ಆಸೆಯೇ ದುಃಖಕ್ಕೆ ಕಾರಣ

* ಡಾ. ಶಿವಾನಂದ ಶಿವಾಚಾರ್ಯರು, ಹಿರೇಮಠ, ತುಮಕೂರು

* ಡಾ. ಶಿವಾನಂದ ಶಿವಾಚಾರ್ಯರು, ಹಿರೇಮಠ, ತುಮಕೂರು

ಬುದ್ಧ ಹೇಳುತ್ತಾನೆ, ‘ಆಸೆಯೇ ದುಃಖಕ್ಕೆ ಕಾರಣ’ ಎಂದು. ಇನ್ ಜನರಲಿ, In generally ಏನೋ ಇದು ಸರಿ. ಆಸೆಯಾಗಿರಬಹುದು, ಅಪೇಕ್ಷೆಯಾಗಿರಬಹುದು, ಮಹತ್ತ್ವಾಕಾಂಕ್ಷೆಯಾಗಿರಬಹುದು. ಕಾಮ ಆಗಿರಬಹುದು, ಕಾಮನೆಯಾಗಿರಬಹುದು; ಬಯಕೆಯಾಗಿರಬಹುದು, ಏನೋ ಒಂದು…. ದುಃಖಕ್ಕೆ ಕಾರಣವಾಗುತ್ತದೆ ಎಂಬ ಬುದ್ಧನ ಮಾತೇನೋ ಸರಿ. ಆದರೆ ಎಲ್ಲಕ್ಕೂ ಮುಖ್ಯವೇನೆಂದರೆ, ನಮ್ಮ ಅಭಿಪ್ರಾಯದಲ್ಲಿ, ‘ನಮ್ಮ ದುಃಖಕ್ಕೆ ನಾವೇ ಕಾರಣ’. ಇದರಲ್ಲಿ ಸಂದೇಹವೇ ಇಲ್ಲ. ಇದರಲ್ಲಿ ಒಂದು ಚೂರು ಕೂಡ ಸಂದೇಹವಿಲ್ಲ, ಸಂಶಯವಿಲ್ಲ.

ನಾವು, ನೀವುಗಳೇ, ನಮ್ಮ ತಲೆಯಲ್ಲಿ ಅದು ಆಗಬೇಕು, ಇದು ಆಗಬೇಕು; ಅದು ಹೋಗಬೇಕು, ಇದು ಹೋಗಬೇಕು, ಅದು ಮಾಡಬೇಕು, ಇದು ಮಾಡಬೇಕು ಎಂದು ಏನೇನೋ ನೂರೆಂಟು ಹುಳು ಬಿಟ್ಟುಕೊಂಡಿರುತ್ತೇವೆ ಮತ್ತು ಬೀಜ ಬಿತ್ತಿಕೊಂಡಿರುತ್ತೇವೆ. ನಮ್ಮ ಮನಸ್ಸಿನಲ್ಲಿ, ಕನಸಿನಲ್ಲಿ ಏನೇನೋ ಬಯಕೆಯ ಬೀಜಗಳನ್ನು ಬಿತ್ತಿಕೊಂಡು ಬಂಪರ್ ಬೆಳೆಯನ್ನು ನಿರೀಕ್ಷಿಸಿಕೊಂಡಿರುತ್ತೇವೆ. ನಿರೀಕ್ಷಿತ ಪ್ರಮಾಣದಲ್ಲಿ ಮತ್ತು ನಾವು ನಿರೀಕ್ಷಿಸಿದ ರೀತಿಯಲ್ಲಿ ಬೆಳೆ ಬಾರದೆ ಹೋದರೆ ದುಃಖಿತರಾಗುತ್ತೇವೆ, ಸಂಕಟಪಡುತ್ತ ವಿಲವಿಲ ಎನ್ನುತ್ತೇವೆ.

ಮನಸ್ಸಿನಲ್ಲಿ ಬಯಕೆಯ ಬೀಜವನ್ನು ಬಿತ್ತಿದ್ದು ನಾವೇ! ಬೆಳೆ ಬಾರದೆ ಇದ್ದಾಗ ದುಃಖಿಸುವುದೂ ನಾವೇ! ನಮ್ಮ ದುಃಖಕ್ಕೆ ನಾವೇ ಕಾರಣ ಅಲ್ಲವೆ? ಬಯಕೆ, ಹಂಬಲ, ಆಸೆ, ಅಪೇಕ್ಷೆಗಳ ಬೀಜವನ್ನು ಬಿತ್ತಿದವರೂ ನಾವೇ! ಬೆಳೆ ಬಾರದೆ ಇದ್ದಾಗ ಅಳುವವರೂ ನಾವೇ! ಅಷ್ಟು ಮಾತ್ರವಲ್ಲ, ಅದೊಂದು ವೇಳೆ, ಬೆಳೆ ಬಂದರೂ ಮಾರುಕಟೆಯಲ್ಲಿ ಬೆಳೆಗೆ ತಕ್ಕನಾದ ಬೆಲೆ ಬಾರದೆ ಹೋದರೂ ಸಹ ಅದಕ್ಕೂ ಅಳುವವರು ನಾವೇ! ನಮ್ಮ ಈ ಸ್ಥಿತಿ, ಪರಿಸ್ಥಿತಿಯನ್ನು ಗಮನಿಸಿಯೇ ಶ್ರೀ ಕೃಷ್ಣಪರಮಾತ್ಮ ಭಗವದ್ಗೀತೆಯಲ್ಲಿ ನಮಗೆಲ್ಲ ಯದೃಚ್ಛಾಲಾಭಸಂತುಷ್ಟ ಪಾಠವನ್ನು ಮಾಡಿದ. ಇರೋದರಲ್ಲೇ ಆನಂದಪಡು ಮತ್ತು ಇದ್ದಷ್ಟರಲ್ಲಿಯೇ ತೃಪ್ತಿಪಡು ಎಂದು.ಪರಮಾತ್ಮ ನಮ್ಮಗಳಿಗೆ ಹೇಳಿದ ಮಾತಿಗೆ ಕಿವಿಕೊಟ್ಟರೆ ಒಳ್ಳೆಯದು. ಅದು ಬುದ್ಧಿವಂತರ ಲಕ್ಷಣ. ಹಾಗೆ ಮಾಡದೆ ಹೋದರೆ, ನಮ್ಮ ದುಃಖ, ದುಮ್ಮಾನವನ್ನು ನಾವೇ ಸಂಕಟ ಎಂಬ ಬ್ಯಾಂಕ್‌ನಲ್ಲಿ ಎಫ್. ಡಿ. F D. ಮಾಡಿಟ್ಟುಕೊಂಡು ಬಡ್ಡಿಸಹಿತ ಅವುಗಳ ಅಸಲನ್ನು ಅನುಭವಿಸಿಕೊಂಡಿರಬೇಕು, ಅಷ್ಟೇ. ಏನು ಮಾಡುವುದು? ಒಂದಷ್ಟು ನಿಧಾನಕ್ಕೆ ಯೋಚಿಸೋಣವಾಗಲಿ.

Related Articles

ಪ್ರತಿಕ್ರಿಯೆ ನೀಡಿ

Latest Articles