ಯೋಗ ಇದ್ದರೆ ಮಾತ್ರ ಇದೆಲ್ಲ ಸಾಧ್ಯ !

ಇತ್ತೀಚೆಗೆ ಕೇದಾರನಾಥ ಯಾತ್ರೆ ಕೈಗೊಂಡಿದ್ದ ಉಪ್ಪಿನಂಗಡಿಯ ಶಿವ ಭಟ್ ಸೂರ್ಯಬೈಲು ಅವರು ಕೊರೊನಾ ಸಂದರ್ಭದಲ್ಲಿ ಅಲ್ಲಿನ ವ್ಯವಸ್ಥೆ ಹೇಗಿತ್ತುಎಂಬುದರ ಕುರಿತು ತಮಗಾದ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಕೇದಾರನಾಥದಲ್ಲಿ ಶಿವನಿಗೆ ಆರು ತಿಂಗಳು ಮಾತ್ರ ಪೂಜೆ.ಇನ್ನುಳಿದ ಆರು ತಿಂಗಳು ಊಕಿಮಠ ಅಥವಾ ಉಷಾಮಠದಲ್ಲಿ ನಡೆಯತ್ತೆ. ಪ್ರತೀವರ್ಷ ವಿಜಯದಶಮಿಗೆ ಉತ್ಸವಮೂರ್ತಿಯನ್ನು ಉಷಾಮಠಕ್ಕೆ ತಂದು ಪೂಜಿಸಲಾಗುತ್ತದೆ. ಕೇದಾರನಾಥದ ಇಬ್ಬರೂ ಮುಖ್ಯ ಅರ್ಚಕರು ಉತ್ತರ ಕರ್ನಾಟಕದವರು, ಕನ್ನಡಿಗರು. ಅವರಲ್ಲಿ ಓರ್ವ ಅರ್ಚಕರಾದ ವಾಗೀಶ ಶಂಕರಲಿಂಗ ನಮಗೆ ಆತ್ಮೀಯರು.ಇಬ್ಬರು ಅರ್ಚಕರಲ್ಲಿ ಕ್ರಮವಾಗಿ ಒಬ್ಬರು ಕೇದಾರನಾಥದಲ್ಲಿ ಪೂಜೆಯಲ್ಲಿದ್ದರೆ ಒಬ್ಬರು ಊಕಿಮಠದಲ್ಲಿರುತ್ತಾರೆ.

ಪ್ರತೀ ವರ್ಷ ಪರ್ಯಾಯದಂತೆ ಪೂಜೆ ನಡೆಯುತ್ತದೆ. ಕೇದಾರನಾಥ ಪೂಜೆ ಸಲ್ಲಿಸುವವರು ಆರು ತಿಂಗಳ ಪೂಜೆಯ ಸಂಕಲ್ಪ ಮಾಡಿ ತೆರಳಿದರೆ ಯಾವುದೇ ಕಾರಣಕ್ಕೂ ಮಧ್ಯ ವಾಪಸ್ ಬರುವಂತಿಲ್ಲ, ಸಂಪೂರ್ಣ ಸನ್ಯಾಸ ಪಾಲಿಸಬೇಕು. ಆರು ತಿಂಗಳ ಅವಧಿಯಲ್ಲಿ ಅನಾರೋಗ್ಯವುಂಟಾದರೂ ಅವರೇ ಪೂಜೆ ಮಾಡಬೇಕು. ಹಾಗಾಗೇ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಯಾರೊಂದಿಗೂ ಅವರು ಬೆರೆಯೋದಿಲ್ಲ. ಆಹಾರಕ್ರಮವೂ ಸನ್ಯಾಸಿಗಳಂತೆಯೇ ಇರುತ್ತದೆ. ಸನ್ಯಾಸಿಗಳಂತೆ ಮರದ ಪಾದುಕೆಯನ್ನೇ ಧರಿಸುತ್ತಾರೆ. ಒಟ್ಟಾರೆ ಅದೊಂದು ದೀಕ್ಷೆ. ಕೊರೊನಾ ಕಾರಣದಿಂದ ಕೇದಾರನಾಥದಲ್ಲಿ ಭಕ್ತರಿಗೆ ಪ್ರಸಾದ ನೀಡುವುದನ್ನು ಬಂದ್ ಮಾಡಲಾಗಿದೆ. ಆದರೆ ನಮಗೆ ಮಾತ್ರ ಪ್ರಸಾದ ಸಿಕ್ಕಿತು ! ಶಿವನ ಆಶೀರ್ವಾದ, ವಾಗೀಶ ಶಂಕರಲಿಂಗ ಗುರೂಜಿಯವರ ಪ್ರೀತಿ ದಕ್ಕಿತು. ಊಕಿಮಠಕ್ಕೂ ಬನ್ನಿ ಎಂದರು.ಹೋಗಿ ಭೇಟಿ ಮಾಡಿ, ದೇವರ ದರ್ಶನ ಮಾಡಿ ಒಂದಿಷ್ಟು ಸಮಯ ಉಭಯಕುಶಲೋಪರಿ ಮಾತಾಡಿ ಬಂದೆವು. ಮತ್ತೊಂದು ವಿಶೇಷ ಗೊತ್ತಾ ? ಉಷಾ ಮಠದಲ್ಲಿ ಕನ್ನಡ ಹೇರಿಕೆ ಮಾಡಲಾಗಿದೆ ! ಹಿಂದಿ ರಾಜ್ಯದಲ್ಲಿ ಕನ್ನಡದಲ್ಲಿ ಫಲಕ ಬರೆಸಲಾಗಿದೆ !

ಕೊರೊನಾ ವ್ಯಾಪಿಸಿಕೊಂಡ ಈ ಸಂದರ್ಭದಲ್ಲಿ ಈ ಹಿಂದಿನಂತೆ ನಮಗೆ ಕೇದಾರನಾಥ,ಬದರಿನಾಥದಲ್ಲಿ ದರ್ಶನ, ಪೂಜೆಗೆ ಅವಕಾಶ ಸಿಗತ್ತೆ ಎಂಬ ನಂಬಿಕೆಯಿರಲಿಲ್ಲ. ಆದರೂ ಅಲ್ಲಿ ಹೋದಮೇಲೆ ಪರಿಸ್ಥಿತಿ ನೋಡಿ ಪೂಜೆ ಸಲ್ಲಿಸಿ ಬರಲೇಬೇಕೆಂದುಕೊಂಡಿದ್ದೆವು. ಅದೃಷ್ಟ ನೋಡಿ! ನಾವು ತೆರಳಿದ ದಿನವೇ ಲಾಕ್ಡೌನಿಂದ ಬಂದಾಗಿದ್ದ ಗಂಗೋತ್ರಿಯ ದೇವಾಲಯ ಬಾಗಿಲು ತೆರೆದಿತ್ತು. ಜನವೇ ಇರಲಿಲ್ಲ. ಬಾಗಿಲು ತೆರೆದನಂತರ ಕರ್ನಾಟಕದಿಂದ ಬಂದ ಮೊದಲಿಗರು ನೀವು ಎಂದರು ಅಲ್ಲಿಯ ಅರ್ಚಕರು. ಕೇದಾರನಾಥದಲ್ಲಿ ಇದಕ್ಕಿಂತ ಭಿನ್ನ ಅನುಭವ.

ನಾವು ತೆರಳಿದ ದಿನವೇ ಕೇಂದ್ರ ಸಚಿವೆ ಉಮಾಭಾರತಿ ತೆರಳಿದ್ದರಲ್ಲದೆ ಅಲ್ಲೇ ಉಳಿದುಕೊಂಡಿದ್ದರು. ಅಲ್ಲೂ ಜನ ವಿರಳವಾಗಿದ್ದರು. ನಾವು ಅಲ್ಲಿರುವ ಸಮಯದಲ್ಲೇ ಹೆಲಿಕಾಪ್ಟರ್ ಮೂಲಕ ಉತ್ತರಾಖಂಡದ ಸಚಿವರೊಬ್ಬರು ದರ್ಶನಕ್ಕೆ ಆಗಮಿಸಿದ್ದರು. ಅಲ್ಲಿ ತೆರಳಲು ಕೊವಿಡ್ ಟೆಸ್ಟ್ ಕಡ್ಡಾಯ. ಅದರಂತೆ ಬರುವಾಗ ಆ ಸಚಿವರು ಟೆಸ್ಟಿಗೆ ಕೊಟ್ಟು ರಿಪೋರ್ಟ್ ಬರುವುದರೊಳಗೆ ಬಂದುಬಿಟ್ಟಿದ್ದರಂತೆ. ದರ್ಶನ ಮುಗಿಸಿ ವಾಪಸ್ ತೆರಳುವ ಸಮಯಕ್ಕೆ ಅವರಿಗೆ ಪಾಸಿಟಿವ್ ಇರೋದು ಗೊತ್ತಾಯ್ತು.

ನಾವು ಕಾಲ್ನಡಿಗೆಯಲ್ಲಿ ಸೀತಾಪುರ ತೆರಳುವವರೆಗೆ ಕೇದಾರನಾಥ ಸೀಲ್ ಡೌನ್ ಆಗಿತ್ತು ! ನಮ್ಮ ಅದೃಷ್ಟಕ್ಕೇ ಕೇದಾರನಾಥ ದರ್ಶನ, ಮಧ್ಯಾಹ್ನದ ಮಹಾಪೂಜೆ, ಪ್ರಸಾದ ದೊರಕಿತ್ತು. ಮತ್ತೆ ಯಾವತ್ತು ತೆರೆಯತ್ತೋ ಗೊತ್ತಿಲ್ಲ.

ಚಿತ್ರ: ಶಿವ ಭಟ್

Related Articles

ಪ್ರತಿಕ್ರಿಯೆ ನೀಡಿ

Latest Articles