಪಿ ಮತ್ತು ದ್ವೈಪಾಯನ ಪ್ರತಿಷ್ಠಾನ ಬೆಂಗಳೂರು ಜಂಟಿಯಾಗಿ ಕೃತಿಯನ್ನು ಪ್ರಕಟಿಸಿವೆ.

ಈ ಸಂದರ್ಭ ಸಂದೇಶ ನೀಡಿದ ಪಲಿಮಾರು ಶ್ರೀಗಳು ಈ ಕೃತಿಯನ್ನು ಆಚಾರ್ಯರು ಯಾವತ್ತೋ ಪ್ರಕಟಿಸಬೇಕಿತ್ತು. ಅನೇಕ ಬಾರಿ ಅದು ಮುಂದೆ ಹೋಗುತ್ತಲೇ ಇತ್ತು. ಆದರೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಹೊತ್ತಲ್ಲೇ ಅದೂ ಮಧ್ವನವಮೀ ಪರ್ವದಿನದಂದೇ ಅವರ ಮನೆಯಲ್ಲೇ ಬಿಡುಗಡೆಗೊಳ್ಳುತ್ತಿರುವುದು ಯೋಗಾಯೋಗ ಎಂದರು.‌ ಅತ್ಯಂತ ಅಪೂರ್ವವಾದ ಇದರ ಮೂಲಕೃತಿಗೆ (ರಾಜರಾಜೇಶ್ವರಯತಿ ವಿರಚಿತ) ಪೇಜಾವರ ಮಠದ ಯತಿ ಪರಂಪರೆಯ ಶ್ರೀ ವಿಶ್ವಪತಿತೀರ್ಥರು ವ್ಯಾಖ್ಯಾನ ಬರೆದು ಪ್ರಶಂಸಿಸುವ ಮೂಲಕ ಆ ಕಾಲದಲ್ಲಿ ಮಠಗಳು ಮತ್ತು‌ ಯತಿಗಳ ನಡುವಿನ ಆತ್ಮೀಯತೆಯ ನಂಟಿನ ಗಾಢತೆ ಎಷ್ಟಿತ್ತು ಎನ್ನುವುದನ್ನು ತಿಳಿಸುತ್ತದೆ. ಬನ್ನಂಜೆಯವರು ತಮ್ಮ ನಿತ್ಯನೂತನವಾದ ಕನ್ನಡ ಕಾವ್ಯದ ಮೂಲಕ ಈ ಕೃತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈ ಕೃತಿಯ ಮೂಲಕ ರಾಮ ಸಂದೇಶ ಮನೆಮನೆಗೆ ತಲುಪಲಿ. ಬನ್ನಂಜೆಯವರ ಸಮಗ್ರ ವಾಙ್ಮಯ ಕೊಡುಗೆಗಳ ನಿರಂತರ ಪ್ರಕಟಣೆಯ ಕೆಲಸವನ್ನು ಈ ಸಂಸ್ಥೆ ಮಾಡಲಿ ಎಂದು ಆಶಿಸಿದರು.

ವಿದ್ವಾನ್ ಡಾ ರಾಮನಾಥ ಆಚಾರ್ಯ ಕೃತಿ ಪರಿಚಯ ಮಾಡಿದರು.‌ ದ್ವೈಪಾಯನ ಪ್ರತಿಷ್ಠಾನದ ನರಸಿಂಹಾಚಾರ್ಯ, ಕಡ್ಡಿ ಬದರೀನಾಥ ಆಚಾರ್ಯ ಬನ್ನಂಜೆಯವರ ಪೌತ್ರ ಯಾಸ್ಕ ಆಚಾರ್ಯ ರಮಾ ಆಚಾರ್ಯ ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.‌

ಬನ್ನಂಜೆಯವರ ಪುತ್ರ ವಿನಯಭೂಷಣ ಆಚಾರ್ಯ ಪ್ರಸ್ತಾವನೆಗೈದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.‌ ಸಮಾರಂಭಕ್ಕೂ ಮೊದಲು ಶ್ರೀಗಳವರನ್ನು ಗೌರವದಿಂದ ಬರಮಾಡಿಕೊಂಡು ಗುರುಪೂಜೆಯನ್ನು ಸಲ್ಲಿಸಲಾಯಿತು.

ತೌಳವ ಮಂಡಲ ವರ್ಣನೆ: ರಾಜರಾಜೇಶ್ವರ ತೀರ್ಥರು ಈ ಕೃತಿಯಲ್ಲಿ ಶ್ರೀರಾಮನ ಬಾಯಿಯಿಂದಲೇ ತೌಳವ ದೇಶದ ಅಪೂರ್ವ ಸೊಬಗನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸೀತಾನ್ವೇಷಣೆಗೆ ತೆರಳುವ ಹನುಮಂತನ ಬಳಿ ದಾರಿ ಮಧ್ಯದಲ್ಲಿ ಸಿಗುವ ಅತ್ಯಂತ ಸುಂದರವಾದ ತೌಳವ ದೇಶವನ್ನು ಕಾಣದೇ ಹೋಗಬೇಡ ಎಂದು ತಿಳಿಸುವ ಸನ್ನಿವೇಶ ತುಂಬ ಸೊಗಸಾಗಿದೆ.: ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು

ಸಂಸತ್ ಶಿಲಾನ್ಯಾಸ ಸಮಾರಂಭದಲ್ಲಿ ಮಂಗಲಾಷ್ಟಕ ಪಠಣ: ಇತ್ತೀಚೆಗೆ ನಡೆದ ನೂತನ ಸಂಸತ್ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ದೆಹಲಿಯ ಋತ್ವಿಜರು ರಾಜರಾಜೇಶ್ವರ ಯತಿಗಳು ರಚಿಸಿದ ಮಂಗಲಾಷ್ಟಕದ “ಆದಿತ್ಯಾದಿ ನವಗ್ರಹಾಃ…. ಎನ್ನುವ ಶ್ಲೋಕವನ್ನು’ ಉದ್ಧರಿಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ.: ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು

‘ಹನುಮ ಛಂದಸ್ಸು‘: ಈ ಕೃತಿಯಲ್ಲಿ ಬನ್ನಂಜೆಯವರು ವಿಭಿನ್ನ ಛಂದಸ್ಸನ್ನು ಬಳಸಿದ್ದು ಕೆಲವೆಡೆ ಹನುಮಂತನ ಬಾಲದಂತೆ ದೀರ್ಘವಾಗಿಯೂ ಕೆಲವೆಡೆ ಹೃಸ್ವವಾಗಿಯೇ ಇದೆ. ಇದು ರಾಮ‌ನ ಕೃತಿ ಆದ್ದರಿಂದ ಇದು ಹನುಮ ಛಂದಸ್ಸು ಎಂದು ಸ್ವತಃ ಬನ್ನಂಜೆಯವರು ಬಣ್ಣಿಸಿದ್ದಾರೆ:ವಿದ್ವಾನ್ ರಾಮನಾಥ ಆಚಾರ್ಯರು

Related Articles

ಪ್ರತಿಕ್ರಿಯೆ ನೀಡಿ

Latest Articles