ವರದಿ: ವೈ.ಬಿ.ಕಡಕೋಳ
ಮುನವಳ್ಳಿಃ ಇಲ್ಲಿಯ ಮಲಪ್ರಭಾ ನದಿ ದಡದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶುಕ್ರವಾರ ಸಂಜೆ ಶಾರದಾ ಮಹಿಳಾ ಭಜನಾ ಮಂಡಳದ ಸದಸ್ಯೆಯರಿಂದ ಶ್ರೀ ವೆಂಕಟೇಶ್ವರ ಆರಾಧನೆ ಮತ್ತು ಲಕ್ಷ್ಮೀ ಸೋಬಾನೆ ಜರುಗಿತು.
ಈ ಸಂದರ್ಭದಲ್ಲಿ ಸುಜಾತಾ ವೆಂಕಟೇಶ ನಾಯ್ಕ, ರಾಧಿಕಾ ಗೋವಿಂದರಾಜ ನಾಯ್ಕ,ಲಕ್ಷ್ಮೀ ಹರಪನಹಳ್ಳಿ, ಸೌಮ್ಯ ಕೋಟಿ, ಸರೋಜಾ ಯಲಿಗಾರ, ಭಾಗ್ಯಾ ಅಮಠೆ, ದೀಪಾ ಯಲಿಗಾರ, ಭಾರತಿ ಯಲಿಗಾರ, ಸುರೇಖಾ ರೇಣಕೆ, ಶಿವಲೀಲಾ ಕಡಕೋಳ ಮೊದಲಾದವರು ಪಾಲ್ಗೊಂಡಿದ್ದರು.
ಇದೇ ಫೆಬ್ರವರಿ 5 ರಂದು ಗೋಪಾಲದಾಸರ ಜಯಂತಿ, ಫೆಬ್ರವರಿ 11 ರಂದು ಪುರಂದರದಾಸರ ಆರಾಧನೆ, ಫೆಬ್ರವರಿ 21 ರಂದು ಮಧ್ವನವಮಿ ಕಾರ್ಯಕ್ರಮಗಳು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ನಡೆಯಲಿವೆ ಎಂದು ದೇಗುಲದ ಅರ್ಚಕ ದಿಗಂಬರ ದೇಸಾಯಿ ತಿಳಿಸಿದ್ದಾರೆ.
ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಪರಿಚಯ
ಭಕ್ತರ ಸಂಕಟಗಳನ್ನು ಪರಿಹರಿಸುವ ಮತ್ತು ಭಕ್ತರ ಅಭೀಷ್ಟೆಗಳನ್ನು ಈಡೇರಿಸುವ ಶ್ರೀಲಕ್ಷ್ಮೀವೆಂಕಟೇಶ ಸ್ವಾಮಿಯು ಸಾಕ್ಷಾತ್ ಭೂವೈಕುಂಠ ಎನಿಸಿದ ಶ್ರೀಕ್ಷೇತ್ರ ತಿರುಪತಿಯಲ್ಲಿ ನೆಲೆಸಿರುವನಲ್ಲದೇ ನಾಡಿನ ಎಲ್ಲೆಡೆ ತನ್ನ ಭಕ್ತರ ಕರೆಗೆ ಓಗೊಟ್ಟು ಭಕ್ತರು ಇರುವ ಸ್ಥಳದಲ್ಲಿಯೇ ನೆಲೆಸಿ ಅವರ ಸೇವಾ ಕೈಂಕರ್ಯಗಳನ್ನು ಸ್ವೀಕರಿಸಿ ಜನುಮ ಪಾವನಗೊಳಿಸುತ್ತಿರುವನು.
ಎಲ್ಲಿ ಭಕ್ತ ಜನರಿರುವರೋ ಅಲ್ಲಿ ವೆಂಕಟೇಶ ದೇವಾಲಯಗಳು ಇರುವಂತೆ ಮುನವಳ್ಳಿಯ ಮಲಪ್ರಭಾ ನದಿಯ ದಡದಲ್ಲಿ ಉತ್ತರಾಭಿಮುಖವಾಗಿ ವೆಂಕಟೇಶ ದೇವಾಲಯ ಇದೆ. ಇಲ್ಲಿಗೆ ಹತ್ತಿರದ ಸ್ಥಳಗಳ ಶ್ರೀ ಲಕ್ಮೀ ವೆಂಕಟೇಶ ದೇವಾಲಯಗಳೆಂದರೆ ನರಗುಂದದ ಲಕ್ಷ್ಮೀ ವೆಂಕಟೇಶ, ಸವದತ್ತಿಯ ಲಕ್ಷ್ಮೀ ವೆಂಕಟೇಶ, ಧಾರವಾಡದ ಶ್ರೀ ಲಕ್ಷ್ಮೀ ವೆಂಕಟೇಶ ದೇಗುಲ.
