ಶ್ರೀ ಶ್ರೀಪಾದರಾಜರ ಆರಾಧನೆಯ ಪ್ರಯುಕ್ತ ಈ ಲೇಖನ.
*ಗುರುರಾಜ ಪಂಘ್ರಿ
ಶ್ರೀ ಶ್ರೀಪಾದರಾಜರು ಶ್ರೀ ಗೋಪಿನಾಥನ ರಂಗವಿಠ್ಠಲನ ಚರಣಕಮಲ ಭೃಂಗರು ಪರಮಸುಗುಣಾಂತರಂಗರು ಯತಿಕುಲ ಚಕ್ರವರ್ತಿ ಸನ್ಯಾಸ ಕುಲ ದೀಪಕರು ಪ್ರಕಟ ಪಾವನ ಸ್ವರೂಪರು
ಮುಳಬಾಗಿಲಿನ ಪರಮ ಪಾವನ ಕ್ಷೇತ್ರದಲ್ಲಿ ನರಸಿಂಹ ತೀರ್ಥ ತೀರದಲ್ಲಿ ಅಕ್ಷೋಭ್ಯತೀರ್ಥರಿಗೊಲಿದ ಶ್ರೀ ನರಸಿಂಹ ದೇವರ ಸನ್ನಿಧಿಯಲ್ಲಿ ವೃಂದಾವನದಲ್ಲಿ ವಿರಾಜಿಸುತ್ತಿರುವ ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರು ಶ್ರೀ ವ್ಯಾಸರಾಜ ಗುರುಸಾರ್ವಭೌಮರೆಂಬ ಅನರ್ಘ್ಯ ರತ್ನವನ್ನು ಜಗತ್ತಿಗೆ ನೀಡಿದ ಗುರು ಮಹನೀಯರು.
ರಂಗವಿಠ್ಠಲನನ್ನು ತಮ್ಮ ಪದ ಪದ್ಯಗಳಿಂದ ಭಕ್ತಿ ಸ್ತುತಿಗಳಿಂದ ಹಾಡಿ ಆಡಿಸಿ ಎತ್ತಿ ಕುಣಿಸಿದವರು. ಗೋಪಿನಾಥ ದೇವರ ಪಾದ ಪದ್ಮಾರಾಧಕರು. ಶ್ರೀ ಪದ್ಮನಾಭ ತೀರ್ಥರ ಪರಂಪರೆಯ ಕೀರ್ತಿಕಲಶ. ರಂಗವಿಠ್ಠಲನನ್ನು ತಮ್ಮ ಪದ ಪದ್ಯಗಳಿಂದ ಭಕ್ತಿ ಸ್ತುತಿಗಳಿಂದ ಹಾಡಿ ಆಡಿಸಿ ಎತ್ತಿ ಕುಣಿಸಿದವರು. ಗೋಪಿನಾಥ ದೇವರ ಪಾದ ಪದ್ಮಾರಾಧಕರು. ಶ್ರೀ ಪದ್ಮನಾಭ ತೀರ್ಥರ ಪರಂಪರೆಯ ಕೀರ್ತಿಕಲಶ. ಧೃವಚಕ್ರವರ್ತಿಗಳು. ಶ್ರೀ ಮಧ್ವಮತವೆಂಬ ಸುಂದರ ಕಟ್ಟಡಕ್ಕೆ ಶ್ರೀ ಜಯತೀರ್ಥರು ಗೋಡೆಗಳನ್ನು ಕಟ್ಟಿದರೆ ಶ್ರೀ ಶ್ರೀ ಪಾದರಾಜರು ಮೇಲ್ಛಾವಣಿ ಕಟ್ಟಿದವರು.
ಶ್ರೀಪಾದರಾಜರ ಜನನ
ಬನ್ನೂರು ಗ್ರಾಮದಲ್ಲಿ ಶೇಷಗಿರಿ ಆಚಾರ್ಯರು ಹಾಗೂ ಗಿರಿಯಮ್ಮ ಎಂಬ ದಂಪತಿಗಳ ಮಗನಾಗಿ ಧೃವಾಂಶಜರಾಗಿ ಲಕ್ಷ್ಮೀ ನಾರಾಯಣ ನಾಮದಿಂದ ಅವತರಿಸುತ್ತಾರೆ. ಪರಮ ಸಾತ್ವಿಕ ಕುಟುಂಬ ಶ್ರೀ ಹರಿಯಲ್ಲಿ ಅಪರಿಮಿತ ಭಕ್ತಿ ಮಾಡುತ್ತಿದ್ದವರು. ಬಾಲ್ಯದ ವಿದ್ಯಾಭ್ಯಾಸ ತಂದೆಯವರಿಂದಲೇ ಪ್ರಾರಂಭವಾಯಿತು. ಕುಶಾಗ್ರಬುದ್ಧಿಯ ಬಾಲಕ. ತನ್ನ ಸ್ನೇಹಿತರ ತಂಡದಲ್ಲಿ ಮುಖಂಡ.
ಕುಶಾಗ್ರಬುದ್ಧಿಯ ಬಾಲಕ
ಒಮ್ಮೆ ದನಕರು ಹೊಡೆದುಕೊಂಡು ಮನೆಗೆ ಹೊರಟಾಗ ಶ್ರೀ ರಂಗ ಪಟ್ಟಣದಿಂದ ಶ್ರೀ ಸ್ವರ್ಣವರ್ಣ ತೀರ್ಥ ರು ಅದೇ ದಾರಿಯಲ್ಲಿ ಬರುತ್ತಿದ್ದರು. ಮುಂದೆ ಇನ್ನೂ ಎಷ್ಟು ದೂರ ಇರಬಹುದೆಂದು ಸ್ವಾಮಿಗಳ ಹಾಗೂ ಅವರ ಶಿಷ್ಯವೃಂದದವರ ಪ್ರಶ್ನೆ ಆಗಿತ್ತು. ಮೇನೆಯಲ್ಲಿ ಕುಳಿತ ಶ್ರೀಗಳು ಮೇನೆ ನಿಲ್ಲಿಸಿ ತುಸು ಹತ್ತಿರ ಇದ್ದ ಲಕ್ಷ್ಮೀ ನಾರಾಯಣನಿಗೆ ಬೆರಳ ಸಂಜ್ಞೆಯಿಂದ ಕರೆದರು. ಬಾಲಕ ಲಕ್ಷ್ಮೀ ನಾರಾಯಣ ಹತ್ತಿರ ಬಂದು ಶ್ರೀಗಳಿಗೆ ನಮಸ್ಕಾರಗಳು ಮಾಡಿ ವಿನೀತನಾಗಿ ನಿಂತುಕೊಂಡ. ಆಗ ಶ್ರೀ ಗಳು ಮಗು ಊರು ಇನ್ನೂ ಎಷ್ಟು ದೂರ ಇದೆಯಪ್ಪಾ ಅಂತ ಸಹಜವಾಗಿ ಕೇಳಿದರು. ಆಗ ಬಾಲಕ ಲಕ್ಷ್ಮೀ ನಾರಾಯಣ ಇಗೋ ನನ್ನನ್ನು ನೋಡಿ,ಮನೆಗೆ ಹಿಂತಿರುಗುತ್ತಿರುವ ಈ ದನಕರುಗಳನ್ನ ನೋಡಿ, ಪಶ್ಚಿಮ ದಿಕ್ಕಿನಲ್ಲಿ ಇರುವ ಸೂರ್ಯನನ್ನು ನೋಡಿ, ಈಗಲಾದರೂ ಅಬ್ಬೂರು ಇನ್ನೆಷ್ಟು ದೂರವಿದೆಯೆಂದು ತಿಳಿಯಿತೆ ಎಂದು ಒಗಟಿನ ಮಾತಿನಂತೆ ಉತ್ತರ ನೀಡಿದಾಗ ತರ್ಕ ಧ್ವನಿಯ ರೂಪದಲ್ಲಿ ಕುಶಾಗ್ರಬುದ್ಧಿಯ ಬಾಲಕನನ್ನು ನೋಡಿ ಶ್ರೀಗಳು ನಿನ್ನ ಹೆಸರು ಏನಪ್ಪಾ ಅಂತ ವಾತ್ಸಲ್ಯದಿಂದ ಕೇಳಿದಾಗ ಲಕ್ಷ್ಮೀ ನಾರಾಯಣ ಅಂತ ಬಾಲಕ ಉತ್ತರಿಸಿದಾಗ ಬಾಲಕನ ಮುಖದಲ್ಲಿ ಇದ್ದ ವರ್ಚಸ್ಸು ತೇಜಸ್ಸು ಕಂಡ ಶ್ರೀಗಳು ಬಾರಪ್ಪಾ ನಮ್ಮ ಜೊತೆಗೆ ಅಂತ ಹೇಳಿದರು. ಬರಲು ಒಪ್ಪದ ಬಾಲಕನಿಗೆ ಮಂತ್ರಾಕ್ಷತೆ ಇಟ್ಟು ಅನುಗ್ರಹ ಮಾಡಿ ಮುಂದೆ ಚರಿಸಿದರು.
ಇತ್ತ ಲಕ್ಷ್ಮೀನಾರಾಯಣ ಸ್ನೇಹಿತರೊಂದಿಗೆ ಊರು ಸೇರಿದ. ಶ್ರೀ ಸ್ವರ್ಣವರ್ಣ ತೀರ್ಥರು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರ ಪರಂಪರೆಯ ಏಳನೇ ಯತಿಗಳು. ಶ್ರೀ ಪುರುಷೋತ್ತಮ ತೀರ್ಥರ ಭೇಟಿಗಾಗಿ ಅಬ್ಬೂರಿಗೆ ಬಂದರು. ಬಂದವರೇ ಶ್ರೀ ಪುರುಷೋತ್ತಮ ತೀರ್ಥರ ಭೇಟಿ ಮಾಡಿ ಉಭಯ ಕುಶಲ ವಿಚಾರಿಸಿ ಬಳಿಕ ತಮ್ಮ ಮನಸಿನ ಬಯಕೆ ಹೇಳಿದರು. ಒಬ್ಬ ಯೋಗ್ಯ ಶಿಷ್ಯನ ಹುಡುಕುವಿಕೆಯಲ್ಲಿರುವಾಗ ಇವತ್ತು ಬಾಲಕ ಲಕ್ಷ್ಮೀನಾರಾಯಣನ ಜೊತೆ ತಮಗಾದ ಅನುಭವ ಘಟನೆ ವಿವರಿಸಿ ಅವರಿಗೆ ಹೇಳಲು ಶ್ರೀ ಪುರುಷೋತ್ತಮ ತೀರ್ಥರು ಬಾಲಕ ಲಕ್ಷ್ಮೀನಾರಾಯಣನ ತಂದೆ ತಾಯಿಗಳನ್ನು ಕರೆಯಿಸಿ ಬಾಲಕನ ಉಪನಯನ ಬ್ರಹ್ಮೋಪದೇಶ ಹಾಗೂ ಶ್ರೀಗಳ ಶಿಷ್ಯತ್ವ ವಹಿಸುವ ಬಗ್ಗೆ ಹೇಳಿದಾಗ ತಂದೆ ತಾಯಿಗಳು ತರುವಾಯದಲ್ಲಿ ಒಪ್ಪಿಕೊಂಡು ಉಭಯ ಶ್ರೀಗಳಿಗೂ ನಮಸ್ಕಾರಗಳು ಮಾಡಿದರು. ಶ್ರೀಗಳವರು ಬಾಲಕ ಲಕ್ಷ್ಮೀ ನಾರಾಯಣ ಹಾಗೂ ಅವನ ತಂದೆತಾಯಿಗಳೊಂದಿಗೆ ಶ್ರೀರಂಗ ಕ್ಷೇತ್ರಕ್ಕೆ ದಯಮಾಡಿಸಿದರು.
ತೇಜ:ಪುಂಜರಾದ ಶ್ರೀ ಸ್ವರ್ಣವರ್ಣತೀರ್ಥರ ಸಾನ್ನಿಧ್ಯ ಹಾಗೂ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ಕರಾರ್ಚಿತ ಶ್ರೀ ಗೋಪಿನಾಥನ ಪರಮ ಸನ್ನಿಧಾನದಲ್ಲಿ ಬಾಲಕನಿಗೆ ಉಪನಯನ ಬ್ರಹ್ಮೋಪದೇಶ ಸಾಂಗವಾಗಿ ನೆರವೇರಿದವು. ಶುಭ ಮುಹೂರ್ತದಲ್ಲಿ ಆಶ್ರಮ ದೀಕ್ಷೆ ಇತ್ತು ಶ್ರೀ ಲಕ್ಷ್ಮೀನಾರಾಯಣ ತೀರ್ಥ ಅಂತ ನಾಮಕರಣ ಮಾಡಿದರು.
ವೇದಾಂತ ವ್ಯಾಸಂಗಕ್ಕಾಗಿ ಯತಿಪುಂಗವ ವಿದ್ಯಾಲಲಾಮ ಮೇಧಾ ನಿಧಿ ಪಾಂಡಿತ್ಯ ಪರಾಕ್ರಮದ ಉನ್ನತ ಶಿಖರರಾದ ಶ್ರೀ ವಿಬುಧೇಂದ್ರ ತೀರ್ಥ ಶ್ರೀಪಾದಂಗಳವರ ಹತ್ತಿರ ಕಳಿಸಿದರು. ಅವರಲ್ಲಿ ವೇದಾಂತ ವಿದ್ಯಾವಿಶಾರದರಾಗಿ ಅವರ ಪರಮ ವಾತ್ಸಲ್ಯ ಕ್ಕೆ ಅವರ ವಿಶ್ವಾಸಕ್ಕೆ ಭಾಗಿಯಾದರು. ಈರ್ವರೂ ಗುರು ಶಿಷ್ಯರು ಚಾತುರ್ಮಾಸ ವ್ರತ ಸಂಕಲ್ಪ ಮಾಡಿ ರಾಯಚೂರು ದೇವಗಿರಿ ಕೃಷ್ಣಾ ತೀರ ಕೊಪ್ರ ಶ್ರೀ ನರಸಿಂಹ ದೇವರ ಕ್ಷೇತ್ರಕ್ಕೆ ಬಂದರು. ಅಲ್ಲಿ ಉತ್ತರಾದಿ ಮಠದ ಪ್ರಕಾಂಡ ಪಂಡಿತ ಯತಿವರೇಣ್ಯ ಶ್ರೀ ರಘುನಾಥತೀರ್ಥರ ಭೆಟ್ಟಿ ಆಯಿತು. ಶ್ರೀ ವಿಬುಧೇಂದ್ರ ತೀರ್ಥರು ಲಕ್ಷ್ಮೀ ನಾರಾಯಣ ಮುನಿಗಳನ್ನು ಅವರಿಗೆ ಪರಿಚಯ ಮಾಡಿಸಿ ಅವರಿಂದ ಅನುಗ್ರಹೀತರಾಗಲು ಹೇಳಿದರು. ವಿದ್ಯಾಪರಿಶ್ರಮ ಅವಲೋಕಿಸಿ ಆಶೀರ್ವಾದ ಮಾಡಲು ಕೋರಿದರು.
