ಇಂದು ಅಂಗಾರಕ ಸಂಕಷ್ಟ ಚತುರ್ಥಿ, ಅದರ ವಿಶೇಷತೆ ಏನು ಗೊತ್ತಾ?

ವಿಶ್ವವಂದ್ಯನನ್ನು ವಂದಿಸದ ಮಂದಿಯಿಲ್ಲ. ವಿನಾಯಕನ ಪೂಜಿಸದ ಮನೆ ಮಂದಿರಗಳಿಲ್ಲ. ಮೊದಲು ಪೂಜೆಗೊಳ್ಳುವ ಗಣೇಶನಿಗೆ ಸಂಕಷ್ಟಹರ ಗಣೇಶ ಎಂದೂ ಕರೆಯುವುದುಂಟು. ಸಂಕಟಗಳನ್ನು ದೂರ ಮಾಡುವ ಭಗವಂತನವನು. ಹಾಗಾಗಿ ಭಕ್ತರು ತಮ್ಮ ಕಷ್ಟಗಳನ್ನು ಕಳೆಯಲು ಸಂಕಷ್ಟಿ ವ್ರತ ಮಾಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಮಂಗಳವಾರದ ದಿವಸ ಸಂಕಷ್ಟ ಚತುರ್ಥಿ ಬಂದರೆ, ಅದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎನ್ನುವರು. ಈ ವ್ರತದ ಆಚರಣೆಯು ಗಣೇಶನಿಗೆ ಅರ್ಪಿತವಾಗಿದೆ. ಈ ದಿವಸ ಉಪವಾಸ ಮಾಡುತ್ತಾರೆ ಹಾಗೂ ನೇಮ ನಿಷ್ಠೆಯಿಂದ ವ್ರತದ ಆಚರಣೆ ಮಾಡುತ್ತಾರೆ. ಈ ದಿನಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಬಳಸಿದರೆ ವ್ರತಭಂಗವಾಗುವುದು.
ಅಂಗಾರಕ ಚತುರ್ಥಿ ದಿನವನ್ನು ವಿಮೋಚನೆಯ ದಿನ ಎನ್ನುವರು. ಈ ದಿನ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು, ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನದಂದು ವ್ರತವನ್ನು ಮಾಡುವ ವ್ಯಕ್ತಿಯು ಗಣೇಶ ಮತ್ತು ಮಂಗಳ ಗ್ರಹಗಳ ಆಶೀರ್ವಾದವನ್ನು ಪಡೆಯುತ್ತಾನೆ. 
ಅಂಗಾರಕ ಚತುರ್ಥಿ ಪೂಜೆಯ ವಿಧಾನ: ಅಂಗಾರಕ ಚತುರ್ಥಿಯಲ್ಲಿ ಬೇಗನೆ ಎದ್ದು ಸ್ನಾನ ಮಾಡಿ, ಗಣೇಶನ ವಿಗ್ರಹವನ್ನು ಪೂಜಿಸುತ್ತಾರೆ. ಗಣೇಶನ ಅಚ್ಚುಮೆಚ್ಚಿನ ಸಿಹಿತಿಂಡಿ ಮೋದಕ ವನ್ನು ಆರತಿ ಮಾಡಿದ ನಂತರ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

️ಉಪವಾಸವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ ಚಂದ್ರನನ್ನು ನೋಡಿದ ನಂತರ ಕೊನೆಗೊಳ್ಳುತ್ತದೆ. ಕೆಲವರು ಇಡೀ ದಿನವನ್ನು ಏನನ್ನು ತಿನ್ನದೇ ಧ್ಯಾನದಲ್ಲಿ ಕಳೆಯುತ್ತಾರೆ. ಕೆಲವರು ಹಣ್ಣುಗಳನ್ನು ಸೇವಿಸುತ್ತಾರೆ. ಗಣೇಶನಿಗೆ ಅರ್ಘ್ಯವನ್ನು ಅರ್ಪಿಸಿ, ನಂತರ ಶುದ್ಧ ಸಸ್ಯಾಹಾರಿ ಆಹಾರವನ್ನು ಸೇವಿಸುವ ಮೂಲಕ ಉಪವಾಸವನ್ನು ಮುರಿದು ವ್ರತವನ್ನು ಸಂಪೂರ್ಣ ಮಾಡುತ್ತಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles