ಶ್ರೀಪಾದರಾಜರೆಂದೇ ಪ್ರಸಿದ್ಧಿ ಹೊಂದಿದ ಶ್ರೀ ಲಕ್ಷ್ಮೀನಾರಾಯಣರು

ಆಚಾರ್ಯ ಮಧ್ವರ ನೇರ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರ ಪರಂಪರೆಯಲ್ಲಿ ವಿರಾಜಮಾನರಾಗಿದ್ದ, ಆಚಾರ್ಯ ಮಧ್ವರ ನಂತರದ 8 ನೇ ಯತಿಗಳಾದ, ವ್ಯಾಸಸಾಹಿತ್ಯ ಮತ್ತು ದಾಸ ಸಾಹಿತ್ಯವೆರಡರಲ್ಲೂ ಕುಶಲರಾಗಿದ್ದ, ವ್ಯಾಸರಾಜರೆಂಬ ಅಮೂಲ್ಯ ವಜ್ರವನ್ನು ನೀಡಿದ ಶ್ರೀ ಶ್ರೀಪಾದರಾಜರ ಆರಾಧನೆ ನಿಮಿತ್ತ ಈ ಲೇಖನ.

ಸಂಗ್ರಹ: ನರಹರಿಸುಮಧ್ವ

ಶೇಷಗಿರಿಯಪ್ಪ ಮತ್ತು ಗಿರಿಯಮ್ಮ ದಂಪತಿಗಳಲ್ಲಿ ಅಬ್ಬೂರಿನಲ್ಲಿ ಕ್ರಿಶ 1406ರಲ್ಲಿ ಲಕ್ಷ್ಮೀನಾರಾಯಣರೆಂಬ ನಾಮಧೇಯದಿಂದ ಜನಿಸಿ 1411 ರಲ್ಲಿ ಉಪನಯಗೊಂಡು, 1412ರಲ್ಲಿ ಶ್ರೀರಂಗದಲ್ಲಿ ಶ್ರೀ ಸುವರ್ಣತೀರ್ಥರ ಉತ್ತರಾಧಿಕಾರಿಯಾಗಿ ಸನ್ಯಾಸವನ್ನು ಸ್ವೀಕರಿಸಿ ಲಕ್ಷ್ಮೀನಾರರಾಯಣ ಮುನಿ ಎಂಬ ಆಶ್ರಮನಾಮವನ್ನು ಸ್ವೀಕರಿಸಿ ನಂತರ ಭಾಸ್ಕರ ಕ್ಷೇತ್ರವೆಂದು ಪ್ರಖ್ಯಾತವಾಗಿದ್ದ ವಿಜಯನಗರದ ಅರಸರ ಎರಡನೇ ರಾಜಧಾನಿಯಾಗಿದ್ದ, ತಿರುಪತಿಯ ಪೂರ್ವದ ಬಾಗಿಲು ಎಂದು ಪ್ರಖ್ಯಾತವಾದ ಮುಳಬಾಗಿಲು ಕ್ಷೇತ್ರದಲ್ಲಿ 1504 ರಲ್ಲಿ ಜ್ಯೇಷ್ಠ ಶುಕ್ಲ ಚತುರ್ದಶಿಯಂದು ವೃಂದಾವನಸ್ಥರಾದರು.

