ಶ್ರೀ ಗಣೇಶ ಕೊಲೆಕಾಡಿಯವರ ‘ವಿಷ್ಣುಸಹಸ್ರನಾಮ’ (ಭೀಷ್ಮಾವಸಾನ) ಯಕ್ಷಗಾನ ಪ್ರಸಂಗ (ಭಾಗ – 2)

* ಕೃಷ್ಣಪ್ರಕಾಶ ಉಳಿತ್ತಾಯ

ತುಜಾವಂತು ಝಂಪೆಯ  ಈ ಪದ್ಯ ನೋಡಬಹುದು:

ಬಾದರಾಯಣನೊರೆದ ವೇದಾಂತ ಭಾರತಕೆ|

ಮೋದದಕ್ಷರವಾದ ಮೂಷಕವರೂಥ||

ಸಾದರದಿ ಸವಿದೋರಿ ಕಾದು ಬೆಳಗಿಸು ಜಗವ|

ಸಾಧುವಂದಿತ ನಿನ್ನ ಪಾದಕೆರಗುವೆನು||

ಇಲ್ಲಿ “ವೇದಾಂತ ಭಾರತ” ಅಂದರೆ ಉಪನಿಷತ್ತಿಗೆ ಸಮನಾದ ಮಹಾಭಾರತಕ್ಕೆ

“ಮೋದದಕ್ಷರ” ಅಂದರೆ ಬರೆಹದರೂಪಕೊಟ್ಟ“ಮೂಷಕವರೂಥ” ಗಣಪತಿಗೆ ವಂದಿಸುವೆ ಎಂದು ಸ್ತುತಿಸುತ್ತಾರೆ. ಯಮುನಾ ಕಲ್ಯಾಣಿ ತ್ರಿವುಡೆ ಬಂಧ ಯಕ್ಷಗಾನದ ರೂಢಿಯಲ್ಲಿರುವ ಬಂಧ. ನಾಲ್ಕು ಪಾದಗಳುಳ್ಳ  ಈ ಬಂಧವು ತ್ರಿ ಮಾತ್ರಾ ಮತ್ತು ಚತರ್ಮಾತ್ರಾ ಗಣಗಳ ಮಿಶ್ರ ಗಣ ಪ್ರಧಾನ ಬಂಧ. ಆದರೆ ಇಲ್ಲಿ ಶ್ರೀಗಣೇಶ ಕೊಲೆಕಾಡಿಯವರು ಈ ಬಂಧಕ್ಕೆ ಪಲ್ಲವಿ ಮತ್ತು ಅನುಪಲ್ಲವಿಯನ್ನು ಜೋಡಿಸಿ ಬಂಧದ ಅಂದವನ್ನು ಹೆಚ್ಚಿಸಿದ್ದಾರೆ.

ನಂಬಿದೆನು ಮಾತೆ| ಕಟಿಲೇಶ್ವರಿಯೆ ಜಗ| ದಂಬೆ ಗುಣಭರಿತೆ||ಪಲ್ಲವಿ||

ಇಲ್ಲಿ ತ ಚ ಗು| ದ ತ ಚ| ತ ಚ ಗು| ಪಲ್ಲವಿಯ ವಿನ್ಯಾಸ.

ಅನುಪಲ್ಲವಿಯ ವಿನ್ಯಾಸ ಹೀಗಿದೆ:

ನಂಬಿದೆನು ನಾನಂಬುಜಾಕ್ಷಿ ಕ|         (ತಚತಚ)

ದಂಬ ವನವಾಸಿನಿ ಸುಹಾಸಿನಿ|   (ತಚತಚ)

ಬೆಂಬಿಡದೆ ಪೊರೆಯಂಬಿಕೆ ಮೂ|  (ತಚತಚ)

ಕಾಂಬಿಕೇ ಶ್ರೀಕಾಳಿಕೆ||ಅನುಪಲ್ಲವಿ||  (ತಚತದ)

ಸ್ಮೇರವದನೆ ಸುಶೀಲೆ ಗುಣ ಶೃಂ|

ಗಾರೆ ಸಾರಸ ಗಂಧಿನಿ||

ಸಾರಸಾಸನ ಸತಿಯೆ ಶಾರದೆ|

ಸಾರಮತಿ ಮಧುಶಾಲಿನಿ||1||

ಪ್ರಸಂಗದ ಮೊದಲ ಪದ್ಯದ ಗಾಢತೆ ನೋಡಿ. ಧರ್ಮರಾಯನ ಪ್ರವೇಶದ ಹಾಡಿದು. ಯುದ್ಧಮುಗಿದು ತನ್ನ ಉಳಿದ ಸಹೋದರರೊಡನೆ ಯುದ್ದವನ್ನು ಗೆದ್ದು ಇರುತಿರುವ ಸಂದರ್ಭವನ್ನು ಚಿತ್ರಿಸಿದ ಬಗೆ:

ತುಜಾವಂತು ಝಂಪೆ

ಧರ್ಮಸಂಗ್ರಾಮದಲಿ ಧರ್ಮಸಂಭವ ಹರಿಯ|

ಧರ್ಮದಲಿ ಯಾಮಿನಿಯನುತ್ತರಿಸಿ ಮೆರೆವ||

ಕರ್ಮಸಂಧಾನದಲಿ ಕರಣ ಕೌಸ್ತುಭತ್ರಯದ|

ನಿರ್ಮಲತ್ವದಿ ತನ್ನ ಸಹಭವರವೆರಸಿ||

ಧರ್ಮರಾಯ ತನ್ನ ನಡವಳಿಕೆಗಳಲ್ಲಿ ತ್ರಿಕರಣಗಳಲ್ಲಿ ಸತ್ಯವನ್ನೂ ಋತವನ್ನೂ ಬಿಡದೆ ಪಾಲಿಸುತ್ತಾ ಹರಿಯು ಸೂಚಿಸಿದ ದಾರಿಯಲ್ಲಿ ನಡೆದು ತಮಗೊದಗಿದ ಕಷ್ಟಗಳೆಂಬ ಕತ್ತಲೆ(ಯಾಮಿನಿ)ಯನ್ನು ಉತ್ತರಿಸಿ ತನ್ನ ಸಹೋದರರೊಡನಿರುತ್ತಿರುವ ಸಂದರ್ಭ.

ಹೃದಯದಲ್ಲಿ ಖೇದ ತುಂಬಿಕೊಂಡು ಧರ್ಮರಾಯ ನಿಸ್ಸಹಾಯಕನಾಗಿ ಯುದ್ಧದಿಂದಾದ ವಿನಾಶದಿಂದಲೂ ತನ್ನ ಬಂಧುಗಳ ಮರಣದಿಂದಲೂ ಜರ್ಝರಿತ ಮನಸ್ಕನಾಗುತ್ತಾನೆ. ಇಲ್ಲೊಂದು ಮಾತು ಧರ್ಮರಾಯನಿಂದ ಕವಿ ಹೇಳಿಸುತ್ತಾರೆ “ ಕಲಹದೊಳ್ ಕಾವ್ಯವಿರದು” “ ಮರಳೊಳಗೆ ರಸವಿರದೇಕಸೂತ್ರದ ಚೆಲುವಿರದು” “ಕೊಳುಗುಳದ ಫಲವದೆ ರಕ್ತಸಾಮ್ರಾಜ್ಯ”  ಈ ಮೂರು ಮಾತುಗಳಲ್ಲಿ ಧರ್ಮರಾಯನ ದುಃಖ ಮಡುಗಟ್ಟಿದೆ. ಭೀಮಾರ್ಜುನರು ಕಲಹವನ್ನುಕಾವ್ಯದಂತೆ ಭಾವಿಸಿ ಯುದ್ಧಮಾಡಿ ಜಯಿಸಿದವರು. ಆದರೆ ಧರ್ಮರಾಯನ ಮನ ಮೊದಲಿಂದಲೇ ಯುದ್ಧಕ್ಕೆ ಒಡಂಬಟ್ಟಿರಲಿಲ್ಲ. ಯುದ್ಧವನ್ನು ಕಾವ್ಯವಾಗಿ ಕಾಣಲು ಆತನಿಗೆ ಸಾಧ್ಯವೇ ಆಗಲಿಲ್ಲ. ಋತ,ಧರ್ಮ ಮತ್ತು ಸತ್ಯವೇ ಆತನ ಬಾಳ ಕಾವ್ಯವಾಗಿದ್ದುದರಿಂದ ಕವಿಯ“ಕಲಹದೊಳ್ ಕಾವ್ಯವಿರದು” ಎಂಬ ಮಾತು ಅರ್ಥಪೂರ್ಣವಾಗಿದೆ. “ಮರಳೊಳಗೆ ರಸವಿರದೇಕಸೂತ್ರದ ಚೆಲುವಿರದು” ಯುದ್ಧವೆಂಬ ಮರಳನ್ನು ಕುಟ್ಟಿದರೆ ರಸ ಬರುವುದೇ? “ಕೊಳುಗುಳದ ಫಲವೇ ರಕ್ತಸಾಮ್ರಾಜ್ಯ” ಯುದ್ಧದ ಅಂತಿಮ ಫಲ ರಕ್ತಸಾಮ್ರಾಜ್ಯ ಇದು ಧರ್ಮರಾಯನ ಖಚಿತವಾದ ನೆಲೆ ಮೊದಲಿಂದಲೂ. ಯುದ್ಧಮುಗಿದಮೇಲಂತೂ ಮತ್ತೂ ಉದ್ದೀಪನ ಗೊಂಡ ಭಾವವಿದು. ದ್ರುಪದನ ಪುರೋಹಿತನಿಗೆ ಯುದ್ಧವೇ ಅಂತಿಮ ನಿರ್ಧಾರ ಎಂದು ಕೌರವ ಹೇಳಿದ ಮೇಲೆ; ಮತ್ತೆ ಉಪಪ್ಲಾವ್ಯ ನಗರಕ್ಕೆ ಬಂದ ಸಂಜಯನಿಗೆ ಯುದ್ಧವೇ ಸರಿ ಎಂಬ ಮಾತು ಮನವರಿಕೆಯಾದರೂ; ಕೃಷ್ಣನನ್ನು ಮತ್ತೆ ಸಂಧಾನಕ್ಕೆ ಕಳುಹಿಸುವಾಗ ಧರ್ಮರಾಯ ಹೇಳುವ ಮಾತು-ಗದುಗಿನ ಭಾರತದ್ದು –ಧರ್ಮರಾಯನ ನಿಜದೊಲವನ್ನು ತೆರೆದಿಡುತ್ತದೆ.

ಅಳಿಯುವೊಡಲುಗಳವನಿ ಸಾಗರ

ವುಳಿಯಲುಳಿವುದು ಕೀರ್ತಿ ಸೋದರ

ರೊಳಗೊಳಗೆ ಹೊಯ್ದಾಡಿ ಕೆಟ್ಟರುಯೆಂಬ ದುರಿಯಶದ|

ಹಳಿವು ಹೊರುವುದು ದೇವ ಸುಡಲಾ

ನೆಲನನಾ ಕೌರವನ ಕೈಯಲಿ

ಕೆಲವು ನಗರಿಯ ಕೊಡಿಸಿ ನಮ್ಮನು ಸಂತವಿಡಿಯೆಂದ||

ಉಳಿವುದು ಕೀರ್ತಿಯಾದರೆ ಅಳಿವುದು ದೇಹ. ಸಹೋದರರು ಭೂಮಿಗಾಗಿ ಹೋರಾಡಿ ಕೆಟ್ಟರು ಎಂಬ ಕುಕೀರ್ತಿ ಮಾತ್ರ ಉಳಿದು ನಮಗೆ ಅಪಕೀರ್ತಿ ಉಂಟಾಗುತ್ತದೆ. ಆದುದರಿಂದ ಕೆಲವು ಭೂಮಿಗಳನ್ನುಕೊಡಿಸಿದರೆ ಸಾಕು ಎಂಬ ಭಾವದ ಧರ್ಮರಾಯನಿಗೆ ಯುದ್ಧ ಮಾಡಿದ ಆಘಾತದಿಂದ ಮತ್ತೆ ಧರ್ಮರಾಯನನ್ನು ರಾಜಕಾರ್ಯಕ್ಕೆ ತೊಡಗಿಸಲು ಶ್ರೀಕೃಷ್ಣನಿಗೆ ಸಾಕು ಬೇಕಾಯಿತು.

ಧರ್ಮರಾಯ ದುಃಖಿಸುತ್ತಾ:

ಕುದಿದೊಡೆದ ಪಾಲಾಯ್ತು ಶಶಿಕುಲ-|

ದುದಧಿ ಬತ್ತಿತು ಶೇಷಭಾಗ್ಯದ|

ಪದವಿಯಾಯಿತಿದೆನುತ ಮರುಗಲು ನಗುತ ಹರಿಬಂದ||

ಚಂದ್ರವಂಶ  ಈ ಯುದ್ಧದಿಂದಾಗಿ ಹಾಲು ಕುದಿಸಿದಾಗ ಒಡೆದು ಹಾಳಾದಂತಾಯ್ತು ಎಂಬ ರೂಪಕಾಲಂಕಾರವನ್ನು ಕವಿ ಬಳಸಿದ್ದು ಅತ್ಯಂತ ಸಮೀಚೀನ. ಹಾಲು ಕುದಿಸುವುದು ಭವಿಷ್ಯದಲ್ಲಿ ಹಾಲು ಹಾಳಾಗದಂತೆ ಉಪಯೋಗಿಸಲ್ಪಡಬೇಕು ಎಂಬ ಉದ್ದೇಶದಿಂದ. ಆದರೆ, ಯುದ್ದವೆಂಬ ಕುದಿವ ಕ್ರಿಯೆಯಿಂದ ಚಂದ್ರವಂಶವೆಂಬ ಹಾಲೇ ಹಾಳಾಗಿ ಹೋಯ್ತು ಎಂಬುದನ್ನು ಅಲಂಕಾರಿಕವಾಗಿ ಹೇಳಿದ್ದಾರೆ.  “ಶಶಿಕುಲದುದಧಿ ಬತ್ತಿತು  ಶೇಷಭಾಗ್ಯದ ಪದವಿಯಾಯಿತಿದೆನುತ..” ಎಂಬ ಮಾತನ್ನುಧರ್ಮರಾಯನ ಮನದೊಲವನ್ನು ಕವಿ ಹೇಳಿಸಿದ್ದಾರೆ. ಇಲ್ಲಿ ವಂಶವೆಂಬ ಸಮುದ್ರ ಬತ್ತಿ, “ಶೇಷಭಾಗ್ಯ” ಉಳಿದಿದೆ ಎಂಬ ಮಾತು ಅರ್ಥಗರ್ಭಿತ. ಶೇಷವೆಂಬುದು ಕೊನೆಯಲ್ಲಿ ಭಾಗಾಕಾರದಲ್ಲಿ ಭಾಗವಾಗದೆ ಕೊನೆಯಲ್ಲಿ ಉಳಿಯುವ ಅಂಕಯೋ ಸಂಖ್ಯೆಯೋ. ಮತ್ತೆ ಉಳಿಯಲುಳಿಯದ ಅಂಶ. ಮಹಾಭಾರತ ಯುದ್ಧ ಮಾಡಿದ ಸರ್ವನಾಶವನ್ನು“ಶೇಷಭಾಗ್ಯದ ಪದವಿಯಾಯಿತಿದೆನುತ ಮರುಗಲು..” ಎಂಬ ಭಾಮಿನಿ ಷಟ್ಪದಿಯ ಛಂದಃಖಂಡ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

ಹೀಗಿದ್ದ ಧರ್ಮರಾಯನನ್ನು ಶ್ರೀಕೃಷ್ಣ ಏನು ದುಃಖವೆಂದು ವಿಚಾರಿಸುತ್ತಾನೆ. ಖಮಾಚ್ ತ್ರಿವುಡೆ ಬಂಧದ ಹಾಡಿದು.

ಸಾವಧಾನವಾಗಿ ಧರ್ಮರಾಯನನ್ನು ಸಮಾಧಾನಗೊಳಿಸುತ್ತಾ ವಿಚಾರಿಸುವ ಚಿತ್ರ ಈ ಖಮಾಚ್ ತ್ರಿವುಡೆ ಬಂಧದಲ್ಲಿ ಹಾಡುವಾಗ ಅಥವಾ ಓದುವಾಗ ದಕ್ಕುತ್ತದೆ. ಹಾಡಿನ ಪಲ್ಲವಿ ಮತ್ತು ಅನುಪಲ್ಲವಿ ಅಂಶಗಣ ಪ್ರಧಾವನಾಗಿ ಬ್ರಹ್ಮಗಣವನ್ನೂ ಸೇರಿಸಿ ಮಾಡಿದ ಬಂಧಗಳಾಗಿದ್ದುದರಿಂದ ಇಲ್ಲಿ ಸಾಹಿತ್ಯವನ್ನು ಕರ್ಷಿಸುವಾಗ ಸಹಜವಾಗಿಯೇ ಒಂದು ರೀತಿಯ ದುಗುಡಗೊಂಡವರನ್ನು ಸಮಾಧಾನಪಡಿಸಿ ಮಾತನಾಡಿಸುವ ದೃಶ್ಯ ನಮ್ಮ ಕಲ್ಪನೆಗೆ ಬರುತ್ತದೆ. ತದನಂತರದ ಚರಣಗಳು ಮಾತ್ರಾಗತಿಯದ್ದಾಗಿ ನಡುವೆ ದ್ವಿಮಾತ್ರಾವರಣ ಇಡೀ ಪದ್ಯದ ಸೊಗಸನ್ನು ಹೆಚ್ಚಿಸಿದೆ. ಇದು ಹಾಡಿಕೆಗೆ (ಗಾಯನಕ್ಕೆ) ಸ್ಫೂರ್ತಿಯನ್ನು ಕೊಡುವ ಛಂದೋಬಂಧವಾಗಿದೆ. ಕೃಷ್ಣನ ಪಾತ್ರದ ಶಿಲ್ಪಕ್ಕೆ ಹೊಂದುವ ಭಾವಬಂಧವೂ ಸರಿಯೇ. ಆನನದಿ ಸುಖ ಕೌಮುದಿಯ ಕಳೆ ಕಾಣದಾಗಿಹುದಲ್ಲಾ ಏನಾಯ್ತು ಎಂದು ಕೃಷ್ಣ ವಿಚಾರಿಸುತ್ತಾನೆ.

ಕಮಾಚ್ ತ್ರಿವುಡೆ

ಏನಿದು| ದುಗುಡ|ಏನಿದು|| ಪಲ್ಲವಿ||

ಏನಿದು ಸಾರ್ವಭೌಮಗೆ ಶಶಿಕುಲಜಗೆ

ಜ್ಞಾನಿಗೆ ನಮ್ಮಬಾವನಿಗೆ||ಅನುಪಲ್ಲವಿ||

ಆನನದಿ ಸುಖ ಕೌಮುದಿಯ ಕಳೆ

ಕಾಣದು|ನಗೆ| ತೋರದು||

ಹೀನ ಕೌರವರಳಿದಿಹರು ಮ-|

ತ್ತೇನಿದು |ಮನ| ವರಳದು ||1||

ಧರ್ಮರಾಯ ಹೇಳುತ್ತಾನೆ – ನಾನು ಭೂಮಿಗಾಗಿ ಕಾದಾಡಿ ಪರಮಾಪ್ತರನ್ನೇ ಕೊಂದೆ. ಈ ಸಂದರ್ಭದ ಪದ್ಯದಲ್ಲಿ ಧರ್ಮರಾಯ ಕೃಷ್ಣನನ್ನು ವಿಶ್ವಾದಿಮೂಲ ಎಂದು ಸಂಬೋಧಿಸುತ್ತಾನೆ. ಧರ್ಮರಾಯನಿಗೆ ಶ್ರೀಕೃಷ್ಣನೇ ಅನಾದಿ ಅನಂತನೆಂದು ಗೊತ್ತಿದ್ದರೂ ಮಾಯೆಯ ಮುಸುಕಿನಲ್ಲಿ ದುಃಖವನ್ನು ಅನುಭವಿಸುವಂತೆ ತೋರುವುದು ಮಹಾಭಾರತದ ವೈಶಿಷ್ಟ್ಯ.  ಧರ್ಮರಾಯನಿಗೆ ಭೀಷ್ಮನ ನೆನಪು ತುಂಬಾ ಕಾಡುತ್ತದೆ. ಭೀಷ್ಮರಿಲ್ಲದೆ ಹೇಗೆ ರಾಜ್ಯಭಾರವನ್ನು ಮಾಡಲಿ ಎಂದು ಹಲುಬುತ್ತಾನೆ. ಗಂಗಾಸುತರ ನೆನಪು ಕಾಡುತ್ತದೆ. ದ್ರೋಣ ಕೃಪರ ಅನುಪಸ್ಥಿತಿ ಕಾಡತೊಡಗಿತು. ಯುದ್ಧಗೆದ್ದು ಬಂದ ಸಿರಿವಂತಿಕೆ ಹೇಗೆ ಆಪ್ತವಾಗುವುದು ಈ ಸೂತಕದ ಸಮಯದಲ್ಲಿ. ಸ್ಮಶಾನದ ಬೆಳಕಲ್ಲಿ ನೋಡಬೇಕಾದ ಈ ರಾಜ್ಯವು ಅದೇನು ಸುಖ ಕೊಡಬಲ್ಲುದು. ಹಾಗಾಗಿ ದೊರೆತನವು ಸುಡಲಿ.  ವನವೇ ನಮಗೆ ಸಾಕು ಎಂಬ ಮನೋವೇದನೆಯನ್ನು ಈ ಪದ್ಯ ತೆರೆಯುತ್ತದೆ.

ವಾರ್ಧಿಕ

ಧರಣಿಯಾಳುವೆನೆಂತು ತಾತನಿಲ್ಲದ ನಾಡು|

ಗುರುಕೃಪರ ಬೆಳಕಿರದ ಮಸಣಕಂದರದೊಳಗೆ|

ಪರಿಜನರ ಸಾವಿನಾಕ್ರಂದನಕೆ ಕೊರಳಾದ ಹರಿಪೀಠ ಮುಳ್ಳಿದೆನಗೆ||

ಸಿರಿಸೊಗಸೆ ? ಬಂಧುಗಳ ಕೊಲೆಯ ಸೂತಕದೊಳಗೆ|

ದೊರೆತ ರಾಜ್ಯದಸೊಡರಿದಂತ್ಯೇಷ್ಟಿ ಬೆಳಕಾಯ್ತು|

ದೊರೆತನವು ಸುಡಲೆಮಗೆ ವನವೆಲೇಸೆಮ್ಮನ್ನು ಕಳುಹಿಸೆನೆ ಹರಿ ನುಡಿದನು||

ಹೀಗಿರುವ ಧರ್ಮರಾಯನಿಗೆ ಕೃಷ್ಣ ಧರ್ಮಬೋಧೆ ಮಾಡುತ್ತಾನೆ- ಇದೆಲ್ಲಕ್ಕೂ ಕಾರಣ ನಾನೇ, ನೀನಲ್ಲ ಎಂದು ಹೇಳುತ್ತಾನೆ. ಭೀಷ್ಮರು ಮರಣಿಸುವ ಕಾಲವಾಯಿತು ಎಂದು ಕೃಷ್ಣ ಪಾಂಡವರನ್ನು ಭೀಷ್ಮರಲ್ಲಿಗೆ ಕರೆತರುತ್ತಾನೆ. ಧರ್ಮರಾಯ ಭೀಷ್ಮರಲ್ಲಿ ನಮಗೆ ತುತ್ತು ಕೊಟ್ಟು ಬೆಳೆಸಿ ಆಶ್ರಯಿಸಿದ ಮುತ್ತಾತನೆ ನಿಮಗೆ ಕುತ್ತನ್ನು ನಾವೇ ತಂದೆವು ಎಂದು ತನ್ನ ಮನಸ್ಸಿನ ದುಃಖವನ್ನು ಯುಧಿಷ್ಠಿರ ಹೇಳಿಕೊಳ್ಳುವ  ಸಾಂಗತ್ಯ ಬಂಧದ ಪದ್ಯ:

ತುತ್ತಿಟ್ಟು ಬೆಳೆಸಿದ ಮುತ್ತಾತ ನಿಮಗಿಂತು|

ಕುತ್ತಾದೆ ನಾನೇ ಜೀವನದಿ||

ಬತ್ತಿತು ಪುಣ್ಯವಾರಿಧಿ ಪಾಪದುರಿಯಲಿ|

ಸತ್ತೇವು ಜೀವಂತ ಜಗದಿ||

ಭೀಷ್ಮನ ಧರ್ಮೋಪದೇಶ ಇಲ್ಲಿಂದ ತೊಡಗುತ್ತದೆ. ಕೃಷ್ಣನೆಲ್ಲಿರುವನೋ ಅಲ್ಲಿ ಧರ್ಮವಿದೆ ಹಾಗಾಗಿ ಧರ್ಮವು ತಾನಾಗಿ ನಿಲ್ಲುತ್ತದೆ; ನೀನು ಚಾರಿತ್ರ್ಯವಂತ ಮತ್ತು ಪರಮಾತ್ಮ ನಿಮ್ಮ ಜತೆಗಿದ್ದಾನೆ ಹಾಗಾಗಿ ನಿಮ್ಮಲ್ಲಿ ದೋಷವಿಲ್ಲ ಎಂದು ಭೀಷ್ಮ ಹೇಳುತ್ತಾನೆ. ಸೌರಾಷ್ಟ್ರ ಅಷ್ಟ ತಾಳ ಬಂಧದಲ್ಲಿ ಮೇಲಿನ ವಿವರ ಬಂದಿದೆ. ಪದ್ಯ ಬಂಧದಲ್ಲಿ ಬ್ರಹ್ಮ ವರಣ ಮತ್ತು ರುದ್ರಗಣದ ಅನುಪದ ಪದ್ಯದ ಸೊಗಸನ್ನು ಹೆಚ್ಚಿಸಿದೆ. ಇದು ಸೌರಾಷ್ಟ್ರ ಅಷ್ಟ ಬಂಧದ ಪ್ರಮೇಯವೂ ಹೌದು. ಅನುಪದವಾದ “ಕಂದ ಕೇಳು” ಎಂಬ ಶಬ್ದದಿಂದ ಪದ್ಯದ ಭಾವವನ್ನು ಮತ್ತೆ ಮತ್ತೆ ಹೇಳಿ ಭೀಷ್ಮನು ಧರ್ಮರಾಜನಿಗೆ ಬುದ್ಧಿವಾದ ಹೇಳುವಂತೆಯೂ ಈ ಮಾತನ್ನು ಮತ್ತೆ ಮತ್ತೆ ನೆನವರಿಕೆ ಮಾಡಿಕೊಂಡು ರಾಜ್ಯಾಡಳಿತ ಮಾಡಬೇಕೆಂದು ತಿಳಿಹೇಳುವ ಪ್ರಕ್ರಿಯೆಯನ್ನೂ “ಸೌರಾಷ್ಟ್ರ ಅಷ್ಟ”ದ ಬಂಧ ಬಹು ಸೊಗಸಾಗಿ ಚಿತ್ರಿಸಿದೆ. ಇದು ಕವಿಯ ಸ್ವೋಪಜ್ಞತೆ!

ಅರಿತುಕೋ ಧರ್ಮವೆಲ್ಲಿರುವುದಲ್ಲಿಹ ಕೃಷ್ಣ|ಕಂದ ಕೇಳು|ಸತ್ಯ|

ಹರಿಯಿರುವಡೆ ಧರ್ಮ ತಾನಾಗಿ ನಿಲುವುದು |ಕಂದ ಕೇಳು||

 ಪರಮಾತ್ಮ ನಿಮ್ಮಲ್ಲಿರಲು ಪಾಪ ನಿಮಗಿಲ್ಲ|ಕಂದ ಕೇಳು| ದಿವ್ಯ|

ಚರಿತನು ನೀನಹೆ ನಿನ್ನೊಳು ತಪ್ಪಿಲ್ಲ |ಕಂದ ಕೇಳು||

ಇಷ್ಟನ್ನು ಕೇಳಿದ ಧರ್ಮರಾಯನ “ಕಮರಿರುವ ಮಾನಸಕೆ ವಿಮಲತ್ವ ಪ್ರಾಪ್ತಿಸುವ” ಕಾರಣದಿಂದ ” ಭೀಷ್ಮನಲ್ಲಿ ಯಾವುದನ್ನು ತಿಳಿದರೆ ಮುಕ್ತಿ ಸಿಗುವುದು ಎಂದು ಕೇಳುತ್ತಾನೆ. ಭೀಷ್ಮನು ಹರಿಯ ಸರ್ವೋತ್ತಮತ್ವವನ್ನು ಹೇಳಿ ಆತನ ಸಹಸ್ರನಾಮವನ್ನು ನಿನಗೆ ತಿಳಿಸುತ್ತೇನೆ ಎಂದು ತೊಡಗುತ್ತಾನೆ-“ ಅರಿಯುತವನ ಸಹಸ್ರ ನಾಮದ ಸಿರಿಯ ಜಪಿಸುವ ಶರಣರಿಗೆ ದಿಟ ಪರಮಪದ ದೊರಕುವುದು ವಿಶ್ವಕೆ ದೊರೆಯವನೆ ಸರ್ವರನು ಪೊರೆವನು”ಎಂದು ಸಹಸ್ರನಾಮದ ಕುರಿತಾಗಿ ಮಾತಾಡುತ್ತಾನೆ.

ಮಧ್ಯಮಾವತಿ ಏಕ ಬಂಧದ ಹಾಡಲ್ಲಿ ಸಹಸ್ರನಾಮದ ಮೊದಲ ನಾಮವಾದ “ವಿಶ್ವಸ್ಮೈ ನಮಃ” ಅಥವಾ ವಿಶ್ವಮ್ ಬಗ್ಗೆ ಭೀಷ್ಮ ಹೇಳುತ್ತಾನೆ. ವಿಶ್ವನಾಮಕನಾಗಿ ಇಡೀ ವಿಶ್ವವನ್ನು ಸೃಜಿಸುವ ಆ ಕಾರಣ ಪುರುಷನನ್ನೇ ಬ್ರಹ್ಮನು ಸೇರಿಕೊಂಡಿದ್ದಾನೆ ಎಂದು ಪ್ರವಚನ ಕೊಡುತ್ತಾನೆ.ಆ ಹಾಡು ಹೀಗಿದೆ:

ಮಧ್ಯಮಾವತಿ ಏಕ

ಮೊದಲಾಗಿ ವಿಶ್ವಮ್ ಸದ್ಧರ್ಮ ಸದನ ಕೇಳು|

ಪದುಮನಾಭನು ವಿಶ್ವರೂಪನಾಗಿರಲು||

ಇದೆ ಪುರುಷವಿದೆ ವಿಶ್ವವಿದನು ಸೃಜಿಸುತ|

ವಿಧಿಯದನ್ನೇ ಸೇರಿಕೊಂಡಿತು ನಿಜದಿ||

ಮುಂದೆ ಧರ್ಮರಾಯನ ಪ್ರಶ್ನೆ ಮತ್ತು ಭೀಷ್ಮನ ಉತ್ತರ ರೂಪದಲ್ಲಿ ಸಹಸ್ರನಾಮದ ಬಗೆಗೆ ವಿವರಣೆ ಹೀಗೆ ಪ್ರಸಂಗ ಸಾಗುತ್ತದೆ. ಇಲ್ಲಿ ಪಾತ್ರಧಾರಿಗಳಿಗೆ ನಾಮದ ವಿವೃತಿಯನ್ನು ಮಾಡಲು ತುಂಬಾ ಅವಕಾಶವಾಗಿದ್ದು ಮತ್ತು ಅದರ ಕುರಿತಾಗಿ ಜಿಜ್ಞಾಸುವಾಗಿ ಪ್ರಶ್ನೆಯನ್ನು ಕೇಳಲೂ ಧರ್ಮರಾಯ ಪಾತ್ರಧಾರಿಗೂ ಅವಕಾಶ ಇದೆ.

“ಕಂದ ಕೇಳೆಲೆ ವಿಷ್ಣುವೆಂದೆರಡನೆ ನಾಮದಂದದೊಳಿಹುದುತ್ತರ” ಮತ್ತು “ಇಂದಿರಾಪತಿ ಸರ್ವವ್ಯಾಪಕನದರಿಂದ ಹೊಂದಿತುಪೆಸರೀತೆರ”

ಶಹನಾ ಏಕ ಬಂಧದ  ಈ ಹಾಡಲ್ಲಿ ವಿಷ್ಣುವಿನ ವಷಟ್ಕಾರ ಸ್ವರೂಪದ ವಿವೃತಿ ಇದೆ.

ರವಿಜಾತೋದ್ಭವ ವಷಟ್ಕಾರವೆನ್ನುವ ನಾಮ|

ಅವನಿಗಿಹುದು ಪಾರಮಾರ್ಥದಲಿ||

ಸುವಿಚಾರಿ ‘ಯಜ್ಞೋ ವೈ ವಿಷ್ಣುಃ’ ಕೇಳಿಂತು ಶ್ರೀ-|

ಧವ ಯಜ್ಞವಿರೆ ಹೀಗೆ ಪೆಸರಾಯ್ತಿಲ್ಲಿ||

ದೇಶಿ ಏಕ ಬಂಧದ ಹಾಡಲ್ಲಿ ವಿಷ್ಣುವಿನ ಇತರ ಹೆಸರಾದ ಭೂತ,ಭವ್ಯ ಭವತ್ಪ್ರಭುಃ ಇತ್ಯಾದಿಗಳ ಕುರಿತಾಗಿ ಹೇಳಿದೆ. ಬಂಧವೂ “ಭೂತಲೇಂದ್ರ” ಎಂಬ ಅನುಪದದಿಂದ ಕೂಡಿ ಭೀಷ್ಮ ತನ್ಮಯನಾಗಿ ವಿಷ್ಣುವಿನ ಕಾಲನಿಯಾಮಕತ್ತ್ವದ ಅಂದರೆ ಆತನೇ ಭೂತಕಾಲ, ಭವಿಷ್ಯತ್ಕಾಲ ಇಡೀ ಕಾಲಕ್ಕೆ ಅಧಿಪತಿಯೆಂಬ ಅನುಸಂಧಾನ ಮಾಡುತ್ತಾ ಸಾವಧಾನ ಚಿತ್ತದಿಂದ ಭೀಷ್ಮರು ಮತ್ತೆ ಮತ್ತೆ ಧರ್ಮರಾಯನನ್ನು “ಭೂತಲೇಂದ್ರ” ಎಂದು ಸಂಬೋಧಿಸುತ್ತಾ ಹರಿಯ ನಾಮದ ಮಹಿಮೆಯನ್ನು ಹೇಳುತ್ತಾರೆ.  ತಾನು ಯುದ್ಧಗೆದ್ದು ಸೋತೆ ಎಂಬ ಭಾವದಿಂದ ಇರುವ ಧರ್ಮರಾಯನ ಖೇದವನ್ನುನಿವಾರಿಸುವಲ್ಲಿ ಆತನನ್ನು ಭೀಷ್ಮ ಪಿತಾಮಹರು “ಭೂತಲೇಂದ್ರ” ಎಂದು ಮತ್ತೆ ಮತ್ತೆ ಹೇಳುವುದು ಯುಧಿಷ್ಠಿರನ ಮುಂದಿನ ಕರ್ತವ್ಯವನ್ನು ನೆನಪಿಸುವ ಕ್ರಿಯೆಯಾಗಿ ಕಾಣುತ್ತದೆ. ಇದು ಕವಿಯ ಸ್ವೋಪಜ್ಞತೆ. ಛಂದಸ್ಸನ್ನು ರಸಸ್ಪಂದಿಗೆ ನೆರವಾಗುವಂತೆ ಅಳವಡಿಸುವ ಕಾವ್ಯಕರ್ಮದ ಕಾರಯಿತ್ರೀ ಪ್ರತಿಭೆ. 

ದೇಶೀ ಏಕ

ಭೂತ ಭವ್ಯ ಭವದ ಪ್ರಭುಃ ಭೂತಲೇಂದ್ರ| ಇದು|

ವೀತರಾಗಂಗಿರುವ ನಾಮ ಭೂತಲೇಂದ್ರ||

ಆತನೇ ಕಾಲಜ್ಞ ಕಾಲ ಭೂತಲೇಂದ್ರ| ಲಕ್ಷ್ಮೀ|

ನಾಥ ಕಾಲಕಾರಣನು ಭೂತಲೇಂದ್ರ||

ಮುಂದೆ ಹರಿಯು ಸೃಷ್ಟಿಕಾರ್ಯವನ್ನು ಮತ್ತು ಇದಕ್ಕಾಗಿ ಆತ ಇರುವ ಗುಣಗಳ ವರ್ಣನೆ. ಭೂತಕೃತ್, ಭೂತಭೃತ್,ಭಾವಃ, ಭೂತಾತ್ಮಃ ಹೀಗೆ ನಾಮಗಳ ಬಗೆಗೆ ಹೇಳುತ್ತಾನೆ. ಇದಕ್ಕಾಗಿ ವಿಶೇಷವಾದ ವಿಷ್ಣು ಷಟ್ಪದ ಬಂಧದ ಬಳಕೆಯನ್ನೂ ಔಚಿತ್ಯಪೂರ್ಣವಾಗಿ ಕವಿ ಬಳಸಿದ್ದಾರೆ. ವಿಷ್ಣು ಸಹಸ್ರನಾಮದ ಮಹಿಮೆಗೆ ವಿಷ್ಣುಷಟ್ಪದ ಬಂಧ. ಹೀಗೆ ಸಹಸ್ರನಾಮದ ಮಹಿಮೆಯನ್ನು ತಿಳಿಹೇಳಿದ ಭೀಷ್ಮರಿಗೆ ತನ್ನ ಜೀವನ“ಪಾಕಗೊಂಡಿತು” ಎಂಬ ಬೋಧೆಯಾಗುತ್ತದೆ. ವಸುಲೋಕ ಕಾದಿರುವುದು ಹಾಗಾಗಿ ತಾನು ಪರಮಾರ್ಥದೊಳಗೆ ಐಕ್ಯವಾಗುತ್ತೇನೆ ಎಂದು ಕೃಷ್ಣನಿಗೆ ಭೀಷ್ಮ ಹೇಳುತ್ತಾನೆ. ಭಿಷ್ಮರು ತನ್ನ

ಹರಣ ಪಂಚಕವನ್ನು ಪ್ರಕೃತಿಯ

ಪರಮ ಪಂಚಕದೊಳಗೆ ಸೇರಿಸಿ

ಸರಿದ ಪ್ರಣವಕೆ ಮೆರೆದು ಕೃಷ್ಣಸ್ತುತಿವಿಲಾಸದಲಿ||

ಜೀವ ಅಥವ ಐದು ಪ್ರಾಣಗಳನ್ನು ಪರಮ ಪಂಚಕ ಅಂದರೆ ಪಂಚಭೂತಗಳಿಗೆ ಸೇರಿಸಿ ಪ್ರಣವವನ್ನು ಉಚ್ಛರಿಸುತ್ತಾ ಮಹಾ ಪ್ರಣವದಲ್ಲಿ ಒಂದಾಗುತ್ತಾನೆ ಎನ್ನುವ ರೀತಿಯಲ್ಲಿ ಕವಿ ಶ್ರೀ ಗಣೇಶ ಕೊಲೆಕಾಡಿಯವರು ಇಚ್ಛಾಮರಣಿ ಭೀಷ್ಮರ ಮಹಾಯಾತ್ರೆಯ ಚಿತ್ರಣವನ್ನು ರಸಸ್ಯಂದಿಯಾಗಿ ಕಟ್ಟಿಕೊಟ್ಟಿದ್ದಾರೆ. ಕಾವ್ಯ ಬಂಧುರತೆಯಲ್ಲಿ, ಪದಗಳ ಓಜಸ್ಸಿನಲ್ಲಿ, ಛಂದೋಬಂಧಗಳ ಅನನ್ಯತೆಯಲ್ಲಿ, ಪದಗಳ ಗುಂಫನದಲ್ಲಿ ಮತ್ತು ಒಟ್ಟು ಕಥನವನ್ನು ಕಲೆಯಾಗಿ ನೋಡುವಾಗ ಕವಿ ಗೆದ್ದಿದ್ದಾರೆನ್ನುವುದು ಸ್ಪಷ್ಟ.  ಈ ಪ್ರಸಂಗದ ಓದಿನ ಸುಖ ಮರೆಯದು.

Related Articles

ಪ್ರತಿಕ್ರಿಯೆ ನೀಡಿ

Latest Articles