ಐತಿಹ್ಯ: ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. ಮುನವಳ್ಳಿಯ ಮಲಪ್ರಭಾ ನದಿ ದಡದಲ್ಲಿ ಉತ್ತರಾಭಿಮುಖವಾಗಿರುವ ಈ ದೇಗುಲವು ತನ್ನ ಸುತ್ತ ಹಲವು ದೇವಾಲಯಗಳ ಸಮುಚ್ಚಯವನ್ನು ಒಳಗೊಂಡಿದೆ. ದೇವಾಲಯದ ಬಲ ಭಾಗದಲ್ಲಿ ವಿಠ್ಠಲ ರುಕ್ಮಿಣಿ ಮಂದಿರ ಮತ್ತೊಂದೆಡೆ ಅಂಜನೇಯ ದೇವಾಲಯವಿದೆ. ಲಕ್ಮೀ ವೆಂಕಟೇಶ ದೇವಾಲಯದಲ್ಲಿನ ವೆಂಕಟೇಶ ಮೂರ್ತಿಯು ತುಂಬಾ ವಿಶಿಷ್ಟವಾದದ್ದು. ಜೊತೆಗೆ ಅಪರೂಪದ್ದಾಗಿದೆ. ಒಂದು ಕಾಲಕ್ಕೆ ಪರಕೀಯರ ದಾಳಿಗೆ ತುತ್ತಾಗಿದ್ದ ಇಲ್ಲಿನ ವಿಗ್ರಹ ನಂತರ 1927 ಶ್ರಾವಣ ಶುದ್ಧ ತ್ರಯೋದಶಿಯಂದು ಪುರ್ನಸ್ಥಾಪಿತಗೊಂಡಿದ್ದು. ಅಂದಿನಿAದ ಇಂದಿನವರೆಗೂ ಅಧ್ವರ್ಯು ಮನೆತನದವರಿಂದ ಪೂಜೆಗೊಳ್ಳುತ್ತ ತನ್ನದೇ ಅಭಿವೃದ್ದಿ ಹೊಂದುತ್ತ ಭಕ್ತರ ಪುಣ್ಯಕೇತ್ರವಾಗಿದೆ. ಶ್ರೀ ಲಕ್ಮೀ ವೆಂಕಟೇಶ ದೇವರ ಮೂರ್ತಿಯ ವಿಶೇಷತೆ ಎಂದರೆ ಶ್ರೀದೇವಿ ವೆಂಕಟೇಶ ದೇವರು ಭೂದೇವಿ ಸಹಿತವಾಗಿ ಕೆಳಗಡೆ ಗರುಡ ದೇವರನ್ನು ಒಳಗೊಂಡಿದೆ. ಅಲ್ಲದೇ ಪಕ್ಕದಲ್ಲಿ ಗೋವಿಂದರಾಜ ಮತ್ತು ಶ್ರೀ ರಾಮದೇವರು ಮತ್ತು ಶ್ರೀ ನರಸಿಂಹದೇವರು ಭೂ ವರಾಹ ದೇವರು ಅಂಜನೇಯಸ್ವಾಮಿ ವಿಠ್ಠಲ ರುಕ್ಮಿಣಿ ಮಂದಿರಗಳನ್ನು ಹೊಂದಿದೆ.
ದೇಗುಲದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು
1) ಚೈತ್ರ ಶುದ್ಧ ಪ್ರತಿಪದೆ(ಯುಗಾದಿ)
2) ವೈಸಾಖ ಶುದ್ಧ (ಅಕ್ಷಯ ತೃತಿಯಾ)
3)ಶ್ರಾವಣ ಶುದ್ಧ ತ್ರಯೋದಶಿ ಪ್ರತಿಷ್ಠಾಪನಾ ದಿನ
4)ಅಶ್ವಿನಿ ಶುದ್ಧ ಪ್ರತಿಪದೆಯಿಂದ ದ್ವಾದಶ ವರೆಗಿನ ಶರನ್ನವರಾತ್ರಿ ಉತ್ಸವ
5)ಕಾರ್ತಿಕ ಶುದ್ಧ ಪ್ರತಿಪದೆ ದೀಪಾವಳಿ ಹಾಗೂ ಕಾರ್ತಿಕ ದೀಪೋತ್ಸವ ಮತ್ತು ಸಹಸ್ರ ದೀಪೋತ್ಸವ ಛಟ್ಟಿ ಅಮವಾಸೆ
6) ವೈಕುಂಠ ಏಕಾದಶಿ ಮತ್ತು ಮುಕ್ಕೋಟಿ ದ್ವಾದಶಿ
ಅಲ್ಲದೇ ಚೈತ್ರ ಹುಣ್ಣಿಮೆ, ಹನುಮ ಜಯಂತಿ, ರಾಮನವಮಿ, ಕಾರ್ತಿಕ ದೀಪೋತ್ಸವ, ಮಧ್ವ ನವಮಿ, ದತ್ತ ಜಯಂತಿ, ಶಂಕರಾಚಾರ್ಯರ ಜಯಂತಿ ಹೀಗೆ ಅನೇಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.