ಶ್ರೀ ರಘುನಾಥತೀರ್ಥರ ಅನುಗ್ರಹ
ಈರ್ವರೂ ಯತಿವರೇಣ್ಯರ ಸಾನ್ನಿಧ್ಯದಲ್ಲಿ ಸರ್ವಜ್ಞ ಸಿದ್ಧಾಂತ ಬಗ್ಗೆ ಸಮರ್ಥ ವ್ಯಾಖ್ಯಾನ ನೀಡಿ ಶ್ರೀಮನ್ ನ್ಯಾಯಸುಧಾ ಗ್ರಂಥ ಉಕ್ತಿಗಳನ್ನು ಮುಖೋದ್ಗತ ಹೇಳಿ ಅಪೂರ್ವ ಪಾಂಡಿತ್ಯದ ವಿಲಕ್ಷಣವಾದ ಪ್ರತಿಭೆ ತೋರಿಸಿದರು. ಬಾಲ ಯತಿಯ ಅತುಲಿತ ಮೇಧಾ ಶಕ್ತಿ ಅಗಾಧ ಸ್ಮರಣೆ ಶಕ್ತಿ ಅಪರೂಪದ ಅಭಿವ್ಯಕ್ತಿ ಕಂಡು ಪರಮಾನಂದಭರಿತರಾದ ಶ್ರೀ ರಘುನಾಥತೀರ್ಥರು ವಿದ್ವತ್ತಿಗೆ ಮನ್ನಣೆ ನೀಡುತ್ತ ಲಕ್ಷ್ಮೀ ನಾರಾಯಣ ಮುನಿಗಳೇ ನಾವೆಲ್ಲ ಕೇವಲ ಶ್ರೀಪಾದರು ಆದರೆ ತಾವು ಶ್ರೀಪಾದರಾಜರೇ ಆಗಿದ್ದೀರಿ. ಈ ಪ್ರಶಸ್ತಿಗೆ ಸಂಪೂರ್ಣ ಭಾಜನರು. ಈ ಮಾತಿಗೆ ಶ್ರೀ ರಾಮಚಂದ್ರ ದೇವರೇ ಸಾಕ್ಷಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಹಾಗೂ ಶ್ರೀ ಜಯತೀರ್ಥರ ಅನುಗ್ರಹದಿಂದ ವಿಖ್ಯಾತರಾಗುತ್ತೀರಿ ಅಮೋಘ ಪಾಂಡಿತ್ಯ ತಪ:ಶಕ್ತಿಯಿಂದ ರಾಜಾಧಿರಾಜರಿಂದ ಪೂಜಿತರಾಗುವಿರಿ ಹಾಗೂ ಶ್ರೀಪಾದರಾಜರು ಎಂಬ ನಾಮಧೇಯದಿಂದ ಪರಮ ವಿಖ್ಯಾತ ಆಗುವಿರಿ ಅಂತ ಅನುಗ್ರಹ ಮಾಡಿದರು. ಅಂದಿನಿಂದ ಶ್ರೀ ಪಾದರಾಜರು ಅಂತಲೇ ಪ್ರಸಿದ್ಧ ನಾಮ ಎಲ್ಲೆಡೆ ಹೆಸರುವಾಸಿಯಾಗಿ ಶ್ರೀ ಪಾದರಾಜಮಠ ಅಂತಲೇ ವಿಖ್ಯಾತಿ ಆಯಿತು. ಅನವರತ ಪಾಠ ಪ್ರವಚನ ಆಶ್ರಮೋಚಿತ ಜಪ ತಪ ಅನುಷ್ಠಾನ ಗುರು ಸೇವಾ ನಿರತರಾದ ಶ್ರೀ ಶ್ರೀಪಾದರಾಜರೊಂದಿಗೆ ಶ್ರೀ ಸ್ವರ್ಣವರ್ಣ ತೀರ್ಥರು ನಿಶ್ಚಿಂತರಾಗಿ ಕೆಲಕಾಲ ವಾಸಮಾಡಿ ನಂತರ ಸಮಸ್ತ ಸಂಸ್ಥಾನ ಒಪ್ಪಿಸಿ, ಶ್ರೀರಂಗ ಕ್ಷೇತ್ರದಲ್ಲಿ ವೃಂದಾವನ ಪ್ರವೇಶ ಮಾಡಿದರು.
ಕೆಲ ದಿನ ಅಲ್ಲಿ ಇದ್ದು ಶ್ರೀ ಶ್ರೀಪಾದರಾಜರು ದಿಗ್ವಿಜಯಾರ್ಥ ಸಂಚಾರ ಮಾಡುತ್ತ ಮುಳಬಾಗಿಲಿಗೆ ಬಂದರು. ಅದರ ಐತಿಹಾಸಿಕ ಧಾರ್ಮಿಕ ಹಿನ್ನೆಲೆ ಪವಿತ್ರ ಭೂಮಿ ಪ್ರಶಸ್ಥ ಸ್ಥಳ ಎಂದು ತಿಳಿದು ಅಲ್ಲಿಯೇ ಇರಲು ಬಯಸಿದರು. ಮುಳಬಾಗಿಲು ಭೂವೈಕುಂಠ ತಿರುಪತಿ ಕ್ಷೇತ್ರದ ಮೂಡಣ ಬಾಗಿಲು. ಶ್ರೀ ಕೌಂಡಿಣ್ಯ ಮುನಿಗಳ ತಪೋಭೂಮಿ. ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿಯ ಸನ್ನಿಧಾನದ ಕ್ಷೇತ್ರ. ಅಗಸ್ತ್ಯ ಮುನಿಗಳು ಪ್ರತಿಷ್ಠಾಪಿಸಿದ ಪ್ರಸಿದ್ಧ ಅಗಸ್ತ್ಯೇಶ್ವರ ದೇವಾಲಯ. ರಥಸಪ್ತಮಿ ಪ್ರಾತ:ಕಾಲದ ಸೂರ್ಯ ಕಿರಣಗಳು ಕಾಣುವಂತಹ ಲಿಂಗ ಎಂದೇ ಪ್ರಸಿದ್ಧಿ ಆದ ವಿರೂಪಾಕ್ಷ ದೇವಾಲಯ.
ಶ್ರೀ ಅಕ್ಷೋಭ್ಯತೀರ್ಥ ಪ್ರತಿಷ್ಠಿತ ಅಂಗಾರ ನರಸಿಂಹ ದೇವರ ಸನ್ನಿಧಿ. ಈ ಸ್ಥಳವನ್ನು ಪ್ರಮುಖ ಕೇಂದ್ರ ಮಾಡಿಕೊಂಡರು ಶ್ರೀ ಶ್ರೀಪಾದರಾಜರು. ಶ್ರೀ ಬ್ರಹ್ಮಣ್ಯತೀರ್ಥರು ತಮ್ಮಲ್ಲಿ ಬಾಲ್ಯದಲ್ಲೇ ಸಂನ್ಯಾಸ ಸ್ವೀಕರಿಸಿದ ಶ್ರೀ ವ್ಯಾಸರಾಜರನ್ನು ಉನ್ನತ ವ್ಯಾಸಂಗಕ್ಕಾಗಿ ಅಂದಿನ ದ್ವೈತ ವಿಶ್ವ ವಿದ್ಯಾಲಯ ಅಂತ ಖ್ಯಾತಿ ಆದ ಮುಳಬಾಗಿಲಿನ ಶ್ರೀ ಶ್ರೀ ಪಾದರಾಜರ ಹತ್ತಿರ ಕಳಿಸಿದರು. ಪರಮ ಯೋಗಿ ಶ್ರೀ ವ್ಯಾಸರಾಜರು ಶ್ರೀ ಶ್ರೀ ಪಾದರಾಜರ ತರಂಗಿಣಿ ಪ್ರವಾಹದ ಧೀರ ಗಂಭೀರ ಶೈಲಿಯ ಪಾಠ ಕ್ರಮ ನೋಡಿ ಪರಮ ಆನಂದ ಭರಿತರಾಗಿ ವ್ಯಾಸಂಗ ಮಾಡಿದರು. ತರ್ಕ ವ್ಯಾಕರಣ ನ್ಯಾಯ ಛಂದಸ್ಸು ಹಲವು ಶಾಸ್ತ್ರ ಬೋಧನೆ ಆಯಿತು. ಶ್ರೀ ವ್ಯಾಸರಾಜರ ಅಪ್ರತಿಮ ಪ್ರತಿಭೆ ಕಂಡು ಗುರುಗಳು ಪರಮಾನಂದಭರಿತರಾದರು.
ಒಂದು ದಿನ ಶ್ರೀ ವ್ಯಾಸರಾಜರು ಗ್ರಂಥ ಮನನ ಮಾಡುತ ಗುಹೆಯಲ್ಲಿ ಕೂತಾಗ ಘಟ ಸರ್ಪ ಅವರನ್ನು ಸುತ್ತುವರೆಯಲು ಬಳಿಕ ಶ್ರೀ ಶ್ರೀಪಾದರಾಜರು ಬಂದು ಶ್ರೀ ಪದ್ಮನಾಭ ತೀರ್ಥರೇ ಬಂದಿರುವುದು ತಿಳಿದು ಸರ್ಪ ಭಾಷೆಯಲ್ಲಿ ಮಾತನಾಡಿದರು. ಆಗಮನ ಸ್ಪರ್ಶದ ಸಾನಿಧ್ಯದಿಂದ ಶತ್ರು ಬಾಧೆ ತಟ್ಟದು ವಾದಿ ನಿಗ್ರಹ ಸಾಮರ್ಥ್ಯ ಬರುವುದು. ಅಕ್ಷಯ ರಕ್ಷೆಯಿಂದ ಘೋರ ದುರಿತ ಬರದು ಅಂತ ಹೇಳಿ ಸರ್ಪ ಬಂಧ ಸಡಿಲಿಸಿ ಕಣ್ಮರೆ ಆದ ಮೇಲೆ ಶ್ರೀ ವ್ಯಾಸರಾಜರು ನಮಸ್ಕಾರ ಮಾಡಲು ಶ್ರೀ ಶ್ರೀಪಾದರಾಜರು ಶ್ರೀ ಪದ್ಮನಾಭತೀರ್ಥರ ಅನುಗ್ರಹ ನಿಮಗಾಯಿತು ಎಂದು ಹೇಳಿದರು. ತಾವು ರಚಿಸಿದ ವಾಗ್ವಜ್ರ ಗ್ರಂಥ ಅಧ್ಯಯನ ಅವಲೋಕನಕ್ಕೆ ಕೊಟ್ಟರು. ಶ್ರೀ ಶ್ರೀಪಾದರಾಜರಲ್ಲಿ ಶ್ರೀ ವ್ಯಾಸರಾಜರಿಗೆ ಅಪೂರ್ವ ಗುರುಭಕ್ತಿ. ಹಾಗೆಯೇ ಶ್ರೀ ಶ್ರೀಪಾದರಾಜರಿಗೆ ಅವರಲ್ಲಿ ಅಪಾರ ಶಿಷ್ಯ ವಾತ್ಸಲ್ಯ. ತಮ್ಮ ಗುರುಗಳ ಬಗ್ಗೆ ಶ್ರೀ ವ್ಯಾಸರಾಜರು ಅನೇಕ ಕೀರ್ತನೆ ಹಾಗೂ ಪಂಚರತ್ನಮಾಲಿಕಾ ಸ್ತೋತ್ರ ರಚಿಸಿದ್ದಾರೆ.
ಪಾಂಡುರಂಗ ವಿಠಲನ ಸ್ವಪ್ನ ಸೂಚನೆಯಂತೆ ಈರ್ವರು ಪಂಢರಪುರಕ್ಕೆ ಹೋದಾಗ ಶ್ರೀ ಶ್ರೀಪಾದರಾಜರು ತಮಗಾದ ಸ್ವಪ್ನ ಸೂಚನೆಯಂತೆ ಭೀಮರಥಿ ಪುಷ್ಪವತಿ ಸಂಗಮ ಸ್ಥಳ ಪಾಂಡವ ವಂಶೀಯ ಕ್ಷೇಮಕಾಂತ ಮಹಾರಾಜ ಮಾಡಿದ ಭೂಸ್ಥಾಪಿತ ದೇವರ ಪೆಟ್ಟಿಗೆ ತೆಗೆಯಲು ಜಾಂಬವತೀ ದೇವಿ ಕರಾರ್ಚಿತ, ಅರ್ಜುನ ಕರಾರ್ಚಿತ ಶ್ರೀ ರುಕ್ಮಿಣೀ ಸತ್ಯಭಾಮಾ ಶ್ರೀ ರಂಗವಿಠ್ಠಲನನ್ನು ಕಂಡು ಪರಮ ಪರಮಾನಂದಭರಿತರಾದರು. ರಂಗವಿಠಲ ಮುದ್ರಿಕೆ ಪಡೆದು ಪದ ರಚನೆ ಮಾಡುವವರಾದರು.
ಇನ್ನೊಂದು ಸಂಪುಟ ದ ಪೂಜೆ ಶ್ರೀ ವ್ಯಾಸರಾಜರು ಮಾಡುವಾಗ ಒಲಿದು ವೇಣುಗೋಪಾಲ ಕುಣಿಯುತಲಿರುವುದು ಕಂಡ ಶ್ರೀ ಶ್ರೀಪಾದರಾಜರು ತಮ್ಮ ಶಿಷ್ಯ ವ್ಯಾಸರಾಜರ ಮಹಾಭಾಗ್ಯಕ್ಕೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ವ್ಯಾಸರಾಜರಿಗೆ ಸಮಸ್ತ ವಿದ್ಯೆ ಅನರ್ಘ್ಯ ಜ್ಞಾನ ಭಂಡಾರ ಧಾರೆ ಎರೆದು ಸಂತೃಪ್ತರಾಗಿ ಹೃತ್ಪೂರ್ವಕ ಆಶೀರ್ವಾದ ಮಾಡಿ ಕಳಿಸಿ ಕೊಟ್ಟರು. ಬಳಿಕ ಶ್ರೀ ಬ್ರಹ್ಮಣ್ಯತೀರ್ಥರು ವೃಂದಾವನ ಪ್ರವೇಶ ಮಾಡಿದ ಮೇಲೆ ಶ್ರೀ ವ್ಯಾಸರಾಜರು ಮುಂದೆ ತಮ್ಮ ಗುರು ಶ್ರೀ ಶ್ರೀಪಾದರಾಜರ ದರ್ಶನಕ್ಕಾಗಿ ಬಂದಾಗ ಭವ್ಯ ದಿವ್ಯ ವೈಭವ ವಿಜೃಂಭಣೆಯಿಂದ ಸನ್ಮಾನ ಮಾಡಿ ದಿಗ್ವಿಜಯ ಯಾತ್ರೆಗೆ ಕಳಿಸಿಕೊಟ್ಟರು.
