*ಕೃಷ್ಣ ಪ್ರಕಾಶ್ ಉಳಿತ್ತಾಯ
ಸುಮೇರುಮಧ್ಯಶೃಂಗಸ್ಥಾ ಶ್ರೀಮನ್ನಗರನಾಯಿಕಾ|
ಚಿಂತಾಮಣಿಗೃಹಾಂತಃಸ್ಥಾ ಪಂಚಬ್ರಹ್ಮಾಸನಸ್ಥಿತಾ||
ಋಷಿ ತಾಯಿಯ ತಾವನ್ನು ಕುರಿತು ಯೋಚಿಸುತ್ತಾರೆ. ಆಕೆ ಎಲ್ಲಿದ್ದಾಳೆ; ಆಕೆಯನ್ನು ಧ್ಯಾನಿಸುವಾಗ ಲಲಿತೆ ಇರುವ ಪರಮ ಪವಿತ್ರ ಸ್ಥಳವನ್ನೂ ಕುರಿತು ಅನುಸಂಧಾನ ಮಾಡಬೇಕಲ್ಲವೇ!. ಲಲಿತೆಯ ಮಹಾಸೌಭಾಗ್ಯಪ್ರದ ಅಂಗಾಂಗಗಳ ವಿವಕ್ಷೆ ಮುಗಿದು ಮತ್ತೆ ಇಡಿಯಾಗಿ ನೋಡಿ ತಾಯಿಯ ಇರವಿನ ಅರಿವು ಅಗತ್ಯವೆಂದು ಮತ್ತಿನ ಪದ್ಯದಲ್ಲಿ ನಾಲ್ಕು ಸ್ಥಳಗಳನ್ನು ಕುರಿತು ವರ್ಣಿಸಿದ್ದಾರೆ.
“ಸುಮೇರುಮಧ್ಯಶೃಂಗಸ್ಥಾ” ಮೇರು ಪರ್ವತದ ಶಿಖರಾಗ್ರದಲ್ಲಿ ವಾಸಿಸುವವಳು ಎಂಬುದು ಇಲ್ಲಿಯ ಹೊರಕಣ್ಣಿಗೆ ಕಾಣುವ ಅರ್ಥ. ಸುಮೇರು ಪರ್ವತದ ಮಧ್ಯದ ಶೃಂಗದಲ್ಲಿ ನೆಲೆಸಿದ್ದಾಳೆ ಶ್ರೀದೇವಿ.
“ಶ್ರೀಮನ್ನಗರನಾಯಿಕಾ” ಶ್ರೀಚಕ್ರ ತಾಯಿ ಲಲಿತೆಯ ವಾಸಸ್ಥಾನವೆಂದು ಪರಿಭಾವಿಸಿ ಶ್ರದ್ಧೆಯಿಂದ ಪೂಜಿಸುತ್ತೇವೆ.
ಶ್ರೀಚಕ್ರದ ಮಧ್ಯದ ಬಿಂದುವಿನಲ್ಲಿ ಲಲಿತೆ ಕಾಮೇಶ್ವರನ ಎಡತೊಡೆಯ ಮೇಲೆ ಕುಳಿತಿದ್ದಾಳೆ. ಶ್ರೀಚಕ್ರಕ್ಕೆ ಶ್ರೀಪುರ ಎಂದೂ ಕರೆಯುತ್ತಾರೆ. ಶ್ರೀಪುರವನ್ನೇ ಶ್ರೀಮನ್ನಗರವೆಂದೂ ಕರೆಯುತ್ತಾರೆ. ಹಾಗಾಗಿ ಲಲಿತೆಯನ್ನು “ಶ್ರೀಮನ್ನಗರನಾಯಿಕಾ” ಎಂದೂ ಸಂಬೋಧಿಸುತ್ತಾರೆ. ಇದು ಜನಪದದಲ್ಲೂ ಕಾಣಬಹುದು. ಹೇಗೆಂದರೆ, ಹಳ್ಳಿ ಹಳ್ಳಿಗಳಲ್ಲಿ ಊರ ದೇವತೆ, ಗ್ರಾಮ ದೇವತೆ ಎಂದು ಪೂಜಿಸಲ್ಪಡುವ ದೇವತೆಯೊಬ್ಬಳಿರುತ್ತಾಳೆ. ಅತ್ಯಂತ ಸೂಕ್ಷ್ಮತೆಯುಳ್ಳ ಶ್ರೀಚಕ್ರಾರಾಧನೆಯೇ ಜನಪದರಲ್ಲಿ ಹಳ್ಳಿಗಳಲ್ಲಿ ರೂಢಿಯಲ್ಲಿ ಗ್ರಾಮದೇವತೆಯೆಂದೋ, ನಗರದೇವತೆಯೆಂದೋ ಆರಾಧಿಸಲ್ಪಡುತ್ತಿದ್ದಿರಬಹುದು. ಶ್ರೀಚಕ್ರಾರಾಧನೆಗೆ ಅಲ್ಲಿಯ ಶ್ರದ್ಧೆ, ಇಲ್ಲಿಗೆ ಈ ಶ್ರದ್ಧೆ.
