ಸ್ವರ್ಣ ಮಂದಿರದಲ್ಲಿ ಸಿಗುವ ಪ್ರಸಾದ ವೈವಿಧ್ಯ

ಅಮೃತಸರದ ಸ್ವರ್ಣ ಮಂದಿರದಲ್ಲಿ ಪ್ರಸಾದ ರೂಪದಲ್ಲಿ ನೀಡುವ ಗೋಧಿ ಹಲ್ವಾವನ್ನು `ಕರಾಹ್’ ಎಂದು ಕರೆಯುತ್ತಾರೆ. ಪ್ರಸಾದ ಎಂದೇ ಕರೆಸಿಕೊಳ್ಳುವ ಈ ಸಿಹಿಖಾದ್ಯ ಸಿಖ್ ಸಮುದಾಯದವರ ಫೇವರಿಟ್ ತಿನಿಸು. ಮಾತ್ರವಲ್ಲ ವಿವಿಧ ಬಗೆಯ ಸಿಹಿತಿನಿಸುಗಳನ್ನು ಹಬ್ಬದ ಸಂದರ್ಭದಲ್ಲಿ ದೇವರಿಗೆ ನೈವೇದ್ಯ ಮಾಡಿ, ಇತರರಿಗೆ ಹಂಚಿ ತಾವು ಸವಿದು ಸಂಭ್ರಮಿಸುತ್ತಾರೆ.


ಕರಾಹ್ ಪ್ರಸಾದ (ಗೋಧಿ ಹಲ್ವಾ)
ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು-2ಕಪ್, ತುಪ್ಪ -1ಕಪ್, ಸಕ್ಕರೆ-1ಕಪ್, ನೀರು -3ಕಪ್, ಉಪ್ಪು ರಹಿತ ಬೆಣ್ಣೆ-2ಕ್ಯೂಬ್.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಸೇರಿಸಿ ಸಕ್ಕರೆ ಕುದಿಸಿ. ಮತ್ತೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ಕರಗಿದಾಗ ಅದಕ್ಕೆ ಗೋಧಿ ಹಿಟ್ಟು ಹಾಕಿ ಹೊಂಬಣ್ಣ ಬರುವವರೆಗೆ ರೋಸ್ಟ್ ಮಾಡಿ. 5ನಿಮಿಷ ನಿರಂತರವಾಗಿ ಕೈಯಾಡಿಸುತ್ತಿರಿ. ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ. ನಂತರ ಸಕ್ಕರೆ ಸಿರಪ್‍ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಗಂಟುಗಳಾಗದಂತೆ ನೋಡಿಕೊಳ್ಳಿ. ಬಾಣಲೆಯಿಂದ ಮಿಶ್ರಣ ಬಿಟ್ಟುಕೊಳ್ಳುವಾಗ ಉರಿಯನ್ನು ಆಫ್ ಮಾಡಿ. ಅದಕ್ಕೆ ಕತ್ತರಿಸಿದ ಗೋಡಂಬಿ, ಬಾದಾಮಿಯಿಂದ ಅಲಂಕರಿಸಬಹುದು.

ಬೇಸನ್ ಬರ್ಫಿ
ಬೇಕಾಗುವ ಸಾಮಗ್ರಿ: ಬೇಸನ್(ಕಡಲೆ ಹಿಟ್ಟು)-250ಗ್ರಾಂ, ಸಕ್ಕರೆ-1ಕಪ್, ನೀರು-125ಎಂಎಲ್, ತುಪ್ಪ-250ಮಿ.ಲೀ, ಗೋಂಡಂಬಿ, ಬಾದಾಮಿ-ತಲಾ 5.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಬೇಸನ್ ಹಿಟ್ಟನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಮತ್ತೊಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿ ಸಕ್ಕರೆ ಸಿರಪ್ ತಯಾರಿಸಿಟ್ಟುಕೊಳ್ಳಿ. ರೋಸ್ಟ್ ಮಾಡಿಟ್ಟುಕೊಂಡಿದ್ದ ಬೇಸನ್ ಹಿಟ್ಟಿಗೆ ಸಕ್ಕರೆಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ತಟ್ಟೆಗೆ ತುಪ್ಪ ಸವರಿ ಮಿಶ್ರಣವನ್ನು ಹಾಕಿ. ಬೇಕಾದ ಆಕಾರಕ್ಕೆ ಕತ್ತರಿಸಿ. ಕತ್ತರಿಸಿದ ಬಾದಾಮಿ, ಗೋಡಂಬಿಯಿಂದ ಅಲಂಕರಿಸಿ.

ಕೇಸರಿ ಜಿಲೇಬಿ
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು-2 ಕಪ್, ಮೊಸರು- 1/2ಕಪ್, ಕೇಸರಿ – 6 ದಳ, ತುಪ್ಪ -1/2ಕಪ್, ಸಕ್ಕರೆ -ಒಂದೂವರೆ ಕಪ್.

ಮಾಡುವ ವಿಧಾನ: ಪಾತ್ರೆಯೊಂದರಲ್ಲಿ ಮೈದಾ ಹಾಗೂ ಮೊಸರು ಹಾಕಿ 2 ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣ ಗಟ್ಟಿಯಾಗಿದ್ದಲ್ಲಿ ನೀರು ಸೇರಿಸಬಹುದು. ಮತ್ತೊಂದು ಪಾತ್ರೆಯಲ್ಲಿ ನೀರು ಹಾಗೂ ಸಕ್ಕರೆ ಹಾಕಿ ಪಾಕ ತಯಾರು ಮಾಡಿಟ್ಟುಕೊಳ್ಳಿ. ತುಪ್ಪವನ್ನು ಬಾಣಲೆಗೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ಕಾಟನ್ ಬಟ್ಟೆಯೊಂದನ್ನು ತೆಗೆದುಕೊಂಡು ಅದರ ಮಧ್ಯೆ ತೂತು ಮಾಡಿ ಆ ಬಟ್ಟೆಗೆ ಈ ಮೊದಲೇ ತಯಾರಿ ಮಾಡಿಟ್ಟುಕೊಂಡ ಹಿಟ್ನನ್ನು ಹಾಸಿ ಬಿಸಿಯಾದ ತುಪ್ಪಕ್ಕೆ ಹಾಕಿ ಕೆಂಪಗಾಗುವವರೆಗೆ ಕರಿಯಿರಿ.ಕರಿದ ಜಿಲೇಬಿಯನ್ನು ತಣ್ಣಗಾದ ಸಕ್ಕರೆ ಪಾಕಕ್ಕೆ ಹಾಕಿದರೆ ಬಿಸಿಬಿಸಿಯಾದ ರುಚಿಕರ ಜಿಲೇಜಿ ಸವಿಯಲು ಸಿದ್ಧ.

ಶಕರಾಪರ ಸ್ವೀಟ್
ಬೇಕಾಗುವ ಸಾಮಗ್ರಿ: ಅಕ್ಕಿ, ಗೋ, ರಾಗಿ, ಜೋಳ, ಮೈದಾ ಹಿಟ್ಟು- ತಲಾ 100ಗ್ರಾಂ, ತುಪ್ಪ-100ಗ್ರಾಂ, ಅಡುಗೆ ಸೋಡಾ-1 ಚಮಚ, ಹಿಟ್ಟು ನಾದಲು ನೀರು, ಕರಿಯಲು ಎಣ್ಣೆ. ಸಕ್ಕರೆ ಪಾಕಕ್ಕೆ: ಸಕ್ಕರೆ-300ಗ್ರಾಂ, ನೀರು-100ಮಿ.ಲೀ.
ತಯಾರಿಸುವ ವಿಧಾನ: ಎಲ್ಲಾ ಹಿಟ್ಟುಗಳನ್ನು ಜರಡಿ ಹಿಡಿದು ಅದಕ್ಕೆ ತುಪ್ಪ ಮಿಕ್ಸ್ ಮಾಡಿ. ಅದಕ್ಕೆ ಅಡುಗೆ ಸೋಡಾ, ನೀರು ಸೇರಿಸಿ ಚೆನ್ನಾಗಿ ನಾದಿಸಿ. ನಾದಿಸಿದ ಹಿಟ್ಟನ್ನು ಬಟ್ಟೆಯಲ್ಲಿ 15 ನಿಮಿಷ ಸುತ್ತಿಡಿ. ಸಕ್ಕರೆಗೆ ನೀರು ಸೇರಿಸಿ ಸಕ್ಕರೆ ಸಿರಪ್ ರೆಡಿ ಮಾಡಿಟ್ಟುಕೊಳ್ಳಿ. ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ನಾದಿಸಿದ ಹಿಟ್ಟನ್ನು 1/2 ಇಂಚು ದಪ್ಪನಾಗಿ ಮೂರು ರೋಲ್‍ಗಳನ್ನಾಗಿ ಮಾಡಿಕೊಂಡು ಅದನ್ನು ಚಾಕುವಿನಿಂದ ಕತ್ತರಿಸಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಸಕ್ಕರೆ ಸಿರಪ್‍ನ್ನು ಕರಿದ ಶಕರಾಪರಕ್ಕೆ ಸವರಿ. ಆರಿದ ನಂತರ ಸವಿಯಿರಿ.

Related Articles

ಪ್ರತಿಕ್ರಿಯೆ ನೀಡಿ

Latest Articles