ಒಮ್ಮೆ ವಿಪ್ರೋತ್ತಮನಿಗೆ ಬ್ರಹ್ಮ ಹತ್ಯಾ ದೋಷ ಬಂದಾಗ ಕಡೆಗೆ ಶ್ರೀ ಶ್ರೀಪಾದರಾಜರಲ್ಲೇ ಅವರೇ ಗತಿ ಎಂದು ಮೊರೆ ಹೊಕ್ಕು ಅವರ ಅಪ್ಪಣೆಯಂತೆ ಪೂಜಾ ಸಮಯ ಗುರುಗಳ ಪೂಜಾ ನಂತರದ ಹಲವು ದಿನಗಳ ಶಂಖೋದಕ ಪ್ರೋಕ್ಷಣೆಯಿಂದ ದೋಷ ನಿವೃತ್ತಿ ಆದ ಬಗ್ಗೆ ಗುರುಗಳಿಂದ ಕೇಳಿ ಪರಮಾನಂದ ಹೊಂದಿದನು. ಕುಹಕಿಗಳ ಮಾತಿಗೆ ಗುರುಗಳು ಶುಭ್ರ ಧವಳ ವಸ್ತ್ರ ಗೇರೆಣ್ಣೆಯಲಿ ಅದ್ದಿ ಮೊದಲಿನಂತೆ ಮಾಡಲು ಹೇಳಿ ಆ ಕುಹಕಿಗಳು ಸಕಲ ಪ್ರಯತ್ನೋತ್ತರ ವಿಫಲರಾಗಲು ಗುರುಗಳು ಕೆಲ ದಿನಗಳ ಶಂಖೋದಕ ಪ್ರೋಕ್ಷಣೆಯಿಂದ ಎಲ್ಲರ ಎದುರಿನಲ್ಲಿ ಮೊದಲಿನಂತೆ ಶುದ್ಧವಾದುದು ತೋರಿಸಿದರು. ಭಗವಂತನಲ್ಲಿ ಭಕ್ತಿ ಮಾಡಿ ಅಂತ ಆಶೀರ್ವಾದ ಮಾಡಿ ಕಳಿಸಿದರು.
ವಿಜಯನಗರ ಸಾಮ್ರಾಜ್ಯದ ಮಹಾಮಾಂಡಲೀಕ ಸಾಳುವ ನರಸಿಂಹ ಶ್ರೀನಿವಾಸ ದೇವರ ಅಂತರಂಗ ಭಕ್ತ. ಕಾರಣಾಂತರಗಳಿಂದ ಬ್ರಹ್ಮಹತ್ಯಾ ದೋಷಕ್ಕೆ ಗುರಿಯಾದಾಗ ತಪೋನಿಧಿಗಳಾದ ಶ್ರೀ ಶ್ರೀಪಾದರಾಜರು ಶಂಖೋದಕ ಪ್ರೋಕ್ಷಣೆಯಿಂದ ಕೆಲ ದಿನಗಳಲ್ಲಿ ಅನುಗ್ರಹ ಮಾಡಿ ದೋಷ ಪರಿಹಾರ ಮಾಡಿದರು. ಗುರುಗಳಲ್ಲಿ ಬಂದು ಭಯ ಭಕ್ತಿ ಗೌರವಾದರ ಪೂರ್ವಕ ರಾಜೋಚಿತ ಮರ್ಯಾದೆ ರತ್ನಾಭಿಷೇಕ ಮಾಡಿದನು. ಶ್ರೀ ಹರಿ ವಾಯುಗಳ ಸಂಕಲ್ಪ ಕ್ಕೆ ಬಂದುದು ಅಂತ ತಿಳಿದು ಶ್ರೀ ಹರಿಗೆ ಸಮರ್ಪಿಸಿದರು. ಪ್ರತಿನಿತ್ಯ ಸುಗಂಧ ದ್ರವ್ಯ ಮಿಶ್ರ ಶುದ್ಧೋದಕ ಸ್ನಾನ ಅರವತ್ತನಾಲ್ಕು ಬಗೆಯ ನಾನಾ ಭಕ್ಷ್ಯ ಭೋಜ್ಯ ಶಾಖ ಪಾಕಗಳನ್ನು ಶ್ರೀ ಗೋಪಿನಾಥ ದೇವರಿಗೆ ಅರ್ಪಿಸುವುದು ನವರತ್ನ ಖಚಿತ ಕಂಕಣ ಕುಂಡಲ, ಮುತ್ತಿನ ತುರಾಯಿ, ಕವಚ ಧರಿಸುವುದು ಎಲ್ಲ ಭಗವಂತನಿಗೆ ಅರ್ಪಣೆ ಮಾಡುತ್ತಿದ್ದರು. ಜ್ಞಾನಿಗಳಾದ ಶ್ರೀ ಶ್ರೀಪಾದರಾಜರು ಇಡೀ ದೇಹವೇ ಶ್ರೀ ಲಕ್ಷ್ಮೀ ನಾರಾಯಣನ ಪರಮ ಪವಿತ್ರ ರಥ ಎಂದು ಭಾವಿಸಿ ಈ ಅಹಂಕಾರವನ್ನು ಶ್ರೀ ಹರಿಗೆ ಅರ್ಪಿಸುತ್ತಿದ್ದರು. ಸುಖಪ್ರಾರಬ್ಧದ ವೈರಾಗ್ಯ ಶಿಖಾಮಣಿಗಳು ಕನಕ ಸಿಂಹಾಸನದಲ್ಲಿ ರತ್ನಾಭಿಷಿಕ್ತ ಭಾಗ್ಯಶಾಲಿ, ಅಗಮ್ಯ ಮಹಿಮರು, ಶರಣ ಜನ ಮಂದಾರರು. ಇದನ್ನು ಸಹಿಸದ ಕೆಲ ಕುಹಕಿಗಳು ಗುರುಗಳ ಪರೀಕ್ಷೆ ಮಾಡಬೇಕೆಂದು ಶ್ರೀಗಳವರು ಒಮ್ಮೆ ಸಂಚಾರ ಕಾಲದಲ್ಲಿ ಇದ್ದಾಗ ಮಧ್ಯಾಹ್ನ ಕಾಲ ಮಾರ್ಗ ತಪ್ಪಿಸಿ ಘೋರ ಅರಣ್ಯ ಸೇರುವಂತೆ ಮಾಡಿದರು. ಆದರೆ ಕಾರುಣ್ಯ ವಾರಿಧಿ ಭಕ್ತವತ್ಸಲ ಗೋಪಿನಾಥ ದೇವರ ಅನುಗ್ರಹದಿಂದ ಸೋಜಿಗವೆಂಬಂತೆ ಒಬ್ಬ ವ್ಯಾಪಾರಿ ಶ್ರೀಗಳನ್ನು ಕಂಡು ಸಾಷ್ಟಾಂಗ ನಮಸ್ಕಾರಗಳು ಮಾಡಿ ಯಾರೆಂದು ವಿಚಾರಿಸಲು ಪ್ರಖ್ಯಾತ ವರ್ತಕ ಶ್ರೇಷ್ಠ ನಾದ ನಾನು ಪ್ರತಿವರ್ಷ ತಿರುಪತಿ ಬ್ರಹ್ಮೋತ್ಸವ ಕಾಲದಲ್ಲಿ ಅಂಗಡಿ ಮುಂಗಟ್ಟುಗಳು ಇಡಲು ಸಮಸ್ತ ಸಾಮಾನುಗಳನ್ನು ಗಾಡಿಯಲ್ಲಿ ತೆಗೆದು ಒಯ್ಯುವಾಗ ಅಜಾಗರೂಕತೆಯಿಂದ ದಾರಿ ತಪ್ಪಿದೆವು. ನಿದ್ರೆಯಲ್ಲಿ ಶ್ರೀ ವೇಂಕಟೇಶ ದೇವರು ನಾಳೆ ಇದೇ ಕಾಡಿಗೆ ನನ್ನ ಭಕ್ತ ಬರುವನಿದ್ದಾನೆ, ನೀನು ಈ ಸಕಲ ಪದಾರ್ಥ ಆತನ ಪರಿವಾರದೊಂದಿಗೆ ಅರ್ಪಿಸು ಆ ಮೂಲಕ ನನ್ನ ಸೇವೆ ಮಾಡು ಎಂಬುದಾಗಿ ಹೇಳಿ ಪದಾರ್ಥಗಳ ಬೆಲೆಯಾಗಿ ಮಾಣಿಕ್ಯವನ್ನು ಕೊಟ್ಟದ್ದು ಎಲ್ಲ ಹೇಳಿ ತಮ್ಮ ದಾರಿ ಕಾಯುತ್ತಿದ್ದೆ ಎಂಬುದಾಗಿ ಹೇಳಿದ.
ಅಂತ ಹೇಳಿ ಸಕಲ ಪದಾರ್ಥ ಶ್ರೀಗಳವರಿಗೆ ಅರ್ಪಿಸಿ ಸಾಷ್ಟಾಂಗ ನಮಸ್ಕಾರಗಳು ಮಾಡಿದನು. ಶ್ರೀಗಳು ಆ ಮಾಣಿಕ್ಯವನ್ನು ಆ ವರ್ತನಿಗೆ ಹಿಂತಿರುಗಿಸಿ ಕೊಟ್ಟರು. ಪ್ರತಿನಿತ್ಯದಂತೆಯೇ ಅರವತ್ತು ನಾಲ್ಕು ಬಗೆಯ ವಿವಿಧ ಭಕ್ಷ್ಯ ಭೋಜ್ಯಗಳಾದವು. ವೈಭವದ ಪೂಜೆ ಮೃಷ್ಟಾನ್ನ ಭೋಜನ ಎಲ್ಲ ಆಯಿತು. ಕುಹಕಿಗಳನ್ನು ಕರೆದ ಶ್ರೀಗಳು ಶ್ರೀರಮಣನಾದ ಸ್ವಾಮಿ ನಮ್ಮ ಸ್ವಾಮಿ ಅನಂತ ಹಸ್ತಗಳಿಂದ ಸಕಲ ಭಾಗ್ಯಗಳನ್ನು ನೀಡುತ್ತಿರುವಾಗ ಅದನ್ನು ತಡೆಯಲು ಯಾರಿಗೆ ಸಾಧ್ಯ ಆದೀತು ಎಂದು ಬುದ್ಧಿ ಹೇಳಿ ಕಳುಹಿಸಿದರು. ಪ್ರತಿನಿತ್ಯ ಜನರು ಶ್ರೀಗಳವರಿಂದ ತೀರ್ಥ ಮಂತ್ರಾಕ್ಷತೆ ಪಡೆದು ಅನೇಕ ಜನ್ಮಗಳ ದುರಿತ ದುಷ್ಪಾಪಗಳ ನಿವಾರಿಸಿಕೊಳ್ಳುತ್ತಿದ್ದರು. ಕುಹಕಿ ಸರದಾರ ಮಾಂಸವನ್ನು ಹರಿವಾಣದಲ್ಲಿ ಇಟ್ಟು ವಸ್ತ್ರವನ್ನು ಮುಚ್ಚಿ ಶ್ರೀಗಳವರ ಹತ್ತಿರ ತಂದಿಟ್ಟು ನಮಸ್ಕಾರಗಳು ಮಾಡಿದನು.
ಎಂದಿನಂತೆ ಶ್ರೀಗಳು ಹರಿವಾಣಕ್ಕೆ ಶಂಖೋದಕ ಪ್ರೋಕ್ಷಿಸಿದ ಮೇಲೆ ಕುಹಕಿ ಸರದಾರ ತಾನೇ ಗೆದ್ದೆ ಎಂಬ ಖುಷಿಯಿಂದ ಮುಚ್ಚಿದ ವಸ್ತ್ರ ತೆಗೆದು ನೋಡಲು ಆ ಹರಿವಾಣದಲ್ಲೆಲ್ಲಾ ಬಗೆ ಬಗೆಯ ಫಲಗಳು ಪುಷ್ಪಗಳೇ ಇದ್ದವು. ಇದನ್ನು ಕಂಡ ಸರದಾರನಿಗೆ ಸ್ಮೃತಿ ತಪ್ಪಿ ಭಯಭೀತನಾದನು. ಆಗ ಶ್ರೀಗಳು ದೇವರು ಸರ್ವ ಸಮರ್ಥನು ಎಂದು ತಿಳಿಸಿ ಗಾಬರಿಯಾಗಬೇಡಿ ಅಂತ ಸರದಾರನಿಗೆ ಅಭಯ ನೀಡಿ ಆಶೀರ್ವದಿಸಿ ಕಳಿಸಿಕೊಟ್ಟರು. ಒಮ್ಮೆ ಶ್ರೀ ರಘುನಾಥತೀರ್ಥರು ಹಾಗೂ ಶ್ರೀ ಶ್ರೀಪಾದರಾಜರು ಒಂದು ಗ್ರಾಮದಲ್ಲಿ ಮುಖಂಡನೋರ್ವನ ಆತಿಥ್ಯಕ್ಕೆ ದಯಮಾಡಿಸಿದಾಗ ಆ ಮುಖಂಡ ಶ್ರೀ ರಘುನಾಥತೀರ್ಥರಿಗೆ ಅನಾದರ ಮಾಡಲು ಶ್ರೀ ಶ್ರೀಪಾದರಾಜರು ಬೇಸರಗೊಂಡು ಆತನ ಮನೆಯಿಂದ ಹೊರಬಂದರು. ಶ್ರೀ ರಘುನಾಥತೀರ್ಥರು ಕೂಡ ಹೊರ ಬಂದರು. ಈರ್ವರು ಬಂದದ್ದೇ ತಡ ಮನೆಗೆ ಅಗ್ನಿಗಾಹುತಿಯಾಯಿತು. ಆ ಮುಖಂಡ ತಪ್ಪಿನ ಅರಿವಿನಿಂದ ಶರಣು ಹೋಗಲು ಶ್ರೀಗಳು ಶ್ರೀ ರಘುನಾಥತೀರ್ಥರಲ್ಲಿ ಮೊರೆ ಹೋಗಲು ಹೇಳಿ ಆ ಮುಖಂಡ ಮೊರೆ ಹೋದ ಮೇಲೆ ಶ್ರೀ ರಘುನಾಥತೀರ್ಥರು ಮನ್ನಿಸಿ ಪಾದಪೂಜೆ ಸ್ವೀಕರಿಸಿ ಅನುಗ್ರಹ ಮಾಡಿ ಅಗ್ನಿಭಯ ನಿವಾರಿಸಿದರು.
ಕಾಶೀ ಪಟ್ಟಣದಲ್ಲಿ ವಿದ್ವತ್ ಸಭೆಯಿಂದ ಆಮಂತ್ರಣ ಬರಲು ಹೊರಟರು. ವಾದ ವೇದಿಕೆಯಲ್ಲಿ ಕಾಶಿ ಪಂಡಿತ ಮಂಡಳಿಯ ದಿಗ್ಗಜ ಪಂಡಿತರು ಬಂದು ಪ್ರಶ್ನೆ ಕೇಳಲು ಪಾಂಡಿತ್ಯ ಪೂರ್ಣವಾಗಿ ಯುಕ್ತಿ ಯುಕ್ತ ಪ್ರಮಾಣ ಬದ್ಧ ಲೀಲಾಜಾಲದಿ ಉತ್ತರ ಕೊಟ್ಟು ವಿಸ್ಮಿತರನ್ನಾಗಿ ಮಾಡಿದರು. ಷರತ್ತಿನಂತೆ ಸೋತ ಪಂಡಿತರು ಯತ್ಯಾಶ್ರಮ ಸ್ವೀಕರಿಸಿದರು.
ಇದನ್ನು ಸಹಿಸದ ಕುಹಕಿಗಳು ಗುರುಗಳಿಗೆ ವಾಗ್ಬಂಧನ ಮಾಡಲು ಶ್ರೀ ಹಯಗ್ರೀವ ದೇವರ ಉಪಾಸನೆ ಸ್ಮರಣೆಯಿಂದಲೇ ಪರಿಹಾರವಾಯಿತು.
*ಪ್ರತಿಮಾ ಪ್ರತಿಷ್ಠಾಪನೆ: ಕಾರ್ಪರ ಕ್ಷೇತ್ರದಲ್ಲಿ ಅಶ್ವತ್ಥ ನರಸಿಂಹ ದೇವರ ಪ್ರತಿಷ್ಠಾಪನೆ ಮಾಡಿದ ಮೇಲೆ ಕಾರ್ಪರ ನರಸಿಂಹ ಕ್ಷೇತ್ರ ಬ್ರಹ್ಮಣ್ಯಪುರದಲ್ಲಿ ಶ್ರೀ ಬ್ರಹ್ಮಣ್ಯತೀರ್ಥರು ಶ್ರೀ ವ್ಯಾಸರಾಜರೊಂದಿಗೆ ಮುಖ್ಯಪ್ರಾಣ ದೇವರ ಪ್ರತಿಷ್ಠಾಪನೆ ಹಾಗೂ ಸೀತಾ ಸಮೇತ ಶ್ರೀ ರಾಮಚಂದ್ರ ದೇವರ ಪ್ರತಿಷ್ಠಾಪನೆ. *ಕಂಕಣದ ಮಹಿಮೆಯನ್ನು ತೋರಿದ ರಂಗವಿಠ್ಠಲ: ನರಸಿಂಹ ಭೂಪಾಲ ವಿಜಯೋತ್ಸವದ ಶುಭ ಸ್ಮರಣೆಗಾಗಿ ತೇಜ:ಪುಂಜ ಕಂಕಣವನ್ನು ಶ್ರೀಗಳಿಗೆ ಕೊಟ್ಟು ನಮಸ್ಕಾರಗಳು ಮಾಡಿದನು. ಶ್ರೀಗಳು ಕಂಕಣ ಸ್ವೀಕರಿಸಿ ದೇವರ ಪೆಟ್ಟಿಗೆಯಲ್ಲಿ ಇಟ್ಟು ಪ್ರತಿದಿನದ ಪೂಜೆಯಲ್ಲಿ ಕಂಕಣ ಅರ್ಪಿಸುತ್ತಿದ್ದರು. ಒಮ್ಮೆ ರಂಗವಿಠಲ ಶ್ರೀ ಶ್ರೀಪಾದರಾಜರ ವೇಷದಲ್ಲಿ ಕಲಾವಿದೆಯ ಸಂಗೀತ ಗೋಷ್ಠಿಯಲ್ಲಿ ಭಾಗವಹಿಸಿ ಸಂಗೀತ ಸೇವೆಗೆ ಮೆಚ್ಚಿ ಕಂಕಣ ಕೊಟ್ಟ. ಕಂಕಣ ಪಡೆದ ಆ ಕಲಾವಿದೆ ಮುಂದೆ ಒಂದು ದಿನ ಕಾರ್ಯಕ್ರಮದಲ್ಲಿ ನರಸಿಂಹ ಭೂಪಾಲನ ಕಂಡಾಗ ಆತ ಕಂಕಣ ಎಲ್ಲಿ ಸಿಕ್ಕಿತು ಎಂದಾಗ ನಿಜ ಸಂಗತಿ ತಿಳಿದಾಗ ಭೂಪಾಲ ಅದನ್ನು ಪಡೆದು ಭದ್ರವಾಗಿ ಇಟ್ಟು ಶ್ರೀಗಳವರ ಸನ್ನಿಧಿಗೆ ಬಂದು ಪೂಜಾ ಸಮಯದಲ್ಲಿ ಅದರ ದರ್ಶನ ಮಾಡಿಸಬೇಕೆಂದು ಗುರುಗಳಲ್ಲಿ ಪ್ರಾರ್ಥಿಸಿದಾಗ ಗುರುಗಳು ಎಂದಿನಂತೆ ರಂಗವಿಠ್ಠಲನ ಸ್ಮರಿಸಿ ದೇವರ ಪೆಟ್ಟಿಗೆಯಿಂದ ತೆಗೆದು ತೋರಿಸಿದರೆ ಭೂಪಾಲನಿಗೆ ಪರಮಾಶ್ಚರ್ಯ!! ಗುರುಗಳು ನಸುನಕ್ಕು ಇದೆಲ್ಲ ರಂಗವಿಠ್ಠಲನ ಅನುಗ್ರಹ ಲೀಲೆ ಅಂತ ಹೇಳಿ ಭೂಪಾಲನಿಗೆ ಅನುಗ್ರಹ ಮಾಡಿ ಕಳಿಸಿ ಕೊಡುತ್ತಾರೆ. *ಶ್ರೀಪಾದರಾಜರ ಗ್ರಂಥಗಳು: ವಾಗ್ವಜ್ರ (ಸಂಸ್ಕೃತ ಗ್ರಂಥ) ನಮಗೆ ಸಿಕ್ಕಂತಹ ಗ್ರಂಥ ಎಂದರೆ ಇದೊಂದೇ. ಇನ್ನು ಹಲವಾರು ಗ್ರಂಥಗಳನ್ನು ಕೊಡುಗೆ ಕೊಟ್ಟಿದ್ದಾರೆ.
*ದಾಸಸಾಹಿತ್ಯ: ನರಹರಿ ತೀರ್ಥರಿಂದ ಆರಂಭವಾದ ಹರಿದಾಸ ಪರಂಪರೆಯನ್ನು ಬೆಳಗಿದವರು ಶ್ರೀ ಶ್ರೀಪಾದರಾಜರು. ಕನ್ನಡ ಕೃತಿಗಳ ಮೂಲಕ ವ್ಯಾಸಸಾಹಿತ್ಯವನ್ನು ಜನರಿಗೆ ಅರ್ಥವಾಗಿ ತಿಳಿಸಲು ಮಧ್ವನಾಮ, ವೇಣುಗೀತ, ಭ್ರಮರ ಗೀತ, ನೂರಾರು ಉಗಾಭೋಗಗಳು, ಕೀರ್ತನೆ ಮತ್ತು ಸುಳಾದಿಗಳನ್ನೂ ರಚಿಸಿದರು. ಸಂಸ್ಥಾನ ಪೂಜಾ ನಂತರ ಕನ್ನಡದ ದಾಸರ ಪದಗಳನ್ನು ಹಾಡುವ ಸಂಪ್ರದಾಯ ಇವರಿಂದಲೇ ಬಂದದ್ದು. ಇವರ ಅಂಕಿತ ಮೊದಲು ಗೋಪಿನಾಥ ನಂತರ ರಂಗವಿಠಲ.
*ನರಸಿಂಹ ತೀರ್ಥದಲ್ಲಿ ಗಂಗೆಯ ಸನ್ನಿಧಾನ ತಂದಿದ್ದು: ಆಗಲೇ ಶ್ರೀಪಾದರಾಜರಿಗೆ ಸ್ವಲ್ಪ ವಯಸ್ಸಾಗಿದ್ದರೂ , ಗಂಗೆಯ ದರ್ಶನ ಮಾಡಬೇಕು, ಗಂಗಾಸ್ನಾನ ಮಾಡಬೇಕೆಂಬ ಹಂಬಲ. ಅವರಿಗೇನೋ ಹೋಗಬೇಕೆನ್ನುವ ಸಾಮರ್ಥ್ಯವಿತ್ತು. ಆದರೆ ಅವರ ಆಶ್ರಮ ಶಿಷ್ಯರು ಶ್ರೀಗಳಿಗೆ ಹೋಗಬಾರದು ನಮ್ಮ ಜೊತೆಯೇ ಇರಬೇಕೆಂದು ಕೇಳಿಕೊಂಡರು. ಶಿಷ್ಯರನ್ನು ಬೇಸರಿಸದೆ ತಮ್ಮ ಆಸೆಯೂ ನೆರವೇರಬೇಕು ಎಂದು ಗಂಗಾದೇವಿಯನ್ನು ಪ್ರಾರ್ಥಿಸಲು, ಇವರ ಭಕ್ತಿಗೆ ಮೆಚ್ಚಿದ ಗಂಗಾದೇವಿ ಆಕಾಶದಿಂದ ನರಸಿಂಹ ತೀರ್ಥಕ್ಕೆ ನೇರವಾಗಿ ನೀರಿನ ಜಲಪಾತದಂತೆ ಸುರಿಯಿತು.
ಆಗ ನರಸಿಂಹ ತೀರ್ಥ ಸರೋವರ ಭರ್ತಿಯಾಗಿ ಎಲ್ಲರು ಆ ದೇವಗಂಗೆಯಲ್ಲಿ ಮಿಂದರು. ಅಂದಿನಿಂದ ನಮ್ಮ ಭಾಗ್ಯ ಇಂದಿಗೂ ಆ ಪುಷ್ಕರಣಿ ಬತ್ತಿಲ್ಲ ಎಲ್ಲಕಾಲಗಳಲ್ಲೂ ಸಮೃದ್ಧವಾದ ನೀರು ತುಂಬಿರುತ್ತದೆ. ಶ್ರೀಪಾದರಾಜರು ಕೊಟ್ಟ ಅನುಗ್ರಹ ನಮ್ಮಂತ ಪಾಮರರಿಗೂ ಗಂಗಾಸ್ನಾನದ ಫಲ ಈ ನರಸಿಂಹ ತೀರ್ಥದಲ್ಲೇ ಸಿಗುತ್ತದೆ. ಶ್ರೀ ಅಕ್ಷೋಭ್ಯತೀರ್ಥರು ಅಂಗಾರದಲ್ಲಿ ಬರೆದ ನರಸಿಂಹ ದೇವರು ಪ್ರಾದುರ್ಭಾವವಾಗಿ ನಿಂತಂತೆ ಇರುವ ನರಸಿಂಹ ದೇವರ ಸನ್ನಿಧಿ ಮತ್ತು ಈ ನರಸಿಂಹ ತೀರ್ಥದಲ್ಲೇ ಶ್ರೀ ಶ್ರೀಪಾದರಾಜರು ಇದ್ದರು. ಜಗದ್ಗುರು ಶ್ರೀಮಧ್ವಾಚಾರ್ಯರಿಂದ, ಶ್ರೀ ಪದ್ಮನಾಭ ತೀರ್ಥರ ಮೂಲ ಪರಂಪರೆಯಲ್ಲಿ ಎಂಟನೇ ಯತಿಗಳಾಗಿ ಧ್ರುವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜರು ಜೇಷ್ಠ ಶುದ್ಧ ಚತುರ್ದಶಿಯಂದು ಶ್ರೀ ಹರಿಯ ಚರಣಗಳಲ್ಲಿ ಲೌಕಿಕ ಕಾಯ ತ್ಯಜಿಸಿ ಹರಿಪಾದ ಸೇರಿದ ದಿನ. ಮುಳಬಾಗಿಲಿನಲ್ಲಿ ವೃಂದಾವನಸ್ಥರಾದರು.
*ಶ್ರೀ ಹರಿದಾಸರ ಕೃತಿಗಳಲ್ಲಿ ಶ್ರೀ ಶ್ರೀ ಪಾದರಾಜರು : ಮಹಿಮೆ ಸಾಲದೆ ಇಷ್ಟೇ ಮಹಿಮೆ ಸಾಲದೆ ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀ ಪಾದರಾಜರ : (ಶ್ರೀ ವ್ಯಾಸರಾಜ ಗುರುಸಾರ್ವಭೌಮರ ರಚನೆ) ವಾದಿಗಜಮಸ್ತಕಾಂಕುಶ ಸುಜನಬುಧಗೇಯ ಮೇದಿನೀಸುರವಂದ್ಯ ಶ್ರೀಪಾದರಾಯ (ಶ್ರೀ ವ್ಯಾಸರಾಜ ಗುರುಸಾರ್ವಭೌಮರ ರಚನೆ.) ನೆನೆದು ಬದುಕಿರೋ ಸತತ ನೆನೆದು ಬದುಕಿರೋ, ನೆನೆದು ಬದುಕಿ ಸುಜನರೆಲ್ಲ ಘನಗುಣಾಂಬುಧಿ ಶ್ರೀ ಪಾದರಾಯರ. ಶ್ರೀಪಾದರಾಯರ ದಿವ್ಯ ಶ್ರೀಪಾದವ ಭಜಿಸುವೆ: (ಶ್ರೀ ವಾದಿರಾಜ ಗುರುಸಾರ್ವಭೌಮರು) ಪರಮತ ಘನವನ ಪಾವಕನೆ ಶರಣು ಭೂ ಸುರ ಸುತ ಸಿರಿ ನಾರಾಯಣ ಯೋಗಿ :(ತಂದೆ ವೇಂಕಟೇಶ ವಿಠಲಾಂಕಿತರ ರಚನೆ) ಸಂಪೂರ್ಣ ಶ್ರೀ ಪಾದರಾಜರ ಚರಿತ್ರೆ. ಶ್ರೀಪಾದರಾಜ ಗುರುವೆ ನತಸುರತರುವೆ, ಶ್ರೀ ಪಾದರಾಜ ನಿನ್ನ ನಾ ಪೊಂದಿದೆನೊ ತ್ರಯ ತಾಪಗಳೋಡಿಸಿ ನೀ ಪಾಲಿಸನುದಿನ : (ಶ್ರೀ ಶ್ಯಾಮಸುಂದರ ದಾಸರು.) ಶ್ರೀ ಶ್ರೀಪಾದರಾಜರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತ ಈ ಸೇವೆ ಶ್ರೀ ಪಾದರಾಜರು ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣ ಶ್ರೀ ಲಕ್ಷ್ಮೀ ನರಸಿಂಹ ದೇವರ ಚರಣ ಕಮಲಗಳಲ್ಲಿ ಅರ್ಪಣೆ.