ದೇವಸ್ಥಾನಕ್ಕೆ ಹೋಗಿ ದರ್ಶನದ ನಂತರ ಯಾಕೆ ಕುಳಿತುಕೊಳ್ಳಬೇಕು?

ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಮಾಡಿ, ತೀರ್ಥ ಪ್ರಸಾದ ತೆಗೆದುಕೊಂಡು ನೇರವಾಗಿ ದೇಗುಲದಿಂದ ಹೊರಟು ಬಿಡುವುದಿಲ್ಲ. ದೇಗುಲದ ಪ್ರಾಂಗಣದಲ್ಲಿ ಸ್ವಲ್ಪ ಹೊತ್ತು ಕುಳಿತು ಎದ್ದು ಬರುತ್ತೇವೆ. ಯಾಕೆ ಕುಳಿತುಕೊಳ್ಳಬೇಕು ಎನ್ನುವ ಪ್ರಶ್ನೆ ಹಲವು ಮಂದಿಗೆ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

ನಮ್ಮ ಸಂಪ್ರದಾಯ ಆಚರಣೆಗಳ ಹಿಂದೆ ಒಂದು ಮಹತ್ತರವಾದ ಉದ್ದೇಶ ಖಂಡಿತಾ ಇದ್ದೇ ಇರುತ್ತದೆ. ಆದರೆ ಅದನ್ನು ಅರಿಯುವ ಪ್ರಯತ್ನ ಮಾಡುವವರು ಕಡಿಮೆ ಮಂದಿ. ಅವರು ಮಾಡುತ್ತಾರೆ, ನಾವೂ ಮಾಡಬೇಕು ಎನ್ನುವ ಮನಸ್ಥಿತಿಯಲ್ಲೇ ಕೆಲವೊಂದು ಪಾಲನೆ ಮಾಡುತ್ತೇವೆ, ಇನ್ನು ಕೆಲವೊಂದು ಸಂಗತಿಗಳನ್ನು ಗಾಳಿಗೆ ತೂರಿ ಮೂಢನಂಬಿಕೆ ಅನ್ನುವ ನೆಪ ಹೇಳಿ ಮುಂದೆ ಹೋಗುತ್ತೇವೆ.
ಅದೇನೇ ಇರಲಿ, ನಾವು ಮಾಡುವ ಆಚರಣೆ ಸಂಪ್ರದಾಯಗಳ ಮಹತ್ವ ಮತ್ತು ಅರ್ಥವನ್ನು ತಿಳಿದು ಆಚರಿಸಿದರೆ ಒಳಿತು ಅಲ್ಲವೇ?

ದೇವರ ಸನ್ನಿಧಿಗೆ ಹೋಗುವುದು ಕೇವಲ ದರ್ಶನಕ್ಕೆ ಅಲ್ಲ. ದೈವ ದರ್ಶನ ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಾದರೂ ಕುಳಿತು ಸ್ವಲ್ಪ ಸಮಯ ದೈವ ಧ್ಯಾನದಲ್ಲಿ ಕಳೆಯಬೇಕು. ಹೀಗೆ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಸ್ವಸ್ಥತೆ ಬರುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆ ಯಾಗುತ್ತದೆ. ಯೋಚನೆಗಳೆಲ್ಲವೂ ಸಕ್ರಮವಾಗುತ್ತವೆ. ನಿರ್ಧಾರಗಳು ದೃಢವಾಗುತ್ತವೆ.

ದೇವಸ್ಥಾನದ ಸ್ಥಳ ಪ್ರಭಾವವು ನಮ್ಮ ದೇಹದೊಳಗೆ ಪ್ರವೇಶಿಸಿ ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ. ಎಂದೂ ಅವಸರದಿಂದ ದೈವ ದರ್ಶನವನ್ನು ಮಾಡಬಾರದು. ಕೌಟುಂಬಿಕ ವಿಷಯಗಳನ್ನು ಗುಡಿಯಲ್ಲಿ ಚರ್ಚಿಸಬಾರದು.

ಹಾಸ್ಯ ಪ್ರಸಂಗಗಳನ್ನು ಮಾಡಬಾರದು. ಯಾರ ಮೇಲೆಯೂ ಸಿಟ್ಟು ಮಾಡಬಾರದು. ಯಾರನ್ನೂ ಅಸಹ್ಯದಿಂದ ನೋಡಬಾರದು. ಅಂಗವಿಕಲರನ್ನು ಮನೋರೋಗಿಗಳನ್ನು ನೋಡಿ ನಗಬಾರದು. ಅವರಿಗೆ ದೇವರ ದರ್ಶನಕ್ಕೆ ಇತರರು ಮೊದಲು ಅವಕಾಶ ಮಾಡಿಕೊಡಬೇಕು.

ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ವಿಕೃತ ಮನೋಭಾವದಿಂದ ನೋಡಬಾರದು. ವೃದ್ಧರು, ಮಹಿಳೆಯರನ್ನು ಗೌರವಿಸಬೇಕು. ಅವರಿಗೆ ದೇವರ ದರ್ಶನಕ್ಕೆ ಮೊದಲ ಆದ್ಯತೆ ನೀಡಬೇಕು. ಎದೆಯುಬ್ಬಿಸಿ ತಲೆ ಎತ್ತಿ ನಡೆಯಬಾರದು, ನೋಡಬಾರದು. ಆವರಣದ ಮೌನಕ್ಕೆ ಭಂಗ ತರಬಾರದು. ತಮ್ಮ ಜಾತಿ, ಹಣ, ಶ್ರೀಮಂತಿಕೆಯನ್ನು ದೇವರ ಮುಂದೆ ಪ್ರದರ್ಶಿಸಬಾರದು.

(ಸತ್ಸಂಗ ಸಂಗ್ರಹ): ಎಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles