ಹಾಲಿನಿಂದ ತಯಾರಿಸಿದ ಸಿಹಿ ತಿನಿಸಿಗೆ ವಿಶೇಷ ರುಚಿ. ಹಾಲಿನಿಂದ ಮಾಡಿದ ಸ್ವೀಟ್ಸ್ ಯಾರು ಇಷ್ಟಪಡುವುದಿಲ್ಲ ಹೇಳಿ. ಶಿವನಿಗೆ ಹಾಲು, ಹಾಲಿನಿಂದ ತಯಾರಿಸಿದ ನೈವೇದ್ಯ ಎಂದರೆ ಬಲುಪ್ರೀತಿ. ನಿತ್ಯದ ಪೂಜೆಗೆ ನೈವೇದ್ಯವಾಗಿ, ಹಬ್ಬದ ಸಂಭ್ರಮಕ್ಕೆ ಸಿಹಿತಿನಿಸಾಗಿ ಮನೆಯಲ್ಲಿಯೇ ತಯಾರಿಸಿ ಸವಿಯಬಹುದು.
ಕಾಲಕಂಡ್
ಬೇಕಾಗುವ ಸಾಮಗ್ರಿ: ಪನೀರ್ – 400 ಗ್ರಾಂ, ಸಿಹಿ ಇರುವ ಗಟ್ಟಿ ಹಾಲು-1/2 ಲೀ., ಏಲಕ್ಕಿ ಪುಡಿ-1ಚಮಚ, ರೋಸ್ ವಾಟರ್-1ಚಮಚ, ಪಿಸ್ತಾ-10, ಗೋಡಂಬಿ ಅಥವಾ ಬಾದಾಮಿ ಬೀಜ-10, ಕೇಸರಿ- 8 ಎಳೆ, ತುಪ್ಪ- 4 ಚಮಚ.
ಮಾಡುವ ವಿಧಾನ: ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಪಿಸ್ತಾ, ಕೇಸರಿ, ಗೋಡಂಬಿ, ಬಾದಾಮಿ ಬೀಜವನ್ನು ಸ್ಲೈಸ್ ಮಾಡಿಟ್ಟುಕೊಳ್ಳಿ. ಪನೀರ್ನ್ನು ಹಿಚಿಕಿ. ನಂತರ ಒಂದು ಬಾಣಲೆಗೆ ಸಿಹಿಯಾಗಿರುವ ಗಟ್ಟಿ ಹಾಲನ್ನು ಹಾಕಿ. ಅದಕ್ಕೆ ಪನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿ ನೋಡಿ, ಸಿಹಿ ಕಡಿಮೆ ಎನಿಸಿದರೆ ಸ್ವಲ್ಪ ಸಕ್ಕರೆ ಸೇರಿಸಿ. ಕಡಿಮೆ ಉರಿಯಲ್ಲಿ 15-20 ನಿಮಿಷ ಬೇಯಿಸಿ. ತಳಹತ್ತದಂತೆ ಕದಡುತ್ತಿರಿ. ಪಾಕ ಗಟ್ಟಿಯಾದಾಗ ಉರಿಯನ್ನು ಆಫ್ಮಾಡಿ. ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಟ್ಟಲಿಗೆ ತುಪ್ಪ ಸವರಿ ಪಾಕವನ್ನು ಹಾಕಿ, ಅದಕ್ಕೆ ಡ್ರೈಫ್ರೋಟ್ಸ್ ಸೇರಿಸಿ ಶೇಪ್ ನೀಡಿ. ತಣ್ಣಗಾದಾಗ ಸವಿಯಿರಿ.
ಮಿಲ್ಕ್ ಬರ್ಫಿ
ಬೇಕಾಗುವ ಸಾಮಗ್ರಿ: ಸಕ್ಕರೆ -1 ಕಪ್, ಹಾಲು- 2ಕಪ್, ಗಟ್ಟಿ ಹಾಲು-1/2 ಲೀಟರ್, ತುಪ್ಪ-125 ಗ್ರಾಂ, ಗೋಡಂಬಿ ಪೌಡರ್-1ಕಪ್, ಪಿಸ್ತಾ ಸ್ಲೈಸ್ -1ಕಪ್, ಏಲಕ್ಕಿ ಪುಡಿ-1/4 ಚಮಚ.
ತಯಾರಿಸುವ ವಿಧಾನ: ಗೋಡಂಬಿ ಪುಡಿ, ಸಕ್ಕರೆ, ತುಪ್ಪ, ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಧ್ಯಮ ಉರಿಯಲ್ಲಿ ನಾನ್ಸ್ಟಿಕ್ ಪಾತ್ರೆಯಲ್ಲಿ ಬಿಸಿ ಮಾಡಿ. ಹುರಿದ ಸಕ್ಕರೆ ಪುಡಿಯಂತಹ ಬಣ್ಣ ಬರುವವರೆಗೆ ಕುದಿಸಿ. ನಂತರ ಅದಕ್ಕೆ ಗಟ್ಟಿ ಹಾಲು ಸೇರಿಸಿ 30 ನಿಮಿಷ ಪೇಸ್ಟ್ ಆಗುವವರೆಗೆ ಬಿಸಿ ಮಾಡಿ. ಅದಕ್ಕೆ ಪಿಸ್ತಾ ಸೇರಿಸಿ. ಪಾಕವನ್ನು ಬೇರೆ ಟ್ರೇಗೆ ಹಾಕಿ. ತಣ್ಣಗಾದ ನಂತರ ಮಿಲ್ಕ್ ಬರ್ಫಿ ಸವಿಯಲು ರೆಡಿ.
