* ಕೃಷ್ಣಪ್ರಕಾಶ ಉಳಿತ್ತಾಯ
ಕುಮಾರವ್ಯಾಸನ ಗದುಗಿನ ಭಾರತದ ಉದ್ಯೋಗ ಪರ್ವದಲ್ಲಿನ ಮೂರನೆಯ ಸಂಧಿ ವಿದುರ ನೀತಿ. ಧೃತರಾಷ್ಟ್ರನಿಗೆ ವಿದುರ ಬೋಧಿಸುವ ನೀತಿಶಾಸ್ತ್ರ, ನಿರ್ದಾಕ್ಷಿಣ್ಯವಾಗಿ ಧೃತರಾಷ್ಟ್ರನನ್ನು ತರಾಟೆಗೆ ತೆಗೆದುಕೊಂಡು ನಿದ್ದೆಬರದ ಧೃತರಾಷ್ಟ್ರನಿಗೆ ತಥ್ಯದರ್ಶನ ಮಾಡುವ ಭಾಗವಿದು. ಎಲ್ಲರೂ ಕಂಠಪಾಟಮಾಡಬೇಕಾದ ನೀತಿಶಾಸ್ತ್ರ. ನಾಲ್ಕನೆಯ ಸಂಧಿಯ ಸನತ್ಸುಜಾತ ನೀತಿ ಮತ್ತೆ ಮತ್ತೆ ಅನುಸಂಧಾನ ಮಾಡಬೇಕಾದ ಸುಭಾಷಿತ ವಚನಗಳು.
ಸಂಜಯ ವಿರಾಟನ ನಗರಿಯ ಹತ್ತಿರದ ಉಪಪ್ಲಾವ್ಯ ನಗರಿಯಿಂದ ತನ್ನ ರಾಯಭಾರವನ್ನು ತೀರಿಸಿ ಮತ್ತೆ ಹಸ್ತಿನಾಪುರಕ್ಕೆ ಹಿಂದಿರುಗಿ ಧೃತರಾಷ್ಟ್ರನಲ್ಲಿ ಸಂಕ್ಷಿಪ್ತವಾಗಿ ಅಲ್ಲಿ ಭೀಮಾರ್ಜುನರು ಮತ್ತುಳಿದ ಪಾಂಡವರ ಅಭಿಮತವನ್ನು ಹೇಳುತ್ತಾನೆ. ಧೃತರಾಷ್ಟ್ರನಿಗೆ ನಿದ್ದೆ ಹತ್ತುವುದಿಲ್ಲ.
“ ಅಂದಿನಿರುಳೊಳು ನಿದ್ರೆಬಾರದೆ ನೊಂದು ವಿದುರನ ಕರೆದು ರಾಯನ ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ.” ಆದುದರಿಂದ ವಿದುರನಲ್ಲಿ ಸತ್ಯದ ಮಾತನ್ನು ನನಗೆ ಹೇಳು ಎಂದು ಧೃತರಾಷ್ಟ್ರ ಭಿನೈಸುತ್ತಾನೆ “ಹೇಳು ನಿರುತವನಿಂದಿನಿರುಳೊಳು”.
ಕುಮಾರವ್ಯಾಸನ ಮುಂದಿನ ಹಾಡುಗಳು ವಿದುರನ ವಾಣಿಯಾಗಿ ಹೊಮ್ಮುತ್ತದೆ. ವಿದುರ ನಿರ್ದಾಕ್ಷಿಣ್ಯವಾಗಿ ಧೃತರಾಷ್ಟ್ರನನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಯಾರಿಗೆಲ್ಲಾ ನಿದ್ದೆ ಬರುವುದಿಲ್ಲ ಎಂದು ಹೇಳುತ್ತಾನೆ:
ಬಲವಿಹೀನನು ಬಲ್ಲಿದನ ಕೂ ಡೊಲಿದು ತೊಡಕವಲಂಗೆ ಕಾಮದ ಕಳವಳದೊಳಿರ್ದಂಗೆ ಧನದಳಲಿನೊಳು ಮರುಗುವಗೆ| ಕಳವಿನೊಳು ಕುದಿವಂಗೆ ದೈವದ ನೆಲೆಯನರಿಯದವಂಗೆ ದಿಟವಿದು ತಿಳಿಯೆ ಬಾರದು ನಿದ್ರೆಯೆಂದನು ಭೂಪತಿಗೆ ವಿದುರ|| ಬಲಶಾಲಿಯೆದುರು ಹಗೆಕಟ್ಟಿ ಯುದ್ಧ ಮಾಡುವ ದುರ್ಬಲನಿಗೆ; ಕಾಮುಕನಿಗೆ; ಹಣವನ್ನು ಕಳೆದುಕೊಂಡು ಕಳವಳಿಸುವವನಿಗೆ; ದೈವದ ಸ್ವರೂಪ ತಿಳಿಯದವನಿಗೆ; ಕಳ್ಳತನ ಮಾಡಲು ಹವಣಿಸುತ್ತಾ ಇರುವವನಿಗೆ; ಹೀಗಿರುವವರಿಗೆ ರಾತ್ರಿ ನಿದ್ದೆ ಬರುವುದಿಲ್ಲ ಎಂದು ವಿದುರ ಹೇಳುತ್ತಾನೆ.
ಅಂದರೆ, ವಿದುರನ ನಿಷ್ಟುರವಾದ ಮಾತಲ್ಲಿ ಧೃತರಾಷ್ಟ್ರನ ಮಕ್ಕಳಿಗೆ ಆತ ಕೊಟ್ಟ ಬೆಂಬಲಕ್ಕೆ ಚುಚ್ಚುವಂತೆ ಈ ಮಾತನ್ನು ಆಡುತ್ತಾನೆ. ಧೃತರಾಷ್ಟ್ರನಿಗೆ ಭೀಮಾರ್ಜುನರ ಬಲ ಗೊತ್ತಿದೆ. ತನ್ನ ಮಕ್ಕಳ ಹೀನತೆಯ ಅರಿವಿಲ್ಲದಿಲ್ಲ. ಆದರೂ ಪುತ್ರ ವ್ಯಾಮೋಹಿಯಾದ ಧೃತರಾಷ್ಟ್ರ ಪಾಂಡವರೊಡನೆ ಹಗೆಕಟ್ಟಿಕೊಂಡ ಕೌರವನಿಗೆ ಹೆಗಲೆಣೆಯಾಗುತ್ತಾನೆ. ಇದರಿಂದ ನಿದ್ದೆ ಎಂಬುದು ಬರಲೊಲ್ಲದು.
ಇದು ವಿದುರನಿಗೆ ಚೆನ್ನಾಗಿ ಗೊತ್ತಿದ್ದುದರಿಂದ ಮುಂದಿನ ಅನಾಹುತವನ್ನು ಎದುರಿಸಲು ಧೃತರಾಷ್ಟ್ರನಿಗೆ ಬೇಕಾದ ಮನಃಪಾಕವನ್ನುಕೊಡಲು ಸರಿಯಾದ ಸಮಯವೆಂದು ತನ್ನ ನೀತಿಯನ್ನು ಮತ್ತು ಆತ್ಮ ತತ್ವಜ್ಞಾನವನ್ನು ತಿಳಿಹೇಳಲು ಸನತ್ಸುಜಾತರನ್ನು ಪ್ರಾರ್ಥಿಸುವಂತೆ ದೃತರಾಷ್ಟ್ರನನ್ನು ಕೇಳಿಕೊಳ್ಳುತ್ತಾನೆ. ಒಟ್ಟು ನೂರಮೂವತ್ತೈದಕ್ಕೂ ಮಿಕ್ಕಿದ ಹಾಡುಗಳಲ್ಲಿ ವಿದುರ ನೀತಿ ವಿವೃತವಾಗಿದೆ. ಉದ್ಯೋಗ ಪರ್ವದ ನಾಲ್ಕನೆ ಸಂಧಿಯಲ್ಲಿ ಸನತ್ಸುಜಾತ ನೀತಿ ಹೇಳಲ್ಪಟ್ಟಿದೆ.
ಜೀವನದಲ್ಲಿ ಕಷ್ಟಗಳು ಬರುತ್ತವೆ. ಎಲ್ಲರೂ ತಮ್ಮ ಯೋಜನೆಯಂತೆಯೇ ಜೀವನ ಸಾಗಬೇಕು ಎಂದು ಬಯಸುತ್ತಾರೆ. ಇದು ಸಹಜ. ಅದಾಗದಿದ್ದರೆ ಖೇದ ಪಡುವುದೂ ಸಹಜವೇ ಸರಿ. ದೈವವನ್ನೂ ಹಳಿಯುತ್ತೇವೆ. ಯಾವಾಗಲೂ ಸಜ್ಜನರಿಗೇ ಯಾಕೆ ಕಷ್ಟಗಳು. ದೈವದ ಚಿಂತೆಯಲ್ಲೇ ನಾವು ದಿನಗಳೆಯುತ್ತಿರುತ್ತವೆ. ಹೀಗಿದ್ದರೂ ನಮಗೆ ಮಾತ್ರ ಯಾಕೆ ಕಷ್ಟಗಳು ಎಂದು ದೈವವನ್ನು ನಿಂದಿಸುತ್ತೇವೆ.
ಇದನ್ನು ವಿದುರನ ಮಾತಿನಲ್ಲಿ ಕುಮಾರವ್ಯಾಸ ಹೀಗೆ ವಿವೇಚಿಸುತ್ತಾನೆ- ತನ್ನ ಚಿಂತೆಯದೊಂದು ದೈವದ ಗನ್ನಗತಕವದೆರಡು ಭಾವದ ಬನ್ನಣೆಯಬಗೆ ಮೂರು ದೈವದ ಭಿನ್ನ ಮುಖ ನಾಲ್ಕು| ತನ್ನ ನೆನಹೆಂತಂತೆ ಕಾರ್ಯವು ಚೆನ್ನಹಡೆ ಲೋಕಕ್ಕೆ ತಾ ಬೇ ರಿನ್ನು ದೈವವದೇಕೆ ತಾನೇ ದೈವರೂಪೆಂದ||
ತನ್ನ ಯೋಜನೆ ಯೋಚನೆಯೊಂದು ಬಗೆಯಾದರೆ; ಆ ಯೋಚನೆ ನೆರವೇರದಿದ್ದರೆ ದೇವರನ್ನು ದೂಷಿಸುವುದು ಎರಡನೆಯದು. ತನ್ನ ಯೋಜನೆ ಅನುಷ್ಠಾನವಾಗದಿದ್ದುದರಿಂದ ತಾನು ಪಡುವ ಬೇಸರ ಮೂರನೆಯದು; ಆದರೆ, ದೈವದ ಚಿಂತನೆ ನಾಲ್ಕನೆಯದು-ದೈವದ ಮುಖ ಭಿನ್ನವಾಗಿರುತ್ತದೆ. ಇವು ನಾವು ಮಾಡುವ ಕಾರ್ಯಕ್ಕಿರುವ ನಾಲ್ಕು ಮುಖಗಳು.
ಕೊನೆಗೆ ವಿದುರ ಹೇಳುತ್ತಾನೆ ಎಲ್ಲವೂ ತಾನೆಂದುಕೊಂಡಂತೆ ನೆರವೇರಿದರೆ ಬೇರೆದೈವ ಯಾಕೆ ತಾನೇ ದೈವದರೂಪವಲ್ಲವೇ ಎಂದು. ಜೀವನವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಆ ನಾಲ್ಕನೆಯದರ ನಿಯಮ ಯಾವತ್ತೂ ಚೆನ್ನಾಗಿಯೇ ಕಾಣುವುದು ನಮ್ಮ ಸಕಾರಾತ್ಮಕ ಅವಲೋಕನದಲ್ಲಿದೆ.
ದೈವದೊಡನೆ ನಮಗೇನು ಬೇಕೆಂಬು ಕೇಳಲೂ ನಮಗೆ ಸರಿಯಾಗಿ ತಿಳಿಯದು. ಅದು ಕೊಟ್ಟದ್ದು ಸರಿಯಾಗಿಯೇ ಇರುತ್ತದೆ ಎಂಬುದು ಸೂಕ್ಷ್ಮ ದೃಷ್ಟಿಗೆ ಮಾತ್ರವೇ ತಿಳಿಯುತ್ತದೆ. ಕಷ್ಟದಲ್ಲೂ ಅನೇಕ ಸುಖಕ್ಕೆ ಸೋಪಾನ, ಅನೇಕ ಸಾಧನೆಗಳಿಗೆ ಮೊದಲ ಮೆಟ್ಟಿಲು ಅಲ್ಲೇ ಇರುವುದನ್ನು ಕಾಣುವ ದೃಷ್ಟಿ ನಮಗೆ ಬೆಳೆದರೆ ಅದುವೇ ನಿಜವಾದ ದೈವಾನುಗ್ರಹ. ಇದು ತಿಳಿಯಬೇಕಾದರೆ ರಾಗ ರಹಿತವಾಗಿ ನೋಡಬೇಕೆಂಬುದು ಹಿರಿಯರ ನುಡಿ. ಇದು ವಿಜ್ಞಾನವೂ ಹೌದು. ಹೀಗೆ ವಿದುರ ನೀತಿ ಈ ತಿಳಿವಳಿಕೆಗೆ ದಾರಿದೀಪವಾಗಿದೆ.
(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆವಾದಕರು. ಮಂಗಳೂರು)
ಲೇಖನ ತುಂಬಾ ಚೆನ್ನಾಗಿ ಬರೆದಿದ್ದಾರೆ.* ಕೃಷ್ಣಪ್ರಕಾಶ ಉಳಿತ್ತಾಯ ಅವರಿಗೆ ಅಭಿನಂದನೆಗಳು
ಬಲಶಾಲಿಯೆದುರು ಹಗೆಕಟ್ಟಿ ಯುದ್ಧ ಮಾಡುವ ದುರ್ಬಲನಿಗೆ; ಕಾಮುಕನಿಗೆ; ಹಣವನ್ನು ಕಳೆದುಕೊಂಡು ಕಳವಳಿಸುವವನಿಗೆ; ದೈವದ ಸ್ವರೂಪ ತಿಳಿಯದವನಿಗೆ; ಕಳ್ಳತನ ಮಾಡಲು ಹವಣಿಸುತ್ತಾ ಇರುವವನಿಗೆ; ಹೀಗಿರುವವರಿಗೆ ರಾತ್ರಿ ನಿದ್ದೆ ಬರುವುದಿಲ್ಲ ಎಂದು ವಿದುರ ಹೇಳುತ್ತಾನೆ.
ತುಂಬ ಚಂದ ಹೇಳಿದ್ದೀರಿ ಸರ್..
ಧನ್ಯವಾದ ಮಹನೀಯರಾದ ಕೃಷ್ಣ ಭಟ್ ಮತ್ತು ಸಂತೋಷ್
ಉತ್ತಮವಾದ ಲೇಖನ ವ್ಯಕ್ತಿತ್ವದ ಪ್ರತಿಬಿಂಬ 🙏
thank you