ವಿಶ್ವವಂದಿತ ವಿನಾಯಕನನ್ನು ಇಲ್ಲಿ ಚಿಂತಾಹರಣ ಗಣೇಶ ಎಂದು ಕರೆಯಲಾಗುತ್ತದೆ. ಪ್ರಾಚೀನ ದೇಗುಲ ಇದಾಗಿದ್ದು ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಪ್ರಥಮ ವಂದಿತ ವಿನಾಯಕನ ಮಂದಿರಗಳಲ್ಲಿ ಒಂದಾಗಿರುವ ಚಿಂತಾಹರಣ ಗಣೇಶ ದೇವಸ್ಥಾನ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಅತಿ ದೊಡ್ಡ ಗಣೇಶ ಮಂದಿರ. ಉಜ್ಜಯಿನಿ ಪಟ್ಟಣದಿಂದ ನೈಋತ್ಯ ಭಾಗಕ್ಕೆ 7 ಕಿ.ಮೀ ದೂರದಲ್ಲಿದೆ. ಶಿಪ್ರಾ ನದಿ ತೀರದಲ್ಲಿದೆ. ಕ್ರಿ.ಶ 11-12ನೇ ಶತಮಾನದಲ್ಲಿ ಪರಮಾರರ ಆಳ್ವಿಕೆಯ ಕಾಲದಲ್ಲಿ ಈ ದೇಗುಲ ನಿರ್ಮಾಣಗೊಂಡಿದ್ದು, ದೇವಸ್ಥಾನವನ್ನು ಸಂಪೂರ್ಣವಾಗಿ ಕಲ್ಲಿನಿಂದ ಮಾಡಲಾಗಿದೆ. ಇಲ್ಲಿ ಗಣೇಶನನ್ನು ಚಿಂತಾಹರಣ್ ಎಂದು ಕರೆಯುತ್ತಾರೆ. ದುಃಖ, ಒತ್ತಡವನ್ನು ಕಳೆಯುವವನು ಎಂದರ್ಥ. ಹಿಂದೂ ಪುರಾಣದ ಪ್ರಕಾರ ಭಗವಾನ್ ವಿಷ್ಣುವನ್ನು `ಚಿಂತಾಮಣಿ’ ಅಂದರೆ ಬ್ರಹ್ಮಾಂಡದ ರಕ್ಷಕ ಎಂದು ಕರೆಯವುದುಂಟು. ಇಲ್ಲಿ ವಿನಾಯಕನು ಸಿದ್ಧಿ ಮತ್ತು ರಿದ್ಧಿಯ ನಡುವೆ ಅಲಂಕೃತಗೊಂಡಿದ್ದಾನೆ. ದೇವಸ್ಥಾನದ ಗರ್ಭಗೃಹದಲ್ಲಿ ವಿನಾಯಕನ ಮೂರ್ತಿಯನ್ನು ಕಾಣಬಹುದು. ಗಣಪತಿಯಿಂದಲೇ ಪ್ರತಿಷ್ಠಾಪನೆಗೊಂಡ ವಿಗ್ರಹ ಎನ್ನುವ ನಂಬಿಕೆ ಭಕ್ತರದ್ದು. ಇಲ್ಲಿ ವಿಷ್ಣುವಿನ ವಿಗ್ರಹವೂ ಇದ್ದು ಭಗವಾನ್ ಗಣೇಶ ಹಾಗೂ ವಿಷ್ಣು ದೇವರನ್ನು ಜತೆಯಾಗಿಯೇ ಪೂಜಿಸಲಾಗುತ್ತಿದೆ. ಸುಂದರವಾದ ಕೆತ್ತನೆಗಳಿಂದ ಕೂಡಿದ ಕಲ್ಲಿನ ಕಂಬಗಳು ದೇವಸ್ಥಾನದ ವೈಭವವನ್ನು ಹೆಚ್ಚಿಸಿವೆ.
ಹತ್ತಿರದ ಇತರ ದೇವಸ್ಥಾನಗಳು
ಉಜ್ಜಯಿನಿಯಲ್ಲಿ ಇನ್ನೂ ಅನೇಕ ದೇವಾಲಯಗಳಿವೆ – ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಶ್ರೀ ರಾಮ ಮಂದಿರ, ಗೋಪಾಲ ಮಂದಿರ, ಹರಿ ಸಿದ್ಧಿ ದೇವಿ ಮಂದಿರ. ಸಂದೀಪಿನೀ ಆಶ್ರಮ ಇತ್ಯಾದಿ.
ಉಜ್ಜಯಿನಿಗೆ ಭೇಟಿ ನೀಡಿದರೆ ಖಗೋಳ ವಿಜ್ಞಾನಕ್ಕೆ ಸಂಬಂಧ ಪಟ್ಟ ಜಂತರ್ ಮಂತರ್ ಪ್ರಯೋಗ ಮಂದಿರ ನೋಡಲೇಬೇಕಾದ ಸ್ಥಳ. ಗೋಪಾಲ ಮಂದಿರ ಬಹಳ ಸುಂದರವಾಗಿದೆ. ಇಲ್ಲಿ ಕೃಷ್ಣ ಜನ್ಮಾಷ್ಟಮಿ ಬಹಳ ವೈಭವದಿಂದ ನಡೆಯುತ್ತದೆ. ಶಿಪ್ರಾ ನದಿಯ ದಂಡೆಯ ಮೇಲೆ ನವಗ್ರಹ ಮಂದಿರ ಇದೆ. ಇಲ್ಲಿ ನಮ್ಮ ಸೌರಗ್ರಹದ ಎಲ್ಲಾ ಗ್ರಹಗಳಿಗೆ ಪೂಜೆ ಸಲ್ಲಿಸುವ ಕಾರಣ ಇದು ಉಜ್ಜಯಿನಿಯಲ್ಲೇ ವಿಶಿಷ್ಠವಾದ ದೇವಾಲಯ. ಈ ದೇವಾಲಯದ ಆವರಣದಲ್ಲಿ ಅಮಾವಾಸ್ಯೆ ದಿನ ಹಾಗೂ ಶನಿವಾರಗಳಂದು ಬೃಹತ್ ಸಂಖ್ಯೆಯಲ್ಲಿ ಜನ ಸೇರಿಸುತ್ತಾರೆ. ಇಲ್ಲಿಯ ಸಾಮಾನ್ಯ ಜನತೆ ಈ ಸ್ಥಳವನ್ನು ತ್ರಿವೇಣಿ ತೀರ್ಥಂ ಎಂದೂ ಕರೆಯುತ್ತಾರೆ. ಈ ದೇವಾಲಯ ಉಜ್ಜಯಿನಿ ನಗರದಿಂದ ಕೇವಲ 6 ಕಿ.ಮೀ ದೂರದಲ್ಲಿದೆ.
ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ
ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗದಿಂದ ಗಣೇಶ ದೇವಸ್ಥಾನಕ್ಕೆ ಕೇವಲ ಆರೂವರೆ ಕಿ.ಮೀ. ದೂರ. ದೇವಾಲಯವು ವಿಶಾಲವಾದ ಆವರಣದಲ್ಲಿದ್ದು ದೊಡ್ಡ ಗೋಪುರವನ್ನು ಹೊಂದಿದೆ. ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದರ್ಶನಕ್ಕೆ ಸಾವಿರಾರು ಭಕ್ತರ ದೊಡ್ಡ ಸಾಲು ಇರುತ್ತದೆ. ಮಂದಿರದ ಮಧ್ಯದಲ್ಲಿ ಸುಂದರವಾದ ಕೊಳವಿದೆ. ನೀರಿನ ಕಾರಂಜಿ ಮನಸ್ಸಿಗೆ ಮುದ ನೀಡುತ್ತದೆ. ಮಂದಿರದ ಒಳಗೆ ದುರ್ಗ , ಅನ್ನಪೂರ್ಣೇಶ್ವರಿ, ಗಣಪತಿ, ಕಾರ್ತಿಕೇಯನ ಮೂರ್ತಿಗಳಿವೆ. ಮಂದಿರದ ಒಳಗಡೆ ಸ್ವಲ್ಪ ದೂರ ನಡೆದು ಸಣ್ಣ ಮೆಟ್ಟಿಲುಗಳನ್ನು ಇಳಿದು ಗರ್ಭಗುಡಿ ಬಳಿ ಸಾಲಿನಲ್ಲಿ ಬರಬೇಕು. ಚಿಕ್ಕದಾದ ಗರ್ಭಗುಡಿಯೊಳಗೆ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗವಿದೆ. ಸ್ವತಃ ಅಭಿಷೇಕ ಮಾಡಿ ಪೂಜೆ ಸಲ್ಲಿಸಬಹುದು. ಮಂದಿರದ ಮೇಲು ಭಾಗದಲ್ಲಿ ನಾಗ ಮಂದಿರವಿದೆ. ಬೆಳ್ಳಿಯಿಂದ ಮಾಡಿದ ರುದ್ರಯಂತ್ರವಿದೆ. ಪ್ರತಿದಿನ ವಿವಿಧ ಹೋಮ ಹವನಗಳು ನಡೆಯುತ್ತಿರುತ್ತವೆ.
ಇತರ ಆಕರ್ಷಣೆಗಳು
ಮೇಘದೂತ ಉಪವನ: ಇಂಧೋರ್ನಲ್ಲಿ ದೊಡ್ಡ ಉದ್ಯಾನ. ಉಪವನದಲ್ಲಿರುವ ಹುಲ್ಲುಹಾಸು, ಹೂಗಿಡಗಳು, ನೃತ್ಯ ಕಾರಂಜಿ ಮನಸ್ಸಿಗೆ ಮುದ ನೀಡುತ್ತವೆ. ದ್ಯಾನದ ಹತ್ತಿರದಲ್ಲೇ ಮಂಗಲ್ ಮೇರಿಲ್ಯಾಂಡ್ ಎನ್ನುವ ಮನರಂಜನಾ ಪಾರ್ಕ್ ಇದ್ದು ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇಂಧೋರ್ ಮ್ಯೂಸಿಯಂ: ಇದನ್ನು ಸೆಂಟ್ರಲ್ ಮ್ಯೂಸಿಯಂ ಎಂದೂ ಕರೆಯುತ್ತಾರೆ. ಇಂಧೋರ್ ಜನರಲ್ ಪೆÇೀಸ್ಟ್ ಆಫೀಸ್ ಸಮೀಪದಲ್ಲಿದೆ. ಇತಿಹಾಸಪೂರ್ವ ಕಾಲದಿಂದ ಹಿಡಿದು ಆಧುನಿಕ ಯುಗದ ಕಲಾಕೃತಿಗಳು, ಕಲ್ಲಿನ ಆಯುಧಗಳು, ಸಟಿಕದಿಂದ ತಯಾರಿಸಿದ ವಸ್ತುಗಳು, ಹಳೆಯ ಕಾಲದ ಆಭರಣಗಳು ಮ್ಯೂಸಿಯಂನಲ್ಲಿವೆ.
ಲಾಲ್ಬಾಗ್ ಪ್ಯಾಲೇಸ್
ಮಹಾರಾಜ ಶಿವಾಜಿ ರಾವ್ ಹೋಳ್ಕರ್ 1886-1921ರ ಕಾಲದಲ್ಲಿ ನಿರ್ಮಾಣ ಮಾಡಿದ ಲಾಲ್ಬಾಗ್ ಅರಮನೆ ಇದೆ. ಖಾನ್ ನದಿ ತೀರದಲ್ಲಿದೆ. ಅಲ್ಲದೇ ರಾಜಾ ಹೋಳ್ಕರ್ನ ಸಮ್ಮರ್ ಪ್ಯಾಲೇಸ್ ಸುಖ್ ನಿವಾಸ್ಗೂ ಭೇಟಿ ನೀಡಿ ಬರಬಹುದು. ಅರಮನೆ ಸುತ್ತಲೂ ಸುಂದರವಾದ ಉದ್ಯಾನವಿದ್ದು, ಸುಖ್ ಮಹಲ್ ಸರೋವರ ಅರಮನೆ ಸೌಂದರ್ಯವನ್ನು ಹೆಚ್ಚಿಸಿದೆ. ಸಮ್ಮರ್ ಪ್ಯಾಲೇಸ್ನಿಂದ ರಾಜನ ಅರಮನೆಗೆ ಸುರಂಗ ಮಾರ್ಗವಿದೆ. ಈ ಸ್ಥಳ ಈಗ ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿದೆ.
ಸ್ಪೆಷಲ್ ಡಿಶ್
ಮಧ್ಯಪ್ರದೇಶದ ಇಂಧೋರ್ನಲ್ಲಿ ಪೆÇೀಹಾ ಮತ್ತು ಜಿಲೇಬಿ ಸ್ಪೆಷಲ್ ಸಿಹಿ ತಿನಿಸು. ಇಂಧೋರ್ನ್ನು ಪೆÇೀಹಾ-ಜಿಲೇಬಿಯ ನಗರ ಎಂದೇ ಕರೆಯುತ್ತಾರೆ. ಚಪ್ಪನ್ ಚೌಕ್ನಲ್ಲಿ 56 ಫುಡ್ಗೆ ಸಂಬಂಸಿದ ಶಾಪ್ಗಳಿವೆ. ಅಲ್ಲಿ ಪೆÇೀಹಾ, ಜಿಲೇಬಿ ಸೇರಿದಂತೆ ವಿವಿಧ ಬಗೆಯ ಸಿಹಿತಿನಿಸುಗಳನ್ನು ಖರೀದಿಸಬಹುದು.
ಇಂಧೋರಿ ಚಾಟ್: ರುಚಿಕರಾವಾದ ಸ್ಪೈಸಿ ಹಾಗೂ ಬಿಸಿಯಾಗಿರುವ ಇಂಧೋರಿ ಚಾಟ್ಸ್ ಸವಿಯಬಹುದು.
ಹೋಗುವುದು ಹೇಗೆ?
ಹತ್ತಿರದ ವಿಮಾನ ನಿಲ್ದಾಣ ಇಂದೋರ್. ರೈಲು ಮೂಲಕವೂ ಇಂದೋರ್ ತಲುಪಬಹುದು. ಇಂದೋರ್ನಿಂದ ಉಜ್ಜಯಿನಿಗೆ 55 ಕಿ.ಮೀ. ದೂರ. ಅಲ್ಲಿಂದ ಬಸ್ ಇಲ್ಲವೇ ಟ್ಯಾಕ್ಸಿ ಮೂಲಕ ಪ್ರಯಾಣ ಬೆಳೆಸಬಹುದು.