ಮಿಲ್ಕ್ ಫಡ್ಜ್
ಬೇಕಾಗುವ ಸಾಮಗ್ರಿ: ಗಟ್ಟಿ ಹಾಲು- 1/2ಲೀಟರ್, ಸಕ್ಕರೆ-400 ಗ್ರಾಂ, ಹಾಲು -150ಮಿ.ಲೀ, ಬೆಣ್ಣೆ-125 ಗ್ರಾಂ.
ತಯಾರಿಸುವ ವಿಧಾನ: ಹಾಲು, ಗಟ್ಟಿ ಹಾಲು, ಬೆಣ್ಣೆ, ಸಕ್ಕರೆಯನ್ನು ಬಾಣಲೆಗೆ ಹಾಕಿ ಕಡಿಮೆ ಉರಿಯಲ್ಲಿ 10-15 ನಿಮಿಷ ಬಿಸಿ ಮಾಡಿ. ಗಟ್ಟಿಯಾಗುವವರೆಗೆ ಕುದಿಸಿ. ಗಟ್ಟಿಯಾದಾಗ ಅದನ್ನು ಬೇರೆ ಬಟ್ಟಲಿಗೆ ಹಾಕಿ, ತಣ್ಣಗಾಗಲು ಬಿಡಿ. ತಣ್ಣಗಾದ ಪಾಕಕ್ಕೆ ಶೇಪ್ ನೀಡಿ ಕತ್ತರಿಸಿ ಸವಿಯಿರಿ.
ಕಾಜು-ಪಿಸ್ತಾ ರೋಲ್
ಬೇಕಾಗುವ ಸಾಮಗ್ರಿ: ಗೋಡಂಬಿ ಪೌಡರ್- 2ಕಪ್, ಪಿಸ್ತಾ-1ಕಪ್, ಖೋವಾ-ಒಂದೂವರೆ ಕಪ್, ಪುಡಿ ಮಾಡಿದ ಸಕ್ಕರೆ -ಒಂದೂವರೆ ಕಪ್, ಏಲಕ್ಕಿಪುಡಿ- 1/4 ಚಮಚ.
ತಯಾರಿಸುವ ವಿಧಾನ: ಪಿಸ್ತಾವನ್ನು 5 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ. ಅದರ ಸಿಪ್ಪೆ ತೆಗೆದು ರುಬ್ಬಿಕೊಳ್ಳಿ. ನಾನ್ಸ್ಟಿಕ್ ಪಾತ್ರೆಯಲ್ಲಿ ಖೋವಾವನ್ನು ಹತ್ತು ನಿಮಿಷ ಬಿಸಿ ಮಾಡಿ, ನಿರಂತರ ಕದಡುತ್ತಿರಿ. ತದನಂತರ ಅದನ್ನು ಪೂರ್ತಿ ತಣ್ಣಗಾಗಲು ಬಿಡಿ. ಅದಕ್ಕೆ ಗೋಡಂಬಿ ಪೌಡರ್ ಮತ್ತು ಸಕ್ಕರೆ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣವನ್ನು ಎರಡು ಸಮ ಭಾಗವನ್ನಾಗಿ ಮಾಡಿಕೊಳ್ಳಿ. ಅದರಲ್ಲಿ ಒಂದು ಭಾಗಕ್ಕೆ ಪಿಸ್ತಾ ಮತ್ತು ಏಲಕ್ಕಿ ಪುಡಿಯನ್ನು ಹಾಕಿ. ಮತ್ತೊಂದಕ್ಕೆ ಗೋಡಂಬಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಪಿಸ್ತಾ ಮಿಶ್ರಣವನ್ನು ಗೋಡಂಬಿ ಮಿಶ್ರಣದ ಮೇಲೆ ಹಾಕಿ ನಯವಾಗಿ ರೋಲ್ ಮಾಡಿ.
ದೂದ್ ಪೇಡ
ಬೇಕಾಗುವ ಸಾಮಗ್ರಿ: ಬೆಣ್ಣೆ-3 ಚಮಚ, ಸಕ್ಕರೆ-1/2ಕಪ್, ಹಾಲಿನ ಪುಡಿ-1ಕಪ್, ಗಟ್ಟಿ ಹಾಲು-1/2ಕಪ್, ಹಾಲು-1ಕಪ್, ಬಾದಾಮಿ-1ಕಪ್, ಏಲಕ್ಕಿ ಪುಡಿ-1/4 ಚಮಚ.
ತಯಾರಿಸುವ ವಿಧಾನ: ಬೆಣ್ಣೆಯನ್ನು ಪ್ಯಾನ್ನಲ್ಲಿ ಹಾಕಿ ಅದಕ್ಕೆ ಹಾಲಿನ ಪುಡಿ ಹಾಕಿ 2ನಿಮಿಷ ಬಿಸಿ ಮಾಡಿ. ಅದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಲು ಇಂಗಿದಾಗ ಅದಕ್ಕೆ ಗಟ್ಟಿ ಹಾಲು ಸೇರಿಸಿ ಮಿಕ್ಸ್ ಮಾಡಿ. ನಂತರ ಸಕ್ಕರೆ ಹಾಕಿ ಗಟ್ಟಿ ಪೇಸ್ಟ್ ಆಗುವವರೆಗೆ ಕುದಿಸಿ. ಅದಕ್ಕೆ ಏಲಕ್ಕಿ ಪೌಡರ್ ಸೇರಿಸಿ ಉರಿಯಿಂದ ಕೆಳಗಿಳಿಸಿ. ಉಂಡೆ ಮಾಡಿ ಅದನ್ನು ಬಾದಾಮಿ ಬೀಜದಿಂದ ಅಲಂಕರಿಸಿ.