ಸ್ವರ್ಣವರ್ಣತೀರ್ಥರಿ0ದ ಲಕ್ಷ್ಮೀನಾರಾಯಣನಿಗೆ ಆಶ್ರಮ ಪ್ರದಾನ
ಒಮ್ಮೆ ಶ್ರೀ ಸ್ವರ್ಣವರ್ಣತೀರ್ಥರು ಕಣ್ವ ನದಿ ತೀರದಲ್ಲಿರುವಪುರುಷೋತ್ತಮ ತೀರ್ಥರನ್ನು ದರ್ಶನ ಮಾಡಲು ಬಂದಾಗ ಮುಸ್ಸಂಜೆಯಾಗಿ ಕತ್ತಲು ಕವಿದಿರಲು ದಾರಿ ತಪ್ಪಿ ಅಲ್ಲೇ ಹತ್ತಿರದಲ್ಲಿ ದನಕಾಯುವ ಹುಡುಗರನ್ನು ಕರೆದು “ಅಬ್ಬರು ಇನ್ನೂ ಎಷ್ಟು ದೂರವಿದೆಯಪ್ಪ ? ಎಂದು ಕೇಳಿದರು. ಶ್ರೀಗಳವರ ಪ್ರಶ್ನೆಗೆ ಬಾಲಕ ಲಕ್ಷ್ಮೀನಾರಾಯಣನು ನೇರವಾಗಿ ಉತ್ತರಿಸದೆ ಹೇಳುತ್ತಾನೆ, ಇತ್ತ ನೋಡಿ, ಅತ್ತ ನೋಡಿ, ಹೊತ್ತು ನೋಡಿ ಗೊತ್ತು ಮಾಡಿ. ಆ ಬಾಲಕನ ಒಗಟಿನ ಮಾತು ಶ್ರೀಗಳಿಗೆ ತಕ್ಷಣ ಅರ್ಥವಾಗಲಿಲ್ಲ.
ನಂತರ ತಿಳಿಯಿತು,
ಅತ್ತ ನೋಡಿ ಎಂದರೆ ದನಗಳ ಕಡೆ ನೋಡಿ, ಇತ್ತ ನೋಡಿ ಅಂದರೆ ಚಿಕ್ಕ ಹುಡುಗನಾದ ನನ್ನನ್ನು ನೋಡಿ, ಹೊತ್ತು ನೋಡಿ ಅಂದರೆ ಈ ಮುಸ್ಸಂಜೆಯನ್ನು ನೋಡಿ, ಆದ್ದರಿಂದ ಈ ವೇಳೆಯಲ್ಲಿ ಪುಟ್ಟ ಬಾಲಕ ಇರುವುದರಿಂದ ಅತ್ಯಂತ ಸಮೀಪವೇ ಇರಬೇಕಲ್ಲದೇ ಎಂಬುದು ಆ ಬಾಲಕನ ಅಭಿಪ್ರಾಯವಾಗಿತ್ತು. ಆ ಬಾಲಕನ ಜಾಣ್ಮೆಯ ಪ್ರಾಸಬದ್ಧವಾದ ನುಡಿ ಗಮನಿಸಿದ ಶ್ರೀಗಳು ಅವನಿಗೆ ಮನಸೋತು ಶ್ರೀಗಳು ಆ ಬಾಲಕನನ್ನು ತಮ್ಮ ಮೇನೆಯಲ್ಲಿ ಕುಳ್ಳಿರಲು ಕರೆಯುತ್ತಾರೆ. ಆಗ ಆ ಬಾಲಕ ಹೇಳುತ್ತಾನೆ-ಸ್ವಾಮಿಗಳ ಮೇನೆಯಲ್ಲಿ ಕೂತರೆ ಸ್ವಾಮಿಗಳಾಗಿ ಬಿಡುತ್ತಾರೆ. ಈಗಾಗಲೇ ನಮ್ಮಣ್ಣ ಸ್ವಾಮಿಗಳಾಗಿದ್ದಾರೆ.
ನಂತರ ಸ್ವರ್ಣವರ್ಣತೀರ್ಥರು ಪುರುಷೋತ್ತಮ ತೀರ್ಥರನ್ನು ಭೇಟಿಯಾದರು. ನಂತರ ತಾವು ಕಂಡ ಬಾಲಕನ ಬಗ್ಗೆ ಪುರುಷೋತ್ತಮ ತೀರ್ಥರಿಗೆ ತಿಳಿಸಿದ, ಆ ಹುಡುಗನಿಗೇ ನಮ್ಮ ಉತ್ತರಾಧಿಕಾರಿಯಾಗಿ ಸ್ವೀಕರಿಸುವ ನಿರ್ಧಾರ ಮಾಡಿರುವುದಾಗಿ ತಿಳಿಸಿದಾಗ ಆ ಹುಡುಗನನ್ನು ಕರೆಸಬೇಕೆಂದರು. ಸ್ವರ್ಣವರ್ಣತೀರ್ಥರು ತಿಳಿಸಿದ ಬಾಲಕನ ವಿಷಯವನ್ನು ಕೇಳಿದ ಪುರುಷೋತ್ತಮ ತೀರ್ಥರು ಆ ಬಾಲಕನು ಲಕ್ಷ್ಮೀನಾರಾಯಣನೇ ಎದು ಊಹಿಸಿ ಅವನ ತಂದೆ ತಾಯಿಗಳಾದ ಶೇಷಗಿರಿ ಗಿರಿಯಮ್ಮ ಅವರನ್ನು ಕರೆಸಿದರು.
ಅವರ ಜತೆ ಬಂದಿದ್ದ ಬಾಲಕನನ್ನು ನೋಡಿ ಸ್ವರ್ಣವರ್ಣತೀರ್ಥರು ಇವನೇ ಆ ಬಾಲಕ. ಇವನನ್ನು ನಮ್ಮ ಮಠಕ್ಕೆ ಕೊಡಿಸಬೇಕೆಂದು ನುಡಿದರು.
ನಂತರ ಸ್ವರ್ಣವರ್ಣ ತೀರ್ಥರು ಬಾಲಕನಿಗೆ ಉಪನಯನ ಮಹೋತ್ಸವವನ್ನು ನೆರವೇರಿಸಿದರು. ನಂತರ ಕೆಲವು ದಿನಗಳಾದ ಮೇಲೆ ಆ ಬಾಲಕನಿಗೆ ಲಕ್ಷ್ಮೀನಾರಾಯಣ ತೀರ್ಥರೆಂದು ನಾಮಕರಣ ಮಾಡಿ ಆಶ್ರಮ ನೀಡಿದರು.

ಶ್ರೀಲಕ್ಷ್ಮೀನಾರಾಯಣ ಮುನಿಗಳು ಶ್ರೀಪಾದರಾಜರಾದರು ಒಮ್ಮೆ ಪರಮಪೂಜ್ಯ ಶ್ರೀಗಳಾದ ರಘುನಾಥತೀರ್ಥರು, ಶ್ರೀ ವಿಭುಧೇಂದ್ರ ತೀರ್ಥರು, ಶ್ರೀ ಲಕ್ಷ್ಮೀನಾರಾಯಣ ತೀರ್ಥರೂ ಶ್ರೀ ಕೊಪ್ಪ ಕ್ಷೇತ್ರಕ್ಕೆ ದಯ ಮಾಡಿಸಿದ್ದರು. ಈ ಕ್ಷೇತ್ರ ದ ಸ್ವಾಮಿಯಾದ ನರಸಿಂಹ ದೇವರ ಅನುಗ್ರಹ ಸಂಪಾದಿಸುವ ಇಚ್ಛೆಯಿಂದ ಆ ಮೂರೂ ಮಂದಿ ಕೆಲವು ದಿನಗಳ ಮಟ್ಟಿಗೆ ಅಲ್ಲಿಯೇ ವಾಸಿಸಿದರು.
ಸಂಪ್ರದಾಯದ0ತೆ ತಮ್ಮ ಶಿಷ್ಯರುಗಳಿಗೆ ಪ್ರತಿನಿತ್ಯವೂ ಶ್ರೀಮದಾಚಾರ್ಯರ ಸರ್ವಮೂಲ ಗ್ರಂಥಗಳ ಪಾಠಪ್ರವಚನ ನಡೆಸುತ್ತಿದ್ದರು. ಪಾಠ ಮುಗಿದ ಮೇಲೆ ಶ್ರೀಲಕ್ಷ್ಮೀ ನೃಸಿಂಹನ ಸನ್ನಿಧಿಯಲ್ಲಿ ಈ ಮೂರೂ ಜನ ಶ್ರೀಪಾದಂಗಳವರೂ ಮಧ್ಯಾಹ್ನದವರೆಗೂ ಅವರವರು ಪಾಠ ಹೇಳಿದ ಭಾಗದ ವಿಶೇಷ ಸಲ್ಲಾಪಗಳಲ್ಲಿ ತೊಡಗುತ್ತಿದ್ದರು, ಈ ಸಂದರ್ಭದಲ್ಲಿ ಶ್ರೀ ವಿಭುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಾಶ್ರಮ ವಿದ್ಯಾ ಶಿಷ್ಯರಾದ ಲಕ್ಷ್ಮೀನಾರಾಯಣ ಮುನಿಗಳನ್ನು ಶ್ರೀಮನ್ಯಾಯ ಸುಧೆಯ ಜಿಜ್ಞಾ ಸಾಧಿಕರಣದ ಒಂದು ಭಾಗವನ್ನು ವಿವರಿಸುವಂತೆ ಆಜ್ಞಾಪಿಸಲು, ಶ್ರೀ ಲಕ್ಷ್ಮೀನಾರಾಯಣ ತೀರ್ಥರು ಅನುವಾದ ಮಾಡಿದರು.