“ಚಿಂತಾಮಣಿಗೃಹಾಂತಸ್ಥಾ” ತಾಯಿಯ ಮನೆಯ ಮಂದಿರ ಚಿಂತಾಮಣಿಯಿಂದಲೇ ನಿರ್ಮಿಸಲ್ಪಟ್ಟಿದೆ. ಇಲ್ಲಿ ಗ್ರಹಿಸಬೇಕಾದದ್ದು, ಭಕ್ತ ತಾಯಿಯ ಮನೆಗೆ ಪ್ರವೇಶ ಪಡೆದಾಗ ಅಥವಾ ಆಕೆಯ ಮನವೆಂಬ ಚಿಂತಾಮಣಿ ಗೃಹಕ್ಕೆ ಪ್ರವೇಶಪಡೆದರೆ ತಾನು ಬಯಸಿದ್ದು ಪಡೆಯುತ್ತಾನೆ. ಮಾತ್ರವಲ್ಲ, ಏನನ್ನು ಬಯಸಬೇಕೆಂಬುದನ್ನೂ ಆಕೆಯೇ ಮನಃಕಾರಕಿಯಾಗಿ ನಿರ್ದೇಶಿಸುತ್ತಾಳೆ. ಇದು ಪ್ರಧಾನ ವಿವಕ್ಷೆಯಾಗಿ ತೆಗೆದುಕೊಂಡರೆ “ಚಿಂತಾಮಣಿಗೃಹಾಂತಸ್ಥಾ” ಎಂಬ ಹೆಸರು ಧ್ವನಿಸುವ ಅರ್ಥ ಸ್ಪಷ್ಟವಾಗುತ್ತದೆ.
“ಪಂಚಬ್ರಹ್ಮಾಸನಸ್ಥಿತಾ” ಐದು ಬ್ರಹ್ಮರು ಆಸನವಾಗಿರುವ ಪೀಠದಲ್ಲಿ ತಾಯಿ ವಿರಾಜಮಾನಳಾಗಿದ್ದಾಳೆ.
ಶಿವನ ಮೇಲೆಯೇ ದೇವಿ ಕುಳಿತಿರುವವಳಾದುದರಿಂದ ಶಿವನ ಐದು ರೂಪಗಳಾದ ಅಥವಾ ಪಂಚಬ್ರಹ್ಮ ರೂಪುಗಳಾದ ಈಶಾನ, ತತ್ಪುರುಷ, ಅಘೋರ, ವಾಮದೇವ, ಸದ್ಯೋಜಾತ ಎಂಬಿವೂ ತಾಯಿಯ ಶಿವಸ್ವರೂಪೀ ಆಸನವೆಂದೂ ಪರಿಭಾವಿಸಿದರೆ ತಪ್ಪಲ್ಲವೆಂಬುದು ಇಲ್ಲಿಯ ಶ್ರದ್ಧೆ.