ಶ್ರೀ ಗೋಪಾಲದಾಸರ ಮಹಿಮೆಗಳಿವು

ಒಮ್ಮೆ ಉತ್ತನೂರಿನಲ್ಲಿ ಶ್ರೀ ಗೋಪಾಲದಾಸರು ಸಾಯಂಕಾಲದ ಸಂಧ್ಯಾವಂದನೆ ಮುಗಿಸಿಕೊಂಡು, ಪಾರಾಯಣ ಮಾಡುತ್ತಾ ಕುಳಿತಿದ್ದರು. ಅದೇ ಸಮಯದಲ್ಲಿ ಒಬ್ಬ ಸಾಧ್ವಿ ಮಣಿಯು ಅದೇ ತಾನೇ ಕರೆದ ಗೋವಿನ ಹಾಲನ್ನು ತೆಗೆದುಕೊಂಡು ದಾಸರ ಮನೆಗೆ ಬಂದಳು. ಆಕೆಗೆ ಶ್ರೀ ಗೋಪಾಲ ದಾಸರ ದರುಶನ ಮಾಡಿ ಅವರಿಗೆ ಸಮರ್ಪಣೆ ಮಾಡಬೇಕು ಎಂಬ ಆಸೆ. ದಾಸರು ಮನೆಯಲ್ಲಿ ಇಲ್ಲ ಊರ ಹೊರಗಡೆ ತೊರೆಯ ಬಳಿ ಇದ್ದಾರೆ ಅಂತ ಅವರ ತಾಯಿಯವರು ಹೇಳಿದ್ದು ಕೇಳಿ ದಾಸರಿದ್ದ ಸ್ಥಳಕ್ಕೆ ಆ ಸಾಧ್ವಿಯು ಬರುತ್ತಾಳೆ. ತಮ್ಮ ಸಾಯಂಕಾಲದ ಭಜನೆ ಪೂಜೆಯ ಸಮಯದಲ್ಲಿ ಈ ಗೋವಿನ ಹಾಲನ್ನು ವೆಂಕಟೇಶ್ವರ ನಿಗೆ ಸಮರ್ಪಣೆ ಮಾಡಿ ಅಂತ ಪ್ರಾರ್ಥನಾ ಮಾಡುತ್ತಾಳೆ.

ಕೆಲ ನಿಮಿಷ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ದಾಸರು,ಭಗವಂತನ ಸ್ಮರಿಸುತ್ತಾ ಅಷ್ಟು ಹಾಲನ್ನು ತಾವು ಕುಳಿತ ಉಸುಕಿನಲ್ಲಿ ಚೆಲ್ಲಿ, ಅಲ್ಲಿ ಇದ್ದ ಆ ತೊರೆಯಲ್ಲಿ ಆ ಪಾತ್ರೆಯನ್ನು ತೊಳೆದು ಶ್ರೀನಿವಾಸನಿಗೆ ಸಮರ್ಪಣೆ ಆಯಿತವ್ವ!! ಸ್ವಾಮಿ ಪ್ರೀತಿಯಾಗಿದ್ದಾನೆ.ಪಾತ್ರೆಯನ್ನು ತೆಗೆದುಕೊಂಡು ಮನೆಗೆ ಹಿಂತಿರುಗು ” ಅಂತ ಹೇಳುತ್ತಾರೆ. ದಾಸರ ಈ ಚರ್ಯೆಯನ್ನು ಕಂಡು ಆ ಹೆಣ್ಣು ಮಗಳು ಏನು ಮಾತನಾಡದೇ ಅಳಲು ಶುರು ಮಾಡುತ್ತಾಳೆ.

ಅವಾಗ ಗೋಪಾಲ ದಾಸರು “ಏನವ್ವಾ!! ಯಾಕ ಅಳ್ತಾ ಇದ್ದೀ?? ಕಾರಣ ಹೇಳು!!” ಅಂದಾಗ, ಆ ಹೆಣ್ಣು ಮಗಳು “ದಾಸರೇ! ನಾನು ಬಹು ಭಕ್ತಿ ಇಂದ ಈ ಗೋ ಕ್ಷೀರ ವನ್ನು ಶ್ರೀ ವೆಂಕಟೇಶ್ವರ ನಿಗೆ ಜ್ಞಾನಿಗಳಾದ ತಮ್ಮಿಂದ ಅರ್ಪಿಸಬೇಕು ಅಂತ ತಂದೆ. ತಾವು ನೋಡಿದರೆ ಈ ಮರಳಿನಲ್ಲಿ ಅದನ್ನು ಚೆಲ್ಲಿದಿರಿ!. ನಿಜಕ್ಕೂ ಅದನ್ನು ನೋಡಿ ನನಗೆ ನಾನೆಷ್ಟು ಪಾಪಾತ್ಮಳು? ನಾನು ತಂದ ಹಾಲನ್ನು ದಾಸರು ದೇವರಿಗೆ ಸಮರ್ಪಣೆ ಮಾಡದೇ ಉಸುಕಿನಲ್ಲಿ ಹಾಕಿದರುಅಂತ ಅನ್ನಿಸಿತು. ಅಂತ ಅಳಲು ಶುರು ಮಾಡಿದಳು.

ತಕ್ಷಣ ದಾಸರು “ಅವ್ವಾ!! ಭಜನೆ ಕಾಲದವರೆಗೆ ಕಾದು ಶ್ರೀ ಹರಿಗೆ ಯಾಕೆ ಸಮರ್ಪಣೆ ಮಾಡಬೇಕು. ಈಗ ತಾನೇ ತಂದ ಬಿಸಿ ನೊರೆ ಹಾಲು ಇವಾಗಲೇ ಅರ್ಪಣೆ ಮಾಡಿದೆ. ಸ್ವಾಮಿಗೆ. ದುಃಖ ಪಡಬೇಡ ರಾತ್ರಿ ಭಜನೆ ಸಮಯದಲ್ಲಿ ಬಾ ಅಂತ ಹೇಳಿ ಕಳಿಸುವರು.

ಆದರೂ ಆ ಸಾಧ್ವಿಯ ಮನಸ್ಸಿನ ದುಗುಡ ತಪ್ಪಲಿಲ್ಲ. ಸರಿಯಾದ ಸಮಯಕ್ಕೆ ಭಜನೆಗೆ ಉತ್ತನೂರಿನ ವೆಂಕಪ್ಪನ ಗುಡಿಗೆ ಬಂದಳು. ಮಂಗಳಾರತಿ ಸಮಯ. ಶ್ರೀನಿವಾಸ ನಿಗೆ ಮಂಗಳಾರತಿ ಮಾಡಲು ಶ್ರೀ ಗೋಪಾಲ ದಾಸರು ಗರ್ಭಗುಡಿಯಲ್ಲಿ ಹೊಕ್ಕರು. ಜನರ ಮಧ್ಯೆ ಕುಳಿತಿದ್ದ ಆ ಹೆಣ್ಣು ಮಗಳನ್ನು ಕರೆದು ಗರ್ಭಗುಡಿಯ ಹೊಸ್ತಿಲ ಮುಂದೆ ಕೂಡಿಸಿ “ಸ್ವಾಮಿಯನ್ನು ನೋಡು!” ಅಂತ ಹೇಳಿದರು.

ಶ್ರೀನಿವಾಸನ ಮುಖವನ್ನು ನೋಡುತ್ತಾ ನಿಂತ ಆ ಹೆಣ್ಣು ಮಗಳಿಗೆ ದೇವರ ಮುಖದಿಂದ ಕ್ಷೀರ ಸೋರುವದನ್ನು ಕಂಡು ದಾಸರ ಬಗ್ಗೆ ತಪ್ಪು ತಿಳಿದ ಕಾರಣಕ್ಕಾಗಿ ಸ್ವಾಮಿಯ ಬಳಿ ತನ್ನ ಗಲ್ಲವನ್ನು ಬಡಿದುಕೊಂಡು “ಗೋವಿಂದ! ಗೋವಿಂದಾ” ಅಂತ ನಾಮ ಸ್ಮರಣೆ ಮಾಡಿದಳು. ಇದನ್ನು ಪ್ರತ್ಯಕ್ಷವಾಗಿ ಕಂಡ ಶ್ರೀಗೋಪಾಲ ದಾಸರ ತಮ್ಮಂದಿರಾದ ತಂದೆ ಗೋಪಾಲ ವಿಠ್ಠಲ ದಾಸರು ತಮ್ಮ ಕೃತಿಯಲ್ಲಿ ಹೇಳುತ್ತಾರೆ- “ತರುಣಿ ಕ್ಷೀರವ ತಂದು ಕೊಡುತಿರೆ|ಭರದಿ ಮರಳೊಳಗೆರದನು|, ಮರಳಿ ಗುಡಿಯೊಳು ಬರುತಿರಲು| ಅದ ಕರುಣಾನಿಧಿ ತಾ ತೋರ್ದನು||, ಶ್ರೀ ಹರಿಯು ತನ್ನ ಭಕ್ತರಲ್ಲಿ ನಿಂತು ತಾನು ಮಾಡುವ ಈ ಲೀಲೆ ಬಹು ವಿಚಿತ್ರ. ಬಹು ಅಗಾಧ. ಅವರಿಗೆ ಲೋಕದಲ್ಲಿ ಹೆಸರನ್ನು ತರಿಸಲೋಸುಗ ಮಾಡುವ ಅವನ ಲೀಲೆ ಅರಿಯಲು ಯಾರಿಗೂ ಸಾಧ್ಯವಿಲ್ಲ. ಅರಿಯದ ಪಾಮರರು ನಿಂದನೆ ಮಾಡಿ ನರಕವಾಸಿಗಳಾಗುವರು.

ಇವರ ಪೂಜೆಯು ನಮ್ಮ ವಿಜಯರಾಯರ ಪೂಜೆ| ಇವರ ದಯವೆ ನಮ್ಮ ವಿಜಯರಾಯರ ದಯವು| ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ| ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ|| ಗೋಪಾಲ ದಾಸರಾಯರ ದಿವ್ಯ ಚರಣಗಳು| ಕಾಪಾಡಲೆನ್ನ ಸತತ|| |ಲೇಸಾಗಿ ಭಜಿಸುವೆ ಗೋಪಾಲ ದಾಸರ||

ಮತ್ತೊಂದು ಮಹಿಮೆ

ಒಮ್ಮೆ ಶ್ರೀ ಗೋಪಾಲ ದಾಸರು ತಮ್ಮ ಸಹೋದರ ರಾದ ಶ್ರೀ ಶೀನಪ್ಪದಾಸರನ್ನು ಕರೆದು, ‘ಶೀನಪ್ಪಾ! ನೀನು ಕಂಚಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಇರುವ ಶ್ರೀ ವರದರಾಜ ಸ್ವಾಮಿಯ ಸೇವೆ ಯನ್ನು ಮಾಡಿ ಅವನ ಅನುಗ್ರಹ ವನ್ನು ಪಡೆದುಕೊಂಡು ಬಾ’ ಎಂದು ಕಳುಹಿಸಿದರು. ತಕ್ಷಣ ಶೀನಪ್ಪದಾಸರು ಅಣ್ಣನ ಮಾತಿನಂತೆ ಕಂಚಿ ಕ್ಷೇತ್ರಕ್ಕೆ ಆಗಮಿಸಿ ಶ್ರೀ ವರದರಾಜ ಸ್ವಾಮಿಯ ಸುಂದರ ಮೂರುತಿಯನ್ನು ನೋಡಿ ಬಹು ವಿಧವಾಗಿ ವರ್ಣನೆ ಮಾಡುತ್ತಾರೆ. ತಕ್ಷಣ ವೇ ಒಂದು ಕೃತಿಯನ್ನು ರಚನೆ ಮಾಡಿ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇರುವಾಗ ಅಲ್ಲಿ ಇದ್ದ ಅರ್ಚಕರು ಶ್ರೀ ವರದರಾಜನಿಗೆ ಮಂಗಳಾರತಿ ಮಾಡಲು ಆರಂಭಿಸಿದರು.

ಆಚಾರ್ಯರು ಅಂದು ಅಚಾತುರ್ಯವಾಗಿ ಅಂದು ದೇವರ ದೀಪವನ್ನು ಸ್ವಾಮಿಯ ವಿಗ್ರಹ ಸಮೀಪ ಇಟ್ಟುಬಿಟ್ಟಿದ್ದ ರಿಂದ ದೇವದೇವನಿಗೆ ಉಡಿಸಿದ ವಸ್ತ್ರಕ್ಕೆ ದೀಪ ಸೋಕಿ ಬೆಂಕಿ ಹತ್ತಿಕೊಂಡಿತು. ಇದೇ ವೇಳೆಗೆ ವೇಣಿಸೋಮಾಪುರದಲ್ಲಿ ಶ್ರೀ ಗೋಪಾಲ ದಾಸರು ತಮ್ಮ ಸಹೋದರರ ಹಾಗು ಶಿಷ್ಯ ಜನರ ಜೊತೆಯಲ್ಲಿ ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕ ತತ್ಪರರಾಗಿ ಕುಳಿತಿದ್ದರು. ಮುಸುಕು ಇಟ್ಟು ಜಪ ಮಾಡುತ್ತಾ ಇದ್ದ ಶ್ರೀ ಗೋಪಾಲ ದಾಸರು ತಕ್ಷಣ ಮುಸುಕು ತೆಗೆದು ಹಸನ್ಮುಖರಾಗಿ ತಮ್ಮ ಎರಡು ಕೈಗಳನ್ನು ಉಜ್ಜತೊಡಗಿದರು. ಒಂದೆರಡು ನಿಮಿಷಗಳ ನಂತರ ಮತ್ತೆ ಮುಸುಕು ಹೊದ್ದುಕೊಂಡು ಜಪ ಮಾಡಲು ಆರಂಭಿಸಿದರು. ಇತ್ತ ಕಂಚಿಯಲ್ಲಿ ಶೀನಪ್ಪ ದಾಸರು ನೋಡುತ್ತಾರೆ. ಅವರ ಎದುರು ಗಡೆ ಶ್ರೀ ಗೋಪಾಲ ದಾಸರು ಬಂದು ನಿಂತು ಬೆಂಕಿ ಹತ್ತಿದ ವಸ್ತ್ರಕ್ಕೆ ತಮ್ಮ ಎರಡು ಕೈಗಳಿಂದ ಅದನ್ನು ಉಜ್ಜಿ ಆರಿಸಿದ್ದನ್ನು ಕಂಡರು.

ಬಹಳ ಸಂತೋಷ ಮತ್ತು ಆಶ್ಚರ್ಯದಿಂದ ಅಣ್ಣಾ.. ಭಾಗಣ್ಣ…ಅಂತ ಕರೆಯುವ ಒಳಗಡೆ ದಾಸರು ಮಾಯವಾಗಿದ್ದರು. ನಂತರ ಅಲ್ಲಿ ಸೇವೆಯನ್ನು ಮುಗಿಸಿಕೊಂಡು ಉತ್ತನೂರಿಗೆ ಬಂದು ಉಳಿದ ಸಹೋದರರಿಗೆ ಭಾಗಣ್ಣ ಬಂದು ದೇವರ ವಸ್ತ್ರಕ್ಕೆ ಹತ್ತಿದ ಬೆಂಕಿ ಆರಿಸಿದ ಘಟನೆಯನ್ನು ಹೇಳುತ್ತಾರೆ. ಇದನ್ನು ಎಲ್ಲವನ್ನೂ ನೋಡಿದ ಮತ್ತು ಕೇಳಿದ ಜನ ದಾಸರ ಬಳಿಗೆ ಬಂದು ಭಯ ಭಕ್ತಿ ಇಂದ ಅವರಿಗೆ ನಮಸ್ಕಾರ ಮಾಡುತ್ತಾರೆ. ತುಂಗಭದ್ರಾ ತಟದಲ್ಲಿ ಕುಳಿತ ಶ್ರೀ ಗೋಪಾಲದಾಸರಿಗೆ ಕಂಚಿಯಲ್ಲಿ ಶ್ರೀ ವರದರಾಜ ಸ್ವಾಮಿಯ ವಸ್ತ್ರ ದೀಪ ಸೋಕಿ ಉರಿಯತೊಡಗಿದಾಗ ಅಲ್ಲಿ ಹೋಗಿ ಅದನ್ನು ಆರಿಸಿಬಂದದ್ದು ಮತ್ತು ಇನ್ನೊಂದು ರೂಪದಿಂದ ಅಲ್ಲಿ ಕುಳಿತು ಜಪ ತಪಗಳನ್ನು ಮಾಡುತ್ತಾ ಕುಳಿತು ಇರುವುದು ಇವು ದಾಸರ ಅಣಿಮಾದಿ ಸಿದ್ದಿಯ ಸಾಧನೆಯನ್ನು ತೋರಿಸುತ್ತದೆ. ಸಾಂಶರಾದ ದೇವತೆಗಳಿಗೆ ಯಾವುದು ಅಸಾಧ್ಯವಲ್ಲ. ಸಾಂಶರು ಅಂದರೆ ಏಕಕಾಲದಲ್ಲಿ ಎಲ್ಲಾ ಕಡೆ ಪ್ರಕಟವಾಗುವದು. ಇಂತಹ ಮಹಿಮೆಯನ್ನು ಭಗವಂತನ ಅನುಗ್ರಹದಿಂದ ತೋರಿಸಿದ ಶ್ರೀ ಗೋಪಾಲ ದಾಸರನ್ನು ಅವರ ಸಹೋದರರು ಈ ರೀತಿಯಲ್ಲಿ ಸ್ತೋತ್ರ ಮಾಡುತ್ತಾರೆ. ‘ವಸುಧಿಪತಿ ಕಂಚಿ ವರದ ರಾಜನ ವಸನ ದೀಪಕೆ ಸೋಂಕಲು| ಮುಸುಕು ತೊರೆದು ತುಂಗ ನದಿಯಲು ನಸು ನಗುತಲದವರೆಸಲು|| ಇವರ ಕೊಂಡಾಡುವದೇ ವಿಜಯರಾಯರ ಸ್ತೋತ್ರ| ಇವರೇ ಶ್ರೀ ವಿಜಯರಾಯರ ಮುಖ್ಯ ಪ್ರತಿಮಾ|.

Related Articles

ಪ್ರತಿಕ್ರಿಯೆ ನೀಡಿ

Latest Articles