ತಮ್ಮ ಪೂಜಾ ಸಮಯ ಮೀರಿದ್ದನ್ನೂ ಲೆಕ್ಕಿಸದ ಯತಿದ್ವಯರಯ ತದೇಕಚಿತ್ತದಿಂದ ಲಕ್ಷ್ಮೀನಾರಾಯಣ ಮುನಿಗಳ ಅನುವಾದವನ್ನು ಆಲಿಸಿದರು. ಅನುವಾದ ವೈಖರಿಯ ಶ್ರವಣದಿಂದ ಮಾರುಹೋದ ವಿದ್ವತ್ ಪಕ್ಷಪಾತಿಗಳಾದ ಶ್ರೀ ರಘುನಾಥ ತೀರ್ಥ ಶ್ರೀಪಾದರಿಗೆ, ಶ್ರೀ ವಿಭುಧೇಂದ್ರ ತೀರ್ಥರಿಗೆ ಆದ ಆನಂದಕ್ಕೆ ಪಾರವೇ ಇರಲಿಲ್ಲ. ಆಗ ಶ್ರೀ ರಘುನಾಥ ತೀರ್ಥ ಶ್ರೀಪಾದರು ನಾವೆಲ್ಲ ಶ್ರೀಪಾದರಾದರೆ, ತಾವು ಶ್ರೀ ಪಾದರಾಜರು ಎಂದೇ ಪ್ರಸಿದ್ಧರಾಗಿರೆಂದರು. ಇಂದಿಗೂ ಶ್ರೀ ಲಕ್ಷ್ಮೀನಾರಾಯಣತೀರ್ಥರನ್ನು ಶ್ರೀಪಾದರಾಜರು ಎಂದೇ ಪ್ರಸಿದ್ಧರಾಗಿದ್ದಾರೆ.

ರಂಗವಿಠಲ ಅಂಕಿತ
ಒಮ್ಮೆ ಶ್ರೀ ವ್ಯಾಸರಾಜರಿಗೆ ಪಾಂಡುರ0ಗನು ಸ್ವಪ್ನದಲ್ಲಿ ಕಂಡು ತಮ್ಮ ಗುರುಗಳೊಡನೆ ಪಂಢರಾಪುರಕ್ಕೆ ಆಹ್ವಾನವಿತ್ತಂತೆ ಆಯಿತು. ಅದರಂತೆ ಅವರು, ಶ್ರೀಪಾದರಾಜರು ಮತ್ತು ಶ್ರೀ ಬ್ರಹ್ಮಣ್ಯತೀರ್ಥರೊಡನೆ ಪಂಢರಾಪುರಕ್ಕೆ ಆಗಮಿಸಿದರು. ಅಲ್ಲಿಗೆ ಬಂದ ಮೇಲೆ ಒಮ್ಮೆ ಶ್ರೀಪಾದರಾಜರ ಸ್ವಪ್ನದಲ್ಲಿ ವಿಠ್ಠಲನು ಕಾಣಿಸಿಕೊಂಡು ಶ್ರೀ ಭೀಮರಥಿ ಪುಷ್ಪಾವತಿ ಸಂಗಮ ಕ್ಷೇತ್ರದಲ್ಲಿ ಪಾಂಡವ ವಂಶೀಯನಾದ ಶ್ರೀ ಕ್ಷೇಮಕಾಂತ ಮಹಾರಾಜ ಒಂದು ಪೆಟ್ಟಿಗೆಯನ್ನು ಭೂಸ್ಥಾಪನೆ ಮಾಡಿರುವುದಾಗಿ ತಿಳಿಸಿ ಅದನ್ನು ಪ್ರತಿನಿತ್ಯ ಪೂಜಿಸುವಂತೆ ಆದೇಶ ನೀಡಿದಂತಾಯಿತು.
ಅದರ0ತೆ ಮಾರನೇದಿನ ಅರುಣೋದಯ ಕಾಲದಲೇ, ಸ್ವಪ್ನ ನಿರ್ದಿಷ್ಟವಾದ ಸ್ಥಳದಲ್ಲಿ ಅಗೆದಾಗ ಅಲ್ಲಿ ಒಂದು ದೇವರ ಪೆಟ್ಟಿಗೆ ದೊರೆಯಿತು. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಎರಡು ಸಂಪುಟಗಳು ದೊರೆತವು. ಒಂದನ್ನು ತೆಗೆದಾಗ ಶ್ರೀ ರುಕ್ಮಿಣೀ ಸತ್ಯಭಾಮಾ ಸಹಿತ ರಂಗವಿಠಲ ಮೂರ್ತಿಯ ದರ್ಶನವಾಯಿತು. ಅಲ್ಲಿಯವರೆಗೂ ಗೋಪೀನಾಥ ಮುದ್ರಿಕೆಯಿಂದ ಕನ್ನಡ ದೇವರನಾಮ ರಚಿಸುತ್ತಿದ್ದ ಅವರು ನಂತರ ರಂಗವಿಠಲ ಅಂಕಿತದಿ0ದಲೇ ಕೃತಿಗಳನ್ನು ರಚಿಸಲು ಆರಂಭಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles